ಬೆಂಗಳೂರು: ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ (Karnataka CM) ಪ್ರಮಾಣವಚನ ಸ್ವೀಕರಿಸಿದ್ದನ್ನು ರಾಜ್ಯಾದ್ಯಂತ ಅವರ ಅಭಿಮಾನಿಗಳು ಬಗೆಬಗೆಯಲ್ಲಿ ಸಂಭ್ರಮಿಸಿದ್ದಾರೆ. ಈ ಸಂಭ್ರಮ ಸಿದ್ದರಾಮಯ್ಯ (Siddaramaiah) ಅವರ ಮನೆಯಲ್ಲೂ ಮನೆ ಮಾಡಿತ್ತು. ಅದರಲ್ಲೂ ವಿಶೇಷವೆಂದರೆ, ಮುಖ್ಯಮಂತ್ರಿಯಾದ ಖುಷಿಗೆ ಅವರ ಪತ್ನಿ (Siddaramaiah wife) ರೇಡೋ ವಾಚ್ ಗಿಫ್ಟ್ (Watch gift to CM) ಕೊಟ್ಟಿದ್ದಾರಂತೆ!
ಬೆಂಗಳೂರಿನ ಕೆಪಿಸಿಸಿ ಕಚೇರಿ ಪಕ್ಕದ ಇಂದಿರಾ ಗಾಂಧಿ ಸಭಾಂಗಣದಲ್ಲಿ ಭಾನುವಾರ ನಡೆದ ರಾಜೀವ್ ಗಾಂಧಿ (Rajiv Gandhi) ಪುಣ್ಯ ಸ್ಮರಣೆ ಕಾರ್ಯಕ್ರಮದ ವೇಳೆ ಈ ವಿಚಾರ ಬೆಳಕಿಗೆ ಬಂತು. ಸಿದ್ದರಾಮಯ್ಯ ಅವರು ತಾನು ಕಟ್ಟಿರುವ ಹೊಸ ವಾಚನ್ನು ಪಕ್ಕದಲ್ಲಿ ಕುಳಿತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರಿಗೆ ತೋರಿಸಿ ಖುಷಿಪಟ್ಟರು.
ಸಿದ್ದರಾಮಯ್ಯ ಅವರು ಹೊಸ ವಾಚ್ ಕಟ್ಟಿಕೊಂಡು ಬಂದಿದ್ದರು. ಅದನ್ನು ಅವರು ಪಕ್ಕದಲ್ಲಿದ್ದ ಎಂ.ಬಿ. ಪಾಟೀಲ್ ಅವರಿಗೆ ತೋರಿಸಿದರು. ಏನು ಹೊಸದಾ ಎಂದು ಎಂ.ಬಿ. ಪಾಟೀಲ್ ಕೇಳಿದರು. ಆಗ ಸಿದ್ದರಾಮಯ್ಯ ಅವರು ಹೌದು ಇದು ಮನೆಯವರು ಗಿಫ್ಟ್ ಕೊಟ್ಟಿದ್ದು ಎಂದು ಖುಷಿಯಿಂದ ಹೇಳಿಕೊಂಡರು. ಆಗ ಎಂ.ಬಿ. ಪಾಟೀಲ್ ಮತ್ತು ಡಿ.ಕೆ ಶಿವಕುಮಾರ್ ಅವರಿಬ್ಬರೂ ಕೈ ಹಿಡಿದುಕೊಂಡು ಹೊಸ ವಾಚನ್ನು ನೋಡಿದರು.
ಪಾರ್ವತಿ ಮೇಡಂ ಪಕ್ಕಾ ಫ್ಯಾಮಿಲಿ ವುಮನ್
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪಕ್ಕಾ ಫ್ಯಾಮಿಲಿ ವುಮನ್. ತಾವಾಯಿತು, ತಮ್ಮ ಕುಟುಂಬವಾಯಿತು ಎಂದು ಮನೆಯಲ್ಲೇ ಇದ್ದು ಖುಷಿಪಡುವವರು. ಅವರು ಗಂಡನ ರಾಜಕೀಯ ವಿಚಾರದಲ್ಲಿ ಯಾವತ್ತೂ ತಲೆ ಹಾಕಿದವರೇ ಅಲ್ಲ. ನಿಜವೆಂದರೆ, ಅವರು ಮೊದಲ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಾಗಲೂ ಅವರು ಬಂದಿರಲಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ.
ರಾಜಕೀಯದಿಂದ ಮಾರು ದೂರ ಇರುವ ಅವರು ಎಲ್ಲೂ ಗಂಡನ ಹೆಸರನ್ನು ಬಳಸಿಕೊಂಡು ಪ್ರಭಾವ ಬೀರಿದ್ದೂ ಇಲ್ಲ. ಚಾಮುಂಡೇಶ್ವರಿ ಸೇರಿದಂತೆ ಯಾವ ದೇವಸ್ಥಾನಕ್ಕೆ ಹೋದರೂ ಯಾವುದೇ ಪ್ರಭಾವ ಬಳಸುತ್ತಿರಲಿಲ್ಲ. ಅವರು ಮೊದಲ ಬಾರಿಗೆ ಗಂಡನ ರಾಜಕೀಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದು ಯಾವಾಗ ಎಂದರೆ, ಈ ಬಾರಿ ಸಿದ್ದರಾಮಯ್ಯ ಅವರು ತಾನು ಕೋಲಾರದಲ್ಲೇ ಕಣಕ್ಕಿಳಿಯುವುದಾಗಿಯೂ ಮತ್ತು ಕೋಲಾರದಲ್ಲಿ ಮಾತ್ರವೇ ಸ್ಪರ್ಧೆ ಮಾಡುವುದಾಗಿ ಹೇಳಿದಾಗ.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಲು ಮುಂದಾದಾಗ ಹೈಕಮಾಂಡ್ ಅವರನ್ನು ಕರೆದು ಕೋಲಾರ ಸುರಕ್ಷಿತವಲ್ಲ, ಬೇರೆ ಕ್ಷೇತ್ರ ಆಯ್ಕೆ ಮಾಡಿ ಎಂದಿತ್ತು. ಆಗ ಮೊದಲ ಬಾರಿಗೆ ಪಾರ್ವತಿ ಅವರು ವರುಣದಿಂದಲೂ ಕಣಕ್ಕಿಳಿಯುವಂತೆ ಸಲಹೆ ಮಾಡಿದ್ದರು. ಇದನ್ನು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದರು.
ಇದೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಅವರ ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಇದೇ ಖುಷಿಯಲ್ಲಿ ಒಂದು ರೇಡೋ ವಾಚ್ ಕೂಡಾ ಕೊಟ್ಟಿದ್ದಾರೆ.
ಮೊಮ್ಮಗನ ಕಾಲೇಜಿನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ
ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ತಮ್ಮ ಮೊಮ್ಮಗ ಧವನ್ ರಾಕೇಶ್ ಕಲಿಯುತ್ತಿರುವ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೆನಿಡಿಯನ್ ಕಾಲೇಜಿನಲ್ಲಿ ಧವನ್ ಓದುತ್ತಿದ್ದು, ಇದರ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್ ವಾರ್ನಿಂಗ್