ಶಿವಮೊಗ್ಗ: ರಾಜ್ಯದ ವಿವಿಧ ಭಾಗಗಳಲ್ಲಿ ಕಾಡಾನೆ ದಾಳಿ ಹೆಚ್ಚಾಗಿದ್ದು, ಇದೀಗ ಶಿವಮೊಗ್ಗದಲ್ಲಿ ರೈತರೊಬ್ಬರು ಬಲಿಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಆಲದೇವರಹೊಸೂರು ಗ್ರಾಮದ ಹನುಮಂತಪ್ಪ (40) ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ (Wild Animals Attack).
ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೆಟ್ಟಿಹಳ್ಳಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟ್ಯಾಂಕರ್-ಲಾರಿ ನಡುವೆ ಭೀಕರ ಅಪಘಾತ; ಓರ್ವ ಸಾವು
ಕೊಡಗು: ಟ್ಯಾಂಕರ್ ಹಾಗೂ ಲಾರಿ ನಡುವೆ ಶನಿವಾರ ನಡೆದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಅಪಘಾತ ಸಂಭವಿಸಿದ್ದು, ಲಾರಿಯಲ್ಲಿದ್ದ ಸುಂಟಿಕೊಪ್ಪ ನಿವಾಸಿ ಲೋಡರ್ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಮತ್ತೋರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಲಾರಿ ಮತ್ತು ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಲಾರಿ ಚಾಲಕ 7ನೇ ಹೊಸಕೋಟೆಯ ಜಬ್ಬಾರ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇವರನ್ನು ಕುಶಾಲನಗರ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ, ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿನಲ್ಲಿ ಈ ಅಪಘಾತ ನಡೆದಿದೆ.
ಸರಗಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ
ಮಂಡ್ಯ: ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿ ಸರಗಳ್ಳನೊಬ್ಬ ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ. ಕೃಷ್ಣಾಪುರ ಗ್ರಾಮದ ಶ್ರೀನಿವಾಸ ಸಿಕ್ಕಿ ಬಿದ್ದ ಸರಗಳ್ಳ. ಅಂಗಡಿಗೆ ಸಿಗರೇಟ್ ಕೊಳ್ಳುವ ನೆಪದಲ್ಲಿ ಬಂದಿದ್ದ ಶ್ರೀನಿವಾಸ ಸರಗಳ್ಳತನಕ್ಕೆ ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅಂಗಡಿಯಲ್ಲಿದ್ದ ಮಹಿಳೆ ಕತ್ತಿನಿಂದ ಸರ ಕದ್ದ ಶ್ರೀನಿವಾಸ ಪರಾರಿಗೆ ಯತ್ನಿಸಿದ್ದ. ಈ ವೇಳೆ ಮಹಿಳೆಯ ಚೀರಾಟ ಕೇಳಿ ಸ್ಥಳದಲ್ಲಿದ್ದ ಜನರು ಸಹಾಯಕ್ಕೆ ಧಾವಿಸಿದರು. ಬಳಿಕ ಪರಾರಿಗೆ ಯತ್ನಿಸುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸಿಕ್ಕಿಬಿದ್ದ ಸರಗಳ್ಳನಿಗೆ ಗೂಸಾ ಕೊಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿಯಲ್ಲಿ ಕಾರು-ಬಸ್ ಡಿಕ್ಕಿ
ಕೊಡಗು: ಮಡಿಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಬೋಯಿಕೇರಿಯಲ್ಲಿ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ ಮಗುವಿಗೆ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಮೈಸೂರಿನಿಂದ ಮಡಿಕೇರಿಗೆ ಬರುತ್ತಿತ್ತು. ಇತ್ತ ಕಾರಿನಲ್ಲಿ ಒಟ್ಟು ಆರು ಮಂದಿ ಕೇರಳದಿಂದ ಊಟಿಗೆ ತೆರಳುತ್ತಿದ್ದರು. ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿದ್ದು, ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Wild Animals Attack : ಅತ್ತೆ ಮನೆಗೆ ಬಂದ ಅಳಿಯನ ಅಟ್ಟಾಡಿಸಿದ ಕಾಡಾನೆ! ಮುಂದೇನಾಯ್ತು