Site icon Vistara News

Karnataka Election 2023: ಮಂಡ್ಯದಲ್ಲಿ ಬುಲ್ಡೋಜರ್‌ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ

Will Yogi bring a bulldozer and demolish it in Mandya says hd Kumaraswamy Karnataka Election 2023 updates

ಮಂಡ್ಯ: ಚುನಾವಣಾ (Karnataka Election 2023) ಪ್ರಚಾರಕ್ಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಮಂಡ್ಯಕ್ಕೆ ಬಂದಾಗ ಬುಲ್ಡೋಜರ್‌ ತಂದು ಕಟ್ಟಡಗಳ ಸಹಿತ ಕೆಲವು ಸ್ಥಳಗಳನ್ನು ನೆಲ ಸಮ ಮಾಡುತ್ತೇನೆ ಎಂದು ಹೇಳಿದರಾ? ನಮಗೆ ಕರ್ನಾಟಕವೇ ಮಾಡೆಲ್. ಯುಪಿ ಮಾಡೆಲ್ ಅವಶ್ಯಕತೆ ನಮಗೆ ಇಲ್ಲ. ಕರ್ನಾಟಕದ ಮುಂದೆ ಯಾವುದೇ ಮಾಡೆಲ್ ಬೇಡ. ಕರ್ನಾಟಕದ ಮಾಡೆಲ್‌ ಮುಂದೆ ಯಾವುದೇ ಮಾಡೆಲ್ ವರ್ಕೌಟ್ ಕೂಡಾ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.

ಆದಿಚುಂಚನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗಿ ಆದಿತ್ಯನಾಥ ಅವರ ಮಂಡ್ಯ ಭೇಟಿ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಯೋಗಿ ಆದಿತ್ಯನಾಥ ಅವರು ಜಿಲ್ಲೆಯ ಜನರಿಗೆ ಏನು ಸಂದೇಶ ಕೊಟ್ಟಿದ್ದಾರೆ? ನಾಥ ಪರಂಪರೆ ಇಟ್ಟುಕೊಂಡು ಉತ್ತರ ಪ್ರದೇಶದಲ್ಲಿ ರಾಜಕಾರಣ ಮಾಡೋದಕ್ಕೂ ಇಲ್ಲಿ ರಾಜಕಾರಣ ಮಾಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಾಥ ಪರಂಪರೆ ಪಂಥ ಚುಂಚನಗಿರಿ ಕ್ಷೇತ್ರಕ್ಕೆ ಮಾತ್ರ ಸೀಮಿತ. ಇದು ಬೇರೆಯವರಿಗೆ ಅಲ್ಲ. ಇಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Modi in Karnataka : ಸುಳ್ಳು ಹೇಳುವುದಕ್ಕೂ ಮಿತಿ ಬೇಕು; ಮೋದಿ ಭಾಷಣಕ್ಕೆ ಸಿದ್ದರಾಮಯ್ಯ 13 ಪ್ರಶ್ನೆಗಳ ಉತ್ತರ

ಬುಲ್ಡೋಜರ್‌ ಬಗ್ಗೆ ಮಾತನಾಡಲ್ಲ. ಆ ಸಂಸ್ಕೃತಿಯಲ್ಲೂ ಬೆಳೆದಿಲ್ಲ. ಸರ್ವೇ ಜನಾಃ ಸುಖಿನೋ ಭವಂತು ನಮ್ಮ ನಾಥಪರಂಪರೆಯಾಗಿದೆ. ಅಲ್ಲಿನ ನಾಥಪರಂಪರೆಯು ಬುಲ್ಡೋಜರ್‌ ಹೊಡೆಸೋದು, ಯಾರನ್ನು ಬೇಕಾದರೂ ಫೇಕ್ ಎನ್‌ಕೌಂಟರ್ ಮಾಡಿಸುವುದಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ನಾನು ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಬ್ಬರೂ ಒಂದೊಂದು ದಿನ‌ ಜಿಲ್ಲಾ‌ ಪ್ರವಾಸ ಮಾಡುತ್ತೇವೆ. ರಾಜ್ಯದಲ್ಲಿ ಈ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಮ್ಮ ಸಂವಿಧಾನವೇ ಶ್ರೇಷ್ಠ ಸಂವಿಧಾನವಾಗಿದೆ. ಅಂಬೇಡ್ಕರ್ ಅವರಿಗೆ ಆಗಿರುವ ಅನುಭವದಿಂದಲೇ ಎಲ್ಲರಿಗೂ ಸಮಾನತೆ ದೊರಕಿಸಿಕೊಡಲು ಪ್ರಪಂಚದಲ್ಲೇ ಶ್ರೇಷ್ಠ ಸಂವಿಧಾನ ನೀಡಿದರು. ನೊಂದ ಜನರ ಬದುಕನ್ನು ಸರಿಪಡಿಸಲು ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಎರಡೂ ರಾಷ್ಟ್ರೀಯ ಪಕ್ಷಗಳವರು ಎಷ್ಟರ ಮಟ್ಟಿಗೆ ಜಾರಿಗೆ ತಂದಿದ್ದಾರೆ ಎಂದು ಪ್ರಶ್ನೆ ಮಾಡಿದ ಎಚ್‌.ಡಿ. ಕುಮಾರಸ್ವಾಮಿ, ಅದನ್ನು ಮಾಡೋದು ಬಿಟ್ಟು ಇವರಿಗೆ ಅನುಕೂಲವಾಗುವ ಹಾಗೆ ಚರ್ಚೆ ಮಾಡಿದರೆ, ನಾನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

ಮೂರನೇ ಬಾರಿಗೆ ಆಶೀರ್ವಾದ ಏಕೆ ಮಾಡಬಾರದು?

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನನಗೂ ಒಂದು ಅವಕಾಶ ನೀಡಿ ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಮೂರನೇ ಬಾರಿಗೆ ನನಗೆ ಯಾಕೆ ಜನ ಆಶೀರ್ವಾದ ಮಾಡಬಾರದು? ಮೂರನೇ ಬಾರಿಗೆ ಆಶೀರ್ವಾದ ಮಾಡಿದರೆ ಜನರಿಗೆ ಒಳ್ಳಯದಾಗುತ್ತದೆ. ನಾನೇನು ದೊಡ್ಡ ಮಹಲ್ ಕಟ್ಟಲು ಮತ ಕೇಳುತ್ತಿಲ್ಲ.
ಜನತೆಯ ಬದಕನ್ನು ಸರಿಪಡಿಸಲು ನಾನು ಮತ ಕೇಳುತ್ತಿದ್ದೇನೆ. ಅವರಿಗೆ ಅಧಿಕಾರ ಕೊಟ್ಟರೆ ಏನು ಮಾಡುತ್ತಾರಂತೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: Karnataka Election 2023: ಶೀಘ್ರ ಕಾಂಗ್ರೆಸ್‌‌ನ 50 ನಾಯಕರ ಮೇಲೆ ಐಟಿ, ಲೋಕಾ ದಾಳಿ: ಲಕ್ಷ್ಮೀ ಹೆಬ್ಭಾಳಕರ್ ಆರೋಪ

ಕಾಂಗ್ರೆಸ್‌ನವರಿಗೆ ನಾನು ಏನು ಅನ್ಯಾಯ ಮಾಡಿದ್ದೆ?

ಅವರು 80 ಜನರಿದ್ದರೂ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಯಾವ ರೀತಿ ಉಪಯೋಗ ಮಾಡಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿಲ್ಲ. 15 ಜನರು ಹೋಗಬೇಕಾದರೆ ಅದು ನನ್ನ ಜವಾಬ್ದಾರಿಯಾ? ನಮ್ಮವರೂ ಮೂರು ಜನ ಹೋದರು ಎಂದು ಹೇಳುತ್ತಾರೆ. ಆದರೆ, ಇವರು 15 ಜನ ಹೋಗಿದ್ದಕ್ಕೆ ನಮ್ಮವರು 3 ಜನ ಹೋಗಿದ್ದು. ಸರ್ಕಾರ ತೆಗೆಯಲು ನಾನೇನು ಅನ್ಯಾಯ ಮಾಡಿದ್ದೆ? ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಸಾಲ ಮನ್ನಾ ಮಾಡಿದ್ದೆ. ಏನೂ ಮಾಡಿಲ್ಲ ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Exit mobile version