ರಾಮನಗರ: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹೆಸರಿನಲ್ಲಿ ಯಾರ ವಂಚನೆಗೂ ಒಳಗಾಗಬೇಡಿ (Fraud Case), ಯಾರಿಗೂ ಹಣ ಕೊಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಪದೇಪದೆ ಮನವಿ ಮಾಡುತ್ತಿದ್ದಾರೆ. ಜನ ಎಷ್ಟು ಜಾಗೃತರಾಗಿದ್ದರೂ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಅಮಾಯಕರ ಸುಲಿಗೆ (Woman duped by a person) ಮಾಡುತ್ತಿದ್ದಾರೆ.
ಚನ್ನಪಟ್ಟಣಕ್ಕೆ ಮಗನನ್ನು ಮಾತನಾಡಿಸಲೆಂದು ಬಂದಿದ್ದ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಗೃಹಲಕ್ಷ್ಮಿ ಹೆಸರಲ್ಲಿ ಯಾಮಾರಿಸಿ ಅವರಿಗೆ ಸೇರಿದ 40 ಗ್ರಾಂ ಚಿನ್ನಾಭಣವನ್ನು ಲೂಟಿ ಮಾಡಿದ್ದಾನೆ.
ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪ ನಿವಾಸಿಯಾಗಿರುವ ತಮ್ಮಯ್ಯ ಎಂಬವರ ಪತ್ನಿ ಸಾವಿತ್ರಮ್ಮ (62). ಅವರ ಮಗ ಚೆನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದು, ಅನಾರೋಗ್ಯಕ್ಕೆ ಗುರಿಯಾಗಿದ್ದ. ಅವನನ್ನು ಮಾತನಾಡಿಸಲೆಂದು ಅವರು ಬಂದಿದ್ದರು.
ಸಾವಿತ್ರಮ್ಮ ಅವರು ಚೆನ್ನಪಟ್ಟಣಕ್ಕೆ ಬಂದವರು ಸ್ವಲ್ಪ ತರಕಾರಿ ತೆಗೆದುಕೊಳ್ಳೋಣ ಎಂದು ಅಲ್ಲೇ ಇದ್ದ ಅಂಗಡಿಯವನ ಬಳಿ ದರದ ವಿಚಾರಣೆ ಮಾಡುತ್ತಿದ್ದರು. ಆಗ ಅಲ್ಲಿ ಬಂದ ವ್ಯಕ್ತಿಯೊಬ್ಬ ಅಜ್ಜಿ ನಿಮ್ಮದು 2000 ರೂ. ಬರುವ ಯೋಜನೆ ನೋಂದಣಿ ಆಗಿದೆಯಾ ಎಂದು ಕೇಳಿದ್ದಾನೆ.
ಸಾವಿತ್ರಮ್ಮ ಅವರು ಆಗಿಲ್ಲ ಎಂದಿದ್ದಾರೆ. ಆಗ ಆ ವ್ಯಕ್ತಿ ಬನ್ನಿ ಅಜ್ಜಿ ನಾನು ಮಾಡಿಸಿಕೊಡುತ್ತೇನೆ ಅಂದಿದ್ದಾನೆ. ಅಜ್ಜಿ ಮೊದಲು ಬೇಡ ಎಂದೇ ಹೇಳಿದ್ದಾರೆ. ಆದರೆ, ಆತ ನಮ್ಮ ಮನೆಯಿಂದಲೂ ಕೆಲವರು ಬರಲಿದ್ದಾರೆ, ಅವರ ಜತೆಗೆ ನಿಮ್ಮದೂ ಆಗುತ್ತದೆ ಬನ್ನಿ ಎಂದು ಕರೆದೊಯ್ದಿದ್ದಾನೆ.
ನೋಂದಣಿ ಮಾಡುವ ಮೊದಲು ಕಣ್ಣು ಪರೀಕ್ಷೆ ಮಾಡಬೇಕು, ನಿಮ್ಮ ಕಣ್ಣು ಪರೀಕ್ಷೆ ಆಗಿದೆಯಾ ಎಂದು ಕೇಳಿದ್ದಾನೆ. ಆಗ ಮಹಿಳೆ ಇಲ್ಲ ಎಂದಿದ್ದಾರೆ. ಆಗ ಆತ ಈ ಮಹಿಳೆಯನ್ನು ಅಲ್ಲೇ ಇರುವ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಸಾವಿತ್ರಮ್ಮ ಹೆಸರಿನಲ್ಲಿ ಐದು ರೂ. ಕೊಟ್ಟು ಚೀಟಿ ಮಾಡಿಸಿದ್ದಾನೆ.
ಚೀಟಿ ಮಾಡಿಸಿಕೊಂಡು ಬಂದವನೇ ಆಕೆಯನ್ನು ಪರೀಕ್ಷೆಗೆ ಕರೆದುಕೊಂಡು ಒಳಗೆ ಹೋಗಬೇಕು ಎನ್ನುವಾಗ, ನಿಮ್ಮ ಮೈಮೇಲಿರುವ ಚಿನ್ನ ತೆಗೀಬೇಕು ಅನಿಸುತ್ತದೆ. ಅದನ್ನು ನನ್ನಲ್ಲಿ ಕೊಡಿ ಎಂದಿದ್ದಾನೆ. ಅಲ್ಲಿವರೆಗೆ ತುಂಬ ಚೆನ್ನಾಗಿ ನಡೆಸಿಕೊಂಡ ಆತನ ಮೇಲೆ ಸಾವಿತ್ರಮ್ಮನಿಗೆ ಯಾವ ಸಂಶಯವೂ ಬರಲಿಲ್ಲ. ಅವರು ತಮ್ಮ 32 ಗ್ರಾಂನ ಸರ ಮತ್ತು ತಲಾ ನಾಲ್ಕು ಗ್ರಾಂಗಳ ಎರಡು ತಾಳಿಯನ್ನು ತೆಗೆದು ಅವನ ಕೈಗೆ ಕೊಟ್ಟಿದ್ದಾರೆ.
ಆತ ಅವರನ್ನು ಕಣ್ಣು ಪರೀಕ್ಷೆಯ ಜಾಗದಲ್ಲಿ ಕೂರಿಸಿ ಹೊರಗೆ ಬಂದಿದ್ದಾನೆ. ಸಾವಿತ್ರಮ್ಮ ಕಣ್ಣು ಪರೀಕ್ಷೆ ಮಾಡಿಸಿಕೊಂಡು ಹೊರಗೆ ಬಂದು ನೋಡಿದರೆ ಆ ವ್ಯಕ್ತಿಯೇ ನಾಪತ್ತೆ!
ಸಾವಿತ್ರಮ್ಮ ಅವರು ಭಯಗೊಂಡು ಕಂಡ ಕಂಡವರಲ್ಲಿ ಅವನನ್ನು ನೋಡಿದಿರಾ ಎಂದು ಕೇಳಿದ್ದಾರೆ. ಅವರೂ ಓಡೋಡಿ ಹೋಗಿ ಹುಡುಕಿದ್ದಾರೆ. ಆದರೆ, ಅವನು ಮಾತ್ರ ಸಿಗಲೇ ಇಲ್ಲ.! ಆತ ಲಕ್ಷಾಂತರ ರೂ. ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದಾನೆ.
ಇದನ್ನೂ ಓದಿ Gruha Lakshmi scheme : ಗೃಹಲಕ್ಷ್ಮಿ ನೋಂದಣಿ ಮತ್ತಷ್ಟು ಸರಳ; ಮೆಸೇಜ್ ಮಾಡ್ಬೇಕಾಗಿಲ್ಲ, ಡೈರೆಕ್ಟ್ ಹೋಗಿ!
ಈ ನಡುವೆ ಅಲ್ಲಿದ್ದವರು ಸೇರಿ ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಇದು ಬ್ಯುಸಿಯಾದ ಜಾಗದಲ್ಲಿ ನಡೆದಿದ್ದು, ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿವೆ. ಜತೆಗೆ ಆತ ಆಕೆಯನ್ನು ಸರ್ಕಾರಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ ಅಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಆತನ ಚಲನವಲನ ದಾಖಲಾಗಿರುವುದು ಖಚಿತವಾಗಿದೆ. ಹೀಗಾಗಿ ಈ ವಂಚಕ ಬಲೆಗೆ ಬೀಳಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.