ಬೆಂಗಳೂರು: ತಾಯಿಯೊಬ್ಬಳು ತನ್ನದೇ ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿದ ಭಯಾನಕ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ. ಕೊನೆಗೆ ಆಕೆಯೂ ಆತ್ಮಹತ್ಯೆ ಮಾಡಿಕೊಳ್ಳಲು ವಿಫಲ ಪ್ರಯತ್ನ ನಡೆಸಿದ್ದಾಳೆ.
ಬೆಂಗಳೂರಿನ ಸಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್ ಮೆಂಟ್‌ನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಎದೆನಡುಗುವಂತಿದೆ. ಪೊಲೀಸರು ಆರೋಪಿ, ತಾಯಿ ಕುಸುಮಾ ಅವರನ್ನು ಬಂಧಿಸಿದ್ದಾರೆ.
ಈ ಮಹಿಳೆ ದಂತವೈದ್ಯೆಯಾಗಿ ಕೆಲಸ ಮಾಡುತ್ತಿದ್ದು, ತಾನೇ ಕೈಯಾರೆ ಮಗುವನ್ನು ಮೇಲಿಂದ ಕೆಳಗೆ ಎಸೆದಿದ್ದಾಳೆ. ಕೊನೆಗೆ ತಾನೂ ಧುಮುಕಲು ಯತ್ನಿಸಿದ್ದಳು. ಈ ವೇಳೆ ಕೆಲವರು ಓಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ.
ಈ ಐದು ವರ್ಷದ ಮಗು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅದರಿಂದ ಬೇಸತ್ತು ಆಕೆ ಈ ರೀತಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮಗು ನೆಲಕ್ಕೆ ಬಿದ್ದು ದೇಹ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದೆ.
ಮಗುವಿನ ತಂದೆ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿಗೆ ತನ್ನ ಮಗು ಬುದ್ಧಿಮಾಂದ್ಯತೆ ಹೊಂದಿರುವ ವಿಚಾರದಲ್ಲಿ ತುಂಬಾ ಬೇಸರವಿತ್ತು. ಇದೇ ಕಾರಣಕ್ಕಾಗಿ ಆಕೆ ಮೂರು ತಿಂಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದಳು. ಆದರೆ, ಈ ವಿಚಾರವನ್ನು ತಿಳಿದ ತಂದೆ ಮಗುವನ್ನು ಎಲ್ಲಿಂದಲೋ ಹುಡುಕಿಕೊಂಡು ಬಂದಿದ್ದರು. ಇದೀಗ ಆಕೆ ಮಗುವನ್ನು ಎಸೆದು ಕೊಂದೇ ಬಿಟ್ಟಿದ್ದಾಳೆ.