Site icon Vistara News

Karnataka Election 2023: ವರುಣ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ, ಹೆಲಿಕಾಪ್ಟರ್‌ನಲ್ಲಿ ರಾಜ್ಯ ಪ್ರವಾಸ; ದಿನಕ್ಕೆ 4 ಕ್ಷೇತ್ರದಲ್ಲಿ ಪ್ರಚಾರ: ಸಿದ್ದರಾಮಯ್ಯ

Wont go to Varuna constituency for campaigning state tour in helicopter to campaign in 4 constituencies in a day says Karnataka Election 2023 updates

ಮೈಸೂರು: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ನಾನು ವರುಣ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ. ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣ ಕ್ಷೇತ್ರಕ್ಕೆ ಹೋಗುತ್ತೇನೆ. ಉಳಿದಿದ್ದ ಎಲ್ಲ ಪ್ರಚಾರವನ್ನೂ ಯತೀಂದ್ರ ನೋಡಿಕೊಳ್ಳುತ್ತಾನೆ. ನಾನು ರಾಜ್ಯ ಪ್ರವಾಸ ಮಾಡಬೇಕಿದೆ. ಹೆಲಿಕಾಪ್ಟರ್‌ನಲ್ಲಿ ರಾಜ್ಯ ಪ್ರವಾಸ ಮಾಡಲಾಗುವುದು. ದಿನಕ್ಕೆ ನಾಲ್ಕು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ರಾಜ್ಯದಲ್ಲಿ ಒಟ್ಟಾರೆ 120 ಕ್ಷೇತ್ರದಲ್ಲಿ ಸಂಚಾರ ಮಾಡುತ್ತೇನೆ. ಈಗಾಗಲೇ ಪ್ರಜಾಧ್ವನಿ ಯಾತ್ರೆಯ ಮೂಲಕ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಪ್ರಚಾರ ನಡೆಸಿದ್ದಾರೆ ಎಂದು ಹೇಳಿದರು.

ಆಡಳಿತ ಪಕ್ಷದಿಂದ ಹೆಚ್ಚು ಚುನಾವಣಾ ಅಕ್ರಮ

ಚುನಾವಣೆಗೆ ಕಾಂಗ್ರೆಸ್ ಯಾವಾಗಲೂ ಸಿದ್ಧ. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಆಶಯಗಳ ಮೇಲೆ ವಿಶ್ವಾಸ ಇದೆ. ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ. ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಚುನಾವಣೆ ನಡೆಯಬೇಕು. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ವಹಿಸಬೇಕು. ಆಡಳಿತ ಪಕ್ಷದವರಿಂದ ಹೆಚ್ಚಾಗಿ ಚುನಾವಣಾ ಅಕ್ರಮ ನಡೆಯುತ್ತದೆ. ಅವರ ಮೇಲೆ ಹೆಚ್ಚಿನ ಗಮನ ಇಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Karnataka Election announced : ಅಭ್ಯರ್ಥಿ ಪಟ್ಟಿ ಬಿಡುಗಡೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮುಂದೆ; ಬಿಜೆಪಿ ಮೊದಲ ಪಟ್ಟಿಯೇ ಬಂದಿಲ್ಲ!

ಇನ್ನೆರಡು ದಿನದಲ್ಲಿ ಕಾಂಗ್ರೆಸ್‌ನ ಎರಡನೇ ಪಟ್ಟಿ

ಕಾಂಗ್ರೆಸ್ ಎರಡನೇ ಪಟ್ಟಿ ಒಂದೆರೆಡು ದಿನದಲ್ಲಿ ಬಿಡುಗಡೆಯಾಗುತ್ತದೆ. ಬುಧವಾರ (ಮಾ. 29) ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಸಭೆ ಮುಗಿಸಿ ಅದನ್ನು ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಆ ನಂತರ ಪಟ್ಟಿ ಬಿಡುಗಡೆಯಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗಾಳಿ ಬೀಸುತ್ತಿದೆ. ಹೀಗಾಗಿ ಟಿಕೆಟ್‌ಗಾಗಿ ಸಾಕಷ್ಟು ಜನರು ಪೈಪೋಟಿ ನಡೆಸುತ್ತಿದ್ದಾರೆ. ಅದರಲ್ಲಿ ಯಾರು ಗೆಲ್ಲುತ್ತಾರೆಯೋ ಅಂತಹವರನ್ನು ಹುಡುಕಿ ಟಿಕೆಟ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬಹಳ ದೊಡ್ಡ ಮಟ್ಟದಲ್ಲಿ ಇರುವುದು ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಕಳೆದ ಬಾರಿಯಂತೆ ಈ ವಿಧಾನಸಭಾ ಚುನಾವಣೆಯಲ್ಲಿಯೂ ಜೆಡಿಎಸ್- ಬಿಜೆಪಿಯವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವ ಸೂಚನೆ ಇದೆ. ಹಳೇ ಮೈಸೂರು, ಹೊಸ ಮೈಸೂರು ಎಂದೇನಿಲ್ಲ. ಅವರು ಎಲ್ಲ ಕಡೆಯೂ ಫಿಕ್ಸಿಂಗ್ ಮಾಡಿಕೊಳ್ಳಬಹುದು. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನಾನು ಹೆದರುವುದಿಲ್ಲ. ಯಾರೇ ನಿಂತರೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕಳೆದ ಚುನಾವಣೆಯಲ್ಲಿ ಸೋತ ಮೇಲೆ ನಾನು ರಾಹು-ಕೇತುಗಳು ಒಂದಾದವು ಎಂದು ಹೇಳಿದ್ದೆ. ಈಗ ನಾನು ಆ ಪದ ಬಳಸುವುದಿಲ್ಲ. ಬಳಸಿದರೆ ಅವರು ಈಗ ಸಿಟ್ಟಾಗುತ್ತಾರೆ. ನಾನು ಈ ಬಾರಿ ಗೆಲ್ಲುತ್ತೇನೆ. ಈಗ ಅದನ್ನು ಉಲ್ಲೇಖಿಸುವ ಅಗತ್ಯ ಇಲ್ಲ. ಜನ ನನ್ನ ಪರವಾಗಿ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಸ್ತಾರ Explainer: Model Code of Conduct: ಈ ಕ್ಷಣದಿಂದಲೇ ಜಾರಿ ಮಾದರಿ ನೀತಿ ಸಂಹಿತೆ! ಇದರ ಬಗ್ಗೆ ನೀವು ತಿಳಿದಿರಬೇಕಾದ 10 ನಿಯಮಗಳು ಇಲ್ಲಿವೆ

ಇದೇ ನನ್ನ ಕೊನೇ ಚುನಾವಣೆ

ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆ. ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಲ್ಲದೆ, ಇದೇ ನನ್ನ ಕೊನೆ ಚುನಾವಣೆ, ಇದೇ ಕೊನೆ ಚುನಾವಣೆ ಎಂದು ಎರಡೆರಡು ಬಾರಿ ಉಚ್ಛರಿಸಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವಂತೆ ಮತದಾರರಿಗೆ ಪರೋಕ್ಷ ಕರೆ ನೀಡಿದ್ದಾರೆ.

ಈ ಬಾರಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಬಾದಾಮಿಯಿಂದ ಸ್ಪರ್ಧೆ ಮಾಡಿ ಅಂತ ಹೆಣ್ಣು ಮಗಳೊಬ್ಬಳು ರಕ್ತದಲ್ಲಿ ಬರೆದುಕೊಟ್ಟಿದ್ದಾರೆ. ಈ ಬಾರಿ ನನಗೆ ಯಾವ ಅನುಮಾನಗಳೂ ಇಲ್ಲ. ಆದರೆ, ಕೋಲಾರದ ಜನ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ಸ್ಪರ್ಧೆ ಮಾಡಲು ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು‌ ಎಂದು ಹೇಳಿದರು.

ಇದನ್ನೂ ಓದಿ: Mutual fund nomination : ಮ್ಯೂಚುವಲ್‌ ಫಂಡ್‌ ನಾಮಿನೇಶನ್‌ ಗಡುವು 2023 ಸೆಪ್ಟೆಂಬರ್‌ 30ಕ್ಕೆ ವಿಸ್ತರಣೆ

ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲ ಅರ್ಥ ಇಲ್ಲದ ಮಾತು. ನಾನು ಯಾವುದೇ ಕ್ಷೇತ್ರದಿಂದ‌ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ. ನನಗೆ 25 ಕ್ಷೇತ್ರದಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನಗೆ ಆಹ್ವಾನಿಸುತ್ತಿದ್ದಾರೆ. ಯಾರಾದರೂ ಸೋಲುತ್ತಾರೆ ಎಂದರೆ ಆಹ್ವಾನ ಮಾಡುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

Exit mobile version