Site icon Vistara News

StartUp Pavilion | ನವೋದ್ಯಮಗಳ ಸ್ಥಾಪನೆಗೆ ಮೈಸೂರು ಪ್ರಶಸ್ತ ಸ್ಥಳ: ಯದುವೀರ ಒಡೆಯರ್

ಮೈಸೂರು: ನವೋದ್ಯಮಗಳನ್ನು (StartUp Pavilion) ಸ್ಥಾಪಿಸಲು ಮೈಸೂರು ಪ್ರಶಸ್ತವಾಗಿದೆ. ಸೈಬರ್ ಕ್ಷೇತ್ರದ ಸವಾಲುಗಳನ್ನು ಎದುರಿಸುವುದು ಹೊಸ ಅನ್ವೇಷಣೆ, ಆವಿಷ್ಕಾರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳು ಗಮನ ಹರಿಸಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಎಸ್‌ಜೆಸಿಇ- ಸೈನ್ಸ್ ಆ್ಯಂಡ್ ಟೆಕ್ನಾಲಜಿ ಎಂಟರ್‌ಪ್ರಿನರ್ ಪಾರ್ಕ್ (ಸ್ಟೆಪ್), ಎಕ್ಸೆಲ್ ಸಾಫ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ ಮೈಸೂರು ಸ್ಟಾರ್ಟಪ್ ಪೆವಿಲಿಯನ್ (ಎಂಎಸ್‌ಪಿ)ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಸ್ಟಾರ್ಟ್‌ಅಪ್‌ ಹೆಸರಿನಲ್ಲಿ ಈಗ ನವೋದ್ಯಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ನೂರು ವರ್ಷಗಳ ಹಿಂದೆಯೇ ಮೈಸೂರು ಒಡೆಯರು ಹಲವು ಉದ್ಯಮಗಳನ್ನು ಸ್ಥಾಪಿಸಿದ್ದರು. ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಮೈಸೂರು ಸ್ಯಾಂಡಲ್‌, ಮೈಸೂರು ಪೇಂಟ್‌, ಮೈಸೂರು ಸಿಮೆಂಟ್‌ ಹೀಗೆ ಹಲವಾರು ಕಂಪನಿಗಳು ಮಹಾರಾಜರ ಕಾಲದಲ್ಲೇ ಸ್ಥಾಪನೆಯಾಗಿದ್ದಲ್ಲದೆ, ಯಶಸ್ವಿ ಉದ್ಯಮಗಳಾಗಿದ್ದವು. ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಆಶಿಸಿದರು.

ಖ್ಯಾತ ಗಾಯಕ ವಾಸು ದೀಕ್ಷಿತ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ | ಸ್ಟಾರ್ಟಪ್‌ ಉದ್ದಿಮೆ ಅಭಿವೃದ್ಧಿ: ಗುಜರಾತ್‌ ನಂ.1, ಕರ್ನಾಟಕ ನಂ.2

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅಂಗವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಅದರಲ್ಲೂ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ತಮ್ಮ ಸ್ವಸಾಮರ್ಥ್ಯದಿಂದ ಭಾರತವನ್ನು ಬೇರೆಯದ್ದೇ ಎತ್ತರಕ್ಕೆ ಕೊಂಡೊಯ್ಯಬಹುದು ಎಂದರು.

ಉದ್ಯೋಗಪತಿಯಾಗಲು ಹೆದರಿಕೆ

ಪ್ರತಿ ಮನುಷ್ಯನಿಗೂ ಉದ್ಯೋಗಪತಿಯಾಗಬೇಕು ಅಥವಾ ಉದ್ಯೋಗ ಪಡೆಯಬೇಕು ಎಂಬ ಆಸೆ ಇರುತ್ತದೆ. ಅನೇಕರಿಗೆ ಉದ್ಯೋಗಪತಿಯಾಗುವ ಎಲ್ಲ ಅವಕಾಶ, ಶಕ್ತಿ, ಸಾಮರ್ಥ್ಯವಿರುತ್ತದೆ. ಆದರೂ ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳಬೇಕು, ತಿಂಗಳ ಸಂಬಳ ಪಡೆದು ಸಂತೋಷವಾಗಿ ಇರಬಹುದು ಎಂದು ಆಲೋಚನೆ ಮಾಡುತ್ತಾರೆ. ಮನಸ್ಸು ಮಾಡಿದರೆ ಮಾಡಲು ಬೇಕಾದಷ್ಟು ಕೆಲಸ, ಉದ್ಯಮಗಳಿವೆ. ಉದ್ಯಮದಲ್ಲಿ ಯಶಸ್ಸು ಗಳಿಸಿದವರನ್ನು ನೋಡಿ ಅಸೂಯೆ ಪಡಬಾರದು. ಬದಲಿಗೆ ಯಶಸ್ವಿ ಉದ್ಯಮಿ ರೀತಿಯಲ್ಲೇ ಪರಿಶ್ರಮ ಪಟ್ಟರೆ ಅವರಿಗೂ ಯಶಸ್ಸು ಸಿಗಲಿದೆ ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

‘ಎಂಟರ್‌ಪ್ರಿನರ್‌ಶಿಪ್ ಆ್ಯಂಡ್ ವೆಲ್ತ್ ಕ್ರಿಯೇಷನ್ ಸೆಂಟರ್ ಟು ಎ ಪ್ರಾಸ್ಪರಸ್ ಭಾರತ್’ ಕುರಿತು ಸ್ವಾಮಿ ವಿಜ್ಞಾನಂದಜೀ ಮತ್ತು ‘ಮೈಸೂರು ವಿಷನ್ ೨೦೨೦: ವಾಟ್‌, ವೈ, ವೆನ್ ಫಾರ್ ಮೈಸೂರು’ ಕುರಿತು ಸ್ಕ್ಯಾನ್‌ರೇ ಟೆಕ್ನಾಲಜೀಸ್ ಸಂಸ್ಥಾಪಕ ವಿಶ್ವಪ್ರಸಾದ್ ಆಳ್ವ ಉಪನ್ಯಾಸ ನೀಡಿದರು. ಪ್ರೊಟಿಯಾನ್ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸೇತಿ, ಜೆಎಸ್‌ಎಸ್‌ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ಸೇರಿದಂತೆ ಹಲವರಿದ್ದರು.

ವೇದಿಕೆಯಲ್ಲಿ ಕಂಗೊಳಿಸಿದ ‘ವಿಸ್ತಾರ’
ಎರಡನೇ ದಿನವಾದ ಶನಿವಾರ ಪ್ರಧಾನ ವೇದಿಕೆಯಲ್ಲಿ ‘ವಿಸ್ತಾರ ನ್ಯೂಸ್’ ಕಂಗೊಳಿಸಿತು. ಖ್ಯಾತ ಗಾಯಕ ವಾಸು ದೀಕ್ಷಿತ್ ಶನಿವಾರ ಸಂಜೆ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಸ್ಟಾರ್ಟಪ್ ವೇದಿಕೆಯಲ್ಲಿ ವಿಸ್ತಾರ ನ್ಯೂಸ್ ಲೋಗೋ ಬಿತ್ತರಗೊಳಿಸಲಾಯಿತು. ಮೈಸೂರು ಸ್ಟಾರ್ಟಪ್ ಪೆವಿಲಿಯನ್‌ ವಿದ್ಯುನ್ಮಾನ ಮಾಧ್ಯಮ ಸಹಯೋಗ ನೀಡಿರುವ ವಿಸ್ತಾರ ನ್ಯೂಸ್ ಪ್ರೇಕ್ಷಕರ ಗಮನ ಸೆಳೆಯಿತು.

ನವೋದ್ಯಮಗಳ ಮೇಳ
ಮೈಸೂರು ಸ್ಟಾರ್ಟಪ್ ಪೆವಿಲಿಯನ್ ಅಂಗವಾಗಿ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನವೋದ್ಯಮಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ಮೊದಲ ದಿನವಾದ ಶುಕ್ರವಾರ ಸಾವಿರಾರು ಜನರು ಮಳಿಗೆಗಳನ್ನು ವೀಕ್ಷಣೆ ಮಾಡಿದ್ದರು. ಎರಡನೇ ದಿನವಾದ ಶನಿವಾರವೂ ಸಾವಿರಾರು ವಿದ್ಯಾರ್ಥಿಗಳು, ಉದ್ಯಮಿಗಳು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ್ದರು. ಆಹಾರ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೇಗೆ ಹಲವು ಕ್ಷೇತ್ರಗಳ ಉದ್ಯಮಿಗಳು ಹಾಗೂ ನವೋದ್ಯಮಿಗಳು ಮಳಿಗೆಗಳನ್ನು ಸ್ಥಾಪಿಸುವ ಮೂಲಕ ವೀಕ್ಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಸಾವಯವ ಕೃಷಿ ಉತ್ಪನ್ನ ಮಾರಾಟ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಡ್ರೋಣ್, ಆಟೋಮೊಬೈಲ್ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.

Value Creation by Venture Capital ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ 100 ಎಕ್ಸ್ ವಿಸಿ ಪ್ರಾಂಶುಪಾಲ ವತ್ಸಲ್ ಕನಕಿಯಾ, ಸಿಲಿಕಾನ್ ರೋಡ್ ಸಂಸ್ಥಾಪಕ ಸಿದ್ ಮುಖರ್ಜಿ, ವಾಣಿಜ್ಯ ಸಲಹೆಗಾರ ನಂಜುಂಡ ಪಾಲೆಚಂದ ಭಾಗವಹಿಸಿದ್ದರು. ‘ಸಣ್ಣ ನಗರ ಮತ್ತು ದೊಡ್ಡ ಕನಸು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅರೇಕಾ ಟೀ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿವೇದನ್ ನೆಂಪು, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ್ ಪಾಲ್ಗೊಂಡಿದ್ದರು. Creating a Mass Entrepreneurship Movement ಕುರಿತು ಮದನ್ ಪದಕಿ, Catalyzing Cultural Entrepreneurship ಕುರಿತು ಸಂಜಯ್ ಅನಂದರಾಮ್ ಉಪನ್ಯಾಸ ನೀಡಿದರು.

ಭಾನುವಾರದ ಕಾರ್ಯಕ್ರಮ

Exit mobile version