Site icon Vistara News

ಯೋಗಿ ಆದಿತ್ಯನಾಥ ಬೆಂಗಳೂರಿನಲ್ಲಿ ಉದ್ಘಾಟಿಸಿದ ʼಕ್ಷೇಮವನʼ ಹೇಗಿದೆ? ಅದರ ವಿಶೇಷತೆಯೇನು? ಇಲ್ಲಿದೆ ವಿವರ

Kshemavana

ಬೆಂಗಳೂರು: ಆಧುನಿಕ ಜೀವನಶೈಲಿಯಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಿರುವವರು ಪ್ರಕೃತಿ ಚಿಕಿತ್ಸೆಗೆ ಮಾರುಹೋಗುತ್ತಿದ್ದಾರೆ. ಪ್ರಕೃತಿ ಚಿಕಿತ್ಸೆಯಲ್ಲಿ ದಶಕಗಳಿಂದಲೂ ತೊಡಗಿಸಿಕೊಂಡಿರುವ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸಸ್‌ ಇದೀಗ ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ʼಕ್ಷೇಮವನʼ ಎಂಬ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಉದ್ಘಾಟನೆಯಾಗಿರುವ ಕೇಂದ್ರ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

20 ಎಕರೆ ವಿಸ್ತೀರ್ಣದಲ್ಲಿ, 93 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ನಿರ್ಮಾಣವಾಗಿದೆ. ಕ್ಷೇಮ ಎನ್ನುವುದು ಮನುಷ್ಯನ ಆರೋಗ್ಯವನ್ನು ಬಯಸಿದರೆ, ವನ ಎನ್ನುವುದು ಪ್ರಕೃತಿಯನ್ನು ಸೂಚಿಸುತ್ತದೆ. ಕೇಂದ್ರವನ್ನು ಪ್ರತಿಷ್ಠಿತ ವಾಸ್ತುಶಾಸ್ತ್ರಜ್ಞ ಮಹೇಶ್‌ ಡಿಯೋಫೊಡೆ ಹಾಗೂ ಆಯುಷ್‌ ಕಾಸ್ಲಿವಾಲ್‌ ಅವರ ಉಸ್ತುವಾರಿಯಲ್ಲಿ ನಿರ್ಮಿಸಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿದ್ದರೂ ಒಟ್ಟಾರೆ ವಾತಾವರಣದಲ್ಲಿ ಪ್ರಾಚೀನ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ವಾತಾವರಣ ಬಿಂಬಿತವಾಗುವಂತೆ ರೂಪಿಸಲಾಗಿದೆ.

ಕೂರ್ಮ ಕಟ್ಟಡದ ವಿಶೇಷತೆ

ಕ್ಷೇಮವನದಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆಯುವುದು ಆಮೆಯ ಆಕಾರದ ಕಟ್ಟಡಗಳು. ಕೂರ್ಮ ರೂಪದ ಕಟ್ಟಡಗಳನ್ನು ಧ್ಯಾನ ಕೇಂದ್ರ ಎಂದು ನಾಮಕರಣ ಮಾಡಲಾಗಿದೆ. ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಇಲ್ಲಿ ಧ್ಯಾನ ಮಾಡಬಹುದು. ಆಮೆಯು ದೀರ್ಘಾಯುಷ್ಯದ ಸೂಚಕವಾದ್ಧರಿಂದ, ಮಾನವರೂ ದೀರ್ಘಾಯುಷ್ಯವನ್ನು ಪಡೆಯಲಿ ಎಂಬ ಕಲ್ಪನೆಯಲ್ಲಿ ರೂಪಿಸಲಾಗಿದೆ. ನಂದಿ ಹೆಸರಿನ ಕಟ್ಟಡದಲ್ಲಿ ರೆಸ್ಟೋರೆಂಟ್‌ಗಳು, ಡಯೆಟ್‌ ಮಾದರಿಗಳು, 25 ಬಗೆಯ ಶುಶ್ರೂಶಾ ಕೊಠಡಿಗಳನ್ನು ಒಳಗೊಂಡಿದೆ. 400 ಅತಿಥಿಗೃಹಗಳಿದ್ದು, ಇವುಗಳಲ್ಲಿ ಶೇ.60 ಸಾಮಾನ್ಯ ಕೊಠಡಿಗಳಿವೆ. ಒಟ್ಟಾರೆಯಾಗಿ ಸಮುದ್ರ, ಭೂಮಿ ಮತ್ತು ಆಕಾಶದ ಪರಿಕಲ್ಪನೆಯಲ್ಲಿ ಕೇಂದ್ರವನ್ನು ರೂಪಿಸಲಾಗಿದೆ.

ಲಭಿಸುವ ಚಿಕಿತ್ಸೆಗಳ ವಿವರ

ಕೇಂದ್ರದಲ್ಲಿ ವಿವಿಧ ಚಿಕಿತ್ಸಾ ವಿಧಾನಗಳ ಮೂಲಕ ಆರೊಗ್ಯ ವೃದ್ಧಿ ಮಾಡಲಾಗುತ್ತದೆ. ಮುಖ್ಯವಾಗಿ ಯೋಗ ಥೆರಪಿ, ಫಿಸಿಯೋಥೆರಪಿ, ಹೈಡ್ರೋಥೆರಪಿ(ನೀರು), ಮಡ್‌ ಥೆರಪಿ(ಮಣ್ಣು), ಮಸಾಜ್‌ ಥೆರಪಿ, ಆಕ್ಯುಪಂಚರ್‌, ಡಯೆಟ್‌ ಹಾಗೂ ಉಪವಾಸ ಥೆರಪಿ, ರಿಫ್ಲೆಕ್ಸೋಥೆರಪಿಯನ್ನು ಒಳಗೊಂಡಿದೆ.

ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಸೇವೆಗಳೂ ಲಭ್ಯವಿವೆ. ಮುಖ್ಯವಾಗಿ ರುಮೆಟಾಯ್ಡ್‌ ಆರ್ಥ್ರೈಟಿಸ್‌, ಅಲರ್ಜಿಕ್‌ ರೈನೈಟಿಸ್‌, ಮಲ್ಟಿಪಲ್‌ ಸೆಲೆರೋಸಿಸ್‌, ಸೋರಿಯಾಸಿಸ್‌, ಗ್ಯಾಸ್ಟ್ರೊ ಆಸೋಫಜಿಯಲ್‌ ರಿಫ್ಲಕ್ಸ್‌ ಡಿಸೀಸ್‌ ಚಿಕಿತ್ಸೆ ಲಭ್ಯವಿದೆ.

ಚಿಕಿತ್ಸಾ ಸಿದ್ಧಾಂತಗಳು

ಯಾವುದೇ ಅನಾರೋಗ್ಯಕ್ಕೆ ಚಿಕಿತ್ಸೆಗಳನ್ನು ನೀಡಲು ಕ್ಷೇಮವನದಲ್ಲಿ ಐದು ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಲಾಗಿದೆ.

  1. ಸ್ಮೃತಿ (ಬುದ್ಧಿ ಮತ್ತು ದೇಹ): ಒತ್ತಡ ನಿವಾರಣೆ, ಯೋಗಾ ಥೆರಪಿ, ಧ್ಯಾನ
  2. ಆಹಾರ(ಆಹಾರ ಮತ್ತು ಪೌಷ್ಠಿಕಾಂಶ): ಪೌಷ್ಠಿಕಾಂಶ ಆಹಾರಗಳು, ಸಸ್ಯ ಆಧಾರಿತ ಡಯೆಟ್‌, ಗಿಡಮೂಲಿಕೆಗಳು, ಜ್ಯೂಸ್‌ ಥೇರಪಿ
  3. ನಿದ್ರೆ: ಹೈಡ್ರೋಥೆರಪಿ, ಸೌಂಡ್‌ ಥೆರಪಿ, ಯೋಗನಿದ್ರೆ
  4. ದೀಪನ್‌ (ಗಡ್‌ & ಇನ್ನರ್‌ ಫ್ಲೋರಾ): ಕೋಲನ್‌ ಥೆರಪಿ, ಗಟ್‌ ಇಂಟೆಗ್ರಿಟಿ ಅಸೆಸ್‌ಮೆಂಟ್‌, ಸಿಂಬಯಾಟಿಕ್ಸ್‌, ಪ್ರಿಬಯಾಟಿಕ್ಸ್‌ ಮತ್ತು ಪ್ರೊಬಯಾಟಿಕ್ಸ್‌
  5. ಊರ್ಜಾ(ಶಕ್ತಿ ಮತ್ತು ಸಮತೋಲನ): ಆಕ್ಯುಪಂಚರ್‌, ಬಯೋ ಫೀಡ್‌ಬ್ಯಾಕ್‌, ಫಿಸಿಯೋಥೆರಪಿ, ಚಿರೊಪ್ರಾಕ್ಟೀಸ್‌
ಚಿತ್ರ: kshemavana.com

ಇದನ್ನೂ ಓದಿ | Yogi Adityanath | ಮೋದಿಗೂ ಮುನ್ನ ರಾಜ್ಯಕ್ಕೆ ಯೋಗಿ ಆಗಮನ, ಗುರುವಾರದ ಭೇಟಿಯ ಮಾಹಿತಿ ಇಲ್ಲಿದೆ

Exit mobile version