ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಕರ್ನಾಟಕ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವರೊಂದಿಗೆ ಸಭೆ ನಡೆಸಿದ ಅಮಿತ್ ಶಾ, ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
“ವಿಧಾನಸಭೆ ಚುನಾವಣೆ ವೇಳೆ ಜನರಿಗೆ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಪ್ರತಿಪಕ್ಷಗಳು ಮಾಡಿರುವ ತಂತ್ರಗಾರಿಕೆಯನ್ನು ಅರಿತು ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು. ಇದಕ್ಕಾಗಿ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಪ್ರಚಾರ ಕೈಗೊಳ್ಳಬೇಕು” ಎಂಬುದಾಗಿ ತಾಜ್ ವೆಸ್ಟೆಂಡ್‌ನಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲು ಹೊರರಾಜ್ಯಗಳಿಂದ ಬಂದಿದ್ದ ಚುನಾವಣೆ ಉಸ್ತುವಾರಿಗಳ ಜತೆ ಮಾತುಕತೆ ನಡೆಸಿದ ಅವರು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: BJP Karnataka: ದೇವನಹಳ್ಳಿಯಲ್ಲಿ ನಡೆಯಬೇಕಿದ್ದ ಅಮಿತ್ ಶಾ ರೋಡ್ ಶೋ ರದ್ದು !
ರಾಜ್ಯ ನಾಯಕರಿಗೆ ಶಾ ಹಲವು ಟಿಪ್ಸ್
ಚುನಾವಣೆ ತಂತ್ರಗಾರಿಕೆ ಕುರಿತು ರಾಜ್ಯ ನಾಯಕರಿಗೆ ಅಮಿತ್ ಶಾ ಅವರು ಹಲವು ಟಿಪ್ಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಅವರು ರಾಜ್ಯಗಳಲ್ಲಿ ಸಾಲು ಸಾಲು ರ‍್ಯಾಲಿಗಳನ್ನು ಕೈಗೊಳ್ಳಲಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಕೂಡ ಬರಲಿದ್ದಾರೆ. ಹಾಗಾಗಿ, ಚುನಾವಣೆಯಲ್ಲಿ ರಾಜಿ ಪ್ರಶ್ನೆಯೇ ಇಲ್ಲ,. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರನ್ನು ಸೋಲಿಸಬೇಕು. ಬಂಡಾಯ ಶಮನಗೊಳಿಸಬೇಕು ಎಂಬುದಾಗಿ ನಾಯಕರಿಗೆ ಶಾ ಸೂಚಿಸಿದ್ದಾರೆ.
ಶುಕ್ರವಾರ ರಾತ್ರಿ ತಾಜ್ ವೆಸ್ಟೆಂಡ್‌ನಲ್ಲಿಯೇ ತಂಗಲಿರುವ ಅಮಿತ್ ಶಾ, ಶನಿವಾರ ದಾವಣಗೆರೆಯಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದಾರೆ. ರ‍್ಯಾಲಿ ಹಾಗೂ ಸಮಾವೇಶಗಳ ಬಳಿಕ ವಿವಿಧ ಮಠಾಧೀಶರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್ 23ರವರೆಗೆ ಅಮಿತ್ ಶಾ ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ.