Site icon Vistara News

ಮಕ್ಕಳ ಕಥೆ: ಉಪಾಯ ಚತುರರಾದ ನಾಲ್ವರು ಗೆಳೆಯರು

panchatantra story

ಈ ಕಥೆಯನ್ನು ಇಲ್ಲಿ ಕೇಳಿ

http://vistaranews.com/wp-content/uploads/2023/04/PanchatantraStory-1.mp3

ಒಂದಾನೊಂದು ಕಾಡು. ಅದರಲ್ಲಿ ನಾಲ್ವರು ಗೆಳೆಯರಿದ್ದರು. ನಾಲ್ವರು ಅಂದರೆ- ಕಾಕರಾಜ ಎಂಬ ಕಾಗೆ, ಹರಿಣಿ ಎಂಬ ಜಿಂಕೆ, ಕೂರ್ಮಕ್ಕ ಎಂಬ ಆಮೆ ಮತ್ತು ಹೆಗ್ಗಣ್ಣ ಎಂಬ ಹೆಗ್ಗಣ. ಒಬ್ಬರನ್ನೊಬ್ಬರು ಕಂಡರೆ ಅತ್ಯಂತ ಪ್ರೀತಿಯಿಂದ ಇದ್ದ ಇವರೆಲ್ಲಾ, ದಿನಾ ಮಧ್ಯಾಹ್ನ ದೊಡ್ಡಾಲದ ಮರದ ಕೆಳಗೆ ಕುಳಿತು ಹರಟೆ ಹೊಡೆಯುವವರು. ಹರಟೆ ಎಂದರೆ ಹತ್ತಿಪ್ಪತ್ತು ನಿಮಿಷಗಳಲ್ಲ, ಬರೋಬ್ಬರಿ ಒಂದೆರಡು ತಾಸುಗಳು! ತಂತಮ್ಮ ಕಷ್ಟ-ಸುಖಗಳನ್ನು ಹೇಳಿಕೊಂಡು, ಕಾಡಿನ ಸಮಾಚಾರವನ್ನೆಲ್ಲಾ ಮಾತಾಡಿಕೊಂಡು- ಅವತ್ತಿಗೆ ಸಾಕು ಎನಿಸಿದ ಮೇಲೆ ಅಲ್ಲಿಂದ ತಂತಮ್ಮ ಮನೆಯತ್ತ ತೆರಳುವವರು.

ಆ ದಿನವೂ ಎಂದಿನಂತೆ ದೊಡ್ಡಾಲದ ಮರದ ಕೆಳಗೆ ಸೇರಲಾರಂಭಿಸಿದ್ದರು ಗೆಳೆಯರು. ಮೊದಲಿಗೆ ಕಾಕರಾಜ, ಆಮೇಲೆ ಆಲದಮರದಾಚೆಯ ಕೊಳದಿಂದ ಕೂರ್ಮಕ್ಕ, ಹೆಗ್ಗಣ್ಣಗಳು ಬಂದಿದ್ದವು. ಮಾಮೂಲಿ ಸಮಯ ಮೀರಿದರೂ ಹರಿಣಿಯ ಸುಳಿವೇ ಇಲ್ಲ. ಅರೆ! ಇವಳೆಲ್ಲಿ ಹೋದಳು? ಎಂದು ಎಲ್ಲರಿಗೂ ಚಿಂತೆಯಾಯಿತು. ʻಕಾಕ್ರಾಜ, ನೀನೊಂದ್ಸಾರಿ ಹಾರೋಗಿ ನೋಡ್ಕೊಂಬಾʼ ಎಂದಳು ಕೂರ್ಮಕ್ಕ. ಸರಿಯೆಂದು ಹೊರಟ ಕಾಕರಾಜನಿಗೆ ಹೆಚ್ಚು ದೂರ ಹಾರುವುದರೊಳಗೇ ಜಿಂಕೆ ಕಾಣಿಸಿತು. ಆದರೆ ಪಾಪದ ಹರಿಣಿ ಬಲೆಯೊಳಗೆ ಸಿಕ್ಕಿಬಿದ್ದಿದ್ದಳು. ʻಕಾಲಿಡೋಕು ಮುನ್ನ ಕಣ್ಣಿಡುವ ಅಭ್ಯಾಸ ನಂದು. ಆದರೆ ಎಷ್ಟೇ ಜಾಗ್ರತೆ ಮಾಡಿದರೂ ಈ ಬಾರಿ ಎಡವಟ್ಟಾಯ್ತು ಕಾಕ್ರಾಜ. ಇನ್ನೀಗ ಬೇಟೆಗಾರ ಬಂದು ನನ್ನ ಕೊಂದು…ʼ ಎಂದು ಶೋಕಿಸಿದಳು ಹರಿಣಿ. ʻಛೇ! ಏನ್‌ ಮಾತೂಂತ ಆಡ್ತೀಯ ಹರಿಣಿ. ಬಂದೆ ತಾಳುʼ ಎನ್ನುತ್ತಾ ಅಲ್ಲಿಂದ ತ್ವರಿತವಾಗಿ ಹಾರಿತು ಕಾಗೆ.

ದೊಡ್ಡಾಲದ ಮರದತ್ತ ಹಾರಿದ ಕಾಗೆ, ನಡೆದಂಥ ಅನಾಹುತವನ್ನು ಗೆಳೆಯರಿಗೆ ತಿಳಿಸಿತು. ತಡಮಾಡದೆ ಅಲ್ಲಿಂದ ಹೊರಟ ಹೆಗ್ಗಣ್ಣ ಮತ್ತು ಕಾಕರಾಜ, ಜಿಂಕೆಯ ಬಳಿಗೆ ಬಂದರು. ನೋಡನೋಡುತ್ತಿದ್ದಂತೆ ಜಿಂಕೆಯನ್ನು ಸುತ್ತಿದ್ದ ಬಲೆಯನ್ನು ಹೆಗ್ಗಣ್ಣ ಚಿಂದಿ ಮಾಡಿದ. ಈ ಹೊತ್ತಿಗೆ ಆಮೆಯೂ ಅಲ್ಲಿಗೆ ಆಗಮಿಸಿತ್ತು. ಹರಿಣಿ ಬಂಧಮುಕ್ತವಾದಳು ಎಂದು ಎಲ್ಲರೂ ಸಂತೋಷ ಪಡುವಷ್ಟರಲ್ಲಿ ಧುತ್ತನೆ ಆಗಮಿಸಿದ್ದ ಬೇಟೆಗಾರ. ಸರಕ್ಕನೆ ಹಾರಿದ ಕಾಗೆ ತಪ್ಪಿಸಿಕೊಂಡಿತು, ಜಿಂಕೆ ಪರಾರಿಯಾಯಿತು, ಹೆಗ್ಗಣ ನೆಲದೊಳಗೆ ಸೇರಿತು, ಉಳಿದಿದ್ದೆಂದರೆ ನಿಧಾನಕ್ಕೆ ತೆವಳುತ್ತಿದ್ದ ಆಮೆ. ಜಿಂಕೆ ತಪ್ಪಿಸಿಕೊಂಡಿದ್ದರಿಂದ ಕೋಪದಲ್ಲಿದ್ದ ಬೇಟೆಗಾರ, ಆಮೆಯಾದರೂ ಸಿಕ್ಕಿತಲ್ಲ ಎಂಬ ಸಮಾಧಾನದಲ್ಲಿ ಅದನ್ನು ತನ್ನ ಚೀಲದಲ್ಲಿ ಹಾಕಿಕೊಂಡು ಮನೆಯತ್ತ ಹೊರಟ.

ಇದನ್ನೂ ಓದಿ: ಮಕ್ಕಳ ಕಥೆ: ಪ್ರಾಮಾಣಿಕ ಅಜ್ಜಿ ಮತ್ತು ಧೂರ್ತ ಸಹಾಯಕ

ತನ್ನನ್ನು ಬಿಡಿಸಲು ಬಂದ ಕೂರ್ಮಕ್ಕನಿಗೆ ಒದಗಿದ ಗತಿ ಕಂಡು ಹರಿಣಿಯಂತೂ ಗೋಳೋ ಎಂದು ಅಳತೊಡಗಿದಳು. ಆದರೆ ಈ ಹೊತ್ತಿಗೆ ಧೈರ್ಯಗೆಡುವಂತಿಲ್ಲ ಎಂಬುದನ್ನು ಅರಿತಿದ್ದ ಚತುರ ಹೆಗ್ಗಣ್ಣ, ಗೆಳೆಯರ ಕಿವಿಯಲ್ಲಿ ಒಂದು ಉಪಾಯ ಹೇಳಿದ. ಅದರ ಉಪಾಯದಂತೆ, ಎಲ್ಲರೂ ಅಲ್ಲಿಂದ ಸಮೀಪದಲ್ಲಿದ್ದ ಕೆರೆಯತ್ತ ಸಾಗಿದರು. ತನ್ನ ಮನೆಯತ್ತ ತೆರಳುತ್ತಿದ್ದ ಬೇಟೆಗಾರ ಆ ಕೆರೆಯ ಸಮೀಪದಿಂದಲೇ ಹಾದು ಹೋಗಬೇಕಿತ್ತು.

ಕೆರೆಯ ಬಳಿ ಬರುತ್ತಿದ್ದಂತೆ ಬೇಟೆಗಾರನಿಗೊಂದು ಅಚ್ಚರಿ ಕಾಣಸಿಕ್ಕಿತು. ಕೆರೆಯಿಂದ ಸ್ವಲ್ಪವೇ ದೂರದಲ್ಲಿ ಜಿಂಕೆಯೊಂದು ಸತ್ತುಬಿದ್ದಿತ್ತು. ಕಾಗೆಯೊಂದು ಸತ್ತ ಜಿಂಕೆಯ ಸುತ್ತ ಹಾರಾಡುತ್ತಿತ್ತು. ಇದನ್ನು ಕಂಡು ಬೇಟೆಗಾರನಿಗೆ ಸಿಕ್ಕಾಪಟ್ಟೆ ಖುಷಿಯಾಯಿತು. ಒಂದ ಜಿಂಕೆ ಕೈ ತಪ್ಪಿದರೇನು, ಇನ್ನೊಂದು ಸಿಕ್ಕಿತಲ್ಲ; ಇದನ್ನಂತೂ ಕೊಲ್ಲುವ ತಾಪತ್ರಯವೂ ಇಲ್ಲ ಎಂದು ಹಿಗ್ಗುತ್ತಾ ಕೈಯಲ್ಲಿದ್ದ ಚೀಲವನ್ನು ಕೆರೆಯ ದಡದಲ್ಲೇ ಇಟ್ಟು ಜಿಂಕೆಯತ್ತ ನಡೆದ. ಇದನ್ನೇ ಕಾಯುತ್ತಿದ್ದ ಹೆಗ್ಗಣ್ಣ, ಮಿಂಚಿನ ವೇಗದಲ್ಲಿ ಬಂದು ಬೇಟೆಗಾರನ ಚೀಲವನ್ನು ತುಂಡರಿಸಿದ. ಅಲ್ಲಿಂದ ಹೊರಬಿದ್ದ ಕೂರ್ಮಕ್ಕ, ಪಕ್ಕದಲ್ಲೇ ಇದ್ದ ಕೊಳದೊಳಗೆ ಉರುಳಿಕೊಂಡಳು. ಇವನ್ನೆಲ್ಲಾ ನೋಡುತ್ತಿದ್ದ ಕಾಕರಾಜ ಜೋರಾಗಿ, ʻಕಾವ್‌ʼ ಎಂದು ಕಿರುಚಿ ಸೂಚನೆ ಕೊಟ್ಟು ಹಾರಿಹೋದ. ಈ ಸೂಚನೆಗೆಂದೇ ಕಾಯುತ್ತಿದ್ದ ಹರಿಣಿ, ಛಂಗನೆ ಎದ್ದು ಕಾಲಿಗೆ ಬುದ್ಧಿ ಹೇಳಿದಳು.

ಇವೆಲ್ಲವೂ ನಡೆದಿದ್ದು ಕ್ಷಣ ಮಾತ್ರದಲ್ಲಿ. ಇಂಥ ಯಾವುದನ್ನೂ ನಿರೀಕ್ಷಿಸಿರದ ಬೇಟೆಗಾರ ಒಮ್ಮೆಲೆ ತಬ್ಬಿಬ್ಬಾದ. ಜಿಂಕೆ ಇಲ್ಲದಿದ್ದರೆ ಆಮೆಯಾದರೂ ಇದೆಯಲ್ಲ, ಸಾಕು ಎಂದು ಚೀಲವನ್ನೆತ್ತಿಕೊಂಡರೆ- ಅಲ್ಲೇನಿದೆ! ಬಲೆಯಂತೆ ಚೀಲವೂ ಹರಿದು, ಅದರಲ್ಲಿನ ಪ್ರಾಣಿಗಳೂ ಕೈಗೆ ಸಿಗದೆ ನಿರಾಶನಾಗಿ ಮರಳಿದ ಬೇಟೆಗಾರ. ಹೀಗೆ ಸ್ನೇಹಿತರೆಲ್ಲರೂ ಒಬ್ಬರನ್ನೊಬ್ಬರು ಉಪಾಯದಿಂದ ಕಾಪಾಡುತ್ತಾ, ಎಲ್ಲವೂ ಕಾಡಿನಲ್ಲಿ ಕ್ಷೇಮವಾಗಿ ಬದುಕಿಕೊಂಡಿದ್ದರು.

ಇದನ್ನೂ ಓದಿ: ಮಕ್ಕಳ ಕಥೆ: ಮಧುಕರ ಮತ್ತು ಅಜ್ಜ

Exit mobile version