Site icon Vistara News

ಮಕ್ಕಳ ಕಥೆ | ದುರಾಸೆಯ ವರ್ತಕ ಮತ್ತು ಜಾಣ ರೈತ

children story

ಒಂದೂರು. ಅಲ್ಲೊಬ್ಬ ವರ್ತಕನಿದ್ದ. ಆ ದಿನ ಬೆಳಗಿನಿಂದ ಹೆಚ್ಚು ವ್ಯಾಪಾರ ಆಗಿರಲಿಲ್ಲ ಅಂತ ಸ್ವಲ್ಪ ತಲೆ ಬಿಸಿಯಲ್ಲಿದ್ದ. ಯಾವುದೋ ಕೆಲಸದ ಮೇಲೆ ಪಕ್ಕದೂರಿಗೆ ಹೊರಟಿದ್ದ ಆತ, ಒಂದು ಹೊಲದ ಪಕ್ಕದಲ್ಲಿ ನಡೆಯುತ್ತಿದ್ದಾಗ ಒಬ್ಬ ರೈತ ದಾರಿಯಲ್ಲಿ ಜೊತೆಯಾದ. ಹೇಗೂ ಬೆಳಗಿನಿಂದ ಸಂಪಾದನೆ ಸೊನ್ನೆ. ಪೆದ್ದನಂತೆ ಕಾಣುವ ಈ ರೈತನನ್ನು ಸ್ವಲ್ಪ ಯಾಮಾರಿಸಿದರೆ ಇವತ್ತಿನ ಖರ್ಚು ಹುಟ್ಟಬಹುದು ಅಂತ ಯೋಚಿಸಿದ ವರ್ತಕ.

ʻಏನಣ್ಣ ಚನ್ನಾಗಿದ್ದೀಯ?ʼ ಎಂದು ರೈತನನ್ನು ಈತ ಮಾತಿಗೆಳೆದ. ತನಗಿಂತಲೂ ಠಾಕು-ಠೀಕಾಗಿ ವಸ್ತ್ರ ಧರಿಸಿದ್ದ ಈತನನ್ನು ನೋಡಿದ ರೈತ, ʻಚನ್ನಾಗಿದ್ದೀನಿ ಬುದ್ಧಿ. ನೀವೆಂಗಿದ್ದೀರಿ?ʼ ಎಂದ ವಿನಮ್ರನಾಗಿ. ಛೇ! ಇವನೀಗ ಸುಲಭಕ್ಕೆ ತನ್ನ ಬಲೆಗೆ ಬೀಳುತ್ತಾನೆ ಎಂದು ಯೋಚಿಸಿದ ವರ್ತಕ, ʻಪಕ್ಕದೂರಿಗೆ ಹೋಗ್ತಾ ಇದ್ದೀನಿ. ಒಟ್ಟಿಗೆ ಹೋಗೋಣವೇ?ʼ ಎಂದು ಕೇಳಿದ. ರೈತನಿಗೆ ಯಾವ ಅಭ್ಯಂತರವೂ ಇರಲಿಲ್ಲ. ಒಂದಿಷ್ಟು ದೂರ ಸುಮ್ಮನೆ ನಡೆದರು. ʻಹೀಗೆ ಸುಮ್ಮನೆ ನಡೆಯೋದಕ್ಕೆ ಬೇಸರ. ಇಬ್ಬರೂ ಒಂದೊಂದು ಕಥೆ ಹೇಳೋಣವಾ?ʼ ಕೇಳಿದ ವರ್ತಕ. ʻಎಂಥಾ ಕಥೆ?ʼ ಕೇಳಿದ ರೈತ. ʻಏನಿಲ್ಲ, ಚಿತ್ರ-ವಿಚಿತ್ರವಾದ ಕಥೆಯನ್ನು, ಸುಳ್ಳಾದರೂ ಸರಿ, ನಾವು ಹೇಳಬೇಕು. ಒಬ್ಬರು ಹೇಳುವ ಕಥೆಯ ಬಗ್ಗೆ ಕಥೆ ಕೇಳುವವನಿಗೆ ಅನುಮಾನ ಅಥವಾ ಪ್ರಶ್ನೆ ಬಂತೂಂದ್ರೆ, ಆತ ಕಥೆ ಹೇಳುವವನಿಗೆ ನೂರು ರುಪಾಯಿ ಕೊಡಬೇಕು. ಎಷ್ಟು ಪ್ರಶ್ನೆಗಳನ್ನು ಕೇಳುತ್ತೇವೋ ಅಷ್ಟು ನೂರು ರುಪಾಯಿಗಳನ್ನು ಆತ ಕಥೆ ಹೇಳುವವನಿಗೆ ಕೊಡಬೇಕು. ಸರೀನಾ?ʼ ಎಂದ ವರ್ತಕ. ರೈತನಿಗೆ ಈತನ ಯೋಜನೆ ಅರ್ಥವಾಗಿ ನಗು ಬಂತು, ಸುಮ್ಮನೆ ಒಪ್ಪಿಕೊಂಡ. ಮೊದಲಿಗೆ ವರ್ತಕ ಕಥೆ ಹೇಳಲು ಪ್ರಾರಂಭಿಸಿದ.

“ನಮ್ಮೂರಿನ ರಸ್ತೆಯಲ್ಲಿ ನಾನು ನಡೆಯುತ್ತಿರುವಾಗ ದೊಡ್ಡದೊಂದು ಒಂಟೆಯ ಹಿಂಡು ಸಿಕ್ಕಿತು. ಸುಮಾರು ನೂರು ಒಂಟೆಗಳನ್ನು ಒಂದೇ ಹಗ್ಗದಲ್ಲಿ ಬಿಗಿದು ಕಟ್ಟಿದ್ದರು. ಸುಮಾರು ಅರ್ಧ ಮೈಲುದ್ದದ ರೈಲಿನಂತೆ ಈ ಒಂಟೆಗಳ ಸಾಲು ಕಾಣಿಸುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಗಾಳಿಪಟವೊಂದು ಹಾರಿಬಂತು. ಮೊದಲ ಒಂಟೆ, ಅದು ಹೇಗೋ, ಆ ಗಾಳಿಪಟಕ್ಕೆ ಸಿಕ್ಕಿಕೊಂಡಿತು! ಗಾಳಿಪಟ ಮೇಲೆ ಹಾರಿದಂತೆ, ಅದರ ಬೆನ್ನಿಗೆ ಇಡೀ ಒಂಟೆಯ ಸಾಲೇ ನೇತಾಡುತ್ತಾ ಹಾರತೊಡಗಿತು…”ಎನ್ನುತ್ತಿದ್ದಂತೆ ರೈತ ಬಿದ್ದೂಬಿದ್ದು ನಗತೊಡಗಿದ. ಇವನೀಗ ಹೇಗಿದ್ದರೂ ಪ್ರಶ್ನೆ ಕೇಳುತ್ತಾನೆಂದು ವರ್ತಕನಿಗೂ ಖುಷಿಯಾಯ್ತು. ʻಯಾಕೆ? ನನ್ನ ಮಾತಿನಲ್ಲಿ ನಂಬಿಕೆ ಬರಲಿಲ್ಲವೇ?ʼ ಎಂದ ವರ್ತಕ, ರೈತನನ್ನು ಪ್ರಚೋದಿಸುವಂತೆ. ʻಅಯ್ಯೋ, ಹಂಗೇನಿಲ್ಲ ಸ್ವಾಮಿ. ಮೊದಲೂ ಇಂಥದ್ದನ್ನು ಕೇಳಿದ್ದೆ. ಅದೆಲ್ಲಾ ನೆನಪಾಗಿ ನಗು ಬಂತು. ನೀವು ಮುಂದೊರ್ಸಿʼ ಎಂದ ಇನ್ನಷ್ಟು ನಗುತ್ತಾ.

ಪೆಚ್ಚಾದ ವರ್ತಕ ಮುಂದುವರಿಸಿದ. “ಹಂಗೇ ಹಾರುತ್ತಾ ಹೋದ ಗಾಳಿಪಟ ಮತ್ತು ಒಂಟೆಗಳ ಬಾಲಂಗೋಸಿ, ರಾಜಕುಮಾರಿಯ ಉದ್ಯಾನವನದ ಮೇಲೆ ಹಾರತೊಡಗಿದವು. ತನ್ನ ತೋಟದಲ್ಲಿ ಕುಳಿತು ಆಕೆ ತಲೆ ಬಾಚಿಕೊಳ್ಳುತ್ತಿದ್ದಳು. ಆಗ ಗಾಳಿಪಟದ ಸೂತ್ರ ಕಡಿದು, ಒಂಟೆಯ ಸಾಲೆಲ್ಲಾ ಕೆಳಗೆ ಬಿದ್ದವು” ಎನ್ನುತ್ತಾ ರೈತನ ಮುಖ ನೋಡಿದ ವರ್ತಕ, ಈಗಾದರೂ ಪ್ರಶ್ನೆ ಕೇಳಬಹುದೆಂದು ನಿರೀಕ್ಷಿಸಿ. ವರ್ತಕನ ಮುಖ ನೋಡಿದ ರೈತ, ʻಆಮೇಲೆ…ʼ ಎಂದ, ಅಷ್ಟೆ. “ಬಿದ್ದಿದ್ದೆಲ್ಲಿ ಅಂದುಕೊಂಡೆ? ರಾಜಕುಮಾರಿಯ ಕಣ್ಣೊಳಗೆ! ಕಣ್ಣುರಿಯಿಂದಾಗಿ ರಾಜಕುಮಾರಿ ಅಳತೊಡಗಿದಳು. ಆಕೆಯ ಸೇವಕಿ ಬಂದು ಕಣ್ಣೊಳಗೆ ಬಿದ್ದಿದ್ದ ಒಂಟೆಗಳನ್ನು ಒಂದೊಂದಾಗಿ ಹೊರತೆಗೆದಳು. ಉದ್ಯಾನವನದೊಳಗೆಲ್ಲಾ ಓಡಾಡತೊಡಗಿದ ಈ ಒಂಟೆಗಳಿಗಾಗಿ ರಾಜ ಹೊಸದಾಗಿ ಲಾಯವೊಂದನ್ನು ನಿರ್ಮಿಸಿದ” ಎನ್ನುತ್ತಾ ಉಸಿರೆಳೆದುಕೊಂಡ ವರ್ತಕ. ಇವನ ಎಂಥಾ ಅಸಂಬದ್ಧ ಪ್ರಲಾಪಗಳಿಗೂ ಪ್ರಶ್ನೆ ಕೇಳುವ ಉತ್ಸಾಹವನ್ನೇ ತೋರದ ರೈತ, ʻಚನ್ನಾಗಿದೆ ಬುದ್ಧಿ. ಮುಂದೊರ್ಸಿʼ ಎಂದು ಸುಮ್ಮನೆ ನಗುತ್ತಿದ್ದ. ಇವನಿಗೆ ಏನು ಹೇಳಿದರೂ ಪ್ರಯೋಜನವಿಲ್ಲ ಎಂದುಕೊಂಡು, ʻನನ್ನ ಕಥೆ ಮುಗೀತು, ಇನ್ನು ನೀ ಹೇಳುʼ ಎಂದ ವರ್ತಕ.

ಇದನ್ನೂ ಓದಿ | ಮಕ್ಕಳ ಕಥೆ | ಕೇಳಿದ್ದೆಲ್ಲಾ ಕೊಡುವ ಪಾತ್ರೆಯೂ, ಮುಟ್ಟಿದವರಿಗೆ ಬಾರಿಸುವ ಬೆತ್ತವೂ!

“ಒಂದಾನೊಂದು ಕಾಲದಲ್ಲಿ ನಮ್ಮಪ್ಪನತ್ರ ಒಂದು ಕುದ್ರೆ ಇತ್ತು. ಒಂದ್ಸಾರಿ ಕಿತ್ತೋಗಿರೋ ಜೀನ ಹಾಕ್ಕೊಂಡು ಸಂತೆಗೋಗಿದ್ದ ನಮ್ಮಪ್ಪ. ತಿರುಗಿ ಮನೆಗೆ ಬರೋತ್ತಿಗೆ ಕಿತ್ತೋಗಿರೋ ಜೀನಿಂದಾಗಿ ಕುದ್ರೆ ಬೆನ್ಮೇಲೆ ಗಾಯ ಆಗಿತ್ತು. ರಾತ್ರಿ ಕುದ್ರೆನ ಲಾಯ್ದಲ್ಲಿ ಬಿಟ್ಟಿದ್ದೊ, ಜೋರು ಗಾಳಿ-ಮಳೆ ಶುರುವಾಯ್ತು. ಎಲ್ಲೆಲ್ಲಿಂದಲೋ ತೂರ್ಕ ಬಂದ್‌ ಗಾಳಿ, ಪಕ್ಕದ ಹೊಲದಲ್ಲಿ ಪೇರ್ಸಿದ್ದ ಒಂದು ಮುಷ್ಟಿ ಬೀಜದ ಬತ್ತ ತಂದು, ಕುದ್ರೆ ಬೆನ್ಮೇಲಿದ್ದ ಗಾಯಕ್ಕೆ ಹಾಕ್ತು” ನಡೆದು ಸುಸ್ತಾಗಿ, ಕವಡೆ ಕಾಸೂ ಹುಟ್ಟದೆ ಬೇಸರಗೊಂಡಿದ್ದ ವರ್ತಕನಿಗೆ ರೈತನ ತಲೆಕೆಟ್ಟ ಕಥೆ ಕೇಳಿ ತಾಳ್ಮೆ ಕೆಡತೊಡಗಿತು. “ರಾತ್ರಿಯೆಲ್ಲಾ ಸುರೀತಿದ್ದ ಮಳೆಗೆ, ಕುದ್ರೆ ಬೆನ್ನ ಮೇಲಿನ ಗಾಯದೊಳಗೆ ಬಿದ್ದ ಬೀಜ ಮೊಳಕೆ ಬಂದು, ಬೇರು ಬಿಟ್ಟು, ಗಿಡ ದೊಡ್ಡದಾಗಿ ತೆನೆ ಕಟ್ತು… ಅದೂ ಯಾವಾಗ? ಬೆಳಗ್ಗೆ ಅನ್ನೋವರೆಗೆ! ಫಸಲು ಎಷ್ಟೂಂತೀರಿ? ಸುಮಾರು ಹದಿನಾರು ಚೀಲ ಬತ್ತ ಕುಯ್ದೊ. ಇದೇ ಹೊತ್ತಿಗೆ ನಮ್ಮನೆಗೆ ಬಂದದ್ದು ನಿಮ್ತಂದೆ” ಎನ್ನುತ್ತಾ ಕಥೆ ನಿಲ್ಲಿಸಿದ ರೈತ. ವರ್ತಕ ಸೋಜಿಗದಿಂದ ಮುಖ ನೋಡುತ್ತಾ ಮುಂದುವರೆಸುವಂತೆ ಸನ್ನೆ ಮಾಡಿದ. “ಮನೆಲ್ಲಿ ಬಲು ಕಷ್ಟ. ನಾಲ್ಕು ಚೀಲ ಬತ್ತ ಕೊಟ್ಟಿರು ಅಂತಂದ್ರು ನಮ್ತಂದೆ ಹತ್ರ. ʻಅಯ್ಯೋ, ನೀವ್‌ ಕೇಳದೆಚ್ಚೋ ನಾ ಕೊಡದೆಚ್ಚೋ ಸ್ವಾಮಿ, ಬೇಕಾದಷ್ಟು ಬತ್ತ ತಗಳಿʼ ಅಂದ ನಮ್ಮಪ್ಪ. ಅದ್ಕೆ ನಿಮ್ತಂದೆ ಹದ್ನಾರೂ ಚೀಲ ತಗಂಡು, ನಂಗಾಗ್ದಿದ್ರೆ ನನ್ಮಗ ವಾಪಸ್‌ ಕೊಡ್ತಾನೆ ಅಂದ್ರು. ಆದ್ರೆ ಇಲ್ಲೀವರ್ಗೂ ಬತ್ತ ವಾಪಸ್‌ ಬರ್ಲೇ ಇಲ್ಲ.”

ಅಲ್ಲಿಯವರೆಗೆ ಹೇಗೋ ತಡೆದುಕೊಂಡಿದ್ದ ವರ್ತಕ ಈಗಂತೂ ಸುಮ್ಮನಿರಲಾರದೆ, ʻಏನೋ ಕಥೆ ಹೇಳ್ತೀಯ ಅಂತಿದ್ರೆ ಏನೇನೋ ಮಾತಾಡ್ತೀಯ! ನಮ್ಮಪ್ಪ ಯಾವಾಗ ಬಂದಿದ್ದ ನಿಮ್ಮನೆಗೆ?ʼ ಎಂದು ಕೇಳಿದ. ʻತನ್ನಿ ಸ್ವಾಮಿ ನೂರ್ರುಪಾಯಿʼ ಎಂದು ರೈತ ನಗತೊಡಗಿದ. ತಾನು ಹಾಕಿದ ಬಲೆಯಲ್ಲಿ ವರ್ತಕ ತಾನೇ ಬಿದ್ದಿದ್ದ. ಹೆಚ್ಚು ಮಾತಾಡದೆ, ರೈತನ ಕೈಗೆ ನೂರು ರುಪಾಯಿ ತೆಗೆದಿಟ್ಟು ಹೋದ ವರ್ತಕ.

ಇದನ್ನೂ ಓದಿ | ಮಕ್ಕಳ ಕಥೆ | ಖಿಚಡಿ ತಿನ್ನಲು ಬಂದ ಕರಡಿ

Exit mobile version