Site icon Vistara News

ಮಕ್ಕಳ ಕಥೆ | ರಾಜಕುಮಾರಿ ಮತ್ತು ಬುರುಡೆ ಭೂತ

skull

ಈ ಕತೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/08/Rajakumari-mattu-BurudeBoota.mp3

ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ರಾಜನೊಬ್ಬ ಇದ್ದ. ಅವನಿಗೊಬ್ಬಳು ಚೆಂದುಳ್ಳಿ ಚೆಲುವೆಯಾದ ಮಗಳಿದ್ದಳು. ಪ್ರಾಯಪ್ರಬುದ್ಧಳಾಗಿದ್ದ ರಾಜಕುಮಾರಿಗೆ ಮದುವೆ ಮಾಡಬೇಕು ಅನ್ನೋದು ರಾಜ ಮತ್ತು ರಾಣಿಯರ ಆಸೆಯಾಗಿತ್ತು. ಅದಕ್ಕೆ ತಕ್ಕ ಹಾಗೆ, ಇಡೀ ರಾಜ್ಯದ ಪ್ರಾಯದ ಹುಡುಗರೆಲ್ಲಾ ರಾಜಕುಮಾರಿಯನ್ನು ಮದುವೆಯಾಗಬೇಕು ಅಂತ ಕನಸು ಕಾಣ್ತಾ ಇದ್ದರು. ಆದರೆ ಅವರಾರೂ ಬೇಡ ತನಗೆ ಎಂದು ರಾಜಕುಮಾರಿ ನಿರಾಕರಿಸುತ್ತಾ ಇದ್ದಳು. ತನ್ನನ್ನು ವಿವಾಹವಾಗಲು ಬಂದ ಒಬ್ಬೊಬ್ಬರಿಗೂ ಒಂದೊಂದು ಕಾರಣ ಹೇಳಿ ಹಿಂದಕ್ಕೆ ಕಳಿಸುತ್ತಿದ್ದಳು. ಅವಳಿಗೆ ತನ್ನ ಅಂದ-ಚಂದದ ಬಗ್ಗೆ ತುಂಬಾ ಗರ್ವವಿತ್ತು. ಇದರಿಂದಾಗಿ ರಾಜ ಮತ್ತು ರಾಣಿ ಬಹಳ ಬೇಸರಗೊಂಡಿದ್ದರು.

ಬೇರೆ ಬೇರೆ ಕಡೆಯಿಂದ ಸಂಬಂಧಗಳನ್ನು ತಂದರೂ ರಾಜಕುಮಾರಿ ನಿರಾಕರಿಸುತ್ತಿದ್ದಳು. ತನ್ನ ರಾಜ್ಯದ ಯಾವ ಹುಡುಗರೂ ಬೇಡ. ದೂರದ ರಾಜ್ಯದಿಂದ ತುಂಬ ಚಂದದ, ಶಕ್ತಿಶಾಲಿಯಾದ ರಾಜಕುಮಾರ ಬಂದು ತನ್ನನ್ನು ಮದುವೆ ಮಾಡಿಕೊಂಡು ಯಾವುದೋ ದೇಶಕ್ಕೆ ಕರೆದೊಯ್ಯಬೇಕು ಅಂತೆಲ್ಲಾ ಏನೇನೋ ಹೇಳುತ್ತಿದ್ದಳು. ಅದನ್ನೆಲ್ಲಾ ಕೇಳಿದ ಆಕೆಯ ತಂದೆ-ತಾಯಿಯ ಬೇಸರ ಮತ್ತಷ್ಟು ಹೆಚ್ಚುತ್ತಿತ್ತು. ಎಷ್ಟು ಹೇಳಿದರೂ ಇವಳಿಗೇಕೆ ಅರ್ಥವಾಗುತ್ತಿಲ್ಲ ಎಂದು ಅವರಿಬ್ಬರೂ ತಳಮಳಗೊಳ್ಳುತ್ತಿದ್ದರು.

ಒಂದು ದಿನ ಆ ಊರಿಗೆ ಹೊಸ ಯುವಕನೊಬ್ಬ ಬಂದ. ಮಾರುಕಟ್ಟೆಯಲ್ಲಿ ಏನೋ ಖರೀದಿಗೆ ತೊಡಗಿದ್ದ. ಅವನ ಎತ್ತರ, ಅಗಲ, ಅಂದ-ಚಂದ ನೋಡಲು ಊರಿನ ಜನರೆಲ್ಲಾ ಸೇರಿದ್ದರು. ವಿಷಯ ಅರಮನೆಯನ್ನೂ ತಲುಪಿತು. ಅವನನ್ನು ಅರಮನೆಗೆ ಕರೆತರುವಂತೆ ರಾಜಕುಮಾರಿ ಹೇಳಿದಳು. ಮಾತ್ರವಲ್ಲ, ಅವನನ್ನು ನೋಡಿದ ಕೂಡಲೇ, ʻಆದರೆ ಇವನನ್ನೇ ಮದುವೆಯಾಗಬೇಕುʼ ಎಂದು ನಿರ್ಧರಿಸಿಯೂಬಿಟ್ಟಳು. ಅವನ ಬಗ್ಗೆ ಏನನ್ನೂ ವಿಚಾರಿಸದೆಯೇ, ಯಾವುದೋ ಊರಿನ ರಾಜಕುಮಾರನೇ ಇರಬೇಕು ಈತ ಎಂದು ತೀರ್ಮಾನಿಸಿಬಿಟ್ಟಿದ್ದಳು. ಆದರೆ ಮಗಳ ನಿರ್ಧಾರ ರಾಜ-ರಾಣಿಗೆ ಒಪ್ಪಿಗೆಯಾಗಲಿಲ್ಲ. ʻಅವನು ಯಾವ ಊರಿನ ರಾಜಕುಮಾರ? ಅಲ್ಲಿ ಯಾರೆಲ್ಲಾ ಇದ್ದಾರೆ? ಅವನು ಇಲ್ಲಿಗೇಕೆ ಬಂದಿದ್ದಾನೆ… ಎಲ್ಲವನ್ನೂ ವಿಚಾರಿಸಬೇಕು. ಸ್ವಲ್ಪ ತಾಳು, ಅವಸರ ಮಾಡಬೇಡʼ ಎಂದು ಬುದ್ಧಿ ಹೇಳಿದರು. ಆದರೆ ರಾಜಕುಮಾರಿ ಉತ್ಸಾಹ ಮೇರೆ ಮೀರಿತ್ತು. ಬೇರೆ ದಾರಿಕಾಣದೆ, ಅವರಿಬ್ಬರಿಗೂ ರಾಜ-ರಾಣಿ ಮದುವೆ ಮಾಡಿದರು.

ಕೆಲವು ದಿನಗಳು ಸುಖವಾಗಿಯೇ ಕಳೆದವು. ನಂತರ ತನ್ನ ರಾಜ್ಯಕ್ಕೆ ಹೋಗೋಣ ಎಂದು ರಾಜಕುಮಾರ ಹೇಳಿದ. ಆದರೆ ರಾಜ-ರಾಣಿಗೆ ಮನಸ್ಸಿರಲಿಲ್ಲ. ಯಾವುದಕ್ಕೂ ರಾಜಕುಮಾರಿ ಕೇಳಬೇಕಲ್ಲ ಅವರ ಮಾತನ್ನು. ತಂದೆ-ತಾಯಿಯ ಮಾತನ್ನು ತೆಗೆದುಹಾಕಿ, ರಾಜಕುಮಾರನೊಂದಿಗೆ ಯಾವುದೋ ದೂರದ ದೇಶಕ್ಕೆ ಕುದುರೆಯ ಮೇಲೆ ಹೊರಟಳು. ಯಾವತ್ತೂ ಇಲ್ಲದಷ್ಟು ಸಂತೋಷದಲ್ಲಿ ಮಗಳಿದ್ದರೆ, ತಂದೆ-ತಾಯಿಗೆ ಎಂದೂ ಇಲ್ಲದಷ್ಟು ದುಃಖ!

ಹಲವಾರು ದಿನಗಳ ಕಾಲ ಪ್ರಯಾಣ ಮಾಡಿದ ನಂತರ, ಮಾನವರ ರಾಜ್ಯದ ಗಡಿ ಮುಗಿದು ಭೂತಗಳ ರಾಜ್ಯ ಆರಂಭವಾಯಿತು. ಹುಚ್ಚುಚ್ಚಾಗಿ ಗಾಳಿ ಬೀಸುತ್ತಿದ್ದುದನ್ನು ಕಂಡು ರಾಜಕುಮಾರಿಗೆ ಏನೋ ಹೇಳಲಾರದ ಭಯವೂ ಪ್ರಾರಂಭವಾಯಿತು. ಇದಕ್ಕಿದ್ದಂತೆ ಚಿತ್ರ-ವಿಚಿತ್ರ ಘಟನೆಗಳು ಆರಂಭವಾದವು. ಭೂತವೊಂದು ಬಂದು ರಾಜಕುಮಾರನ ಕುದುರೆ ಕಿತ್ತುಕೊಂಡು ಹೋಯಿತು. ಮತ್ತೊಂದಿಷ್ಟು ಭೂತಗಳು ಬಂದು, ʻನನ್ನ ಕೈಕೊಡು, ನನ್ನ ಕಾಲ್ಕೊಡು, ನನ್ನ ಬೆನ್ಕೊಡು…ʼ ಎಂದೆಲ್ಲಾ ಹೇಳಿ ಅವನ ಕೈ-ಕಾಲುಗಳನ್ನೆಲ್ಲಾ ಕಿತ್ತುಕೊಂಡು ಹೋದವು. ಈ ಭೂತಚೇಷ್ಟೆಗಳ ನಂತರ, ಈಗ ರಾಜಕುಮಾರ ಎಂದರೆ ಒಂದು ತಲೆಬುರುಡೆ ಮಾತ್ರ! ಹೆದರಿ ಕಿರುಚಾಡಿದಳು ರಾಜಕುಮಾರಿ. ಆದರೆ ಕೇಳುವವರ್ಯಾರು? ʻನಡಿ ನನ್ನ ಮನೆಗೆʼ ಎನ್ನುತ್ತಾ ಅವಳನ್ನು ತನ್ನ ಮನೆಗೆ ಕರೆದೊಯ್ದಿತು ಆ ಬುರುಡೆಭೂತ.

ಇದನ್ನೂ ಓದಿ: ಮಕ್ಕಳ ಕಥೆ | ಕಳೆದುಹೋದ ಒಂಟೆಯನ್ನು ತೆನಾಲಿರಾಮ ಹುಡುಕಿದ್ದು ಹೇಗೆ?

ನಿಜಕ್ಕೂ ಆತ ಯಾವ ಊರಿನ ರಾಜಕುಮಾರನೂ ಆಗಿರಲಿಲ್ಲ. ಈ ಭೂತ ರಾಜ್ಯದಲ್ಲಿ ಅದೂ ಒಂದು ಭೂತವಾಗಿತ್ತಷ್ಟೆ. ಉಳಿದ ಭೂತಗಳಿಂದ ದೇಹವನ್ನೆಲ್ಲಾ ಎರವಲು ಪಡೆದು ರಾಜಕುಮಾರಿಯ ಊರಿಗೆ ಮನುಷ್ಯ ರೂಪದಲ್ಲಿ ಬಂದಿದ್ದ ಆತ. ಆತನ ಬಗ್ಗೆ ವಿಚಾರಿಸೋಣ ಎಂದು ರಾಜ-ರಾಣಿ ಹೇಳಿದಾಗ ಮಗಳು ಕೇಳಿದ್ದರೆ ಒಳ್ಳೆಯದಿತ್ತೇನೋ. ಆದರೀಗ ಕಾಲ ಮಿಂಚಿತ್ತು. ಆ ಬುರುಡೆಭೂತದ ಮನೆಯಲ್ಲಿ ಕೈಲಾಗದ ಮುದುಕಿಯೊಬ್ಬಳಿದ್ದಳು. ಅವಳನ್ನು ನೋಡಿಕೊಳ್ಳುವ ಕೆಲಸ ರಾಜಕುಮಾರಿಯ ಪಾಲಿಗೆ ಬಂತು. ಅವಳಿಗೆ ಅಡುಗೆ ಮಾಡಿಕೊಡುವುದು, ಬಿಸಿನೀರು ಕಾಯಿಸಿ ಸ್ನಾನ ಮಾಡಿಸುವುದು, ತಲೆ ಬಾಚುವುದು… ಹೀಗೆ ಎಲ್ಲಾ ಕೆಲಸಗಳನ್ನು ರಾಜಕುಮಾರಿ ಮಾಡುತ್ತಿದ್ದಳು. ಅವಳನ್ನು ಕಂಡು ಮುದುಕಿಗೆ ಪಾಪ ಎನಿಸಿತು. ಬುರುಡೆಭೂತ ಮನೆಯಲ್ಲಿದ್ದ ಹೊತ್ತಿನಲ್ಲಿ ರಾಜಕುಮಾರಿಯನ್ನು ಹತ್ತಿರ ಕರೆದಳು ಮುದುಕಿ.

ʻನೋಡು, ಇಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ನಾ ನಿನಗೆ ಸಹಾಯ ಮಾಡಬಲ್ಲೆ. ಆದರೆ ನನಗೊಂದು ಮಾತು ಕೊಡಬೇಕು ನೀನುʼ ಎಂದಳು ಮುದುಕಿ. ರಾಜಕುಮಾರಿಗೆ ಮತ್ತೆ ಚಿಂತೆಯಾಯಿತು- ಇವಳಿನ್ನೇನು ಕೇಳುವಳೋ ಎಂದು. ʻಹೆದರಬೇಡ. ನಾನೇನೂ ಕೇಳುವುದಿಲ್ಲ. ನೀನು ಮರಳಿ ಊರಿಗೆ ಹೋದ ಮೇಲೆ ನಿನ್ನ ತಂದೆ-ತಾಯಿ ಹೇಳಿದ ಹಾಗೆ ಕೇಳಿಕೊಂಡಿರಬೇಕು. ಮಾತು ಕೊಡುತ್ತೀಯಾ?ʼ ಎಂಬ ಮುದುಕಿಯ ಮಾತಿಗೆ ತಕ್ಷಣವೇ ಒಪ್ಪಿದಳು ರಾಜಕುಮಾರಿ. ತನ್ನ ಗಾಳಿ ಗೆಳೆಯನನ್ನು ಕರೆದ ಮುದುಕಿ, ರಾಜಕುಮಾರಿಯನ್ನು ಅವಳ ತಂದೆ-ತಾಯಿಯ ಬಳಿ ಬಿಟ್ಟುಬರುವಂತೆ ಹೇಳಿದಳು. ಜೋರಾಗಿ ಬೀಸಿದ ಗಾಳಿ, ಯಾರಿಗೂ ಗೊತ್ತಾಗದಂತೆ ಅವಳನ್ನೆತ್ತಿಕೊಂಡು ಅರಮನೆಯ ಬಳಿ ಬಿಟ್ಟುಬಂತು.

ರಾಜ-ರಾಣಿಗಂತೂ ಸಂಭ್ರಮವೋ ಸಂಭ್ರಮ. ಅವಳನ್ನಿನ್ನು ತಮ್ಮ ಜೀವಮಾನದಲ್ಲಿ ಮತ್ತೆ ನೋಡುವುದಿಲ್ಲ ಎಂದು ಶೋಕಿಸುತ್ತಿದ್ದ ಅವರಿಗೆ, ಇದನ್ನು ನಂಬಲೇ ಆಗುತ್ತಿರಲಿಲ್ಲ. ʻಇಷ್ಟು ದಿನ ಎಲ್ಲಿದ್ದೆ, ಹೇಗಿದ್ದೆ…ʼ ಎಂದೆಲ್ಲಾ ಅವಳನ್ನು ವಿಚಾರಿಸಿದರು. ಅವಳು ತನ್ನ ಭಯಾನಕ ಕಥೆಯನ್ನೆಲ್ಲಾ ಹೇಳಿದಳು. ಮಾತ್ರವಲ್ಲ, ಅವರ ಮಾತನ್ನು ಧಿಕ್ಕರಿಸಿದ್ದಕ್ಕೆ ತನಗೆ ಶಾಸ್ತಿಯಾಯಿತು ಎಂದು ಕಣ್ಣೀರಿಟ್ಟಳು. ಅಂತೂ ಎಲ್ಲ ಸುಖಾಂತ್ಯವಾಗಿದ್ದಕ್ಕೆ ಇಡೀ ರಾಜ್ಯದಲ್ಲಿ ಮೂರು ದಿನಗಳ ಹಬ್ಬವನ್ನು ಆಚರಿಸಲಾಯಿತು. ಹಾಗೆಯೇ, ರಾಜ-ರಾಣಿಯೇ ಒಳ್ಳೆಯ ಹುಡುಗನನ್ನು ಹುಡುಕಿ, ಮಗಳಿಗೆ ಮದುವೆ ಮಾಡಿದರು… ಎನ್ನುವಲ್ಲಿಗೆ ಈ ಕಥೆ ಮುಗಿಯಿತು.

ಇದನ್ನೂ ಓದಿ: ಮಕ್ಕಳ ಕಥೆ | ರಾಜಕುಮಾರನ ಹೊಟ್ಟೆಯೊಳಗಿನ ಹಾವು

Exit mobile version