Site icon Vistara News

ಮಕ್ಕಳ ಕಥೆ | ಸಂಜೀವ ಮತ್ತು ಹಸಿದ ಭೂತ

ghost

ಈ ಕಥೆಯನ್ನು ಇಲ್ಲಿ ಕೇಳಿ:

https://vistaranews.com/wp-content/uploads/2022/10/sanjiva-and-ghost.mp3

ಸಂಜೀವ ಒಬ್ಬ ಕ್ಷೌರಿಕ. ಆತ ತನ್ನ ವೃತ್ತಿಯಲ್ಲಿ ಎಂಥಾ ನಿಪುಣ ಎಂದರೆ ಮುಖದ ಮೇಲೆ ಆಡುತ್ತಿರುವುದು ಕತ್ತರಿಯೋ ನವಿಲುಗರಿಯೋ ಎಂದು ಅನುಮಾನ ಬರುವಷ್ಟು ನಾಜೂಕಾಗಿ ಮುಖಕ್ಷೌರ ಮಾಡುತ್ತಿದ್ದ. ಕೂದಲುಗಳ ಮೇಲೆ ಸಂಜೀವನ ಕೈ ಆಡಿದರೆ ಸಾಕು, ಬೇಕಾದ ಶೈಲಿ ಅಲ್ಲಿ ಮೂಡಿಬರುತ್ತಿತ್ತು.

ಅವನಿಗೊಂದು ಕನಸಿತ್ತು. ತನ್ನದೇ ಕ್ಷೌರದಂಗಡಿಯನ್ನು ತೆರೆಯಬೇಕು ಎಂಬುದು. “ನನ್ನತ್ರ ದುಡ್ಡು ಕೂಡಿದ ತಕ್ಷಣ, ನಮ್ಮೂರಿನ ದೊಡ್ಡಾಲ್ದಮರ ಇದೆಯಲ್ಲ, ಅದರತ್ರ ಪುಟ್ಟ ಅಂಗಡಿ ಇಡಬೇಕು. ಅದರೊಳಗೆ ಫಳಫಳ ಅನ್ನೋ ದೊಡ್ಡ ಕನ್ನಡಿ ಇಡಬೇಕು” ಅಂತೆಲ್ಲ ತನ್ನ ಹೆಂಡತಿ ಹತ್ರ ಹೇಳತಿದ್ದ. ಅರೆ! ಅಂಗಡಿಯೇ ಇಲ್ಲದೆ ಆತ ಯಾರಿಗೆ, ಹೇಗೆ ಕ್ಷೌರ ಮಾಡುತ್ತಿದ್ದ ಅಂತ ಯೋಚಿಸ್ತಿದ್ದೀರಾ? ಅವನದ್ದೊಂದು ಸಣ್ಣ ಮರದ ಪೆಟ್ಟಿಗೆಯಿತ್ತು. ಅದರಲ್ಲಿ ತನ್ನ ಕ್ಷೌರದ ಹಡಪಗಳನ್ನೆಲ್ಲಾ (ವಸ್ತುಗಳನ್ನೆಲ್ಲಾ) ತುಂಬಿಕೊಂಡು ಆತ ಊರೂರು ಸುತ್ತುತ್ತಿದ್ದ. ಯಾವುದೇ ಊರಿನಲ್ಲಿ ಯಾರಿಗಾದರೂ ನಾಪಿತನ ಅಗತ್ಯವಿದ್ದರೆ, ಅಲ್ಲಿಯೇ ಸಂಜೀವನ ಕಾಮಗಾರಿ ಆರಂಭವಾಗುತ್ತಿತ್ತು. ಕೆಲಸ ಮುಗಿಸಿ, ದುಡ್ಡು ಕಿಸೆಗಿಳಿಸಿ ಮುಂದಿನ ದಾರಿ ಹಿಡಿಯುತ್ತಿದ್ದ.

ಹೀಗೆಯೇ ಊರೂರು ಸುತ್ತುತ್ತಾ ಇರುವಾಗ ಮಧ್ಯಾಹ್ನದ ಹೊತ್ತಿಗೆ ದಣಿವಾಗಿತ್ತು. ಪಾಪ, ಊರಾಚೆಗಿದ್ದ ದೊಡ್ಡ ಮರದ ನೆರಳಲ್ಲಿ ತಂಪಾಗಿ ಮಲಗಿದ. ಬಿಸಿಲಲ್ಲಿ ಅಲೆದು ದಣಿದಿದ್ದ ಆತನಿಗೆ ಮಲಗಿದಾಕ್ಷಣ ನಿದ್ದೆ ಬಂತು. ಆ ಮರದಲ್ಲಿ ದೆವ್ವವೊಂದು ವಾಸಿಸುತ್ತಿತ್ತು. ಊರಾಚೆಯ ಆ ಮರದ ಹತ್ತಿರ ಯಾರೂ ಅಷ್ಟಾಗಿ ಬರದೇ ಇದ್ದಿದ್ರಿಂದ ಅದಕ್ಕೆ ಸರಿಯಾಗಿ ಊಟ ಸಿಗದೆ ಹಸಿದು ಕಂಗಾಲಾಗಿತ್ತು. ಇಂಥ ಹೊತ್ತಿನಲ್ಲೇ ನಮ್ಮ ಸಂಜೀವ ಆ ಮರದಡಿಗೆ ಬಂದು ಮಲಗಬೇಕೆ! “ಬೆಳಗ್ಗೆ ಯಾರ ಮುಖ ನೋಡಿ ಎದ್ದೆನೋ ಇವತ್ತು- ಆಹಾಹಾ! ಹೊಟ್ಟೆ ತುಂಬಾ ಊಟ ಸಿಕ್ಕಿದೆಯಲ್ಲ” ಅಂತ ಬಾಯಲ್ಲಿ ನೀರುಕ್ಕುತ್ತಿದ್ದಂತೆ ಮರದಿಂದ ಕೆಳಗಿಳಿಯಿತು ದೆವ್ವ. ಹತ್ತಿರ ಬಂದು ನೋಡಿದರೆ ಒಬ್ಬ ಸಣಕಲು ಮನುಷ್ಯ ಗಾಢ ನಿದ್ದೆಯಲ್ಲಿದ್ದ. “ಛೇ! ರಸ ಹಿಂಡಿದ ಕಬ್ಬಿನ ಜಲ್ಲೆ ಹಾಗೆ ಒಣಗಿದ್ದಾನೆ ಈಗ. ಆಗಲಿ, ಬಿಟ್ಟರೆ ಇದೂ ಇಲ್ಲವಲ್ಲ. ಎಷ್ಟು ದಿನ ಆಯ್ತು ತಿನ್ನೋದಕ್ಕೆ ಮನುಷ್ಯಾರಾರೂ ಸಿಗದೆ” ಅಂತ ಖುಷಿಯಿಂದ ಕುಣಿಯುತ್ತಾ ಹಾಡುವುದಕ್ಕೆ ಪ್ರಾರಂಭಿಸಿತು.

“ಹೊಟ್ಟೆ ತುಂಬಾ ಊಟ, ಇನ್ನಿಲ್ಲ ಹಸಿವಿನ ಕಾಟ; ಇವನನ್ನೆಬ್ಬಿಸಿ ಆಡಬೇಕು ಇಲಿ-ಬೆಕ್ಕಿನಾಟ”

ಅಂತ ದೆವ್ವ ಹಾಡುವ ಗದ್ದಲಕ್ಕೆ ಸಂಜೀವನಿಗೆ ಎಚ್ಚರವಾಯ್ತು. ಮಲಗಿದಲ್ಲೇ ಕಣ್ಣು ಬಿಟ್ಟು ನೋಡಿದರೆ…ಎದುರಿಗೆ ದೆವ್ವ ಕುಣಿಯುತ್ತಿದೆ! ದೇವರೇ! ಇದೆಲ್ಲಿ ಸಿಕ್ಕಿಬಿದ್ದೆ ಅಂತ ಒಮ್ಮೆ ಗಾಬರಿಯಾಯ್ತು ಸಂಜೀವನಿಗೆ. ಆದರೆ ಆತನ ಬುದ್ಧಿ ಚುರುಕಾಗಿತ್ತು. ಧಡಕ್ಕನೆ ಎದ್ದ ಆತ, ತಾನೂ ಜೋರಾಗಿ ಹಾಡುತ್ತಾ ಕುಣಿಯತೊಡಗಿದ.

“ಸಿಕ್ಕಿತಿನ್ನೊಂದು ಭೂತ, ನಾನೀಗದರ ನಾಥ; ಪೆಟ್ಟಿಗೆಯೊಳಗೆ ಇರುವ ಭೂತಕ್ಕೊಂದು ಸಂಗಾತ” ಎಂದು ಜೋರಾಗಿ ಹಾಡುತ್ತಿದ್ದ ಅವನನ್ನು ನೋಡಿದ ದೆವ್ವ ಕಕ್ಕಾಬಿಕ್ಕಿಯಾಯಿತು. ದೆವ್ವ ಕುಣಿಯುವುದನ್ನು ಕಂಡು ಜೀವ ಬಿಡುವವರೇ ಹೆಚ್ಚಿರುವಾಗ, ಇವನೂ ಹಾಡುತ್ತಿದ್ದಾನಲ್ಲ ಎಂದು ಯೋಚಿಸಿತು.

ಇದನ್ನೂ ಓದಿ | ಮಕ್ಕಳ ಕಥೆ | ಬಾಳೆ ಬಂಗಾರ | ಬುದ್ಧಿ ಕಲಿತ ತಪನ್

“ಏನೋ… ಜೀವನದ ಆಸೆ ಬಿಟ್ಟಿದ್ದೀಯೇನೋ?” ವಿಚಾರಿಸಿತು ಸಂಜೀವನನ್ನು. ಹೆದರಿಕೆಯಾದರೂ ತೋರಗೊಡದ ಸಂಜೀವ, “ಈಗ ಬಂದಿದ್ದು ನಿನ್ನ ಜೀವಕ್ಕೆ ಸಂಚಕಾರ” ಎಂದು ಹೇಳಿದ. “ಹಹ್ಹಹ್ಹ! ದೆವ್ವವನ್ನೇ ಹೆದರಿಸುತ್ತೀಯಾ?” ನಗುತ್ತಾ ಕೇಳಿತು ಭೂತ. “ನಿನ್ನ ಹೆದರಿಸ್ತಾ ಇರೋದಕ್ಕೆ ನಂಗೇನು ಬೇರೆ ಕೆಲಸ ಇಲ್ವಾ? ಈಗಾಗಲೇ ಒಂದು ಭೂತ ನನ್ನ ಪೆಟ್ಟಿಗೆಯಲ್ಲಿದೆ. ನಿನ್ನನ್ನೂ ಅದರೊಳಗೆ ತುಂಬಿದರೆ, ಆ ಭೂತಕ್ಕೊಂದು ಜೊತೆಯಾಗತ್ತೆ” ಅಂದ ಸಂಜೀವ. ಅವನ ಮಾತಿನಲ್ಲಿ ಭೂತಕ್ಕೆ ನಂಬಿಕೆ ಬರೋದಾದ್ರೂ ಹೇಗೆ? “ಸುಮ್ಮನಲ್ಲ ನಾ ಹೇಳೋದು, ನೋಡಿಲ್ಲಿ” ಎನ್ನುತ್ತಾ ತನ್ನ ಹಡಪದ ಪೆಟ್ಟಿಗೆಯೊಳಗಿದ್ದ ಕನ್ನಡಿ ತೆಗೆದು ಭೂತದ ಮುಖಕ್ಕೆ ಹಿಡಿದ.

ಕನ್ನಡಿಯಲ್ಲಿ ಕಂಡಿದ್ದು ತನ್ನದೇ ಬಿಂಬ ಎಂಬುದು ಭೂತಕ್ಕೆಲ್ಲಿ ತಿಳಿಯಬೇಕು? ಬೆದರಿದ ಭೂತ ನೇರ ಸಂಜೀವನ ಕಾಲಿಗೆ ಬಿತ್ತು. “ತಪ್ಪಾಯ್ತು. ಇದೊಂದು ಸಾರಿ ನನ್ನನ್ನು ಬಿಟ್ಟುಬಿಡು” ಎಂದು ಬೇಡಿಕೊಂಡಿತು. “ಸರಿ, ಬಿಟ್ಟರೆ ನನಗೇನು ಕೊಡುವೆ?” ಕೇಳಿದ ಸಂಜೀವ. ನೇರ ಮರ ಏರಿದ ದೆವ್ವ, ಒಂದು ಥೈಲಿ ತುಂಬಾ ಬಂಗಾರದ ನಾಣ್ಯಗಳನ್ನು ಕೊಟ್ಟಿತು. ಅದನ್ನು ಹಿಡಿದು ಸಂತೋಷದಿಂದ ಮನೆಗೆ ಮರಳಿದ ಸಂಜೀವ. ಮಾರನೇಯ ದಿನವೇ ದೊಡ್ಡಾಲದ್ಮರದ ಬಳಿ ಸಣ್ಣದೊಂದು ಅಂಗಡಿ ಇಟ್ಟು, ದೊಡ್ಡದೊಂದು ಕನ್ನಡಿ ಕೂರಿಸಿದ. ಭೂತಕ್ಕೆ ತೋರಿಸಿದ ಸಣ್ಣ ಕನ್ನಡಿಯನ್ನೂ ಅಂಗಡಿಯಲ್ಲಿಟ್ಟ- ನೆನಪಿಗಾಗಿ.

ಇದನ್ನೂ ಓದಿ | ಮಕ್ಕಳ ಕಥೆ | ಸಿಟ್ಟಿನ ರಾಜ ಕಲಿತ ಪಾಠ

Exit mobile version