ಈ ಕಥೆಯನ್ನು ಇಲ್ಲಿ ಕೇಳಿ:
ಒಂದೂರಿನಲ್ಲಿ ರಾಜನೊಬ್ಬನಿದ್ದ. ಅವನಿಗೆ ಮಾರುವೇಷದಲ್ಲಿ ತನ್ನ ರಾಜ್ಯದಲ್ಲಿ ಸಂಚರಿಸುವುದು ಅಂದ್ರೆ ತುಂಬ ಇಷ್ಟ. ಇದರಿಂದ ಅವನಿಗೆ ತನ್ನ ಜನಗಳ ಕಷ್ಟ-ಸುಖ, ಯೋಗಕ್ಷೇಮ ಎಲ್ಲವೂ ಗೊತ್ತಾಗ್ತಾ ಇತ್ತು. ಒಮ್ಮೆ ಹೀಗೆಯೇ ಮಾರುವೇಷದಲ್ಲಿ ಸಂಚರಿಸುತ್ತಿದ್ದಾಗ, ಊರೊಂದರ ದೇವಸ್ಥಾನದ ಬಳಿ ಬಂದ. ದಣಿವಾರಿಸಿಕೊಳ್ಳಲು ಅಲ್ಲಿನ ಕಟ್ಟೆಯ ಮೇಲೆ ಕುಳಿತ. ಆ ದೇವಾಲಯದಲ್ಲಿ ಹೂವು ಕಟ್ಟುತ್ತಾ ನಾಲ್ಕಾರು ಹುಡುಗಿಯರ ಗುಂಪೊಂದು ಕುಳಿತಿತ್ತು. ಅವರೆಲ್ಲ ಏನು ಹರಟುತ್ತಿದ್ದಾರೆ ಎಂಬುದನ್ನು ಕೇಳುವ ಕುತೂಹಲ ರಾಜನಿಗಾಯಿತು, ಅತ್ತಲೇ ಕಿವಿಕೊಟ್ಟ.
ಒಬ್ಬ ಹುಡುಗಿ- ʻಸರಿ, ಈಗ ನೀ ಹೇಳೆ ರಜನಿ- ಈ ಜಗತ್ತಿನಲ್ಲಿ ತುಂಬ ರುಚಿಯಾಗಿದ್ದು ಯಾವುದು?ʼ
ರಜನಿ- ʻಸುಳ್ಳು!ʼ ಎನ್ನುತ್ತಿದ್ದಂತೆ ಅವರವರಲ್ಲೇ ವಾಗ್ವಾದ ಶುರುವಾಯಿತು. ʻಹೋಗೆ! ಸುಮ್ನೆ ಏನೋ ಹೇಳ್ತೀಯʼ, ʻಅದನ್ನು ತಿಂದು ನೋಡಿದವರಾರು?ʼ ಎಂದೆಲ್ಲಾ ಅವರವರಲ್ಲೇ ಮಾತಾಡಿಕೊಳ್ಳುತ್ತಿದ್ದರು. ಇವರ ಮಾತುಗಳು ಮುಂದುವರಿಯುತ್ತದ್ದಂತೆ ರಾಜ ಅಲ್ಲಿಂದ ಹೊರಟುಹೋದ. ಆದರೆ ಮಾರನೇದಿನ ರಜನಿಯನ್ನು ತನ್ನ ಅರಮನೆಗೆ ಬರಹೇಳಿದ.
ʻನಿನ್ನೆಯ ದಿನ ದೇವಸ್ಥಾನದಲ್ಲಿ ಮಾತನಾಡುವಾಗ, ಈ ಜಗತ್ತಿನಲ್ಲಿ ತುಂಬ ರುಚಿಯಾಗಿದ್ದು ʻಸುಳ್ಳುʼ ಎಂದು ಹೇಳಿದ್ದು ನೀನೇ ಹೌದೇ?ʼ ಕೇಳಿದ ರಾಜ. ʻಹೌದು ಪ್ರಭೂʼ ಅಚ್ಚರಿಯಲ್ಲಿ ಹೇಳಿದಳು ರಜನಿ. ʻಸ್ವಲ್ಪ ವಿವರಿಸಿ ಹೇಳುತ್ತೀಯಾ?ʼ ಕೇಳಿದ ರಾಜ. ʻಅಗತ್ಯಕ್ಕೆ ತಕ್ಕಂತೆ ಎಲ್ಲರೂ ಸುಳ್ಳು ಹೇಳಿಯೇ ಇರುತ್ತಾರೆ. ಹಾಗಂತ ಅವರೆಲ್ಲ ಸುಳ್ಳರು, ಮೋಸಗಾರರು ಎಂದಲ್ಲ. ಆದರೆ ಕೆಲವು ಸನ್ನಿವೇಶದಲ್ಲಿ ಹಾಗೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರಿಗದು ತಪ್ಪೆನಿಸದೆ, ಸನ್ನಿವೇಶದ ರುಚಿ ಹೆಚ್ಚಿಸುತ್ತದೆʼ ಎಂದಳು ರಜನಿ. ಆಕೆಯ ಉತ್ತರದಿಂದ ರಾಜನಿಗೆ ಸಮಾಧಾನವಾಗಲಿಲ್ಲ. ʻಸುಳ್ಳು ಹೇಳುವುದು ಹೇಗೆ ಮತ್ತು ಯಾಕಾಗಿ ರುಚಿಸುತ್ತದೆ?ʼ ಕೇಳಿದ ರಾಜ. ʻಅನಿವಾರ್ಯ ಕಾರಣಗಳಿಂದ ಮಾತ್ರ. ಎಂದಾದರೂ ಪ್ರಭುಗಳ ಪಾಲಿಗೂ ಅಂಥ ಸನ್ನಿವೇಶ ಬರಬಹುದುʼ ಎಂದಳು ರಜನಿ. ಈಗ ರಾಜನಿಗೆ ಸಿಟ್ಟು ಬಂತು. ʻನನ್ನ ಬಗ್ಗೆ ಮಾತಾಡುವಷ್ಟು ಸೊಕ್ಕೇ ನಿನಗೆ?ʼ ಎಂದ ಕೋಪದಿಂದ.
ʻಮಹಾಪ್ರಭುಗಳು ಮನ್ನಿಸಬೇಕು. ನನಗೆ ಆರು ತಿಂಗಳ ಕಾಲಾವಕಾಶ ಮತ್ತು ಹತ್ತು ಸಾವಿರ ವರಹಗಳನ್ನು ನೀಡಿದರೆ, ನನ್ನ ಮಾತನ್ನು ಸಾಬೀತು ಪಡಿಸಬಲ್ಲೆʼ ಎಂದಳು ಹುಡುಗಿ. ತಾನೂ ಸುಳ್ಳು ಹೇಳುತ್ತೇನೆ ಎಂದಳಲ್ಲ ಈ ಹುಡುಗಿ, ನೋಡಿಯೇ ಬಿಡೋಣ ಎಂದುಕೊಂಡ ರಾಜ, ʻಆಗಲಿ, ಕೊಟ್ಟಿದ್ದೇನೆʼ ಎಂದ. ಮುಂದಿನ ಆರು ತಿಂಗಳಲ್ಲಿ ಆಕೆ ತನ್ನ ಪುಟ್ಟ ಮನೆಯನ್ನು ಚಂದದ ದೊಡ್ಡ ಮನೆಯನ್ನಾಗಿ ಬದಲಾಯಿಸಿದಳು. ಅದರಲ್ಲಿ ದೇವಸ್ಥಾನವನ್ನೇ ಹೋಲುವಂಥ ದೇವರ ಮನೆಯನ್ನು ನಿರ್ಮಿಸಿದಳು. ಆದರೆ ಅದರಲ್ಲಿ ದೇವರ ಮೂರ್ತಿ ಇರಲಿಲ್ಲ. ಉಳಿದಂತೆ, ಇಡೀ ಮನೆ ಸುಂದರವಾಗಿ ಅಚ್ಚುಕಟ್ಟಾಗಿತ್ತು.
ಅಷ್ಟರಲ್ಲಿ ಆರು ತಿಂಗಳುಗಳು ಕಳೆದಿದ್ದವು. ರಾಜನಿಂದ ಕರೆ ಬಂತು. ಆದರೆ ಈ ಬಾರಿ ತಮ್ಮಲ್ಲಿಗೆ ಬಂದು ಆತಿಥ್ಯ ಸ್ವೀಕರಿಸುವಂತೆ ಈಕೆ ರಾಜನಿಗೇ ಆಹ್ವಾನ ನೀಡಿದಳು. ಕರೆಯನ್ನು ಮನ್ನಿಸಿದ ರಾಜ, ರಜನಿಯ ಮನೆಗೆ ತನ್ನಿಬ್ಬರು ಮಂತ್ರಿಗಳೊಂದಿಗೆ ಆಗಮಿಸಿದ. ಅವರನ್ನೆಲ್ಲಾ ಸ್ವಾಗತಿಸಿ, ಸತ್ಕರಿಸಲಾಯಿತು. ಆನಂತರ, ʻಮಹಾಪ್ರಭೂ, ಮನೆಯೊಳಗೊಂದು ದೇವಸ್ಥಾನವಿದೆ. ಅದರಲ್ಲಿ ದೇವರು ತಾನೇ ಬಂದು ನೆಲೆಸಿದ್ದಾನೆ. ಒಂದು ಬಾರಿಯೂ ಸುಳ್ಳು ಹೇಳದವರಿಗೆ ಮಾತ್ರವೇ ಅಲ್ಲಿ ದೇವರು ಕಾಣಿಸುವುದು. ನಿಮ್ಮಲ್ಲಿ ಯಾರಾದರೂ ದೇವರ ದರ್ಶನ ಮಾಡಬಹುದುʼ ಎಂದಳು ರಜನಿ. ಮೊದಲು ತಾನೇ ಹೋಗಲು ಹಿಂಜರಿದ ರಾಜ, ತನ್ನ ಮಂತ್ರಿಯೊಬ್ಬನನ್ನು ಕಳುಹಿಸಿದ.
ದೇವರ ಮನೆಯೊಳಗೆ ಒಳಗೆ ಬಂದ ಮಂತ್ರಿಗೆ ಯಾವ ದೇವರೂ ಕಾಣಲಿಲ್ಲ. ಹೋಗಲಿ, ದೇವರ ಮೂರ್ತಿಯೂ ಗೋಚರಿಸಲಿಲ್ಲ. ಹಾಗೆಂದು ಹೇಳಿದರೆ ತಾನೀನು ಸುಳ್ಳು ಹೇಳುವವನು ಎಂದಾಗಲಿಲ್ಲವೇ ಅಂತ ಯೋಚಿಸುತ್ತಾ ಹೊರಗೆ ಬಂದ ಮಂತ್ರಿ. ʻಮಂತ್ರಿಗಳೇ, ದೇವರು ಕಾಣಿಸಿದನೇ?ʼ ಕೇಳಿದ ರಾಜ. ʻಹೌದೌದು ಪ್ರಭು! ಏನವನ ದಿವ್ಯ ರೂಪು, ಆ ಕಣ್ಣು, ಆ ಮುಖ… ಅಬ್ಬಬ್ಬ! ವರ್ಣಿಸುವುದಕ್ಕೇ ಸಾಧ್ಯವಿಲ್ಲ. ಭಕ್ತಿಯಿಂದ ಕೈ ಮುಗಿದು ಬಂದೆʼ ಎಂದ ಮಂತ್ರಿ. ತನ್ನ ಮತ್ತೊಬ್ಬ ಮಂತ್ರಿಯನ್ನೂ ಒಳಗೆ ಕಳಿಸಿದ ರಾಜ.
ಇದನ್ನೂ ಓದಿ | ಮಕ್ಕಳ ಕಥೆ | ಸಂಜೀವ ಮತ್ತು ಹಸಿದ ಭೂತ
ಎರಡನೇ ಮಂತ್ರಿಗೂ ದೇವರ ಮನೆಯೊಳಗೆ ದೇವರು ಕಾಣಲಿಲ್ಲ. ಆದರೆ ಹಾಗಂತ ಹೇಳುವುದು ಹೇಗೆ? ʻಮಹಾಸ್ವಾಮಿ, ಇಂಥ ದೃಶ್ಯ ನೋಡುವುದಕ್ಕೆ ಎಷ್ಟು ಜನ್ಮದ ಪುಣ್ಯ ಬೇಕೋ ಏನೋ. ಭಗವಂತನ ಲೀಲೆಯೆಂದರೆ ಸಾಮಾನ್ಯವೇ? ನನಗೆ ದರ್ಶನವಿತ್ತಿದ್ದು ಮಾತ್ರವಲ್ಲ, ಮಾತನ್ನೂ ಆಡಿದʼ ಎಂದ ಮಂತ್ರಿ. ರಾಜನಿಗೆ ಅಚ್ಚರಿಯಾಯಿತು. ʻಏನು ಹೇಳಿದ ದೇವರು?ʼ ಎಂದು ರಾಜ ಕೇಳಿದ್ದಕ್ಕೆ, ʻಅದೂ… ತಾನು ಹೇಳಿದ್ದನ್ನು ಯಾರಿಗೂ ಹೇಳಬೇಡ ಅಂತ ಭಗವಂತ ಅಪ್ಪಣೆ ಕೊಡಿಸಿದ್ದಾನೆʼ ಎನ್ನುತ್ತಾ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಮಂತ್ರಿ. ಇನ್ನೀಗ ರಾಜನ ಸರದಿ.
ಯಾರಿಗೂ ಕಾಣದ ದೇವರು ರಾಜನಿಗೊಬ್ಬನಿಗೆ ಕಾಣುವುದಾದರೂ ಹೇಗೆ? ಹಾಗಂತ ಹೇಳುವುದಕ್ಕಾದರೂ ಆದೀತೆ? ದೇವರು ಕಾಣಲಿಲ್ಲ ಎಂದರೆ ಹಿಂದೆ ಸುಳ್ಳು ಹೇಳಿದ್ದೇನೆ ಎಂದಾಯಿತು. ದೇವರನ್ನು ಕಂಡೆ ಎಂದರೆ ಈಗ ಸುಳ್ಳು ಹೇಳಿದಂತಾಯಿತು. ಮಂತ್ರಿಗಳಿಬ್ಬರೂ ದೇವರನ್ನು ಕಂಡಿದ್ದಾಗಿ ಹೇಳಿದ ಮೇಲೆ ತಾನೇನು ಮಾಡಬೇಕೆಂದು ರಾಜನಿಗೆ ಗೊಂದಲ ಉಂಟಾಯಿತು. ಆದರೂ ಹೊರಗೆ ಬಂದವ, ʻದೇವರ ದರ್ಶನವಾಯಿತುʼ ಎಂದೇ ಹೇಳಿದ ನಗುತ್ತಾ. ʻನಿಜಕ್ಕೂ ಹೌದೇ ಪ್ರಭುಗಳೇ?ʼ ಕೇಳಿದಳು ರಜನಿ. ರಾಜ ಮೌನವಾದ. ಆರು ತಿಂಗಳ ಹಿಂದಿನ ತನ್ನ ಮಾತನ್ನು ನೆನಪಿಸಿದಳು ರಜನಿ. ಈ ಹುಡುಗಿಯ ಬುದ್ಧಿವಂತಿಕೆಯನ್ನು ಮೆಚ್ಚಿದ ರಾಜ, ಇನ್ನಷ್ಟು ಸಂಪತ್ತನ್ನು ಉಡುಗೊರೆಯಾಗಿ ನೀಡಿದ.
ಇದನ್ನೂ ಓದಿ | ಮಕ್ಕಳ ಕಥೆ | ಬಾಳೆ ಬಂಗಾರ | ಬುದ್ಧಿ ಕಲಿತ ತಪನ್