ಈ ಕಥೆಯನ್ನು ಇಲ್ಲಿ ಆಲಿಸಬಹುದು :
ಒಂದೂರು. ಅಲ್ಲೊಬ್ಬ ರಾಜ. ಅವನ ಹೆಸರು ಲೋಕನಾಥ. ಅವನಿಗೊಬ್ಬಳು ರಾಣಿ. ಅವಳ ಹೆಸರು ಮೋಹಿ. ಇಬ್ಬರೂ ಸುಖದಿಂದ ರಾಜ್ಯಭಾರ ಮಾಡಿಕೊಂಡಿದ್ದರು. ಇದಿಷ್ಟೇ ಆಗಿದ್ರೆ ಈ ಕಥೆನಾದ್ರೂ ಯಾಕೆ ಹೇಳಬೇಕಿತ್ತು… ಅಲ್ವಾ? ವಿಷಯ ಇಷ್ಟೇ ಅಲ್ಲ, ಲೋಕನಾಥನಿಗೆ ಒಂದು ಕೆಟ್ಟ ಗುಣ ಇತ್ತು. ತನ್ನ ಮೇಲಿನ ಟೀಕೆಯನ್ನು ಆತ ಎಂದಿಗೂ ಸಹಿಸುತ್ತಿರಲಿಲ್ಲ. ಯಾರಾದ್ರೂ ಅವನ ಟೀಕೆ ಮಾಡಿದ್ರೆ, ಜೀವವನ್ನೇ ಕಳೆದುಕೊಳ್ಳಬೇಕಾಗಿತ್ತು! ಹಾಗಾಗಿಯೇ ಆತನ ಆಸ್ಥಾನದವರೆಲ್ಲಾ ನಿಜವನ್ನು ಮುಚ್ಚಿಟ್ಟು ಅವನನ್ನು ಯದ್ವಾತದ್ವಾ ಹೊಗಳುತ್ತಿದ್ದರು. ಅವನು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಿದ್ದರು.
ಲೋಕನಾಥನ ಈ ಸ್ವಭಾವ ರಾಣಿ ಮೋಹಿಗೆ ಒಂಚೂರು ಇಷ್ಟವಾಗುತ್ತಿರಲಿಲ್ಲ. ಕೆಲವು ಬಾರಿ ಅದನ್ನು ಸೂಚ್ಯವಾಗಿ ಹೇಳಿಯೂ ಇದ್ದಳು. “ನಿಮ್ಮ ಆಸ್ಥಾನದಲ್ಲಿ ಇರುವವರು ಹೇಳುವುದೆಲ್ಲಾ ಸತ್ಯ ಅಂದುಕೊಳ್ಳಬೇಡಿ ಮಹಾರಾಜ. ನೀವೇ ಇಂದ್ರ-ಚಂದ್ರ-ದೇವೇಂದ್ರ ಎಂಬ ಅವರ ಮಾತುಗಳು ನಿಮ್ಮ ಮೇಲಿನ ಹೆದರಿಕೆಯಿಂದಲೂ ಇರಬಹುದಲ್ಲ” ಎಂದು ಮೋಹಿ ಆಗಾಗ ಹೇಳುತ್ತಿದ್ದಳು. ಆದರೆ ರಾಜ ತನ್ನನ್ನು ತಾನು ಸದಾ ಸಮರ್ಥಿಸಿಕೊಳ್ಳುತ್ತಿದ್ದ. “ಅವರು ಹಾಗೆಲ್ಲಾ ಹೆದರುವುದಕ್ಕೆ ನಾನೇನು ಸಿಂಹವೇ? ಶರಭವೇ? ನಾನಿರುವ ಹಾಗೆ ನನ್ನನ್ನು ಅವರು ವರ್ಣಿಸುತ್ತಾರೆ. ಅದರಲ್ಲೇನು?” ಎಂದು ತನ್ನ ರಾಣಿಯ ಬಾಯಿ ಮುಚ್ಚಿಸುತ್ತಿದ್ದ.
ಒಮ್ಮೆ ರಾಣಿ ತನ್ನ ಉದ್ಯಾನವನದಲ್ಲಿದ್ದಾಗ ಇದ್ದಕ್ಕಿದ್ದಂತೆ ಜೋರಾದ ಮಾತುಗಳು ಕೇಳಿದವು. ಆ ಧ್ವನಿ ರಾಜನದಾಗಿತ್ತು. “ಹಾಳಾದವನೇ! ಎಷ್ಟು ಸೊಕ್ಕು ನಿನಗೆ! ಮುಖ ತೋರಿಸಬೇಡ ನನಗೆ…” ಎಂದೆಲ್ಲಾ ರಾಜ ಕೂಗಾಡುತ್ತಿದ್ದ. ತಕ್ಷಣವೇ ಆ ಜಾಗಕ್ಕೆ ರಾಣಿ ಓಡೋಡುತ್ತಾ ಹೋದಳು. ತನ್ನದೇ ಸೇವಕನ ಮೇಲೆ ರಾಜ ಕೋಪದಿಂದ ಕೂಗಾಡುತ್ತಿದ್ದ. ರಾಜ ಗುರಿಯಿಟ್ಟು ಹೊಡೆದ ಬಾಣ, ಗುರಿ ತಾಗದೆ ಪಕ್ಕದಲ್ಲಿ ಬಿತ್ತು ಎಂದು ಆ ಸೇವಕ ಹೇಳಿದ್ದಕ್ಕೆ ರಾಜನ ಪಿತ್ತ ನೆತ್ತಿಗೇರಿತ್ತು. ಇಷ್ಟೊಂದು ಅಹಂಕಾರ ಯಾರಿಗೂ ಒಳ್ಳೆಯದಲ್ಲವಲ್ಲ ಎಂದು ಯೋಚಿಸಿದ ರಾಣಿ, “ನಿಮಗಾಗಿ ಒಂದು ಉಡುಗೊರೆಯಿದೆ ನನ್ನ ಬಳಿ” ಎಂದಳು. ಅವಳ ಈ ಮಾತನ್ನು ಕೇಳಿ ರಾಜನ ಮನಸ್ಸು ಪ್ರಸನ್ನವಾಯಿತು. “ಏನದು? ತೋರಿಸು” ಎಂದ ಕೋಪ ಬಿಟ್ಟು. “ತೋರಿಸುತ್ತೇನೆ. ಆದರೆ ಈಗಲ್ಲ, ನಾಳೆ ನಿಮ್ಮ ಆಸ್ಥಾನಕ್ಕೇ ತರುತ್ತೇನೆ ಅದನ್ನು. ಎಲ್ಲರೆದುರೇ ನೋಡಬಹುದು” ಎಂದಳು ರಾಣಿ. ಮೋಹಿಯ ಮಾತಿನಿಂದ ರಾಜನಿಗೆ ಸಂತೋಷವಾಯಿತು.
ಮರುದಿನ ಬೆಳಗ್ಗೆ ಆಸ್ಥಾನದ ಸಭೆ ನಡೆಯುತ್ತಿದ್ದಾಗ ರಾಣಿ ತನ್ನ ಸಖಿಯರೊಂದಿಗೆ ಬಂದಳು. ಅವಳ ಸಖಿಯರು ರೇಷ್ಮೆಯ ವಸ್ತ್ರ ಮುಚ್ಚಿದ್ದ ವಸ್ತುವೊಂದನ್ನು ಹೊತ್ತು ತಂದರು. “ಇದರಲ್ಲಿ ನಿಮ್ಮ ವರ್ಣಚಿತ್ರವಿದೆ ಮಹಾರಾಜ. ಇದನ್ನು ನಿಮಗೆ ನೀಡುವ ಮುನ್ನ ನನ್ನದೊಂದು ಕೋರಿಕೆ. ನೀವಿದನ್ನು ನೋಡುವ ಮುನ್ನವೇ, ಆಸ್ಥಾನಿಕರು ಅದನ್ನು ನೋಡಬೇಕು ಮತ್ತು ತಮ್ಮ ಅಭಿಪ್ರಾಯ ತಿಳಿಸಬೇಕು. ಅವರೆಲ್ಲರ ನಂತರ ನಿಮಗಿದನ್ನು ನೀಡಲಾಗುವುದು” ಎಂಬ ರಾಣಿಯ ಮಾತಿಗೆ ರಾಜನಿಗೇನೂ ಅಭ್ಯಂತರವಿರಲಿಲ್ಲ.
ಇದನ್ನೂ ಓದಿ | ಮಕ್ಕಳ ಕಥೆ | ದೇವರ ಮುಡಿಗೆ ಯಾರ ತಾವರೆ? |
ಒಬ್ಬೊಬ್ಬರಾಗಿ ಬಂದು, ರೇಷ್ಮೆಯ ವಸ್ತ್ರವನ್ನು ಎತ್ತಿ ನೋಡಿ ಕಸಿವಿಸಿಗೊಂಡು ಮೌನವಾಗಿ ಹಿಂದಿರುಗುತ್ತಿದ್ದರು. ಕಡೆಗೆ ರಾಜ ಅವರ ಅಭಿಪ್ರಾಯ ಕೇಳುತ್ತಿದ್ದಂತೆ, ʻಅದ್ಭುತ, ಸರ್ವಶ್ರೇಷ್ಠ, ಚಂದವೆಂದರೆ ಇದು, ಇಂಥದ್ದನ್ನು ನಾವೆಂದೂ ಕಂಡಿದ್ದಿಲ್ಲ…ʼ ಎಂದೆಲ್ಲಾ ವರ್ಣಿಸಿದರು. ರಾಜನ ಆನಂದಕ್ಕೆ ಮೇರೆಯೇ ಇಲ್ಲ. ಕಡೆಗೆ ತನ್ನ ಸರದಿ ಬಂದಾಗ, ರೇಷ್ಮೆಯ ವಸ್ತ್ರವನ್ನು ಕೆಳಗಿಳಿಸಿದ. ಅಲ್ಲಿರುವುದನ್ನು ನೋಡಿ ದಂಗಾದ.
ವಿಷಯವೇನೆಂದರೆ, ಅಲ್ಲಿ ಏನೂ ಇರಲಿಲ್ಲ. ಯಾವುದೇ ಚಿತ್ರ ಬಿಡಿ, ಬಣ್ಣದ ಒಂದು ಚುಕ್ಕಿಯೂ ಇರದೆ ಖಾಲಿ ಹಾಳೆಯಿತ್ತು ಅಲ್ಲಿ. “ಇದೆಂಥ ಮಕ್ಕಳಾಟ? ಇದರ ಪರಿಣಾಮ ಗೊತ್ತೇ ನಿನಗೆ?” ರಾಜ ಕೋಪದಿಂದ ಮೋಹಿಯನ್ನು ಪ್ರಶ್ನಿಸಿದ. ಶಾಂತ ಚಿತ್ತದಿಂದ ರಾಣಿ ಹೇಳಿದಳು- “ಹಿಂದೆಯೇ ಹೇಳಿದ್ದೆ ನಿಮಗೆ. ಆಸ್ಥಾನಿಕರೆಲ್ಲ ನಿಮ್ಮ ಹೆದರಿಕೆಯಲ್ಲಿದ್ದಾರೆ ಎಂಬುದಾಗಿ. ಈಗ ನೋಡಿ, ಏನೂ ಇರದ ಹಾಳೆಯಿಂದ ಅವರು ನಿಮ್ಮನ್ನು ವರ್ಣಿಸಿದರು, ಚಿತ್ರದ ಚಂದವನ್ನು ಕೊಂಡಾಡಿದರು. ತಮ್ಮ ಮನದಲ್ಲಿರುವುದನ್ನು ಹೇಳಲೇ ಇಲ್ಲ. ಇದಕ್ಕೆಲ್ಲ ನಿಮ್ಮ ಹೆದರಿಕೆಯಲ್ಲದೆ ಇನ್ಯಾವ ಕಾರಣ ಇದ್ದೀತು?” ರಾಣಿಯ ಈ ಮಾತಿನಿಂದ ಲೋಕನಾಥನಿಗೆ ತನ್ನ ತಪ್ಪಿನ ಅರಿವಾಯಿತು. ಇಷ್ಟೂ ದಿನಗಳ ಕಾಲ ತನ್ನದೇ ಪ್ರಜೆಗಳನ್ನು ಹೆದರಿಕೆಯಲ್ಲಿ ಇರಿಸಿದ್ದೆನಲ್ಲ ಎಂದು ತನ್ನ ಬಗ್ಗೆ ಬೇಸರವೂ ಆಯಿತು. ರಾಣಿ ಕಲಿಸಿದ ಈ ಪಾಠದಿಂದ ತನ್ನ ತಪ್ಪನ್ನು ತಿದ್ದಿಕೊಂಡು ಒಳ್ಳೆಯ ರಾಜನಾಗಿ ಆತ ಹೆಸರು ಗಳಿಸಿದ.
ಇದನ್ನೂ ಓದಿ | Motivational story | ಇದು ಒಂದೇ ವಠಾರದಲ್ಲಿದ್ದ ಇಬ್ಬರು ಅಮ್ಮಂದಿರು, ಅವರ ಇಬ್ಬರು ಮಕ್ಕಳ ಕಥೆ