Site icon Vistara News

ಮಕ್ಕಳ ದಿನಕ್ಕೆ ಒಂದು ಕಥೆ | ಅಂಬೊಡೆ ಮಾಡಿದ ಜಾಣ ಸೋಮಣ್ಣ

vada

ಈ ಕಥೆಯನ್ನು ಇಲ್ಲಿ ಕೇಳಿ:

http://vistaranews.com/wp-content/uploads/2022/11/vada.mp3

ಸೋಮಣ್ಣ ಊರಂಚಿನ ಮನೆಯಲ್ಲಿ ತನ್ನ ಮಡದಿಯೊಂದಿಗೆ ವಾಸಿಸುತ್ತಿದ್ದ. ಸರಿಯಾದ ಕೆಲಸ ಇಲ್ಲದಿರುವುದರಿಂದ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎನ್ನುವ ಅವಸ್ಥೆ ಅವನದ್ದು. ಮನೆಯ ಹಿಂದಿನ ಜಾಗದಲ್ಲಿ ಪುಟ್ಟದೊಂದು ತರಕಾರಿ ತೋಟ ಮಾಡಿದ್ದರಿಂದ ಮನೆಯ ಖರ್ಚು ನಡೆಯುತ್ತಿತ್ತು. ದಿನಾ ಗಂಜಿಯೂಟ ಮಾಡಿ ಬೇಸರವಾಗಿದ್ದ ಸೋಮಣ್ಣನಿಗೆ ಒಂದಿನ ಅಂಬೊಡೆ ತಿನ್ನಬೇಕು ಅಂತ ಆಸೆಯಾಯ್ತು. ʻಇವತ್ತೊಂದಿನ ಅಂಬೊಡೆ ಮಾಡಿದ್ರೆ ಚನ್ನಾಗಿರತ್ತೆ ಕಣೆʼ ಅಂದ ಹೆಂಡತಿಯ ಬಳಿ. ʻಮನೆಯಲ್ಲಿ ಎಣ್ಣೆಯೂ ಇಲ್ಲ, ಬೇಳೆಯೂ ಇಲ್ಲ. ಏನು ಮಾಡ್ಲಿ?ʼ ಕೇಳಿದಳು ಹೆಂಡತಿ. ಸೋಮಣ್ಣ ಸಪ್ಪೆ ಮುಖ ಮಾಡಿ ಕೂತ.

ಎರಡೇ ನಿಮಿಷ, ಮನದಲ್ಲಿ ಉಪಾಯವೊಂದು ಹೊಳೆಯಿತು. ʻಅಂಬೊಡೆಗೆ ಉಳಿದೆಲ್ಲಾ ತಯಾರು ಮಾಡು, ನಾನು ಸ್ವಲ್ಪ ಪೇಟೆಗೆ ಹೋಗಿ ಬರ್ತೀನಿʼ ಅಂತ ಹೇಳಿದ ಸೋಮಣ್ಣ, ದೊಡ್ಡದೊಂದು ರುಮಾಲು ತಲೆಗೆ ಸುತ್ತಿಕೊಂಡು, ಕೈಯಲ್ಲೊಂದು ಡಬ್ಬಿ ಮತ್ತು ಚೀಲ ಹಿಡಿದು ಹೊರಟ. ಆಗಿನ ಕಾಲದಲ್ಲಿ ಎಣ್ಣೆ, ಬೇಳೆ ಮುಂತಾದ ದಿನಸಿಗಳೆಲ್ಲಾ ಈಗಿನಂತೆ ಪ್ಯಾಕ್‌ ಮಾಡ್ಕೊಂಡು ಬರುತ್ತಿರಲಿಲ್ಲ. ಅವುಗಳನ್ನು ತರೋದಕ್ಕೆ ಜನರೇ ಚೀಲ, ಡಬ್ಬಿಗಳನ್ನು ತಗೊಂಡು ಹೋಗಬೇಕಿತ್ತು.

ರಾಮಣ್ಣನ ಎಣ್ಣೆಯ ಗಾಣಕ್ಕೆ ಹೋದ ಸೋಮಣ್ಣ. ದೊಡ್ಡ ಕಡಾಯಿಯಲ್ಲಿದ್ದ ಎಣ್ಣೆಯನ್ನು ಬಗ್ಗಿ ನೋಡಿದ ಸೋಮಣ್ಣ, ʻಈ ಎಣ್ಣೆ ಹೇಗೆ ಸೇರಿಗೆ?ʼ ಎಂದು ಕೇಳಿದ. ರಾಮಣ್ಣ ಹೇಳಿದ ಬೆಲೆ ಕೇಳಿ, ʻಸಿಕ್ಕಾಪಟ್ಟೆ ದುಬಾರಿಯಾಗೋಯ್ತು ಎಣ್ಣೆಯ ಬೆಲೆ, ಛೇ ಛೇ!ʼ ಎನ್ನುತ್ತಾ ಜೋರಾಗಿ ತಲೆ ಕೊಡವಿದ. ಅವನ ತಲೆ ಮೇಲೆ ದೊಡ್ಡದಾಗಿ ಕುಳಿತಿದ್ದ ರುಮಾಲು ಜಾರಿ ಎಣ್ಣೆಯ ಕಡಾಯಿಯೊಳಗೆ ಬಿತ್ತು. ʻಅಯ್ಯಯ್ಯೋ! ಎಂಥಾ ಕೆಲಸ ಆಗೋಯ್ತುʼ ಎಂದು ಉದ್ಗಾರ ತೆಗೆದು, ಆ ರುಮಾಲನ್ನೆತ್ತಿಕೊಂಡು ತನ್ನ ಡಬ್ಬಿಗೆ ಹಾಕಿಕೊಂಡ ಸೋಮಣ್ಣ ಲಘುಬಗೆಯಿಂದ ಮನೆಯತ್ತ ತೆರಳಿದ. ಆತನ ರುಮಾಲಿನಲ್ಲಿದ್ದ ಎಣ್ಣೆಯನ್ನು ಹಿಂಡಿದಾಗ ಆ ದಿನಕ್ಕೆ ಸಾಕಾಗುವಷ್ಟಿತ್ತು. ʻಬೇಳೆಯೆಲ್ಲಿ?ʼ ಕೇಳಿದಳು ಹೆಂಡತಿ. ʻಬಂದೆ ಇರುʼ ಎನ್ನುತ್ತಾ ತನ್ನ ಎಣ್ಣೆಯ ರುಮಾಲನ್ನೇ ತಲೆಗೆ ಸುತ್ತಿಕೊಂಡು ಭೀಮಣ್ಣನ ದಿನಸಿ ಅಂಗಡಿಯತ್ತ ನಡೆದ ಸೋಮಣ್ಣ.

ಇದನ್ನೂ ಓದಿ | Children’s Day| ಮಕ್ಕಳ ದಿನಕ್ಕೆ ಒಂದು ಕಥೆ | ಕತ್ತೆಯೊಂದಿಗೆ ಪಯಣ!

ಅಲ್ಲಿಯೂ ಸಹ ಬೇಳೆ ತುಂಬಿಸಿದ್ದ ಗೋಣಿಚೀಲದತ್ತ ಬಗ್ಗಿ ಬೆಲೆ ಕೇಳಿದ ಸೋಮಣ್ಣ. ಅಂಗಡಿ ಭೀಮಣ್ಣ ಹೇಳಿದ ಬೆಲೆ ಕೇಳಿ, ʻಅಬ್ಬಬ್ಬ ಬೆಲೆಯೆ! ಇದೇನು ಬೇಳೆಯೋ ಚಿನ್ನವೋ?ʼ ಎನ್ನುತ್ತಾ ತಲೆ ಕೊಡವಿದ. ತಲೆಯ ಮೇಲಿದ್ದ ಎಣ್ಣೆಯ ರುಮಾಲು ನೇರ ಬೇಳೆಯ ಚೀಲದೊಳಗೆ ಬಿತ್ತು. ಏನೂ ಆಗಿಲ್ಲ ಎನ್ನುವಂತೆ ರುಮಾಲನ್ನೆತ್ತಿ ತನ್ನ ಚೀಲದೊಳಗೆ ಹಾಕಿಕೊಂಡು ಮನೆಯತ್ತ ನಡೆದ ಸೋಮಣ್ಣ. ಆತನ ಎಣ್ಣೆ ರುಮಾಲು ಸಾಕಷ್ಟು ಬೇಳೆಯನ್ನು ಅಂಟಿಸಿಕೊಂಡಿತ್ತು. ಆತನ ಹೆಂಡತಿ ತನ್ನ ತರಕಾರಿ ತೋಟದಿಂದ ಈರುಳ್ಳಿ ಮತ್ತು ಸೊಪ್ಪುಗಳನ್ನು ಕಿತ್ತು ತಂದಿದ್ದಳು. ಎಲ್ಲವನ್ನೂ ಸೇರಿಸಿ, ಅಂದು ರುಚಿಯಾದ ಅಂಬೊಡೆ ಸಿದ್ಧವಾಗಿತ್ತು.

ಮೊದಲಿಗೆ ಖುಷಿಯಿಂದಲೇ ಅಂಬೊಡೆ ಮೆಲ್ಲುವುದಕ್ಕೆ ತೊಡಗಿದ ಸೋಮಣ್ಣನಿಗೆ, ಅಂಗಡಿ ಮತ್ತು ಗಾಣದ ಭೀಮಣ್ಣ ಮತ್ತು ರಾಮಣ್ಣ ನೆನಪಾದರು. ʻನಾಲ್ಕು ಅಂಬೊಡೆ ಕಟ್ಟಿಕೊಡುʼ ಎಂದು ಮಡದಿಗೆ ಹೇಳಿದವನೇ, ಆ ಪೊಟ್ಟಣದೊಂದಿಗೆ ನೇರ ಅವರ ಅಂಗಡಿಗಳಿಗೆ ಹೋದ. ನಡೆದಿದ್ದನ್ನು ಅವರಿಗೆ ಹೇಳಿ, ಅವರ ಕ್ಷಮೆ ಕೇಳಿ, ಅವರಿಗೂ ಅಂಬೊಡೆಯನ್ನು ತಿನ್ನಲು ಕೊಟ್ಟ. ಆ ರುಚಿಗೆ ಮಾರುಹೋದ ಅವರು, ನೀನೇಕೆ ಒಂದು ಅಂಬೊಡೆ ಅಂಗಡಿಯನ್ನು ತೆರೆಯಬಾರದು ಎಂದು ಸಲಹೆ ನೀಡಿದರು. ಮಾತ್ರವಲ್ಲ, ಬಂಡವಾಳಕ್ಕೆ ದುಡ್ಡಿದ್ದ ಎಂದ ಸೋಮಣ್ಣನಿಗೆ ಸ್ವಲ್ಪ ಬೇಳೆ ಮತ್ತು ಎಣ್ಣೆಯನ್ನು ಉಚಿತವಾಗಿ ನೀಡಿದರು. ಸೋಮಣ್ಣನ ಅಂಬೊಡೆ ವ್ಯಾಪಾರ ಜೋರಾಗಿ ಕುದುರಿತು, ಬದುಕಿನ ಕಷ್ಟವೂ ದೂರವಾಯಿತು. ಅಂದಿನಿಂದ ಆತ ತನ್ನೂರಿನಲ್ಲಿ ಅಂಬೊಡೆ ಸೋಮಣ್ಣ ಎಂದೇ ಹೆಸರಾದ.

ಇದನ್ನೂ ಓದಿ | ಮಕ್ಕಳ ಕಥೆ | ರಾಜನಿಗೆ ರಜನಿ ತೋರಿಸಿದ ಸುಳ್ಳಿನ ರುಚಿ

Exit mobile version