ಶಾಲೆಗೆ ಹೋಗುವ ಮಕ್ಕಳ ಕೈಯಲ್ಲಿ ಪೆನ್ನು, ಪೆನ್ಸಿಲ್ ಕೊಟ್ಟಾಗ ಅವರು ತಮ್ಮ ತಲೆ, ಕಣ್ಣು, ಕೈಗೆ ಕೆಲವೊಮ್ಮೆ ಚುಚ್ಚಿಸಿಕೊಳ್ಳುವುದಿದೆ. ಆದರೆ ಪೆನ್‌ನಿಂದ ಸಾವು ಸಂಭವಿಸಿದ ಸುದ್ದಿ ಹಿಂದೆಂದೂ ಕೇಳಿದ್ದಿಲ್ಲ. ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಭದ್ರಾಚಲಂನ ಸುಭಾಷ್ ನಗರದಲ್ಲಿ ಬರೆಯಲು ಇಟ್ಟುಕೊಂಡಿದ್ದ ಪೆನ್‌ನಿಂದ ಬಾಲಕಿಯ ಸಾವು ಸಂಭವಿಸಿದ ದುರ್ಘಟನೆ ನಡೆದಿದೆ. 5 ವರ್ಷದ ಬಾಲಕಿ (Baby Death) ತಲೆಗೆ ಪೆನ್ ಚುಚ್ಚಿದ ಪರಿಣಾಮ ಸಾವನಪ್ಪಿದ್ದಾಳೆ.
ರಿಯಾನ್ಶಿಕಾ ಪೆನ್ನು ಚುಚ್ಚಿ ಸಾವನಪ್ಪಿದ ಬಾಲಕಿ. ಈಕೆ ಯುಕೆಜಿಯಲ್ಲಿ ಓದುತ್ತಿದ್ದಳು. ಜುಲೈ 1ರಂದು ತನ್ನ ಮನೆಯಲ್ಲಿ ಹಾಸಿಗೆಯ ಮೇಲೆ ಕುಳಿತು ಹೋಮ್ ವರ್ಕ್ ಮಾಡುತ್ತ ತನ್ನ ಪುಸ್ತಕಗಳೊಂದಿಗೆ ಆಟವಾಡುತ್ತಿದ್ದಾಗ, ಬ್ಯಾಲೆನ್ಸ್ ತಪ್ಪಿ ಮಂಚದಿಂದ ಕೆಳಗೆ ಬಿದ್ದಿದ್ದಾಳೆ. ಆಗ ಅವಳು ಹಿಡಿದಿದ್ದ ಪೆನ್ ಅವಳ ಕಿವಿಯ ಮೇಲ್ಭಾಗದಿಂದ ನೇರವಾಗಿ ತಲೆಗೆ ಆಳವಾಗಿ ಚುಚ್ಚಿದೆ. ಪೆನ್ನಿನ ಸುಮಾರು ಅರ್ಧದಷ್ಟು ಭಾಗ ಅವಳ ತಲೆಯೊಳಗೆ ತೂರಿ ಹೋಗಿತ್ತು ಎನ್ನಲಾಗಿದೆ.
ತಕ್ಷಣ ಆಕೆಯ ಹೆತ್ತವರಾದ ಮಣಿಕಂಠ ಮತ್ತು ಸ್ವರೂಪಾ ಅವರು ಅವಳನ್ನು ಭದ್ರಾಚಲಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ನಂತರ ವೈದ್ಯರ ಸಲಹೆಯ ಮೇರೆಗೆ ಉತ್ತಮ ಚಿಕಿತ್ಸೆಗಾಗಿ ಖಮ್ಮಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಆಕೆಗೆ ಸರ್ಜರಿ ಮಾಡಿ ಪೆನ್ ಅನ್ನು ಹೊರಗೆ ತೆಗೆದರೂ ಕೂಡ ಗಂಭೀರ ಸ್ಥಿತಿಯಲ್ಲಿದ್ದ ಆಕೆ ಸೋಂಕಿಗೆ ಒಳಗಾಗಿ ಸಾವನಪ್ಪಿದ್ದಾಳೆ.
ಕೊನೆಗೂ ನೂರಾರು ವರ್ಷ ಬಾಳಿ ಬದುಕುಬೇಕಾಗಿದ್ದ ಆ ಪುಟ್ಟ ಬಾಲಕಿಯ ಜೀವ ಕೇವಲ ಒಂದು ಚಿಕ್ಕ ಪೆನ್ನಿನಿಂದ ಅಂತ್ಯ ಕಂಡಿದ್ದು ದುರಂತವೇ ಸರಿ. ಹಾಗಾಗಿ ಈ ಘಟನೆಯಿಂದ ಎಲ್ಲಾ ಪೋಷಕರು ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮಗೆ ಎಷ್ಟೇ ಕೆಲಸವಿದ್ದರೂ ಕೂಡ ನಿಮ್ಮ ಮಕ್ಕಳ ಬಗ್ಗೆ ಒಂದು ಗಮನವಿಟ್ಟಿರಿ. ಇಲ್ಲವಾದರೆ ಇಂತಹ ದುರಂತಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್ ಕಸಿದು ಓಡುತ್ತಾರೆ! ಪೋಲಿಸ್ರು ಏನ್ ಮಾಡ್ತಿದ್ದಾರೋ!
ಈ ಹಿಂದೆ ಮೇ ತಿಂಗಳಿನಲ್ಲಿ ನೇಪಾಳದಲ್ಲಿ 7 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ 10 ಸೆಂ.ಮೀ ಉದ್ದದ ಪೆನ್ಸಿಲ್ ಅನ್ನು ನುಂಗಿ ಬಿಟ್ಟಿದ್ದ. ಇದರಿಂದ ಆತ ಹೊಟ್ಟೆ ನೋವಿನಿಂದ ನರಳಿದ್ದು, ನಂತರ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಬಾಲಕನ ಎದೆ ಮತ್ತು ಹೊಟ್ಟೆಯ ಎಕ್ಸ್-ರೇ ಸ್ಕ್ಯಾನ್ ಮಾಡಿಸಿದ ವೈದ್ಯರಿಗೆ ಪೆನ್ಸಿಲ್ ಅವನ ಹೊಟ್ಟೆಯಲ್ಲಿ ಇರುವುದು ತಿಳಿದು ಬಂದಿತ್ತು. ನಂತರ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಆತನ ಹೊಟ್ಟೆಯಿಂದ ಹೊರಗೆ ತೆಗೆಯಲಾಗಿತ್ತು. ಇದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದ.