Site icon Vistara News

Dating Application: ಡೇಟಿಂಗ್‌ ನೆಪದಲ್ಲಿ ಕೆಫೆಗೆ ಕರೆದ ಮಹಿಳೆ ಹೀಗಾ ಮಾಡೋದು?

Dating Application

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧ ಕುದುರುವುದು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ. ಇಲ್ಲಿ ಯುವಕ-ಯುವತಿಯರು ಒಬ್ಬರನ್ನೊಬ್ಬರು ಭೇಟಿಯಾಗಿ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಜನರು ತಮ್ಮ ಜೀವನ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ಈ ಅಪ್ಲಿಕೇಶನ್‌ನಲ್ಲಿ ಡೇಟಿಂಗ್ ಮಾಡಿ ಮೋಸ ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್‌ (Dating Application) ಮೋಸದ ಹಗರಣವೊಂದು ಬೆಳಕಿಗೆ ಬಂದಿದೆ.

ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆಯೊಂದಿಗೆ ಡೇಟಿಂಗ್ ಮಾಡಿದ ದೆಹಲಿಯ ನಾಗರಿಕ ಸೇವಾ ಆಕಾಂಕ್ಷಿಯೊಬ್ಬರು ಕೆಫೆಯಲ್ಲಿ 1.20 ಲಕ್ಷ ರೂ.ಗಳ ಬಿಲ್ ಕೊಟ್ಟು ಹಣವನ್ನು ಕಳೆದುಕೊಂಡಿದ್ದಾರೆ. ಇದು ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹರಡಿರುವ ‘ಟಿಂಡರ್ ಹಗರಣ’ದ ಅನೇಕ ಪ್ರಕರಣಗಳಲ್ಲಿ ಒಂದಾಗಿದೆ.

ರೆಡ್ಡಿಟ್ ಎಂಬ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಅನೇಕ ಪೋಸ್ಟ್‌ಗಳಿದ್ದು ಅವುಗಳಲ್ಲಿ ಕೆಲವು ಒಂದು ವರ್ಷ ಹಳೆಯದಾಗಿವೆ. ಅದರಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಡೇಟಿಂಗ್ ಮಾಡಿ ದುಬಾರಿ ಬಿಲ್ ತೆತ್ತು ಮೋಸಹೋದ ಜನರ ಖಾತೆಗಳ ಬಗ್ಗೆ ತಿಳಿಸುತ್ತದೆ. ಟಿಂಡರ್, ಬಂಬಲ್, ಹಿಂಜ್ ಮತ್ತು ಒಕ್ಯುಪಿಡ್‌ನಂತಹ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಯಾರಾದರೂ ಪ್ರೊಫೈಲ್‌ ಮಹಿಳೆಯ ಪ್ರೊಫೈಲ್‌ಗೆ ಮ್ಯಾಚ್ ಆದಾಗ ಅವಳು ತನ್ನ ವಾಟ್ಸಾಪ್ ಸಂಖ್ಯೆಯನ್ನು ಶೇರ್‌ ಮಾಡಿಕೊಂಡು ಅವರ ಜೊತೆ ಮಾತನಾಡಲು ಶುರು ಮಾಡುತ್ತಾಳೆ. ನಂತರ ಮಹಿಳೆ ಕೆಫೆ ಮತ್ತು ಪಬ್‌ಗಳಲ್ಲಿ ಮೀಟ್‌ ಆಗುವ ಎಂದು ಒತ್ತಾಯ ಮಾಡುವುದಕ್ಕೆ ಶುರುಮಾಡುತ್ತಾಳೆ. ಮಹಿಳೆಯ ಮಾತಿಗೆ ಒಪ್ಪಿ ಭೇಟಿಯಾಗುವುದಕ್ಕೆ ರೆಡಿಯಾದರೆ ಅವನಿಗೆ ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಲು ಹೇಳಿ ಅಲ್ಲಿಂದ ಕೆಫೆ ಅಥವಾ ಪಬ್‌ಗೆ ಹೋಗುತ್ತಾರೆ

ಇನ್ನು ಕೆಫೆಯಲ್ಲಿ, ಮಹಿಳೆಯೇ ಆರ್ಡರ್ ಮಾಡುತ್ತಾಳೆ. ಆದರೆ ಈ ಮೋಸದಾಟದ ಬಗ್ಗೆ ಅರಿವಿಲ್ಲದ ಪುರುಷರು ಸುಮ್ಮನಿರುತ್ತಾರೆ. ನಂತರ, ಮಹಿಳೆ ಮೆನುವಿನಲ್ಲಿ ಇಲ್ಲದಿರುವ ಏನನ್ನಾದರೂ ಆರ್ಡರ್ ಮಾಡಿ ತನಗೆ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಅವಸರದಿಂದ ಅಲ್ಲಿಂದ ಹೋಗುತ್ತಾಳೆ. ಆದರೆ ಬಿಲ್ ಬಂದಾಗ, ಅದರ ಬೆಲೆ ನೋಡಿ ಬಲಿಪಶು ಶಾಕ್ ಆಗುವುದಂತೂ ಖಂಡಿತ. ಈ ಬಗ್ಗೆ ಪ್ರತಿಭಟಿಸಿದರೆ, ಕೆಫೆ ಸಿಬ್ಬಂದಿಗಳು ಅವನಿಗೆ ಬೆದರಿಕೆ ಹಾಕುತ್ತಾರೆ.

ಬೇರೆ ಆಯ್ಕೆಯಿಲ್ಲದೆ, ಅವನು ಬಿಲ್ ಪಾವತಿಸುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜನರು ಪೊಲೀಸರನ್ನು ಸಂಪರ್ಕಿಸುವುದಿಲ್ಲ. ಏಕೆಂದರೆ ತನಿಖೆಯ ವೇಳೆ ಅವನು ಡೇಟಿಂಗ್ ಅಪ್ಲಿಕೇಶನ್ ಮೂಲಕ ಜನರನ್ನು ಭೇಟಿಯಾಗುತ್ತಿದ್ದಾನೆ ಎಂದು ಅವನ ಕುಟುಂಬಕ್ಕೆ ತಿಳಿಯಬಹುದೆಂದು ಹೆದರುತ್ತಾರೆ.

ಕೆಫೆ ಮಾಲೀಕರು, ವ್ಯವಸ್ಥಾಪಕರು ಮತ್ತು ಡೇಟಿಂಗ್ ಮಹಿಳೆಯರು ಸೇರಿದಂತೆ ಹಲವಾರು ಹೆಣೆದ ಬಲೆಯಾಗಿದೆ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಐಎಎಸ್ ಆಕಾಂಕ್ಷಿಯನ್ನು ಗುರಿಯಾಗಿಸಿಕೊಂಡು ನಡೆದ ಇತ್ತೀಚಿನ ದೆಹಲಿ ಘಟನೆಯಲ್ಲಿ, ಕೆಫೆಯ ಮಾಲೀಕ ಅಕ್ಷಯ್ ಪಹ್ವಾ ಮತ್ತು ಸಂತ್ರಸ್ತೆಯ ‘ಡೇಟ್’ ಅಫ್ಸಾನ್ ಪರ್ವೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

ಅಲ್ಲದೇ ಈ ಮೋಸದ ಆಟದಿಂದ ಬಂದ ಬಿಲ್ ಹಣದಲ್ಲಿ 15 ಪ್ರತಿಶತವನ್ನು ಮಹಿಳೆಗೆ, 45 ಪ್ರತಿಶತವನ್ನು ವ್ಯವಸ್ಥಾಪಕರಿಗೆ ಮತ್ತು ಉಳಿದ 40 ಪ್ರತಿಶತವನ್ನು ಮಾಲೀಕರಿಗೆ ಹಂಚಲಾಗುತ್ತದೆ ಎಂದು ಆರೋಪಿಗಳಲ್ಲಿ ಒಬ್ಬ ಪೊಲೀಸರಿಗೆ ತಿಳಿಸಿದ್ದಾರೆ.

ಈ ಪ್ರಕರಣ ದೆಹಲಿ ಮಾತ್ರವಲ್ಲ ದೆಹಲಿ-ಎನ್ಸಿಆರ್, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ಹಗರಣ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಪುರುಷರು ಮಾತ್ರ ಗುರಿಯಾಗುತ್ತಿಲ್ಲ. ಈ ತಿಂಗಳ ಆರಂಭದಲ್ಲಿ, ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದ ಮತ್ತು ಅವರ ಮನೆಗಳಲ್ಲಿ ದರೋಡೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

(ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ)

Exit mobile version