ಐದು ವರ್ಷದ ಬಾಲಕನೊಬ್ಬ ಹ್ಯಾಂಡ್‍ಗನ್‌ನೊಂದಿಗೆ ಶಾಲೆಗೆ ಬಂದು 3ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕನ ಮೇಲೆ ಗುಂಡು (Gunfire On School) ಹಾರಿಸಿದ ಆಘಾತಕಾರಿ ಘಟನೆ ಉತ್ತರ ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್‍ನ ಲಾಲ್ಪಟ್ಟಿಯಲ್ಲಿರುವ ಸೇಂಟ್ ಜಾನ್ಸ್ ಬೋರ್ಡಿಂಗ್ ಸ್ಕೂಲ್‍ನಲ್ಲಿ ಬುಧವಾರ ನಡೆದಿದೆ. ಇದರಿಂದ ಸಂತ್ರಸ್ತ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನರ್ಸರಿ ವಿದ್ಯಾರ್ಥಿಯಾಗಿರುವ ಆರೋಪಿ ಬಾಲಕ ತನ್ನ ಸ್ಕೂಲ್ ಬ್ಯಾಗ್‍ನಲ್ಲಿ ಬಂದೂಕನ್ನು ಅಡಗಿಸಿಕೊಂಡು ಶಾಲೆಗೆ ಹೋಗಿದ್ದ. ಶಾಲೆಗೆ ಬಂದ ಕೂಡಲೇ ಆತ ತನ್ನ ಬ್ಯಾಗ್‍ನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ಗುಂಡು 3 ನೇ ತರಗತಿಯ ವಿದ್ಯಾರ್ಥಿ ಆಸಿಫ್ ಎಂಬ ಬಾಲಕನಿಗೆ ತಗುಲಿದೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಇಬ್ಬರು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆದು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಗುಂಡು ಹಾರಿಸಿದ ಬಾಲಕ ಹಾಗೂ ಆತನ ಪೋಷಕರು ಶಾಲೆಯಿಂದ ಓಡಿ ಹೋಗಿದ್ದಾರೆ. ಇದರಿಂದ ಕೋಪಗೊಂಡ ಸಂತ್ರಸ್ತ ಬಾಲಕನ ಕುಟುಂಬದವರು ಶಾಲೆಯನ್ನು ಧ್ವಂಸಗೊಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಾಗೂ ತಲೆಮರೆಸಿಕೊಂಡಿರುವ ಆರೋಪಿ ಬಾಲಕ ಹಾಗೂ ಆತನ ಕುಟುಂಬದವರನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ “ಅದೇ ಶಾಲೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಹುಡುಗನ ಮೇಲೆ ವಿದ್ಯಾರ್ಥಿ ಗುಂಡು ಹಾರಿಸಿದ್ದಾನೆ. ಗುಂಡು ಅವನ ತೋಳಿಗೆ ತಗುಲಿತು. ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ
ಬಾಲಕ ಬ್ಯಾಗ್‍ನಲ್ಲಿ ಬಂದೂಕನ್ನು ಇರಿಸಿಕೊಂಡು ಅದನ್ನು ಲಾಲ್ಪಟ್ಟಿ ಪ್ರದೇಶದಲ್ಲಿರುವ ಖಾಸಗಿ ಶಾಲೆಗೆ ಹೇಗೆ ಸಾಗಿಸುವಲ್ಲಿ ಯಶಸ್ವಿಯಾದನು ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಅಲ್ಲದೇ “ವಿದ್ಯಾರ್ಥಿಗಳ ಚೀಲಗಳನ್ನು ನಿಯಮಿತವಾಗಿ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ಕೇಳುತ್ತಿದ್ದೇವೆ. ಈ ಘಟನೆಯು ಶಿಕ್ಷಕರು ಮತ್ತು ಪೋಷಕರಲ್ಲಿ ಹೆಚ್ಚಿನ ಆತಂಕವನ್ನುಂಟು ಮಾಡಿದೆ” ಎಂಬುದಾಗಿ ತಿಳಿಸಿದ್ದಾರೆ