ಹಣವಿದ್ದವರಿಗೆ ಶ್ರೀಮಂತರು ಎಂದು ಕರೆಯುತ್ತಾರೆ. ಆದರೆ ಶ್ರೀಮಂತಿಕೆ ಎನ್ನುವುದು ಹಣದಲ್ಲಿ ಮಾತ್ರವಲ್ಲ ಗುಣದಲ್ಲೂ ಇರಬೇಕಾಗುತ್ತದೆಯಲ್ಲವೆ? ಆದರೆ ಕೆಲವು ಶ್ರೀಮಂತರು ತಮ್ಮಲ್ಲಿ ಹಣವಿದೆ ಎಂಬ ದರ್ಪ ತೋರುತ್ತಾರೆ. ಅದಕ್ಕಾಗಿ ತಮ್ಮ ಮನೆಯ ಕೆಲಸದವರು, ಬಡವರನ್ನು ಕೀಳಾಗಿ ಕಾಣುತ್ತಾರೆ. ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಅತಿ ಶ್ರೀಮಂತರಾದ ಹಿಂದೂಜಾ ಕುಟುಂಬದ್ದೂ ಇದೇ ಕತೆ. ಹಿಂದೂಜಾ ಕುಟುಂಬ (Hindujas Family) ಬ್ರಿಟನ್‌ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಇಂತಹ ಶ್ರೀಮಂತ ಕುಟುಂಬದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಗೆ ಅವರ ನಾಯಿಗೆ ಖರ್ಚು ಮಾಡುವುದಕ್ಕಿಂತ ಕಡಿಮೆ ಸಂಬಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಂದೂಜಾ ಕುಟುಂಬದ ನಾಲ್ವರಾದ ಪ್ರಕಾಶ್ ಹಿಂದೂಜಾ, ಅವರ ಪತ್ನಿ ಕಮಲ್, ಮಗ ಅಜಯ್ ಹಾಗೂ ಸೊಸೆ ನಮ್ರತಾ ಅವರ ಮೇಲೆ ಆರೋಪ ಮಾಡಲಾಗಿದೆ.
ಹಿಂದೂಜಾ ಕುಟುಂಬ ತಮ್ಮ ಲೇಕ್ ಜಿನೀವಾ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬಳಿಗೆ ಕಡಿಮೆ ಸಂಬಳ ನೀಡುತ್ತಿದ್ದಾರೆ. ಆಕೆಯನ್ನು ವಾರದಲ್ಲಿ ಏಳು ದಿನಗಳ ಕಾಲ ಹಾಗೂ ಪ್ರತಿದಿನ 18 ಗಂಟೆಕಾಲ ಕೆಲಸ ಮಾಡಿದ್ದಕ್ಕೆ ಕೇವಲ ಏಳು ಸ್ವಿಸ್, ಅಂದರೆ ದಿನಕ್ಕೆ 650 ರೂ. ಸಂಬಳ ನೀಡುತ್ತಾರೆ. ಆದರೆ ಅವರು ಮನೆಯಲ್ಲಿ ಸಾಕಿದ ನಾಯಿಗೆ ಮಾತ್ರ ವಾರ್ಷಿಕವಾಗಿ 8,584 ಸ್ವಿಸ್ (ಸುಮಾರು 8 ಲಕ್ಷ ರೂ.) ಖರ್ಚು ಮಾಡುತ್ತಾರೆ. ಹಾಗಾಗಿ ಹಿಂದೂಜಾ ಕುಟುಂಬದವರು ತಮ್ಮ ಸೇವಕರಿಗಿಂತ ಸಾಕು ನಾಯಿಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ ಎಂದು ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯದ ಸರ್ಕಾರಿ ವಕೀಲ ಯವೆಸ್ ಬರ್ಟೋಸಾ ಹಿಂದೂಜಾ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಹಿಂದೂಜಾ ಕುಟುಂಬದವರು ಮನೆ ಕೆಲಸದ ಮಹಿಳೆಯ ಪಾಸ್‌ಪೋರ್ಟ್ ಕಿತ್ತುಕೊಂಡು ಅನುಮತಿಯಿಲ್ಲದೇ ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಿದೆ. ಕೆಲಸದವರಿಗೆ ರಜೆ ಕೂಡ ನೀಡುತ್ತಿರಲಿಲ್ಲ. ಅಲ್ಲದೇ ಕರೆನ್ಸಿಯಲ್ಲಿ ಸಂಬಳ ನೀಡುತ್ತಿದ್ದ ಕಾರಣ ಅವರಿಗೆ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಖರ್ಚು ಮಾಡಲು ಹಣವಿರುತ್ತಿರಲಿಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಹಿಂದೂಜಾ ಕುಟುಂಬ ನ್ಯಾಯಾಲಯದ ವೆಚ್ಚಕ್ಕಾಗಿ 1 ಮಿಲಿಯನ್ ಸ್ವಿಸ್ ಫ್ರಾಂಕ್ ಹಾಗೂ ಉದ್ಯೋಗಿಗಳ ನಿಧಿಗೆ 3.5 ಮಿಲಿಯನ್ ಫ್ರಾಂಕ್ ನೀಡಬೇಕೆಂದು ಅವರು ವಾದಿಸಿದ್ದಾರೆ. ಆದರೆ ಹಿಂದೂಜಾ ಕುಟುಂಬ ಈ ಆರೋಪವನ್ನು ತಳ್ಳಿಹಾಕಿದ್ದು, ತಾವು ಸಿಬ್ಬಂದಿಯನ್ನು ಘನತೆ, ಗೌರವದಿಂದ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಬೈಕ್ ಇಳಿದು ಓಡಿದರೂ ಮಹಿಳೆಯನ್ನು ಅಟ್ಟಾಡಿಸಿ ತಿವಿದ ಹಸು
ಮನೆ ಕೆಲಸದವರಿಗೆ ಸ್ವಾತಂತ್ರ್ಯ, ಊಟ, ವಸತಿ, ಉತ್ತಮ ಸಂಬಳವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ನೀಡಿದ್ದಾರೆ. ಆದರೆ ಸರ್ಕಾರಿ ವಕೀಲರು ಈ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ ಎಂದು ಅವರು ವಾದಿಸಿದ್ದಾರೆ.