Site icon Vistara News

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Lok sabha election-2024

ದೇಶಾದ್ಯಂತ ಏಳು ಹಂತದಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯ (Lok sabha election-2024) ಮೊದಲ ಹಂತದ ಮತದಾನ (voting) ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ. ವಿಶ್ವದ ಅತಿ ದೊಡ್ಡ ಚುನಾವಣೆಯಲ್ಲಿ ಸುಮಾರು 100 ಕೋಟಿ ಭಾರತೀಯರು (indians) ಮತ ಚಲಾಯಿಸಲಿದ್ದಾರೆ.

ಚುನಾವಣೆ ಪೂರ್ವದಲ್ಲೇ ಸಾಕಷ್ಟು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಈ ಬಾರಿಯೂ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಈ ಬಾರಿಯೂ ಬಿಜೆಪಿ ಗೆಲುವು ದಾಖಲಿಸಿದರೆ ಸತತ ಮೂರನೇ ಅವಧಿಗೆ ಅಧಿಕಾರ ಬಿಜೆಪಿ ಪಾಲಾದಂತಾಗುತ್ತದೆ.

ಏಪ್ರಿಲ್ 19ರಿಂದ ಜೂನ್ 1ರವರೆಗೆ ನಡೆಯಲಿರುವ ಏಳು ಹಂತಗಳಲ್ಲಿಮತದಾನದ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ 543 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿವೆ.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

1. ಆರ್ಥಿಕತೆಯ ಪ್ರಗತಿ

ಮಾರ್ಚ್ 31ರಂದು ಆರ್ಥಿಕ ವರ್ಷ ಕೊನೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇ. 8ರಷ್ಟು ಬೆಳವಣಿಗೆಯಾಗಿದೆ. ಇದು ಅತ್ಯಂತ ವೇಗವಾದ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯು ಮೊದಲಿಗಿಂತ ಐದು ಸ್ಥಾನಗಳನ್ನು ಜಿಗಿದು ವಿಶ್ವದಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಈ ಬಾರಿ ಚುನಾವಣೆಯಲ್ಲಿ ತಾವು ಗೆದ್ದರೆ ಅದನ್ನು ಮೂರನೇ ಸ್ಥಾನಕ್ಕೆ ಏರಿಸುವ ಭರವಸೆ ನೀಡಿದ್ದಾರೆ.

2. ಅಭಿವೃದ್ಧಿಯ ತೀವ್ರಗತಿ

ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ನಗರಗಳಾದ ನವದೆಹಲಿ ಮತ್ತು ಮುಂಬಯಿ ಸೇರಿದಂತೆ ದೇಶದಾದ್ಯಂತ ಇರುವ ರಸ್ತೆಗಳು ಮತ್ತು ಸೇತುವೆಗಳು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಗ್ರಾಮಾಂತರಕ್ಕಿಂತ ನಗರಗಳಲ್ಲೇ ಹೆಚ್ಚು ಕೇಂದ್ರಿತವಾಗಿವೆ ಎಂಬ ಆರೋಪವೂ ಇದೆ.


3. ಹಣದುಬ್ಬರ, ಬೆಲೆ ಏರಿಕೆ

2021-22 ರಲ್ಲಿ ಶೇ.5.5ರಷ್ಟು ಇದ್ದ ಹಣದುಬ್ಬರ 2022- 23ರಲ್ಲಿ ಶೇ. 6.7ಕ್ಕೆ ಏರಿದೆ. ಕೇವಲ ಫೆಬ್ರವರಿಯಲ್ಲಿ ಹಣದುಬ್ಬರ ಶೇ. 5.09 ರಷ್ಟು ಆಗಿತ್ತು. ಬೆಲೆ ಏರಿಕೆ ವಿಷಯ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

4. ಮೋದಿ ಕಲ್ಯಾಣ ನೀತಿಗಳು

ಕೋವಿಡ್ ಸಾಂಕ್ರಾಮಿಕದ ಬಳಿಕ ಸರ್ಕಾರವು ಭಾರತದ 1.42 ಶತಕೋಟಿ ಜನರಲ್ಲಿ 814 ಮಿಲಿಯನ್ ಜನರಿಗೆ ಉಚಿತ ಆಹಾರ ಪಡಿತರವನ್ನು ನೀಡುತ್ತಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ.60ರಷ್ಟು ಜನರಿಗೆ ಉಚಿತ ಸಿರಿಧಾನ್ಯಗಳನ್ನು ಸರ್ಕಾರ ಒದಗಿಸುತ್ತಿರುವುದು ದೇಶದ ಅಸಮ ಆರ್ಥಿಕ ಬೆಳವಣಿಗೆಯ ಸಂಕೇತ ಎನ್ನಲಾಗುತ್ತದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಭಾರತದ ಶ್ರೀಮಂತ ನಾಗರಿಕರು ಶೇ.40.1ರಷ್ಟು ಸಂಪತ್ತು ಹೊಂದಿದ್ದರು. ಇದು 1961ರ ಬಳಿಕ ಅತ್ಯಧಿಕವಾಗಿದೆ.

5. ಮಹಿಳೆಯರ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಮಹಿಳಾ ಮತದಾರರನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹಣ ಹಂಚಿಕೆ, ಪೈಪ್‌ಲೈನ್ ಮೂಲಕ ಮನೆಮನೆಗೆ ನೀರು, 24/7 ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳಂತಹ ಗೃಹೋಪಯೋಗಿ ಸೌಲಭ್ಯಗಳ ಮೂಲಕ ಅವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಇವು ದೇಶದ ಮಹಿಳೆಯರು ಮೋದಿ ಆಡಳಿತ ಕುರಿತು ಸಕಾರಾತ್ಮಕ ಅಭಿಪ್ರಾಯ ಹೊಂದಲು ಕಾರಣವಾಗಿದೆ.


6. ಧಾರ್ಮಿಕ ಪ್ರಭಾವ

ಬಿಜೆಪಿ ಸುಮಾರು 35 ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಗ ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಮೊಘಲ್ ದೊರೆ ಬಾಬರ್ ನಿಂದ ಕೆಡವಲ್ಪಟ್ಟ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದೆ.

ಅಲ್ಲದೇ ಪ್ರಧಾನಿಯವರು ದೇಶಾದ್ಯಂತ ಇರುವ ಹಿಂದೂ ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿಗೆ ಹೆಚ್ಚು ಜನ ಬೆಂಬಲವನ್ನು ನೀಡಬಲ್ಲದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೋದಿಯವರ ಸರ್ಕಾರವು ಮುಸ್ಲಿಂ ಶಾಲೆಗಳು ಅಥವಾ ಮದರಸಾಗಳಿಗೆ ಬೆಂಬಲವನ್ನು ಕೊನೆಗೊಳಿಸಿದೆ ಮತ್ತು ಕೆಲವು ಬಿಜೆಪಿ ರಾಜ್ಯಗಳು ಅವುಗಳಲ್ಲಿ ಹಲವನ್ನು ಮುಚ್ಚಿವೆ. ಆದರೆ ಮೋದಿ ಅವರು ಪೌರತ್ವ ಕಾನೂನನ್ನು ಜಾರಿಗೆ ತಂದು ಹೊರದೇಶಗಳಿಂದ ವಲಸೆ ಬಂದಿರುವ ಅನೇಕರಿಗೆ ಸಹಾಯ ಮಾಡಿದೆ.

7. ಭ್ರಷ್ಟಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ಒಂದು ದಶಕದಲ್ಲಿ ವಿರೋಧ ಪಕ್ಷದ ಸುಮಾರು 150 ರಾಜಕಾರಣಿಗಳನ್ನು ಕರೆಸಿ, ಪ್ರಶ್ನಿಸಿದೆ. ಹಲವಾರು ಅಧಿಕಾರಿಗಳು, ರಾಜಕಾರಣಿಗಳ ಆಸ್ತಿ ಮೇಲೆ ದಾಳಿ ನಡೆಸಿ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಹೀಗಾಗಿ ಈ ಅಂಶವೂ ಈ ಬಾರಿಯ ಚುನಾವಣೆ ಮೇಲೆ ಮಹತ್ವದ ಪ್ರಭಾವ ಬೀರಬಲ್ಲದು.

8. ನಿರುದ್ಯೋಗ

2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರಿಗೆ ಹತ್ತಾರು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದು, ಇದರಲ್ಲಿ ಅರ್ಧದಷ್ಟು ಪೂರೈಕೆ ಮಾಡಲೂ ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ನಿರುದ್ಯೋಗ ದರವು ಫೆಬ್ರವರಿಯಲ್ಲಿ ಶೇ. 8ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 2023ರ ಮಾರ್ಚ್ ನಿಂದ ನಿರುದ್ಯೋಗ ದರವು ಶೇ.5.4ಕ್ಕೆ ಏರಿದೆ. ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು 2013-14 ರಲ್ಲಿ ಇದು ಶೇ. 4.9ರಷ್ಟಿತ್ತು.

15- 29 ವರ್ಷದ ಸುಮಾರು ಶೇ. 16ರಷ್ಟು ನಗರ ಯುವಕರು 2022-23 ರಲ್ಲಿ ಕಳಪೆ ಕೌಶಲ್ಯ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿದೆ. ಈ ವಿಷಯ ಮೋದಿ ಆಡಳಿತಕ್ಕೆ ನಕಾರಾತ್ಮಕವಾಗಿದೆ. ಪ್ರತಿಪಕ್ಷಗಳ ಪ್ರಬಲ ಅಸ್ತ್ರವಾಗಿದೆ.


9. ರೈತರ ಪ್ರತಿಭಟನೆ

ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅದರ ಲಕ್ಷಣ ಕಾಣುತ್ತಿಲ್ಲ. ವಿಶೇಷವಾಗಿ ರೈತರು ಪ್ರತಿಭಟನೆ ಇದಕ್ಕೆ ಸಾಕ್ಷಿಯಾಗಿದೆ. ದೇಶದ ರೈತರ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಲು ಮೋದಿಗಿನ್ನೂ ಸಾಧ್ಯವಾಗಿಲ್ಲ.

10. ಜಾಗತಿಕ ಸ್ಥಾನಮಾನ

ಕಳೆದ ವರ್ಷ ಜಿ 20 ಶೃಂಗಸಭೆಯನ್ನು ಆಯೋಜಿಸಿರುವುದು, ರಷ್ಯಾದ ದಾಳಿಯ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಸಾಧನೆಯಾಗಿದೆ. ಇದರಿಂದ ದೇಶಕ್ಕೆ ಸಿಗುತ್ತಿರುವ ಆರ್ಥಿಕತೆ ಬೆಂಬಲದೊಂದಿಗೆ ಭಾರತದ ಏರುತ್ತಿರುವ ಜಾಗತಿಕ ಸ್ಥಾನಮಾನ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.

Exit mobile version