ನವದೆಹಲಿ : ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ನಲ್ಲಿರುವ ಬರ್ಗರ್ ಕಿಂಗ್ ಔಟ್ ಲೆಟ್‌ನೊಳಗೆ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದ್ದು, ಕೊಲೆ(Murder Case )ಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಅಮನ್ (26 ವರ್ಷ) ಗುಂಡಿಗೆ ಬಲಿಯಾದ ಯುವಕ. ಜೂನ್ 18ರಂದು ಜನಪ್ರಿಯ ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಅಮನ್ ಮಹಿಳೆಯೊಬ್ಬಳ ಜೊತೆ ಕುಳಿತಿದ್ದಾಗ ಆಕೆ ತನ್ನ ಪೋನ್‌ನಲ್ಲಿ ಪೋಟೊ ತೋರಿಸುತ್ತಿದ್ದಳು. ಆ ವೇಳೆ ರಾತ್ರಿ 9.41ಕ್ಕೆ ಅಮನ್ ಹಿಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಆತನ ಮೇಲೆ ಒಂದು ಬಾರಿ ಗುಂಡು ಹಾರಿಸಿದ್ದಾರೆ. ಗುಂಡೇಟಿನ ಶಬ್ದಕ್ಕೆ ಭಯ ಬಿದ್ದ ಜನರು ಅಲ್ಲಿಂದ ಓಡಿಹೋಗಿದ್ದಾರೆ. ಅಮನ್ ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿದ್ದಾರೆ. ಆಗ ದಾಳಿಕೋರರು ಅಮನ್‌ನನ್ನು ಹಿಂಬಾಲಿಸಿ ಆತನ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಒಂದು ನಿಮಿಷದಲ್ಲಿ ಇಡೀ ಬರ್ಗರ್ ಕಿಂಗ್ ಔಟ್ ಲೆಟ್ ಜನರ ಸದ್ಬಿದಿಲ್ಲದೇ ಬಿಕೋ ಆಗಿಬಿಟ್ಟಿತು.
ಆದರೆ ಅಮನ್ ಜೊತೆ ಕುಳಿತಿದ್ದ ಮಹಿಳೆ ಮಾತ್ರ ಗುಂಡಿನ ದಾಳಿಗೆ ಸ್ವಲ್ಪವೂ ವಿಚಲಿತಳಾಗದೆ ಫುಡ್ ಜಾಯಿಂಟ್ ನಿಂದ ಹೊರಗೆ ಹೋಗಿದ್ದಾಳೆ! ಬಿಲ್ಲಿಂಗ್ ಕೌಂಟರ್ ಹಿಂದೆ ಅಮನ್ ಶವ ಪತ್ತೆಯಾಗಿದೆ. ಕೊಲೆಗಾರರು 25-30 ವರ್ಷ ವಯಸ್ಸಿನವರಾಗಿರಬಹುದು ಎಂದು ಬರ್ಗರ್ ಕಿಂಗ್ ಸಿಬ್ಬಂದಿ ತಿಳಿಸಿದ್ದಾರೆ.
CCTV Shows Chilling Murder Inside Burger King In Delhi, Man Shot Nearly 40 Times https://t.co/hy7I8IcN9h pic.twitter.com/WYJjM03bnZ
— NDTV (@ndtv) June 20, 2024
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಅಮನ್ ಮೇಲೆ ಮೂರು ವಿಭಿನ್ನ ಪಿಸ್ತೂಲ್ ಗಳಿಂದ ಒಟ್ಟು 38 ಗುಂಡುಗಳನ್ನು ಹಾರಿಸಲಾಗಿದೆ. ಈ ಇಬ್ಬರು ಶೂಟರ್ ಗಳು ಎರಡಕ್ಕಿಂತ ಹೆಚ್ಚು ಪಿಸ್ತೂಲ್ ಗಳನ್ನು ಬಳಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
2020ರಲ್ಲಿ ಹರ್ಯಾಣದಲ್ಲಿ ನಡೆದ ಕೊಲೆಗೆ ಪ್ರತಿಕಾರ ತೀರಿಸಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕ್ರಿಮಿನಲ್‌ಗಳ ಗ್ಯಾಂಗ್ ಪೈಪೋಟಿಯಿಂದ ಇಂತಹ ಘೋರ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಅಮನ್ ಜೊತೆ ಕುಳಿತಿದ್ದ ಮಹಿಳೆಯ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಆಕೆ ಅಮನ್ ನ ಪೋನ್ ಮತ್ತು ವ್ಯಾಲೆಟ್ ನೊಂದಿಗೆ ಕಣ್ಮರೆಯಾಗಿದ್ದಾಳೆ. ಆಕೆ ಈಗಾಗಲೇ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು, ಆಕೆಯನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೇ ಆಕೆಯೇ ಅಮನ್ ಗೆ ಬರ್ಗರ್ ಕಿಂಗ್ ಬರಲು ಆಮಿಷ ಒಡ್ಡಿರಬಹುದು ಎಂಬುದಾಗಿ ತಿಳಿದುಬಂದಿದೆ.
ದೆಹಲಿ ಮತ್ತು ಹರ್ಯಾಣದ ಕುಖ್ಯಾತ ಸುಲಿಗೆಗಾರ ಹಿಮಾಂಶು ಭಾವು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಈ ಕೊಲೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾನೆ. ತನ್ನ ಸಹೋದರ ಶಕ್ತಿ ದಾದಾ ಹತ್ಯೆಯಲ್ಲಿ ಅಮನ್ ಭಾಗಿಯಾಗಿದ್ದು, ಈ ಕೊಲೆ ಮೂಲಕ ಸೇಡು ತೀರಿಸಿಕೊಳ್ಳಲಾಗಿದೆ. ಆತನ ಜೊತೆ ಇರುವವರ ಸರದಿ ಶೀಘ್ರದಲ್ಲಿಯೇ ಬರಲಿದೆ ಎಂದು ಆತ ಪೋಸ್ಟ್ ಮಾಡಿ ಎಚ್ಚರಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!
ಈಗಾಗಲೇ ಜೈಲಿನಲ್ಲಿರುವ ದರೋಡೆಕೋರ ನೀರಜ್ ಬವನಾ ಸಹವರ್ತಿ ಹಿಮಾಂಶು ಭಾವು 2022ರಲ್ಲಿ ದೇಶದಿಂದ ಪರಾರಿಯಾಗಿದ್ದಾನೆ. ಇದೀಗ ಆತ ಪೋರ್ಚುಗಲ್‌ನಲ್ಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.