Site icon Vistara News

Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

Nag Panchami

ಬೆಂಗಳೂರು: ಶ್ರಾವಣ ಮಾಸ ಶುರುವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಶ್ರಾವಣ ಮಾಸದ ಪ್ರಾರಂಭವಾದ ಐದನೇ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ನಾಗರಪಂಚಮಿ(Nagara Panchami )ಯಂದು ನಾಗದೇವರನ್ನು(ಹಾವು)ಗಳನ್ನು ಪೂಜಿಸಲಾಗುತ್ತದೆ. ಅಂದು ನಾಗರ ದೇವರ ವಿಗ್ರಹಗಳಿಗೆ ಹಾಲೆರೆದು ಹೂಗಳಿಂದ ಅಲಂಕಾರ ಮಾಡಿ ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ಈ ಹಬ್ಬವನ್ನು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದ ಅನುಯಾಯಿಗಳು ಆಚರಿಸುತ್ತಾರೆ.

ಅಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಅದರಲ್ಲಿ ಮೊದಲ ಹಬ್ಬವೆಂದರೆ ನಾಗಪಂಚಮಿ. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ಕೆಲವರು ನಾಗನಕಲ್ಲನ್ನು ಮುಟ್ಟಿ ಪೂಜಿಸಿದರೆ ಇನ್ನೊಂದು ಕಡೆ ಪುರೋಹಿತರ ಮೂಲಕ ಪೂಜೆ ಮಾಡಿಸುತ್ತಾರೆ. ನಾಗನಕಲ್ಲು ಹಾಗೂ ಹುತ್ತಕ್ಕೆ ಕೆಲವರು ತನಿ ಎರೆಯುವುದರ (ಹಾಲು, ಎಳನೀರು)ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ನಾಗಪಂಚಮಿ ಬಹುದೊಡ್ಡ ಹಬ್ಬವಾಗಿದೆ. ಈ ಹಬ್ಬಕ್ಕೆ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ಬರುವ ವಾಡಿಕೆ ಇನ್ನೂ ರೂಢಿಯಲ್ಲಿದೆ.

ನಾಗಪಂಚಮಿಗೆ ಕುರಿತಂತೆ ಸಾಕಷ್ಟು ಕತೆಗಳಿವೆ. ಜೋರಾಗಿ ಮಳೆ ಬರುವ ಕಾರಣ ಬೇಳೆಗಳಿಗೆ ಕೀಟ ಬಾಧೆ ಸಮಸ್ಯೆ ಕಾಡುತ್ತಿರುತ್ತದೆ. ಹಾಗೇ ರೈತ ಬೆಳೆದ ಫಸಲನ್ನು ಇಲಿಗಳು ಕೂಡ ಹಾಳು ಮಾಡುತ್ತವೆ. ಇವುಗಳನ್ನು ಹಾವುಗಳು ತಿಂದು ರೈತನ ಫಸಲನ್ನು ಕಾಪಾಡಿ ಅವನ ಬದುಕನ್ನು ಹಸನು ಮಾಡುತ್ತದೆ. ಹಾವಿನ ಈ ಸಹಾಯಕ್ಕೆ ಧನ್ಯವಾದ ಹೇಳಲು ರೈತನು ನಾಗನಕಲ್ಲಿಗೆ ಪೂಜೆ ಮಾಡುತ್ತಾನಂತೆ. ಇದನ್ನೇ ನಾಗಪಂಚಮಿ ಎಂದು ಕರೆಯಲಾಗುತ್ತದೆ ಎಂಬ ಕತೆಯಿದೆ. ಪುರಾಣದ ಪುಟಗಳನ್ನು ತಿರುಗಿಸಿದರೆ ನಾಗಪಂಚಮಿಗೆ ಸಂಬಂಧಿಸಿದಂತೆ ಸಾಕಷ್ಟು ಕತೆಗಳನ್ನು ನೋಡಬಹುದು.

ನಾಗರ ಪಂಚಮಿಯ ಶುಭ ಮಹೂರ್ತ:

ಈ ವರ್ಷ ನಾಗರ ಪಂಚಮಿ ಆಗಸ್ಟ್ 9ರಂದು ಬಂದಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಆಗಸ್ಟ್ 9 ರಂದು ಬೆಳಿಗ್ಗೆ 12:36 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 10 ರಂದು ಬೆಳಿಗ್ಗೆ 03:14 ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ನಾಗ ದೇವರ ಪೂಜೆ ಮಾಡಿದರೆ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ.

ನಾಗರ ಪಂಚಮಿಯ ಮಹತ್ವ ಏನು?
ಈ ಹಬ್ಬವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದಿನ ನಾಗಾದೇವರನ್ನು ಪೂಜಿಸುವವರನ್ನು ಮತ್ತು ಅವರ ಕುಟುಂಬಗಳನ್ನು ನಾಗದೇವರು ದುಷ್ಟರಿಂದ ರಕ್ಷಿಸುತ್ತದೆ. ಮತ್ತು ಆ ಕುಟುಂಬಕ್ಕೆ ಸಮೃದ್ಧಿಯನ್ನು ತರುತ್ತದೆ ಮತ್ತು ನಾಗನ ಪೂಜೆ ಮಾಡಿದ ಕುಟುಂಬದವರು ಒಗ್ಗಟ್ಟಿನಿಂದ ಇರುತ್ತಾರೆ ಎಂದು ನಂಬಲಾಗಿದೆ. ಈ ದಿನ ನಾಗದೇವರ ವಿಗ್ರಹಗಳಿಗೆ ಪೂಜೆ ಮಾಡುವುದರಿಂದ ನಾಗ ದೇವತೆಗಳನ್ನು ಸಮಾಧಾನಪಡಿಸಬಹುದು ಮತ್ತು ಅವರ ಶಾಪದಿಂದ ಮುಕ್ತರಾಗಿಸಿ ಆಶೀರ್ವಾದವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ. ಅಲ್ಲದೇ ಕಾಳಸರ್ಪ ದೋಷಗಳು ಹಾಗೂ ಇತರ ಸರ್ಪ ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗಿದೆ.

ನಾಗರ ಪಂಚಮಿಯ ಆಚರಣೆ
ಸಾಂಪ್ರದಾಯಿಕವಾಗಿ, ಭಕ್ತರು ನಾಗನನ್ನು ಪೂಜಿಸುವ ಆಲಯಗಳಿಗೆ ಹೋಗಿ ಅಲ್ಲಿ ನಾಗದೇವರ ವಿಗ್ರಹಗಳನ್ನು ಹಾಲು ಮತ್ತು ಎಳನೀರಿನಿಂದ ಅಭಿಷೇಕ ಮಾಡಿ ಅರಿಶಿನ, ಅಕ್ಕಿ ಮತ್ತು ಹೂವುಗಳನ್ನು ವಿಗ್ರಹಕ್ಕೆ ಅರ್ಪಿಸಿ. ನಾಗದೇವರ ಆಶೀರ್ವಾದ ಪಡೆಯಲು ಮಹಾನಾಗ ದೇವರು ಮತ್ತು ಮಹಾವಿಷ್ಣು ಮಂತ್ರಗಳನ್ನು ಪಠಿಸಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಣೆಗಳನ್ನು ಮಾಡುತ್ತಾರೆ. ಕೆಲವೊಂದು ಕಡೆ ಜೀವಂತ ಹಾವುಗಳಿಗೆ ಹಾಲನ್ನು ಅರ್ಪಿಸುವ ವಾಡಿಕೆ ಇದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಬೆಳ್ಳಿ, ಮರ ಅಥವಾ ಹಸುವಿನ ಸಗಣಿಯಂತಹ ವಸ್ತುಗಳಿಂದ ನಾಗನ ವಿಗ್ರಹವನ್ನು ತಯಾರಿಸಿ ನಂತರ ಈ ವಿಗ್ರಹವನ್ನು ಅರಿಶಿನ, ಅಕ್ಕಿ, ಹಾಲು ಮತ್ತು ಹೂವುಗಳಿಂದ ಪೂಜಿಸಲಾಗುತ್ತದೆ. ಇದರಿಂದ ನಕಾರಾತ್ಮಕ ದೋಷಗಳು ಕಡಿಮೆಯಾಗಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ.

ಅಲ್ಲದೇ ಕೆಲವರು ನಾಗರಪಂಚಮಿಯಂದು ನಾಗದೇವರ ಆಶೀರ್ವಾದ ಪಡೆಯಲು ನಾಗನಿಗೆ ಪ್ರಿಯವಾದ ಗಿಡಗಳನ್ನು ನೆಡುತ್ತಾರೆ. ಆದರೆ ಕೆಲವೊಂದು ಕಡೆ ಹಾವಿನ ವಾಸಸ್ಥಾನವನ್ನು ರಕ್ಷಿಸಲು ಮಣ್ಣನ್ನು ಅಗೆಯಬಾರದೆಂದು ಹೇಳುತ್ತಾರೆ. ಅಲ್ಲದೇ ಈ ದಿನ ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸಬಾರದಂತೆ. ಹಾಗೇ ಈ ದಿನ ವಾಸುಕಿಯ ಆರಾಧ್ಯ ದೇವರಾದ ಶಿವನಿಗೆ ಕೆಂಪು ಗುಲಾಬಿಯನ್ನು ಅರ್ಪಿಸಿದರೆ ಬಹಳ ಶುಭವಂತೆ. ಹಾಗೇ ಬಹಳ ಹಿಂದಿನ ಕಾಲದಲ್ಲಿ ಈ ಶುಭ ದಿನ ಅಕ್ಕಿಯನ್ನು ದಾನ ಮಾಡುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಅದೇನೆಯಾದರೂ ನಿಮ್ಮ ಶಾಸ್ತ್ರ, ಸಂಪ್ರದಾಯದಂತೆ ನಿಮ್ಮ ಹಿರಿಯರು ಬಹಳ ಹಿಂದಿನಿಂದ ಮಾಡಿಕೊಂಡು ಬಂದ ವಾಡಿಕೆಯಂತೆ ನೀವು ನಾಗದೇವರ ಪೂಜೆ ಮಾಡಿ, ನಾಗದೇವರ ಕೃಪೆಗೆ ಪಾತ್ರರಾಗಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ವಿದ್ಯೆ-ಬುದ್ಧಿ, ಧನ-ಧಾನ್ಯ, ಆರೋಗ್ಯ-ಆಯಸ್ಸು ನೀಡಿ ಹರಸುವಂತೆ ನಾಗದೇವರಲ್ಲಿ ಪ್ರಾರ್ಥಿಸಿಕೊಳ್ಳಿ.

Exit mobile version