ನವದೆಹಲಿ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ ಕೂಡ ಹೆಚ್ಚಾಗುತ್ತಿದೆ. ಜನರು ಅನೇಕ ರೀತಿಯಲ್ಲಿ ನಾನಾ ರೀತಿಯಲ್ಲಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಅಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೆಡ್ಡಾದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಎಐ 992ರಲ್ಲಿ ಗುದದ್ವಾರದಲ್ಲಿ ಚಿನ್ನವಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನೊಬ್ಬನನ್ನು (Passenger Arrest) ಅಧಿಕಾರಿಗಳು ಬಂಧಿಸಿದ್ದಾರೆ.
ಏರ್ ಹೋಸ್ಟೆಸ್ ಪ್ರಯಾಣಿಕರಿಗೆ ನೀರು, ಚಹಾ ಮತ್ತು ಆಹಾರ ಸೇರಿದಂತೆ ಉಪಾಹಾರವನ್ನು ನೀಡುತ್ತಿದ್ದಾಗ ಆರೋಪಿ ಐದೂವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ಅವೆಲ್ಲವನ್ನು ನಿರಾಕರಿಸಿದ್ದಾನೆ. ಆತ ಆಹಾರವನ್ನು ನಿರಂತರವಾಗಿ ನಿರಾಕರಿಸಿದ್ದರಿಂದ ಅನುಮಾನಗೊಂಡ ಏರ್ ಹೋಸ್ಟೆಸ್ ಕ್ಯಾಪ್ಟನ್‍ಗೆ ಮಾಹಿತಿ ನೀಡಿದಳು. ಅವರು ಏರ್ ಟ್ರಾಫಿಕ್ ಕಂಟ್ರೋಲ್ ಮೂಲಕ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ವಿಮಾನದಿಂದ ಇಳಿದ ನಂತರ ಆರೋಪಿಯ ಮೇಲೆ ಕಣ್ಗಾವಲು ಇಡಲಾಗಿತ್ತು.
ಕಸ್ಟಮ್ಸ್ ಕ್ಲಿಯರೆನ್ಸ್ ಮೂಲಕ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ ಅಧಿಕಾರಿಗಳು ಅವನನ್ನು ತಡೆದರು. ನಂತರ ಆತನನ್ನು ವಿಚಾರಿಸಿದಾಗ ಪ್ರಯಾಣಿಕನು ತನ್ನ ಗುದದ್ವಾರದಲ್ಲಿ ಚಿನ್ನದ ಪೇಸ್ಟ್ ಅನ್ನು ಅಡಗಿಸಿಟ್ಟಿದ್ದಾನೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ, ಅದನ್ನು ಅವನು ನಾಲ್ಕು ಅಂಡಾಕಾರದ ಕ್ಯಾಫ್ಸುಲ್‍ಗಳ ರೂಪದಲ್ಲಿ ಹೊರಗೆ ತೆಗೆದಿದ್ದಾನೆ ಎನ್ನಲಾಗಿದೆ. ಆ ಮೂಲಕ ಸುಮಾರು 69,16,169 ರೂ ಮೌಲ್ಯದ ಸುಮಾರು 1096.76 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಜೆಡ್ಡಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದಾಗಿ ಪ್ರಯಾಣಿಕ ಒಪ್ಪಿಕೊಂಡಿದ್ದು, ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ತನ್ನ ಫಾಲೋವರ್ಸ್‌ಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಖ್ಯಾತ ಮಾಡೆಲ್‌ಗೆ ಜೈಲು ಶಿಕ್ಷೆ!
ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಏರ್ ಹೋಸ್ಟೆಸ್ ಆಹಾರ ಅಥವಾ ಪಾನೀಯಗಳನ್ನು ನೀಡುತ್ತಾರೆ. ಒಂದು ವೇಳೆ ಪ್ರಯಾಣಿಕರು ಪದೇ ಪದೇ ಅದನ್ನು ನಿರಾಕರಿಸಿದರೆ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಯಾಕೆಂದರೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೆಲವು ವೇಳೆ ಹೊರದೇಶಗಳಿಗೆ ಕಳ್ಳಸಾಗಾಣಿಕೆಗಳು ಮಾಡುತ್ತಿರುತ್ತಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ವಿಮಾನಯಾನ ಸಂಸ್ಥೆಗಳು ಮತ್ತು ಅಧಿಕಾರಿಗಳು ಪ್ರಯಾಣಿಕರ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ.