Site icon Vistara News

Raksha Bandhan 2024: ಇಂದು ರಕ್ಷಾ ಬಂಧನ; ಈ ಹಬ್ಬದ ವಿಶೇಷವೇನು?

Raksha Bandhan 2024


ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ನೂಲು ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನ ರಕ್ಷಾಬಂಧನವನ್ನು ಆಚರಿಸುತ್ತಾರೆ. ಈ ರಕ್ಷಾ ಬಂಧವನ್ನು ‘ರಾಖಿ ಹಬ್ಬ’, ‘ಅಣ್ಣ ತಂಗಿ’ ಹಬ್ಬ ಎಂದೂ ಕರೆಯುತ್ತಾರೆ. ರಕ್ಷಾಬಂಧನವು ಭಾರತದಲ್ಲಿ ಒಂದು ವಿಶೇಷ ಹಬ್ಬವಾಗಿದ್ದು, ಇದು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಗಟ್ಟಿಗೊಳಿಸುವಂತಹ ಹಬ್ಬವಾಗಿದೆ. ಈ ಬಾರಿ ರಕ್ಷಾಬಂಧನವನ್ನು (Raksha Bandhan 2024) ಸೋಮವಾರ, ಆಗಸ್ಟ್ 19ರಂದು ಆಚರಿಸಲಾಗುತ್ತದೆ. ಹಾಗಾಗಿ ಈ ಹಬ್ಬದ ಮುಹೂರ್ತ, ಮಹತ್ವ, ಹಿನ್ನೆಲೆ ಹಾಗೂ ಆಚರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ರಾಖಿ ಕಟ್ಟಲು ಶುಭ ಮುಹೂರ್ತ ಯಾವುದು?

ಸಮಯ ಬಹಳ ಮುಖ್ಯವಾಗುತ್ತದೆ. ಈ ಬಾರಿ ರಾಖಿ ಮುಹೂರ್ತವು ಬೆಳಗ್ಗೆ 5.50ಕ್ಕೆ ಪ್ರಾರಂಭವಾಗಿ ಸಂಜೆ 6:58ವರೆಗೆ ಇರುತ್ತದೆ. ದೇವರ ಆಶೀರ್ವಾದ ಪಡೆಯಲು ಮತ್ತು ನಿಮ್ಮ ಇಷ್ಟಾರ್ಥಗಳು ಈಡೇರಲು ಈ ಸಮಯದಲ್ಲಿ ರಾಖಿ ಕಟ್ಟುವಂತೆ ಪಂಡಿತರು ಸಲಹೆ ನೀಡಿದ್ದಾರೆ.

ರಾಖಿ ಹಬ್ಬದ ಹಿನ್ನೆಲೆ ಏನು?

ರಕ್ಷಾ ಬಂಧನವನ್ನು ಪುರಾತನ ಕಾಲದಿಂದಲೂ ಆಚರಿಸುತ್ತ ಬರಲಾಗಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಬ್ಬವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಅದರೊಂದಿಗೆ ಅನೇಕ ದಂತಕಥೆಗಳನ್ನು ಹೊಂದಿದೆ.

ರಕ್ಷಾ ಬಂಧನಕ್ಕೆ ಸಂಬಂಧಿಸಿದ ಒಂದು ಜನಪ್ರಿಯ ಕಥೆ ಮಹಾಭಾರತದ ಕೃಷ್ಣ-ದ್ರೌಪದಿಯಿಂದ ಬಂದಿದೆ ಎನ್ನಲಾಗಿದೆ. ಶ್ರೀಕೃಷ್ಣನು ಕಬ್ಬಿನ ತುಂಡನ್ನು ಕತ್ತರಿಸುವಾಗ ಅವನ ಬೆರಳಿಗೆ ಗಾಯವಾಯಿತು. ಆಗ ಪಾಂಡವರ ಪತ್ನಿ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಆತನನ್ನು ರಕ್ಷಿಸಲು ಬೆರಳಿಗೆ ಸುತ್ತಿದಳು. ಆಗ ಕೃಷ್ಣನು ಅವಳಲ್ಲಿ ಸಹೋದರ ಪ್ರೇಮವನ್ನು ಕಂಡು ಅಗತ್ಯದ ಸಮಯದಲ್ಲಿ ಅವಳನ್ನು ಕಾಪಾಡುವುದಾಗಿ ಪ್ರತಿಜ್ಞೆ ಮಾಡಿದನು. ಅದರಂತೆ ರಕ್ಷಾ ಬಂಧನವನ್ನು ಅಣ್ಣ-ತಂಗಿ ಹಬ್ಬವೆಂದು ರಾಖಿ ಕಟ್ಟುವ ಮೂಲಕ ಆಚರಿಸಲಾಗುತ್ತದೆ.

ಹಾಗೇ ಇನ್ನೊಂದು ಇತಿಹಾಸದ ಕಥೆಯಲ್ಲಿ ಚಿತ್ತೋರಿನ ರಾಣಿ ಕರ್ಣಾವತಿ ಆಕ್ರಮಣಕಾರರ ವಿರುದ್ಧ ಸಹಾಯವನ್ನು ಕೋರಿ ಚಕ್ರವರ್ತಿ ಹುಮಾಯೂನ್‌ಗೆ ರಾಖಿಯನ್ನು ಕಳುಹಿಸಿದಳು. ಆಗ ಹುಮಾಯೂನ್ ತಕ್ಷಣವೇ ಅವಳ ಸಹಾಯಕ್ಕೆ ಬಂದನು ಎನ್ನಲಾಗಿದೆ. ರಾಖಿ ಮೂಲಕ ಅವರ ನಡುವೆ ಸಹೋದರ ಸಹೋದರಿಯ ಸಂಬಂಧ ಬೆಳೆಯಿತು ಎನ್ನಲಾಗಿದೆ.

ರಾಖಿ ಹಬ್ಬದ ಆಚರಣೆ

ರಕ್ಷಾ ಬಂಧನ ಸಹೋದರ-ಸಹೋದರಿಯರ ಪ್ರೀತಿಯ ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರ ಒಳ್ಳೆಯದಾಗಲೆಂದು ಹಾರೈಸುತ್ತ ಅವರಿಗೆ ಆರತಿ ಬೆಳಗಿ ಕುಂಕುಮ ಹಚ್ಚಿ ಸಿಹಿ ತಿನ್ನಿಸಿ ಅವರ ಕೈಯ ಮಣಿಕಟ್ಟಿನ ಮೇಲೆ ತಮ್ಮ ಪ್ರೀತಿ ಮತ್ತು ಸ್ನೇಹದ ಸಂಕೇತವಾದ ರಾಖಿಯನ್ನು ಕಟ್ಟಿ ದೀರ್ಘಾಯುಷ್ಯವನ್ನು ಹಾರೈಸಿ ಆಶೀರ್ವಾದ ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಅಲ್ಲದೇ ಸಹೋದರರು ತಮ್ಮ ಸಹೋದರಿಯರಿಗೆ ಅವರ ಪ್ರೀತಿಯ ಸಂಕೇತವಾಗಿ ಅವರಿಗಿಷ್ಟವಾದ ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಕೊನೆಗೆ ಕುಟುಂಬಗಳೊಂದಿಗೆ ಹಬ್ಬದ ಊಟವನ್ನು ಸವಿಯುತ್ತಾರೆ. ಆದರೆ ಕೆಲವೊಮ್ಮೆ ದೂರ ದೂರ ಇರುವ ಸಹೋದರ ಸಹೋದರಿಯರು ಭೇಟಿ ಆಗಲು ಸಾಧ್ಯವಾಗದಿದ್ದಾಗ ಅವರಿಗೆ ರಾಖಿಯನ್ನು ಕಳುಹಿಸಿಕೊಡುತ್ತಾರೆ.

ರಾಖಿ ಹಬ್ಬದ ಮಹತ್ವ ಏನು?

ರಕ್ಷಾಬಂಧನವು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಇದು ಒಡಹುಟ್ಟಿದವರ ನಡುವೆ ಪ್ರೀತಿ ಮತ್ತು ಬೆಂಬಲವನ್ನು ಹೆಚ್ಚಿಸುತ್ತದೆ. ಸಹೋದರಿಯರು ತಮ್ಮ ಸಹೋದರರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸಿದರೆ ಸಹೋದರರು ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ರಕ್ಷಾಬಂಧನ ಯುಗಯುಗಾಂತರಗಳಿಂದ ಬಂದಿರುವ ಒಂದು ಸಾಂಪ್ರದಾಯಿಕ ಹಬ್ಬವಾಗಿದೆ. ಇದು ಕುಟುಂಬದ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಮೂಡಿಸುತ್ತದೆ.

ಇದನ್ನೂ ಓದಿ: ಅಪಹರಣಕಾರನಿಂದ ಪುಟ್ಟ ಮಗುವನ್ನು ರಕ್ಷಿಸಿದ ಸಾಕು ನಾಯಿ! ನಾಯಿಯ ಸಾಹಸದ ವಿಡಿಯೊ ನೋಡಿ

ಒಟ್ಟಾರೆ ಈ ವರ್ಷದಲ್ಲಿ ಬರುವ ಈ ರಕ್ಷಾಬಂಧನವನ್ನು ನಿಮ್ಮ ಸಹೋದರ ಸಹೋದರಿಯರ ಜೊತೆ ವಿಜೃಂಭಣೆಯಿಂದ ಆಚರಿಸಿ ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿ. ನಿಮ್ಮ ಸಹೋದರ-ಸಹೋದರಿ ಪ್ರೇಮ ದೀರ್ಘಕಾಲದವರೆಗೆ ಒಳ್ಳೆ ರೀತಿಯಲ್ಲಿ ಇರಲೆಂದು ದೇವರಲ್ಲಿ ಪ್ರಾರ್ಥಿಸಿ.

Exit mobile version