ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಸಾಮಾನ್ಯವಾಗಿ ಈ ಪ್ರಕರಣದಲ್ಲಿ ಯುವತಿಯರು ಅಥವಾ ಬಾಲಕಿಯರು ಬಲಿಪಶುಗಳಾಗಿರುತ್ತಿದ್ದರು. ಇದೀಗ ಸಿಕ್ಕಿಂನಲ್ಲಿ 80 ವರ್ಷದ ಅಜ್ಜಿಯ ಮೇಲೆ 24 ವರ್ಷದ ಮೊಮ್ಮಗ ಅತ್ಯಾಚಾರ (Sexual Harassment) ಎಸಗಿದ ಪ್ರಕರಣದಲ್ಲಿ ಈತನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಸಂತ್ರಸ್ತ ಅಜ್ಜಿ ತನ್ನ ಮಗಳು, ಅಳಿಯ, ಮತ್ತು ಮೊಮ್ಮಗನೊಂದಿಗೆ ವಾಸವಾಗಿದ್ದಳು. ಸಂತ್ರಸ್ತೆಯ ಮಗಳು ಪಶ್ಚಿಮ ಬಂಗಾಳ ಪ್ರವಾಸದಿಂದ ಹಿಂದಿರುಗಿದಾಗ ತಾಯಿ ಕಾಣೆಯಾಗಿರುವುದನ್ನು ನೋಡಿ ಆಕೆಯನ್ನು ಹುಡುಕಿದಾಗ ವೃದ್ಧ ತಾಯಿ ನೆರೆಹೊರೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದಳು. ಅಲ್ಲಿ ಅಜ್ಜಿ ಮಗಳ ಬಳಿ ಹಲ್ಲೆಯನ್ನು ಬಹಿರಂಗಪಡಿಸಿದಳು. ಮತ್ತು ಮೊಮ್ಮಗ ತನ್ನ ಮೇಲೆ ಅನೇಕ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ವಿಚಾರ ಬಹಿರಂಗಪಡಿಸಿದರೆ ಮತ್ತಷ್ಟು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಳು. ಅಲ್ಲದೇ ತನ್ನ ಸ್ವಂತ ಮೊಮ್ಮಗನ ಬಗ್ಗೆ ಪೊಲೀಸರಿಗೆ ದೂರು ನೀಡಲು ಆಕೆ ಹಿಂಜರಿದಿದ್ದಳು. ಆದರೆ ಆಕೆಯ ಮಗಳು ಮಾತ್ರ ತನ್ನ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ದೂರಿನಲ್ಲಿ ಅಜ್ಜಿ ಮೊಮ್ಮಗನಿಂದ ಪದೇ ಪದೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದು, ಆತ ತನ್ನ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ, ಬೆದರಿಕೆ ಹಾಕುತ್ತಿದ್ದ ಎಂಬುದನ್ನು ವಿವರಿಸಿದ್ದಳು. ಆದರೆ ಆಕೆಯ ಮೇಲೆ ಯಾವುದೇ ದೈಹಿಕ ಗಾಯ ಆಗಿರಲಿಲ್ಲ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿತ್ತು.
Sikkim High Court Upholds Conviction Of 24-Yr-Old For Committing Rape On His Grandmotherhttps://t.co/e59tKl51uZ
— Live Law (@LiveLawIndia) July 4, 2024
ಇದನ್ನೂ ಓದಿ:ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್ ಕಸಿದು ಓಡುತ್ತಾರೆ! ಪೋಲಿಸ್ರು ಏನ್ ಮಾಡ್ತಿದ್ದಾರೋ!
ಹಾಗಾಗಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎಫ್) (ಸಂಬಂಧಿಕರು, ಪೋಷಕರ ಮೇಲೆ ಅತ್ಯಾಚಾರ ಇತ್ಯಾದಿ), 376 (2) (ಎನ್) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿ ಮೊಮ್ಮಗನಿಗೆ ಜೀವಾವಧಿ ಶಿಕ್ಷೆ ಮತ್ತು ಪ್ರತಿ ಅತ್ಯಾಚಾರ ಅಪರಾಧಕ್ಕೆ 10,000 ರೂ.ಗಳ ದಂಡ ವಿಧಿಸಿತ್ತು, ಜೊತೆಗೆ ಕ್ರಿಮಿನಲ್ ಬೆದರಿಕೆಗಾಗಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 1,000 ರೂ. ಶಿಕ್ಷೆಗಳು ಏಕಕಾಲದಲ್ಲಿ ನಡೆಯಬೇಕೆಂದು ತೀರ್ಪು ನೀಡಿದೆ. ಅಪರಾಧಿ ಮೊಮ್ಮಗ ಈ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರೂ ಹೈಕೋರ್ಟ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಮೇಲ್ಮನವಿಯನ್ನು ವಜಾಗೊಳಿಸಿದೆ.