- ಪವಿತ್ರಾ ಶೆಟ್ಟಿ
ಶ್ರಾವಣ ಮಾಸ ಆಗಸ್ಟ್ 5ರಿಂದ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸ (Shravan 2024)ದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ. ಆ ವರ್ಷ ಶ್ರಾವಣ ಶನಿವಾರ ಆಗಸ್ಟ್ 10, 17, 24 ಹಾಗೂ 31ರಂದು ಬಂದಿದೆ. ಹಾಗಾಗಿ ಈ ಶ್ರಾವಣ ಶನಿವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.
ಲಕ್ಷ್ಮಿ-ವೆಂಕಟೇಶ್ವರ ಪೂಜೆ:
ಶ್ರಾವಣ ಶನಿವಾರದಂದು ವಿಶೇಷವಾಗಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಶನಿವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ತುಳಸಿಯ ಕಟ್ಟೆಯ ಮುಂದೆ ಶಂಖ, ಚಕ್ರದ ರಂಗೋಲಿಯನ್ನು ಹಾಕಿ. ಹಾಗೇ ಮನೆಯೊಳಗೆ ವೆಂಕಟೇಶ್ವರ ಸ್ಮಾವಿಯ ಪೋಟೊ ಇಟ್ಟು ಅದಕ್ಕೆ ತುಳಸಿ ಹಾರವನ್ನು ಹಾಕಿ ಹಾಗೂ ಹಳದಿ ಬಣ್ಣದ ಹೂ ಸ್ವಾಮಿಗೆ ಪ್ರಿಯವಾದ್ದರಿಂದ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಿ. ಹಾಗೇ ಸ್ವಾಮಿಯ ಮುಂದೆ ಅಕ್ಕಿಹಿಟ್ಟಿನಿಂದ ತಯಾರಿಸಿದ ದೀಪವನ್ನು ಬೆಳಗಿಸಿ. ಈ ದೀಪವನ್ನು ಅಕ್ಕಿಹಿಟ್ಟು, ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ತಯಾರಿಸುತ್ತಾರೆ. ಹಾಗೇ ಪೂಜೆಯ ವೇಳೆ ವೆಂಕಟೇಶ್ವರ ಸ್ವಾಮಿ ನಾಮಗಳನ್ನು ಪಠಿಸುತ್ತಾ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೇವರಿಗೆ ಸಿಹಿ ನೈವೇದ್ಯವನ್ನು ಅರ್ಪಿಸಿ.
ಅಲ್ಲದೇ ಶ್ರಾವಣ ಶನಿವಾರದಂದು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸುವವರು ಪಡಿ ಕೇಳುವ ಶಾಸ್ತ್ರವನ್ನು ಮಾಡಬೇಕು. ಅಂದರೆ ಶುಭ್ರವಾದ ಬಟ್ಟೆ ತೊಟ್ಟು ಹಣೆಗೆ ಗೋವಿಂದನ ನಾಮವನ್ನು ಹಚ್ಚಿ ತಾಮ್ರದ ಚೊಂಬನ್ನು ಹಿಡಿದುಕೊಂಡು ಕನಿಷ್ಠ ಐದು ಮನೆಗೆ ಹೋಗಿ ಭಿಕ್ಷೆ ಅಥವಾ ಪಡಿ ಕೇಳಬೇಕು. ಅದರಿಂದ ಬಂದ ಧಾನ್ಯದಿಂದ ಸ್ವಾಮಿಗೆ ನೈವೇದ್ಯ ಅರ್ಪಿಸಬೇಕು.
ಶನಿದೇವನ ಪೂಜೆ :
ನಿಮ್ಮ ಜಾತಕದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿ ಮುಂತಾದ ಶನಿ ದೋಷವಿದ್ದರೆ ಶ್ರಾವಣ ಶನಿವಾರ ಪೂಜೆ ಮಾಡುವುದು ಅವಶ್ಯಕ. ಶ್ರಾವಣ ಶನಿವಾರದಂದು ಶನಿ ಪೂಜೆ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ಶನಿಯ ಜೊತೆಗೆ ಶಿವ ಪೂಜೆ ಮಾಡುತ್ತಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಹಾಗೇ ಶನಿ ಬೀಜಮಂತ್ರವನ್ನು ಪಠಿಸಿ. ಹಾಗೇ ಈ ದಿನ ಶನಿದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಒಳ್ಳೆಯದು.
ಹನುಮಂತನ ಪೂಜೆ:
ಶ್ರಾವಣ ಶನಿವಾರದಂದು ಹನುಮಂತ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮತ್ತು ಶನಿದೋಷದಿಂದ ಮುಕ್ತಿ ಪಡೆಯಬಹುದು. ಹಾಗಾಗಿ ಹೆಚ್ಚಿನ ಜನರು ಶ್ರಾವಣ ಶನಿವಾರದಂದು ಉಪವಾಸ ವ್ರತಗಳನ್ನು ಆಚರಣೆ ಮಾಡುತ್ತಾರೆ. ಮತ್ತು ಈ ದಿನ ಹನುಮಂತನ ದೇವಸ್ಥಾನಕ್ಕೆ ತೆರಳಿ ಹನುಮಂತನ ಪೂಜೆ ಮಾಡುತ್ತಾರೆ.
ಶ್ರಾವಣ ಶನಿವಾರದಂದು ಈ ಕೆಲಸ ಮಾಡಿ:
ಶ್ರಾವಣ ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಬಟ್ಟೆ, ಕಪ್ಪು ಎಳ್ಳು, ಬೀಗಗಳು, ಛತ್ರಿಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ದಾನ ಮಾಡಿ. ಈ ದಿನ ಶಿವ ದೇವಾಲಯದಲ್ಲಿ ಮರೆಯದೆ ಬಾರ್ಲಿಯನ್ನು ದಾನ ಮಾಡಿ. ಹಾಗೇ ಶ್ರಾವಣ ಶನಿವಾರದಂದು ಶಿವನಿಗೆ ಶನಿಗೆ ಪ್ರಿಯವಾದ ಶಮಿ ಹೂವುಗಳನ್ನು ಅರ್ಪಿಸಿ. ಇದರಿಂದ ಶನಿಗ್ರಹದ ಸಾಡೇಸಾತಿ, ಶನಿ ದೋಷ, ಶನಿ ಮಹಾದಶ, ಶನಿ ಧೈಯ್ಯಾ ಸೇರಿದಂತೆ ಇನ್ನಿತರ ಶನಿಗೆ ಸಂಬಂಧಿಸಿದ ದೋಷಗಳ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?
ಒಟ್ಟಾರೆ ಶ್ರಾವಣ ಶನಿವಾರದಂದು ದೇವರ ಪೂಜೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಿ. ಪ್ರತಿ ಶ್ರಾವಣ ಶನಿವಾರದಂದು ನಿಯಮಗಳ ಪ್ರಕಾರ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ.