Site icon Vistara News

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Train Tragedy


ತಂದೆ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮಕ್ಕಳಿಗಾಗಿ ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆಸ್ಟ್ರೇಲಿಯಾದಲ್ಲಿ ಇನ್ಫೋಸಿಸ್ ಟೆಕ್ಕಿಯೊಬ್ಬರು ರೈಲ್ವೆ ಹಳಿಯ (Train Tragedy) ಮೇಲೆ ಬಿದ್ದ ತನ್ನ ಅವಳಿ ಹೆಣ್ಣುಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ದುರಂತಮಯವಾಗಿ ಸಾವನ್ನಪ್ಪಿದ್ದಾರೆ.

40 ವರ್ಷದ ಆನಂದ್ ರನ್ವಾಲ್ ಸಾವನಪ್ಪಿದವರು. ಇವರು ಇನ್ಫೋಸಿಸ್ ಐಟಿ ಉದ್ಯೋಗಿಯಾಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ತಮ್ಮ ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ಕಾರ್ಲ್ಟನ್ ನಿಲ್ದಾಣದಲ್ಲಿ ಲಿಫ್ಟ್ ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಆನಂದ್ ಹೆಣ್ಣುಮಕ್ಕಳನ್ನು ಉಳಿಸಲು ಪ್ಲಾಟ್ ಫಾರ್ಮ್‌ನಿಂದ ರೈಲ್ವೆ ಹಳಿಯ ಮೇಲೆ ಹಾರಿದ್ದಾರೆ.

ಆ ವೇಳೆ ರೈಲು ಹಾದುಹೋಗುತ್ತಿದ್ದ ಆನಂದ್ ಮತ್ತು ಅವರ ಒಬ್ಬ ಮಗಳು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಆದರೆ ಅವರು ಈ ಹೋರಾಟದಲ್ಲಿ ತಮ್ಮ ಒಬ್ಬ ಮಗಳ ಜೀವ ರಕ್ಷಿಸಿದ್ದಾರೆ. ಆನಂದ್ ಅವರ ಪತ್ನಿ ಮತ್ತು ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕುಟುಂಬವು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ, ಅವರು ಲಿಫ್ಟ್ ಮೂಲಕ ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು ಮತ್ತು ಕ್ಷಣಾರ್ಧದಲ್ಲಿ ಅವರು ಪ್ರ್ಯಾಮ್ ಅನ್ನು ಬಿಟ್ಟುಬಿಟ್ಟರು. ಇದರಿಂದ ಅದು ಉರುಳುತ್ತಾ ಹೋಗಿ ಹಳಿಗಳ ಮೇಲೆ ಬಿದ್ದಿದೆ. ಆಗ ಆನಂದ್ ಅವರ ಪತ್ನಿ ಕಿರುಚಿದಾಗ ಆನಂದ್ ರೈಲು ಹಳಿಗಳ ಮೇಲೆ ಮಕ್ಕಳನ್ನು ರಕ್ಷಿಸಲು ಹಾರಿದ್ದಾರೆ. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ

ಆನಂದ್ ಮತ್ತು ಅವರ ಕುಟುಂಬವು 2023ರ ಕೊನೆಯಲ್ಲಿ ಸಿಡ್ನಿಗೆ ಸ್ಥಳಾಂತರಗೊಂಡಿತ್ತು. ಅವರು ಸಿಡ್ನಿಯ ಕೊಗರಾ ಉಪನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ, ಆನಂದ್ ಅವರ ಪೋಷಕರು (ವಿಸ್ತಾರ ನ್ಯೂಸ್‌) ಸಿಡ್ನಿಯಲ್ಲಿದ್ದ ಅವರ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ತನ್ನ ತಾಯಿ ಮತ್ತು ತಂದೆಯನ್ನು ತಮ್ಮ ಜೊತೆ ಆಸ್ಟ್ರೇಲಿಯಾದಲ್ಲಿ ಇಟ್ಟುಕೊಳ್ಳುವ ಹಂಬಲ ಆನಂದವರಿಗಿತ್ತು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಆದರೆ ವಿಧಿ ಅದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಅವರ ಹಠಾತ್ ನಿಧನದಿಂದ ಅವರ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಅವರು ಇನ್ನಿಲ್ಲ ಎಂಬ ವಿಚಾರ ಅವರ ಕುಟುಂಬಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

Exit mobile version