ನವದೆಹಲಿ: ಮಗಳು ಕಾಣೆಯಾದ ಬಗ್ಗೆ ತಂದೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಮನೆ ತಪಾಸಣೆ ನಡೆಸಿದಾಗ ಭೀಕರವಾದ ಸತ್ಯವೊಂದು ಹೊರಬಿದ್ದಿದೆ. ತಾಯಿಯೇ ತನ್ನ ಮಗಳ ಶವವನ್ನು ಯಾರಿಗೂ ತಿಳಿಯದಂತೆ ಮನೆಯಲ್ಲಿಯೇ ಸಮಾಧಿ ಮಾಡಿದ ಘಟನೆ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಸೌದಿ ಅರೇಬಿಯಾದಲ್ಲಿದ್ದ ತಂದೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ಇಮೇಲ್ ಮೂಲಕ ದೂರು ನೀಡಿದ್ದರು. ತಂದೆಯ ದೂರಿನ ಮೇರೆಗೆ ಪೊಲೀಸರು ಭಾನುವಾರ ಆಕೆಯ ಮನೆಗೆ ಹೋಗಿ ಹುಡುಕಾಟ ನಡೆಸಿದಾಗ ಮಗಳ ಮೃತದೇಹ ಮನೆಯೊಳಗೆ ಸಮಾಧಿಯಾಗಿರುವುದು ಪತ್ತೆಯಾಗಿದೆ. ಹಾಗಾಗಿ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸುದ್ದಿ ಎಲ್ಲೆಡೆ ಭಾರಿ (Viral News) ಸಂಚಲನ ಮೂಡಿಸಿದೆ.
ಪರ್ವೀನಾ (17) ಮೃತಪಟ್ಟ ಹುಡುಗಿ. ಆಕೆಯ ತಾಯಿ ಅನಿತಾ 10 ತಿಂಗಳ ಹಿಂದೆಯೇ ಮಗಳನ್ನು ಯಾರಿಗೂ ತಿಳಿಯದಂತೆ ಮನೆಯೊಳಗೆ ಸಮಾಧಿ ಮಾಡಿದ್ದಳು. ಆಗ 10 ತಿಂಗಳಿಂದ ತನ್ನ ಮಗಳ ಬಗ್ಗೆ ಯಾವುದೇ ಸುಳಿವು ಸಿಗದ ತಂದೆ ಇಮೇಲ್ ಮೂಲಕ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಹಾಗಾಗಿ ಈ ವಿಚಾರ ಬೆಳಕಿಗೆ ಬಂದಿದೆ. ತಾಯಿ ಕೊಲೆ ಮಾಡಿ ಸಮಾಧಿ ಮಾಡಿರುವ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆಕೆ ತಾನು ಕೊಲೆ ಮಾಡಿಲ್ಲ ಎಂಬುದಾಗಿ ವಾದಿಸುತ್ತಿದ್ದಾಳೆ.
ತನ್ನ ಮಗಳಿಗೆ ಬೇರೆ ಹುಡುಗನ ಜೊತೆ ಸಂಬಂಧವಿದ್ದು, ಆತನ ಜೊತೆ ಮನೆ ಬಿಟ್ಟು ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಹಾಗಾಗಿ ಆಕೆಯನ್ನು ತಾನು ಮನೆಯೊಳಗೆ ಕೂಡಿ ಹಾಕಿದ್ದಕ್ಕೆ ರಾತ್ರಿ ಮಲಗಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಚಾರ ಹೊರಗಿನವರಿಗೆ ತಿಳಿದರೆ ಮಾರ್ಯಾದೆ ಹೋಗುತ್ತದೆ ಎಂದು ಅಂಜಿ ಆಕೆ ಮಗಳ ಶವವನ್ನು ಇಬ್ಬರು ವ್ಯಕ್ತಿಗಳ ಸಹಾಯದಿಂದ ಮನೆಯೊಳಗೆ ಸಮಾಧಿ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ.
ಇದನ್ನೂ ಓದಿ: ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!
ಹಾಗೇ ತಂದೆ 10 ತಿಂಗಳ ನಂತರ ದೂರು ನೀಡಲು ಕಾರಣವೆನೆಂದು ಪೊಲೀಸರು ವಿಚಾರಿಸಿದಾಗ ಅವರು ಹಾಗೂ ಪತ್ನಿಯ ನಡುವೆ ಸಂಬಂಧ ಉತ್ತಮವಾಗಿಲ್ಲ ಎಂಬುದು ತಿಳಿದುಬಂದಿದೆ. ಹಾಗಾಗಿ ಅವರು ವಿದೇಶದಲ್ಲಿ ವಾಸವಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಫಲಿತಾಂಶ ಬಂದ ನಂತರ ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.