Site icon Vistara News

Viral Video: ಯುಪಿಎಸ್‌ಸಿ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ; ಗೇಟ್ ಬಳಿ ಮೂರ್ಛೆ ಹೋದ ತಾಯಿ!

Viral Video

ಗುರುಗ್ರಾಮ: ಸರ್ಕಾರಿ ಕೆಲಸಕ್ಕಾಗಿ ಜನರು ಹಾತೊರೆಯುತ್ತಾರೆ. ಸಂಬಳದ ಜೊತೆಗೆ ಅನೇಕ ಸೌಲಭ್ಯಗಳು ಸರ್ಕಾರಿ ಉದ್ಯೋಗಿಗಳಿಗೆ ದೊರೆಯುತ್ತದೆ. ಜತೆಗೆ ಜನಸೇವೆ ಸಲ್ಲಿಸಲೂ ಒಳ್ಳೆಯ ಅವಕಾಶ ಸಿಗುತ್ತದೆ. ಆದರೆ ಸರ್ಕಾರಿ ಉದ್ಯೋಗ ಪಡೆಯಲು ಅದಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ಬರೆಯಲೇಬೇಕು. ಹಾಗಾಗಿ ಇಂದು ಕೂಡ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ನಡೆಯಿತು. ಈ ಸಂದರ್ಭದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಯುವತಿಯೊಬ್ಬಳು ತಡವಾಗಿ ಬಂದಿದ್ದಾಳೆ ಎಂದು ಆಕೆಗೆ ಪರೀಕ್ಷಾ ಕೊಠಡಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದರಿಂದ ಆಘಾತಗೊಂಡ ತಾಯಿ ಮೂರ್ಛೆ ಹೋಗಿದ್ದಾರೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

ವಿಡಿಯೊದಲ್ಲಿ ಯುವತಿಯ ತಾಯಿ ಪರೀಕ್ಷಾ ಕೇಂದ್ರದ ಗೇಟ್ ಬಳಿ ಮೂರ್ಛೆ ತಪ್ಪಿ ಕೆಳಕ್ಕೆ ಬಿದ್ದಿರುವುದು ಕಂಡುಬಂದಿದೆ. ಅಲ್ಲಿ ಆಕೆಯ ತಂದೆ ಹಾಗೂ ಆಕೆ ತಾಯಿಗೆ ನೀರು ಕುಡಿಸಿ ಸಮಾಧಾನ ಪಡಿಸಿದರು. ಆಕೆಯ ತಂದೆ ಕೋಪದಿಂದ ತನ್ನ ಮಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿ ಎಂದು ಕೂಗುತ್ತಿದ್ದರೆ, ಆಕೆ ತಾನು ಮುಂದಿನ ವರ್ಷ ಪರೀಕ್ಷೆ ಬರೆಯುವೆ ಎಂದು ತಂದೆಗೆ ಸಮಾಧಾನ ಹೇಳುತ್ತಿರುವ ವಿಡಿಯೊ ಎಲ್ಲರ ಮನಕಲಕುತ್ತದೆ. ಮಗಳ ಒಂದು ವರ್ಷ ವ್ಯರ್ಥವಾಯಿತು ಎಂಬ ನೋವು ತಂದೆಯದಾದರೆ, ಅದಕ್ಕೆ ಆಕೆ ತಾನು ಇನ್ನೂ ಚಿಕ್ಕವಳು. ನನಗೆ ಅವಕಾಶ ಸಿಗುತ್ತದೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ‘ಹೃದಯ ವಿದ್ರಾವಕ ವಿಡಿಯೊ’ ಇಂದು ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಗೆ ತಮ್ಮ ಮಗಳೊಂದಿಗೆ ಬಂದ ಪೋಷಕರ ಸ್ಥಿತಿ ಎಂದು ಶೀರ್ಷಿಕೆ ಬರೆದು, ತಡವಾಗಿ ಬಂದಿದ್ದರಿಂದ ಅವರ ಮಗಳಿಗೆ ಅವಕಾಶ ನೀಡಲಿಲ್ಲ, ಬೆಳಿಗ್ಗೆ 9.30ಕ್ಕೆ ಪರೀಕ್ಷೆ ಪ್ರಾರಂಭವಾಗುತ್ತದೆ. ಆದರೆ ಅವರು ಬೆಳಿಗ್ಗೆ 9 ಗಂಟೆಗೆ ಗೇಟ್ ಬಳಿ ಇದ್ದರು. ಆದರೆ ಗುರುಗ್ರಾಮದ ಸೆಕ್ಟರ್ 47ರ ಎಸ್ ಡಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲರು ಅವರನ್ನು ಒಳಗೆ ಬಿಡಲಿಲ್ಲ ಎಂದು ಬರೆದಿದ್ದಾರೆ.

ಈ ವಿಡಿಯೊ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು ಸಿಕ್ಕಾಪಟ್ಟೆ ಕಾಮೆಂಟ್‌ಗಳು ಬಂದಿವೆ. ಕೆಲವರು ಪ್ರಾಂಶುಪಾಲರ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಈ ಸ್ಥಿತಿಯಲ್ಲಿ ಮಗಳ ಧೈರ್ಯ ಮತ್ತು ಪೋಷಕರಿಗೆ ಸಮಾಧಾನ ಮಾಡುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

ಇಂತಹ ಘಟನೆಗಳು ನಮ್ಮ ದೇಶದಲ್ಲಿ ಹಲವು ಕಡೆ ನಡೆಯುತ್ತಿರುತ್ತದೆ. ಎಷ್ಟೋ ಬಡ ಮಕ್ಕಳು ಸರ್ಕಾರಿ ಉದ್ಯೋಗಕ್ಕೆ ಅರ್ಹರಾಗಿದ್ದರೂ ಕೂಡ ಕೆಲವು ಜನರ ಹೀನ ಮನಸ್ಸಿನಿಂದ ಪರೀಕ್ಷೆ ಬರೆಯಲಾಗದೆ ಈ ರೀತಿ ಒದ್ದಾಡುತ್ತಾರೆ. ಇಂತಹ ಕೃತ್ಯ ಇನ್ನು ಮುಂದೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು.

Exit mobile version