ಜರ್ಮನಿ : 2020ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬನ ಬಗ್ಗೆ ಅವಮಾನವೀಯ ಹೇಳಿಕೆ ನೀಡಿದ 20 ವರ್ಷದ ಜರ್ಮನ್ ಮಹಿಳೆಗೆ ಜೈಲು ಶಿಕ್ಷೆ (Women Arrest) ವಿಧಿಸಲಾಗಿದೆ ಹಾಗೂ ಮಹಿಳೆ ವಾರಾಂತ್ಯವನ್ನು ಜೈಲಿನಲ್ಲಿ ಕಳೆಯಲು ಆದೇಶಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 16-20 ವರ್ಷದೊಳಗಿನ 10 ಮಂದಿ ಯುವಕರು ಸೇರಿ ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ 10 ಮಂದಿಯಲ್ಲಿ ಒಬ್ಬನಿಗೆ ಶಿಕ್ಷೆ ವಿಧಿಸಿ ಉಳಿದವರನ್ನು ಮುಕ್ತಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅದರಲ್ಲಿ ಒಬ್ಬನ ಹೆಸರು ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿತ್ತು. ಆಗ ಈ ಘಟನೆಯಿಂದ ಕುಪಿತಳಾದ 20 ವರ್ಷದ ಜರ್ಮನ್ ಮಹಿಳೆಯೊಬ್ಬರು ಆ ವ್ಯಕ್ತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಲು ಶುರು ಮಾಡಿದ್ದಳು. ಇದರಿಂದ ಆ ವ್ಯಕ್ತಿಗೆ ಹೊರಗಡೆ ಮುಖ ತೋರಿಸಲೂ ಕಷ್ಟವಾಗಿದೆ. ಆದರೆ ಆ ಮಹಿಳೆಗೂ ಸಂತ್ರಸ್ತ ಬಾಲಕಿ ಹಾಗೂ ಅತ್ಯಾಚಾರಿಗಳಿಗೂ ಯಾವುದೇ ಸಂಬಂಧವಿರಲಿಲ್ಲ.
ಹಾಗಾಗಿ ಈ ಬಗ್ಗೆ ಆತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಹ್ಯಾಂಬರ್ಗ್ ವಾಂಡ್ಸ್ಬೆಕ್ ಜಿಲ್ಲಾ ನ್ಯಾಯಾಲಯ ಮಹಿಳೆಯನ್ನು ದೋಷಿ ಎಂದು ಪರಿಗಣಿಸಿ ಅವಮಾನ ಮತ್ತು ಬೆದರಿಕೆಗಾಗಿ ಆಕೆಗೆ 48 ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸಿ, ವಾರಾಂತ್ಯದಲ್ಲಿ ಜೈಲಿನಲ್ಲಿ ಬಂಧಿಯಾಗಿರಲು ಆದೇಶಿಸಿದೆ. ಅದರಂತೆ ಆಕೆಗೆ ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಹ್ಯಾನೋಫರ್ ಸಂಡ್ ಯುವ ಬಂಧನ ಕೇಂದ್ರದಲ್ಲಿ ಬಂಧಿಯಾಗಿರಲು ಸೂಚಿಸಲಾಗಿದೆ.
ಹಾಗೇ ಕೊಲೆ ಬೆದರಿಕೆಗಳು, ಹಿಂಸೆ ಮತ್ತು ಜನಾಂಗೀಯ ನಿಂದನೆ ಸೇರಿದಂತೆ ಅತ್ಯಾಚಾರಿಗಳ ಬಗ್ಗೆ ಇದೇ ರೀತಿಯ ಅವಮಾನವೀಯ ಹೇಳಿಕೆಗಳ ಕುರಿತು ಪೊಲೀಸರು ಇತರ 140 ಮಂದಿಯನ್ನು ತನಿಖೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮಹಿಳೆಗೆ ಶಿಕ್ಷೆಯಾದ ಹಿನ್ನಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ನ್ಯಾಯಾಧೀಶರ ವಿರುದ್ಧ ಕಿಡಿಕಾರಿದ್ದಾರೆ. ಅವರ ತೀರ್ಪನ್ನು ತಪ್ಪು ಎಂದು ದೂಷಿಸಿದ್ದಾರೆ. ಹಾಗೇ ಆಕೆ ಅತ್ಯಾಚಾರಿ ಯುವಕನಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆಯುವಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್!
ಸೆಪ್ಟೆಂಬರ್ 19, 2020ರಲ್ಲಿ ಹ್ಯಾಂಬರ್ಗ್ ನ ಸಿಟಿ ಪಾರ್ಕ್ ನಲ್ಲಿ ರಾತ್ರಿ ನಡೆದ ಉತ್ಸವದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಕುಡಿದ ಮತ್ತಿನಲ್ಲಿದ್ದ 10 ಮಂದಿ ಪುರುಷರು ಸೇರಿ ಆಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಪ್ರಕರಣವು ಪ್ರಪಂಚದಾದ್ಯಂತ ಆಘಾತವನ್ನುಂಟು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ಅವರಲ್ಲಿ 19 ವರ್ಷದ ಯುವಕನಿಗೆ ಎರಡು ವರ್ಷ ಎಂಟು ತಿಂಗಳು ಜೈಲು ಶಿಕ್ಷೆ ವಿಧಿಸಿದರೆ ಒಬ್ಬನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು, ಉಳಿದ ಎಂಟು ಮಂದಿಗೆ ಮುಕ್ತವಾಗಿ ನಡೆಯಲು ಅವಕಾಶ ನೀಡಲಾಗಿದೆ.