Site icon Vistara News

ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ!

Bloating problem

ಬಹಳಷ್ಟು ಮಂದಿಗೆ ಇಂಥದ್ದೊಂದು ಸಮಸ್ಯೆ ಕಾಡಿರಬಹುದು. ಪ್ರತಿನಿತ್ಯ, ಯೋಗವೋ, ಜಿಮ್ಮೋ, ನಡಿಗೆಯೋ ಮಾಡಿಕೊಂಡು ತಮ್ಮದೇ ರೀತಿಯಲ್ಲಿ ತೂಕ ಇಳಿಕೆಯ ಅಥವಾ ಅದೇ ತೂಕವನ್ನು ಕಾಪಾಡಿಕೊಳ್ಳುವ ಆರೋಗ್ಯಕರ ಜೀವನಶೈಲಿಯೆಡೆಗೆ ಪ್ರಯತ್ನ ಪಡುವ ಮಂದಿಗೆ ಎಲ್ಲ ಸರಿಯಿದೆ ಅನಿಸುವಾಗ ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಎರಡು ಕೆಜಿ ತೂಕ ಏರಿ ಬಿಡಬಹುದು. ಅರೆ, ಇಷ್ಟರವರೆಗೆ ಇಳಿಕೆಯ ಹಾದಿಯಲ್ಲಿದ್ದ ತೂಕ ಹೀಗೇಕೆ ಒಮ್ಮೆಲೇ ಏರಿತು ಎಂದು ನಿತ್ಯವೂ ತಮ್ಮ ತೂಕವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುವ ಮಂದಿಗೆ ಆಶ್ಚರ್ಯದೊಂದಿಗೆ ಬೇಸರವೂ ಆಗಬಹುದು.

ಬೆಳಗ್ಗೆ ಏಳುವಾಗ ಹೊಟ್ಟೆ ಉಬ್ಬರಿಸಿದಂತ ಭಾವ, ಮೈಕೈ ಎಲ್ಲ ಭಾರವಿದ್ದಂತೆ, ಸುಲಭವಾಗಿ ಸಹಜವಾಗಿ ಸರಾಗವಾಗಿ ನಡೆದಾಡಲಾಗುತ್ತಿಲ್ಲ ಎಂಬ ಎಂಥದೋ ಒಂದು ಬಗೆಯ ಉದಾಸೀನತೆ ಕಾಡತೊಡಗುತ್ತದೆ. ಏನೋ ಟೈಟ್‌ನೆಸ್‌ ಫೀಲು ದೇಹದಲ್ಲಿರುತ್ತದೆ. ಅದರ ಪರಿಣಾಮ ಮನಸ್ಸೂ ಕೂಡಾ ಆಲಸಿಯಾಗಿ ಹಾಗೇ ಇರಲು ಬಯಸುತ್ತದೆ. ಇದರ ಹೆಸರು ವಾಟರ್‌ ರಿಟೆನ್ಶನ್. ಅಥವಾ ಬ್ಲೋಟಿಂಗ್‌. ಅಂದರೆ ಮೊದಲು ಸೇವಿಸಿದ ಆಹಾರದ ಪರಿಣಾಮದಿಂದಲೋ ಅಥವಾ ಇನ್ನಿತರ ಕೆಲವು ಕಾರಣಗಳಿಂದ ದೇಹದಲ್ಲಿ ನೀರು ತುಂಬಿಕೊಳ್ಳುವುದು.

ವಾಟರ್‌ ರಿಟೆನ್ಶನ್‌ ಒಂದು ಬಹಳ ಸಾಮಾನ್ಯ ಆರೋಗ್ಯ ತೊಂದರೆ. ಇದಕ್ಕಾಗಿ ಹೆಚ್ಚು ಭಯಪಡುವ ಅಗತ್ಯವಿಲ್ಲ. ತಿನ್ನುವ ಆಹಾರ, ಜೀವನಶೈಲಿಯ ಬಗ್ಗೆ ಕೊಂಚ ಗಮನ ಕೊಟ್ಟರೆ ಇದು ತಾನೇ ತಾನಾಗಿ ಸರಿಯಾಗುತ್ತದೆ. ಆದರೆ, ಪದೇ ಪದೇ ಇದೇ ಸಮಸ್ಯೆ ಕಾಡುತ್ತಿದ್ದರೆ, ಅಥವಾ ಇದೇ ದೊಡ್ಡ ಸಮಸ್ಯೆಯೆಂದು ಅನಿಸಿದರೆ, ವೈದ್ಯರ ಸಲಹೆ ಪಡೆಯಬಹುದು.

ಹಾಗಾದರೆ ಇದಕ್ಕೆ ಕಾರಣಗಳೇನಿರಬಹುದು ಎಂಬುದನ್ನು ಮೊದಲು ನೋಡೋಣ.

೧. ಮುನ್ನಾ ದಿನ ತಿಂದ ಆಹಾರದ ಪರಿಣಾಮ ಇರಬಹುದು. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರಬಹುದು. ಹೆಚ್ಚು ಕಾರ್ಬೋಹೈಡ್ರೇಟ್‌ ಇರುವ ಆಹಾರ ತಿಂದಿರಬಹುದು. ಕಾರ್ಬೋನೇಟೆಡ್‌ ಡ್ರಿಂಕ್‌ ಕುಡಿದಿರಬಹುದು.

೨. ಸಿಕ್ಕಾಪಟ್ಟೆ ತಿಂದಿರಬಹುದು. ಅಗತ್ಯಕ್ಕಿಂತ ಹೆಚ್ಚು ತಿಂದ ಕಾರಣ ಆಗಿರಬಹುದು. ಅಥವಾ ಗಡಿಬಿಡಿಯಲ್ಲಿ ಬಹಳ ವೇಗವಾಗಿ ಹೆಚ್ಚು ಆಹಾರ ಹೊಟ್ಟೆಗಿಳಿಸಿರಬಹುದು.

೩. ಸರಿಯಾದ ನಿದ್ದೆ ಆಗಿರದೆ ಇರಬಹುದು. ನಿದ್ದೆಯ ಕೊರತೆ ಮುನ್ನಾ ದಿನದ್ದಷ್ಟೇ ಆಗಿರಬೇಕಾಗಿಲ್ಲ. ಹಲವು ದಿನಗಳದ್ದೂ ಆಗಿರಬಹುದು.

೪. ಹಾರ್ಮೋನಿನ ಸಮತೋಲನ ತಪ್ಪಿರಬಹುದು.

೫. ನೀರು ಕಡಿಮೆ ಕುಡಿದಿರಬಹುದು.

೬. ಮಲಬದ್ಧತೆಯೂ ಇರಬಹುದು.

೭. ಬಹಳ ಮುಖ್ಯವಾಗಿ, ನೀವು ನಿಮ್ಮ ಋತುಚಕ್ರದಲ್ಲಿರಬಹುದು. ಪೀರಿಯಡ್ಸ್‌ ಸಮಯದಲ್ಲಿ ಹೀಗಾಗುವುದು ಸಹಜ. ಬಹಳಷ್ಟು ಸಾರಿ ಅದೇ ಕಾರಣವಿರುತ್ತದೆ.

ಅಂದಹಾಗೆ, ತೂಕ ರಾತ್ರೋರಾತ್ರಿ ಎರಡು ಕೆಜಿ ಹೆಚ್ಚಾಗಿದೆ ಎಂದರೆ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಹೆಚ್ಚು ಶೇಖರಣೆಯಾಗಿ ದಪ್ಪವಾಗಿದ್ದೀರಿ ಎಂಬ ಅರ್ಥವಲ್ಲ. ಹೀಗೆ ದೇಹ ಭಾರವೆಂದು ಅನಿಸಿದ ತಕ್ಷಣ ನಿಮ್ಮ ಆಹಾರಭ್ಯಾಸಗಳನ್ನು ಕೊಂಚ ಒರೆಗೆ ಹಚ್ಚಿ ಯೋಚಿಸಿ. ನಿಮ್ಮನ್ನು ಅತಿಯಾಗಿ ಹೀಗೆ ಮಾಡುತ್ತಿರುವ ಆಹಾರ ಯಾವುದಿರಬಹುದು ಎಂಬುದು ನಿಮಗೇ ಅಂದಾಜಾಗುತ್ತದೆ. ಮೂರ್ನಾಲ್ಕು ಬಾರಿ ಹೀಗಾದಾಗ ತಿಂದ ಆಹಾರವನ್ನು ಗಮನಿಸಿದರೆ ನಿಮ್ಮ ದೇಹಕ್ಕೆ ಕೆಟ್ಟದಾಗಿ ಸ್ಪಂದಿಸುವ ಆಹಾರವನ್ನು ನೀವು ಕಂಡುಹಿಡಿಯುವ ಕೆಲಸ ಸರಳವಾಗುತ್ತದೆ.

ಹಾಗಾದರೆ ಇದಕ್ಕೆ ಏನು ಮಾಡಬಹುದು. ಮೊದಲೇ ಹೇಳಿದಂತೆ, ಈ ತೊಂದರೆ ಬಹಳ ದೊಡ್ಡ ಸಮಸ್ಯೆಯಲ್ಲದಿದ್ದರೂ, ಎಂದಿನಂತೆ ಸಹಜವಾಗಿ ಚುರುಕಾಗಿ ಓಡಾಡಿಕೊಂಡಿರಲು ಸಾಧ್ಯವಾಗುವುದಿಲ್ಲ. ಈ ದೇಹಭಾರದ ಸ್ಥಿತಿಯನ್ನು ಕಡಿಮೆಗೊಳಿಸಿ ಹಕ್ಕಿಯಂತೆ ಹಗುರಾಗಬೇಕಿದ್ದಲ್ಲಿ ಹೀಗೆ ಮಾಡಬಹುದು.

೧. ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದಲ್ಲಿ ಮಿತಿಗಿಂತ ಹೆಚ್ಚು ಸಂಗ್ರಹವಾದ ಸೋಡಿಯಂ ಪ್ರಮಾಣ ದೇಹದಿಂದ ಹೊರಗೆ ಹೋಗುತ್ತದೆ.

೨. ಪುದಿನ ನೀರನ್ನು ಆಗಾಗ ಕುಡಿಯುತ್ತಿರಬಹುದು. ಕೆಲವು ಪುದಿನ ಎಲೆಗಳನ್ನು ನೀರಿನಲ್ಲಿ ನೆನೆಯಲು ಬಿಟ್ಟು. ಇದರ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ಸಾಕಷ್ಟು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

೩. ಶುಂಠಿ ಅಥವಾ ಪುದಿನ ಚಹಾ ಮಾಡಿಕೊಂಡು ಕುಡಿಯುವುದರಿಂದಲೂ ಪರಿಹಾರ ಸಿಗಬಹುದು.

೪. ಮಜ್ಜಿಗೆ ನೀರು ಅಥವಾ ಡಿಟಾಕ್ಸ್‌ ಡ್ರಿಂಕ್‌ ಮಾಡಿ ಕುಡಿಯುವ ಮೂಲಕವೂ ಸಮಸ್ಯೆಗೆ ಪರಿಹಾರ ಕಾಣಬಹುದು.

೫. ಹೀಗಾದಾಗ ಅಂಥ ದಿನಗಳಲ್ಲಿ ಆಹಾರ ಹದವಾಗಿರಲಿ. ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ. ಆಗ ಕಶ್ಮಲಗಳೆಲ್ಲ ನಾರಿನಂಶದ ಜೊತೆ ಹೊರಗೆ ಹೋಗಲು ಸಹಾಯವಾಗುತ್ತದೆ.

೬. ಮುಖ್ಯವಾಗಿ ಪೀರಿಯಡ್‌ ದಿನಗಳಲ್ಲಿ ಆಹಾರದ ಬಗ್ಗೆ ಗಮನ ಕೊಡಿ. ಸತ್ವಯುತ ಆಹಾರಕ್ಕೆ ಪ್ರಾಮುಖ್ಯತೆ ನೀಡಿ. ಹೆಚ್ಚು ಜಂಕ್‌ ತಿನ್ನುವ ಅಭ್ಯಾಸವಿದ್ದರೆ ಕಡಿಮೆ ಮಾಡಿ. ಮೈದಾ, ಸಕ್ಕರೆ, ಹೆಚ್ಚು ಸೋಡಿಯಂಯುಕ್ತ ಆಹಾರವನ್ನು ದೂರವಿಡಿ.

ಇದನ್ನೂ ಓದಿ| Brain fever | ಕೋಲಾರ ಬಾಲಕನಲ್ಲಿ ಮೆದುಳು ಜ್ವರ ಪತ್ತೆ; ಹೈ ಅಲರ್ಟ್‌ ಘೋಷಿಸಿದ ಆರೋಗ್ಯ ಇಲಾಖೆ

Exit mobile version