Site icon Vistara News

Fitness secret: ಯಾವಾಗಲೂ ಫಿಟ್‌ ಆಗಿರುತ್ತಾರಲ್ಲ, ಅವರ ದಿನಚರಿಯ ಈ 10 ಅಭ್ಯಾಸ ನೋಡಿದಿರಾ?

fitness

ಕೆಲವರಿರುತ್ತಾರೆ, ವರ್ಷದ ಯಾವ ಕಾಲವೇ ಬರಲಿ, ಏನೇ ಆಗಲಿ, ಸದಾ ಒಂದೇ ಆಕಾರದಲ್ಲಿರುತ್ತಾರೆ. ಅವರು ಎಷ್ಟೇ ತಿಂದರೂ, ಎಷ್ಟೇ ತಿರುಗಾಡಿದರೂ ಏನೇ ಮಾಡಿದರೂ ಯಾವಾಗಲೂ ಅವರ ಮುಖದಲ್ಲೊಂದು ಕಾಂತಿ ಚಿಮ್ಮುತ್ತಿರುತ್ತದೆ. ಕೆಲವರು ಏನೇ ವರ್ಕೌಟ್‌ ಮಾಡಿದರೂ, ಏನೇ ಕಸರತ್ತು ಮಾಡಿದರೂ ಅಂದುಕೊಂಡ ಆಕಾರಕ್ಕೆ ದೇಹವನ್ನು ತರಲಾಗುವುದಿಲ್ಲ. ಹೀಗಾದಾಗ ಬಹಳ ಸಾರಿ, ಫಿಟ್‌ ಆಗಿ ಸದಾ ಲವಲವಿಕೆಯಿಂದ ಮುಖದಲ್ಲಿ ಕಾಂತಿ ತುಳುಕಿಸಿಕೊಂಡು ಓಡಾಡುವವರನ್ನು ಕಂಡಾಗ, ಈ ಫಿಟ್‌ನೆಸ್‌ ಅನ್ನೋದು ಬಿಡಿಸಲಾಗದ ಗಂಟು ಎಂದು ಅನಿಸತೊಡಗುತ್ತದೆ.

ಕೇವಲ ವರ್ಕೌಟ್‌ ಅಷ್ಟೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಬಹುತೇಕರ ಎಣಿಕೆ ತಪ್ಪಾಗುತ್ತದೆ. ಹಾಗಾದರೆ, ಫಿಟ್ನೆಸ್‌ ಕಾಯ್ದುಕೊಳ್ಳುವ ಜೊತೆಗೆ ಸದಾ ಖುಷಿಯ ಬುಗ್ಗೆಗಳಾಗಿ ಕಾಣಿಸುವ ಮಂದಿಯ ೧೦ ಉತ್ತಮ ಅಭ್ಯಾಸಗಳು ಯಾವುದಿದ್ದೀತು ಎಂಬುದನ್ನು ಇಲ್ಲಿ ತಿಳಿಯೋಣ.

೧. ಅವರು ವ್ಯಾಯಾಮಕ್ಕಿಂತ ಹೆಚ್ಚು ವ್ಯಾಯಾಮದಿಂದ ಸಿಗುವ ಸಂತೋಷವನ್ನು ಬಯಸುತ್ತಾರೆ. ಮಾಡುವ ಸಣ್ಣ ಮಟ್ಟಿನ ವ್ಯಾಯಾಮವನ್ನು ಖುಷಿಯಿಂದ ಮಾಡುತ್ತಾರೆ. ಬಹುಶಃ ಅವರು ತಮ್ಮ ದುಗುಡವನ್ನು ಕಳೆಯಲು ವರ್ಕೌಟ್‌ ಮಾಡುತ್ತಿರಬಹುದು ಅಥವಾ ಜಸ್ಟ್‌ ಫಾರ್‌ ಎ ಚೇಂಜ್‌ ಅಂತ ವರ್ಕೌಟ್‌ ಮಾಡುತ್ತಿರಬಹುದು.

೨. ಅವರು ಯಾವುದನ್ನು ತಿನ್ನಬಾರದು ಎಂದು ಯಾವಾಗಲೂ ಯೋಚಿಸುವ ಬದಲು ಯಾವುದನ್ನೆಲ್ಲ ತಿನ್ನಬಹುದು ಎಂಬ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಸಕ್ಕರೆ ರಹಿತ, ಕಡಿಮೆ ಕಾರ್ಬೋಹೈಡ್ರೇಟ್‌ ಡಯಟ್‌ ಬಗ್ಗೆ ಯೋಚಿಸುತ್ತಲೇ ತಲೆಬಿಸಿ ಮಾಡಿಕೊಂಡು ತಿನ್ನದಿರುವ ವಸ್ತುಗಳನ್ನು ಯೋಚನೆ ಮಾಡಿಕೊಂಡು ಅದನ್ನೊಂದು ಶಿಕ್ಷೆಯಂತೆ ಭಾವಿಸಿ ಪಾಲಿಸುವ ಮಂದಿಯ ಎದುರು ಇವರು ಭಿನ್ನ. ಖುಷಿಯಿಂದ ಯಾವುದನ್ನೆಲ್ಲ ತಿನ್ನಬಹುದು ಎಂದು ಯೋಚಿಸಿ ತಿನ್ನುವ ಈ ಮಂದಿಯ ಪಾಸಿಟಿವ್‌ ಗುಣವೇ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ.

೩. ಜಿಮ್‌ಗೆ ಹೋದರಷ್ಟೇ ವ್ಯಾಯಾಮ ಎಂಬ ಮನಸ್ಥಿತಿ ಅವರಲ್ಲಿರುವುದಿಲ್ಲ. ಜಿಮ್‌ ಹೊರತಾಗಿ ಸಾಕಷ್ಟು ಚುರುಕಾಗಿ ಓಡಾಡಿಕೊಂಡಿರುವ ಅವರಿಗೆ, ಇತರೆ ಕೆಲಸ ಕಾರ್ಯಗಳಿಂದಲೇ ಸಾಕಷ್ಟು ವ್ಯಾಯಾಮ ದೊರೆತಿರುತ್ತದೆ.

೪. ಎಷ್ಟು ವರ್ಕೌಟ್‌ ಮಾಡಿದ್ದೇವೆ ಎಂಬುದರ ಮೇಲಷ್ಟೆ ಫಿಟ್ನೆಸ್‌ ಅವಲಂಬಿಸಿದೆ ಎಂದು ಅಂದುಕೊಂಡರೆ ಅದು ತಪ್ಪು. ಅವರು ವರ್ಕೌಟ್‌ ಬಗ್ಗೆ ಗಮನ ಕೊಟ್ಟಷ್ಟೇ ವಿರಾಮಕ್ಕೂ ಆದ್ಯತೆ ನೀಡುತ್ತಾರೆ.

೫. ಅವರಿಗೆ ಅತಿಯಾಗಿ ಹಸಿವಾಗುವುದಿಲ್ಲ ಅಥವಾ ಅವರು ಎಂದಿಗೂ ಅತಿಯಾಗಿ ತಿನ್ನುವುದಿಲ್ಲ. ಡಯಟ್‌ ಹೆಸರಿನಲ್ಲಿ ಹೆಚ್ಚು ಹಸಿವು ಮಾಡಿಕೊಳ್ಳುವುದು ಹಾಗೂ ಆ ಹಸಿವಿನಿಂದಾಗಿ ಹೆಚ್ಚು ತಿನ್ನುವುದು ಶೇಪ್‌ನಲ್ಲಿರುವುದಕ್ಕೆ ಯಾವಾಗಲೂ ತಡೆಯಾಗುವ ಅಂಶ. ಆದರೆ ಇವರು ಆಗಾಗ ಸ್ವಲ್ವ ಸ್ವಲ್ಪ ತಿನ್ನುತ್ತಾರೆ ಮತ್ತು ಎಂದಿಗೂ ಹಸಿವಿನಿಂದ ಬಳಲುವುದಿಲ್ಲ.

೬. ಇವರು ಬಗೆಬಗೆಯ ಡಯಟ್‌ಗಳ ಮೊರೆ ಹೋಗುವುದಿಲ್ಲ. ತಮ್ಮ ದೇಹದ ಮಾತು ಕೇಳುತ್ತಾರೆ. ಆರೋಗ್ಯದ ದೃಷ್ಟಿಯಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಯೋಚಿಸಿ ತಮ್ಮ ಡಯಟ್‌ ಬಗ್ಗೆ ನಿರ್ಧರಿಸುತ್ತಾರೆ.

ಇದನ್ನೂ ಓದಿ: 40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!

೭. ಅವರು ತುಂಬ ನೀರು ಕುಡಿಯುತ್ತಾರೆ. ಮಾನವನ ದೇಹ ಶೇಕಡಾ ೬೦ಕ್ಕಿಂತಲೂ ಹೆಚ್ಚು ಭಾಗ ನೀರನ್ನು ಹೊಂದಿದೆ. ಹಾಗಾಗಿ ದೇಹಕ್ಕೆ ನೀರು ಅತೀ ಅಗತ್ಯ. ನೀರು ಸರಿಯಾಗಿ ಪೂರೈಕೆ ಮಾಡುತ್ತಿಲ್ಲವಾದರೆ ಅದು ನಿಮ್ಮ ಆರೋಗ್ಯದ ಮೂಲಕ ತಿಳಿಯುತ್ತದೆ.

೮. ಅವರ ಜೀವನದಲ್ಲಿ ಶಿಸ್ತು ಇರುತ್ತದೆ. ಅವರು ದಿನನಿತ್ಯದಲ್ಲಿ ಕೆಲವು ಸಿಂಪಲ್‌ ಆಹಾರ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಬೆಳಗಿನ ಹಾಗೂ ರಾತ್ರಿಯ ಆಹಾರದ ಶಿಸ್ತು ಅವರಲ್ಲಿ ಖಂಡಿತಾ ಇರುತ್ತದೆ.

೯. ಅವರು ಆಸಕ್ತಿಕರವಾಗಿ ಬದುಕುತ್ತಿರುತ್ತಾರೆ. ತಮ್ಮ ಇಷ್ಟದ ಸಂಗತಿಗಳನ್ನು ಮಾಡುತ್ತಿರುತ್ತಾರೆ. ಬದುಕಿನ ಸಣ್ಣ ಸಣ್ಣ ಸಂಗತಿಗಳಿಗೆ ಮಹತ್ವ ನೀಡುತ್ತಾರೆ ಹಾಗೂ ತಮ್ಮ ಆಸಕ್ತಿಯ ವಿಷಯಗಳಿಗೆ ಹವ್ಯಾಸಗಳಿಗೆ ಸಮಯ ನೀಡುತ್ತಿರುತ್ತಾರೆ.

೧೦. ತಮಗೇನು ಬೇಕು ಹಾಗೂ ತಮಗೇನು ಪಡೆಯಲು ಹಕ್ಕಿದೆ ಎಂಬ ಬಗ್ಗೆ ಇವರಿಗೆ ಸರಿಯಾಗಿ ಗೊತ್ತಿರುತ್ತದೆ. ಇವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ತಮ್ಮ ದೇಹದ ಆಕಾರಕ್ಕಿಂತಲೂ ಇವರು ಪ್ರದರ್ಶಿಸುವ ಆತ್ಮವಿಶ್ವಾಸವೇ ಅವರ ವ್ಯಕ್ತಿತ್ವಕ್ಕೊಂದು ತೂಕ ನೀಡುವುದರಿಂದ ಸುಂದರವಾಗಿಯೂ ಕಾಂತಿಯುಕ್ತವಾಗಿಯೂ ಕಾಣುತ್ತಾರೆ.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

Exit mobile version