Site icon Vistara News

Oldest Man: ನೀವೂ 100 ವರ್ಷ ಬದುಕಬೇಕೇ? 111 ವರ್ಷದ ಈ ‘ಯುವಕ’ನ ಮಾತು ಕೇಳಿ

Oldest Man

ಲಂಡನ್: ಸುದೀರ್ಘಕಾಲ ಆರೋಗ್ಯಯುತವಾಗಿ ಬಾಳಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಗಿನ ನಮ್ಮ ಜೀವನ ಶೈಲಿಯಲ್ಲಿ ಇದು ಸಾಧ್ಯವಿಲ್ಲ. ನಮ್ಮ ಹಿರಿಯರು ಹೆಚ್ಚು ಕಾಲ ಬಾಳಿ ಬದುಕಿದ್ದಾರೆ. ಅವರು ತಿನ್ನುವ ಆಹಾರವನ್ನೇ ನಾವೂ ತಿನ್ನುತ್ತಿದ್ದೇವೆ. ಆದರೂ ಯಾಕೆ ಹೀಗೆ ಎನ್ನುವ ಪ್ರಶ್ನೆಯಂತೂ ಇದ್ದೇಇದೆ. ಹೆಚ್ಚು ಕಾಲ ಬದುಕಬೇಕಾದರೆ ಹಿರಿಯರ ಜೀವನ ರಹಸ್ಯ ಏನಿರಬಹುದು ಎನ್ನುವ ಕುತೂಹಲವಂತೂ ಎಲ್ಲರಲ್ಲೂ ಇದೆ. ಈ ಗುಟ್ಟನ್ನು ಈಗ ವಿಶ್ವದ (world) ಅತ್ಯಂತ ಹಿರಿಯ ವ್ಯಕ್ತಿ (Oldest Man) ಬ್ರಿಟನ್ (Briton) ಜಾನ್ ಟಿನ್ನಿಸ್ವುಡ್ (John Tinniswood) ಹೇಳಿಕೊಂಡಿದ್ದಾರೆ.

ಆಹಾರ ಮತ್ತು ಅದೃಷ್ಟದಲ್ಲಿದೆ ದೀರ್ಘಾಯುಷ್ಯದ ಗುಟ್ಟು ಎನ್ನುವ ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿ 111 ವರ್ಷದ ಬ್ರಿಟನ್ ಜಾನ್ ಟಿನ್ನಿಸ್ವುಡ್ ತಮ್ಮ ನೆಚ್ಚಿನ ಆಹಾರವಾಗಿ ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಅನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ದೀರ್ಘಾಯುಷ್ಯದಲ್ಲಿ ಯಾವುದೇ ವಿಶೇಷ ರಹಸ್ಯವಿಲ್ಲ. ಕೇವಲ ಅದೃಷ್ಟ ಮತ್ತು ಆಹಾರದಲ್ಲಿರುತ್ತೆ ಎನ್ನುತ್ತಾರೆ ಅವರು.


ದೀರ್ಘಾಯುಷ್ಯದ ಗುಟ್ಟು


ಉತ್ತರ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿ 1912 ರಲ್ಲಿ ಜನಿಸಿದ ನಿವೃತ್ತ ಅಕೌಂಟೆಂಟ್ ಮತ್ತು ಮಾಜಿ ಅಂಚೆ ಸೇವಾ ಕಾರ್ಯಕರ್ತ ಟಿನ್ನಿಸ್‌ವುಡ್‌ ಅವರಿಗೆ ಈಗ 111 ವರ್ಷ ಮತ್ತು 222 ದಿನಗಳು.

ಇದನ್ನೂ ಓದಿ: Lakshadweep Tourism: ಮೋದಿ ಭೇಟಿ ಬಳಿಕ ಲಕ್ಷದ್ವೀಪಕ್ಕೆ ಲಕ್;‌ ಪ್ರವಾಸಿಗರ ಸಂಖ್ಯೆ ಡಬಲ್!

ಅವರ ತಮ್ಮ ದೀರ್ಘಾಯುಷ್ಯದ ರಹಸ್ಯ ಹೇಳಿದ್ದು ಹೀಗೆ.. ನೀವು ದೀರ್ಘಕಾಲ ಬದುಕುತ್ತೀರೋ ಅಥವಾ ಕಡಿಮೆ ಬದುಕುತ್ತೀರೋ ಎಂಬುದು ಮುಖ್ಯವಲ್ಲ. ನೀವು ಹೆಚ್ಚು ಏನು ಮಾಡುತ್ತೀರಿ ಎಂಬುದಷ್ಟೇ ಮುಖ್ಯ ಎಂದರು. ಜಗತ್ತು ಯಾವಾಗಲೂ ಬದಲಾಗುತ್ತಿರುತ್ತದೆ. ಇದು ಒಂದು ರೀತಿಯ ನಿರಂತರ ಅನುಭವವಾಗಿದೆ. ನಾವು ಇದರಲ್ಲಿ ಸರಿಯಾದ ದಾರಿಯಲ್ಲಿ ಸಾಗಬೇಕು ಎನ್ನುತ್ತಾರೆ ಅವರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರಿರುವ ಟಿನ್ನಿಸ್‌ವುಡ್‌ ಅವರ ದಾಖಲೆಯನ್ನು ಅದರ ತಜ್ಞರು ಮತ್ತು ಜೆರೊಂಟಾಲಜಿ ರಿಸರ್ಚ್ ಗ್ರೂಪ್ ಮೌಲ್ಯಮಾಪನ ಮಾಡಿದೆ.

ಜೀವಂತವಾಗಿರುವ ಹಿರಿಯ ಮಹಿಳೆ

ಜಪಾನ್‌ನ ಜಿರೋಮನ್ ಕಿಮುರಾ ಅವರು 116 ವರ್ಷ 54 ದಿನಗಳವರೆಗೆ ಬದುಕಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. 117 ವರ್ಷ ವಯಸ್ಸಿನ ಸ್ಪೇನ್‌ನ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಜೀವಂತವಾಗಿರುವ ಅತ್ಯಂತ ಹಿರಿಯ ಮಹಿಳೆ.

118ನೇ ವಯಸ್ಸಲ್ಲಿ ನಿಧನ

ವಿಶ್ವದ ಹಿರಿಯ ವ್ಯಕ್ತಿ ಎನಿಸಿದ್ದ ಫ್ರಾನ್ಸ್‌ನ ಲುಸೈಲ್‌ ರ‍್ಯಾಂಡನ್‌ ಅವರು ಕಳೆದ ವರ್ಷ ಜನವರಿಯಲ್ಲಿ 118ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಸಿಸ್ಟರ್‌ ಆ್ಯಂಡ್ರೆ ಎಂದೇ ಖ್ಯಾತಿಯಾಗಿದ್ದ ಲುಸೈಲ್‌ ರ‍್ಯಾಂಡನ್‌ ಅವರು ಆ್ಯಲೆಸ್‌ ಪಟ್ಟಣದಲ್ಲಿ 1904ರ ಫೆಬ್ರವರಿ 11ರಂದು ಜನಿಸಿದ್ದರು. 2021ರಲ್ಲಿ ಅವರಿಗೆ ಕೊರೊನಾ ದೃಢಪಟ್ಟಿದ್ದರೂ ಸೋಂಕನ್ನು ಗೆದ್ದು ಫ್ರಾನ್ಸ್‌ನಾದ್ಯಂತ ಸುದ್ದಿಯಾಗಿದ್ದರು. ಮುಂದಿನ ತಿಂಗಳು ಅವರು 119ನೇ ವಯಸ್ಸಿಗೆ ಕಾಲಿಡುವವರಿದ್ದರು. ಜನ್ಮದಿನಕ್ಕೂ ಕೆಲವೇ ದಿನಗಳ ಮೊದಲೇ ಆ್ಯಂಡ್ರೆ ಮೃತಪಟ್ಟಿದ್ದರು.

ವೃತ್ತಿಯಲ್ಲಿ ನರ್ಸ್‌ ಆಗಿದ್ದ ಲುಸೈಲ್‌ ರ‍್ಯಾಂಡನ್‌ ಅವರ ಆಹಾರ ಪದ್ಧತಿಯೇ ಅವರ ದೀರ್ಘಾಯುಷ್ಯದ ಗುಟ್ಟು ಎನ್ನಲಾಗಿದೆ. ಕಡಿಮೆ ಪ್ರಮಾಣದ ಊಟ, ತಿಂಡಿ ಸೇವಿಸುವುದು, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವುದು, ಲವಲವಿಕೆಯಿಂದ ಇರುವುದೇ ಅವರ ಆರೋಗ್ಯದ ಗುಟ್ಟು ಎಂದು ಮೂಲಗಳು ತಿಳಿಸಿವೆ.

114 ವರ್ಷ ಬದುಕಿದ್ದ ಮೊರಾ

ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೊರಾ ಅವರು 114 ವರ್ಷ ಬದುಕಿದ್ದು, ಇದಕ್ಕಾಗಿ ಅವರು ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಪಡೆದರು.ಇತ್ತೀಚೆಗಷ್ಟೇ ಅವರು ನಿಧನರಾದರು.

Exit mobile version