Site icon Vistara News

2023 ಮುನ್ನೋಟ | ಹೊಸ ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆ, ಯಾವೆಲ್ಲ ಟ್ರೆಂಡ್?

Health @ 2023 Munnota

ರ್ಷದ ಕೊನೆ ಬಂತೆಂದರೆ ಕಳೆದು ಹೋದ ದಿನಗಳ ಮೆಲುಕು ಸಹಜ. ಮಾತ್ರವಲ್ಲ, ಮುಂಬರುವ ವರ್ಷದಲ್ಲಿ ಏನೇನಾಗಬಹುದು ಎಂಬ ನಿರೀಕ್ಷೆಗಳ ಪಟ್ಟಿಯೂ ಇರಬಹುದು. ಇದೀಗ ಬರುವ ವರ್ಷದಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಏನೆಲ್ಲಾ ಟ್ರೆಂಡಿಂಗ್‌ ಇರಬಹುದು, ಜನ ಯಾವುದಕ್ಕೆಲ್ಲಾ ಮಣೆ ಹಾಕಲಿದ್ದಾರೆ ಮತ್ತು ಏನೆಲ್ಲಾ ಬದಲಾವಣೆಗಳು ಈ ಕ್ಷೇತ್ರದಲ್ಲಿ ಆಗಲಿವೆ? ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ(2023 ಮುನ್ನೋಟ).

ಸ್ವಾಸ್ಥ್ಯ
ಈ ಶಬ್ದ ಇತ್ತೀಚಿನ ವರ್ಷಗಳಲ್ಲಿ ಎಂದಿಗಿಂತ ಹೆಚ್ಚು ಕೇಳಿಬರುತ್ತಿದೆ. ಕೆಲವರು ತಮ್ಮ ಖಾಸಗಿ ಸ್ವಾಸ್ಥ್ಯದತ್ತ ಹೆಚ್ಚು ಗಮನ ಹರಿಸಿದರೆ, ಇಡೀ ಸಮಾಜದ ಮತ್ತು ಭೂಮಿಯ ಸ್ವಾಸ್ಥ್ಯದ ಬಗ್ಗೆ ಲಕ್ಷ್ಯ ಕೊಡುವವರ ಸಂಖ್ಯೆಯೂ ಈಗೀಗ ಹೆಚ್ಚುತ್ತಿದೆ. ನಮ್ಮ ದೇಹ ಮತ್ತು ಮನಸ್ಸಿಗೆ ಬೇಕಾಗಿರುವುದೇನು ಎಂಬ ಜನ ಲಕ್ಷ್ಯಕೊಟ್ಟು ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್‌ ಮತ್ತು ನಂತರದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿಗಳು ಬದುಕನ್ನು ಬೇರೆಯದೇ ರೀತಿಯಲ್ಲಿ ನೋಡಲು ಜನರನ್ನು ಪ್ರೇರೇಪಿಸುತ್ತಿವೆ.

ಧ್ವನಿ ಚಿಕಿತ್ಸೆ
ಸೌಂಡ್‌ ಸ್ಕೇಪ್‌ಗಳೆನ್ನಬಹುದಾದ ಸಣ್ಣ ಧ್ವನಿದೃಶ್ಯಗಳ ಮೂಲಕ ಮಾನಸಿಕ ಆಯಾಸ, ಒತ್ತಡವನ್ನು ನಿವಾರಿಸಿ, ಮೆದುಳನ್ನು ಧನಾತ್ಮಕ ದಿಕ್ಕಿನೆಡೆಗೆ ತಿರುಗಿಸುವ ಚಿಕಿತ್ಸೆಯಿದು. ಇದರಲ್ಲಿ ಪ್ರಮುಖವಾಗಿ ಬೈನೌರಲ್‌ ಬೀಟ್ಸ್‌ ಮತ್ತು ಐಸೋಕ್ರೋನಿಕ್‌ ಧ್ವನಿಗಳು ಬಳಕೆಯಲ್ಲಿವೆ. ಎರಡೂ ಕಿವಿಗಳಿಗೆ ಬೇರೆಬೇರೆ ಫ್ರಿಕ್ವೆನ್ಸಿಯ ಶಬ್ದಗಳನ್ನು ಒಟ್ಟಿಗೇ ಕೇಳಿಸಿದಾಗ, ತನ್ನದೇ ಆದ ಮೂರನೆಯ ಮತ್ತು ಭಿನ್ನವಾದ ಶಬ್ದ ಅಥವಾ ರಿದಂ ಅನ್ನು ಮೆದುಳು ಸೃಷ್ಟಿಸಿಕೊಳ್ಳುತ್ತದೆ. ಇದನ್ನು ಬೈನೌರಲ್‌ ಬೀಟ್ಸ್‌ ಎಂದು ಕರೆಯಲಾಗುತ್ತದೆ. ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಿ, ಒತ್ತಡ ನಿವಾರಿಸಿ, ಗಮನ ಕೇಂದ್ರೀಕರಿಸುವಲ್ಲಿ ಅತ್ಯುತ್ತಮ ಪರಿಣಾಮ ಬೀರುವ ತಂತ್ರವಿದು.

ವಿಶ್ರಾಂತಿ
ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವ ಈ ದಿನಗಳಲ್ಲಿ, ಕೆಲವು ಸರಳ ಮತ್ತು ಪ್ರಾಚೀನ ತಂತ್ರಗಳು ನಮ್ಮ ಬದುಕನ್ನು ಗುಣಾತ್ಮಕವಾಗಿ ಬದಲಿಸಬಲ್ಲವು ಎಂಬುದನ್ನು ಮತ್ತೆ ಕಂಡುಕೊಳ್ಳಲಾಗುತ್ತಿದೆ. ಇದೇ ನಿಟ್ಟಿನಲ್ಲಿ, ದೇಹಕ್ಕೆ ಪುನಶ್ಚೈತನ್ಯ ನೀಡುವ ಯೋಗ ಮತ್ತು ಅದರದ್ದೇ ಮಾದರಿಯ ಇತರ ವಿದ್ಯೆಗಳಿಗೆ ಜನಪ್ರಿಯತೆ ಹೆಚ್ಚಬಹುದು. ಮಾತ್ರವಲ್ಲ, ನಿದ್ದೆಯಂಥ ಸರಳ ವಿಶ್ರಾಂತಿಯೂ ನಮಗೆಷ್ಟು ಅತ್ಯಗತ್ಯ ಎಂಬುದು ಜನರಿಗೆ ಮನದಟ್ಟಾಗುತ್ತಿರುವ ದಿನಗಳಿವು. ಹಾಗೆಂದೇ ಯೋಗ ನಿದ್ರೆ, ಧ್ಯಾನ ನಿದ್ರೆ, ನಿದ್ದೆ ಮಾಡಿಸಲೆಂದೇ ರೂಪಿಸಲಾದ ಧ್ವನಿಮುದ್ರಿಕೆಗಳು, ಹಾಡು-ಕಥೆಗಳು- ಇಂಥ ಸಕಲೆಂಟು ಮಾದರಿಗಳು ಜನರಿಗೆ ಅಚ್ಚುಮೆಚ್ಚಾಗುತ್ತಿವೆ. ಕೈಯಲ್ಲಿರುವ ತಂತ್ರಜ್ಞಾನಕ್ಕೆ ಶರಣಾಗಿ ನಿದ್ದೆ ಬಿಡುತ್ತಿರುವ ಜನರನ್ನು ನಿದ್ದೆ ಮಾಡಿಸಲು ಈಗ ಅಂಗೈಗೊಂಬೆಗಳೇ ಸಜ್ಜಾಗಿವೆ.

ಮಾನಸಿಕ ದೃಢತೆ
ಈಗಿನ ಫಿಟ್ನೆಸ್‌ ಮಾದರಿಗಳು ಬದಲಾಗುತ್ತಿವೆ. ದೇಹ ದಂಡಿಸಿ ಅದಕ್ಕೊಂದು ಸರಿಯಾದ ರೂಪ ಕೊಡುವುದು ಮಾತ್ರವೇ ಅಲ್ಲ, ಮಾನಸಿಕವಾಗಿ ದೃಢತೆಯನ್ನು (ಅಂದರೆ, Emotional resilience) ನಮಗದು ನೀಡಬೇಕು. ಹಾಗಾಗಿ “ಈ ವರ್ಕೌಟ್‌ನಿಂದ ನಾನು ಹೇಗೆ ಕಾಣುತ್ತೇನೆ?” ಎನ್ನುವ ಪ್ರಶ್ನೆಗಿಂತಲೂ, “ಇದರಿಂದ ನನಗೇನು ಅನಿಸುತ್ತಿದೆ ಮತ್ತು ಬದುಕು ಎಷ್ಟು ಬದಲಾಗುತ್ತದೆ?” ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ.

ತೇಲುವ ಕೊಳಗಳು
ಇದೊಂದು ಹಳೆಯ ಮತ್ತು ಸರಳ ತಂತ್ರಜ್ಞಾನ. ಎಪ್ಸಂ ಉಪ್ಪನ್ನು ಸೇರಿಸಿದ ನೀರಿನಲ್ಲಿ ತೇಲುವುದಕ್ಕೆ ಸಣ್ಣ ಕೊಳಗಳನ್ನು ಸೃಷ್ಟಿಸಲಾಗುತ್ತದೆ. ಇದರಲ್ಲಿ ಒಂದೆರಡು ತಾಸು ದೇಹ ತೇಲುತ್ತಿರಬೇಕು- ದೇಹ ಎಂದರೆ, ಜೀವಂತ ವ್ಯಕ್ತಿಗಳೇ ಹೊರತು ಅನ್ಯಥಾ ಭಾವಿಸಬೇಡಿ! ಇದರಿಂದ ಮಾನಸಿಕ ಒತ್ತಡ ನಿವಾರಣೆಯಂತೂ ಸರಿಯೇ; ಜೊತೆಗೆ, ಮಾಂಸಖಂಡಗಳ ಮೇಲಿನ ಒತ್ತಡ (ಮನಸ್ಸಿನ ಒತ್ತಡದಲ್ಲಿ ದೇಹವನ್ನು ಬಿಗಿ ಹಿಡಿಯುವುದರಿಂದ ಉಂಟಾಗುವಂಥದ್ದು), ಖಿನ್ನತೆ, ವಿವರಿಸಲಾಗದ ನೋವು- ಇಂಥ ಹಲವು ಸಮಸ್ಯೆಗಳು ಶಮನವಾಗುತ್ತವೆ.

ಕ್ರಯೋಥೆರಪಿ ಮತ್ತು ತಣ್ಣೀರಿನ ಚಿಕಿತ್ಸೆ
ಇದೂ ಸಹ ಹೊಸ ಸೀಸೆಯಲ್ಲಿರುವ ಹಳೆದ ಮಧುವೇ! ಮಾಂಸಖಂಡಗಳಲ್ಲಿನ ನೋವು ಮತ್ತು ಉರಿಯೂತಕ್ಕೆ ಕ್ರೀಡಾಪಟುಗಳು ಮೊದಲಿನಿಂದ ಐಸ್‌ ಇಡುವ ಕ್ರಮವನ್ನು ಬಳಸುತ್ತಿದ್ದಾರೆ. ಇದೇ ತಂತ್ರಜ್ಞಾನ ಆಧರಿಸಿ ರೂಪಿಸಲಾಗಿರುವುದು ಕ್ರಯೋಥೆರಪಿ- ಅತ್ಯಂತ ತಣ್ಣಗಿನ ದ್ರವ ಅಥವಾ ಉಪಕರಣವನ್ನು ಬಳಸಿ, ಅನಗತ್ಯ ಅಂಗಾಂಶಗಳನ್ನು ತೆಗೆಯಲಾಗುತ್ತದೆ. ಮಾತ್ರವಲ್ಲ, ಹೃದ್ರೋಗ ಚಿಕಿತ್ಸೆಗೆ, ರಕ್ತ ಪರಿಚಲನೆಯ ಸಮಸ್ಯೆಗೆ, ಮೈಗ್ರೇನ್‌ ಮತ್ತು ಮೂಡ್‌ ಏರುಪೇರುಗಳಿಗೆ- ಹೀಗೆ ಹತ್ತು ಹಲವು ರೀತಿಯಲ್ಲಿ ಚಿಕಿತ್ಸೆಗಾಗಿ ಇದೀಗ ಬಳಕೆಗೆ ಬರುತ್ತಿದೆ.

ಧ್ಯಾನ
ಇದಂತೂ ನಮ್ಮ ಪ್ರಾಚೀನ ಅಸ್ತ್ರ. ಪ್ರತಿದಿನ ನಿಯಮಿತವಾಗಿ ಧ್ಯಾನ ಅಥವಾ mindfulness meditation ಬದುಕಿನಲ್ಲಿ ನಿಧಾನವಾಗಿ, ಆದರೆ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಬಲ್ಲದು ಎಂಬುದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ. ನಮ್ಮ ದೇಹದ ಬಹಳಷ್ಟು ನೋವು-ನಷ್ಟಗಳಿಗೆ ಮಾನಸಿಕ ಒತ್ತಡ, ತುಮುಲಗಳೇ ಕಾರಣ ಎಂಬುದನ್ನು ತಜ್ಞರೂ ಒಪ್ಪುತ್ತಾರೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ l ನಮ್ಮ ಕ್ಲಿನಿಕ್; ಆರೋಗ್ಯ ಕ್ಷೇತ್ರದ ಸುಧಾರಣೆಯತ್ತ ಮಹತ್ವದ ಹೆಜ್ಜೆ

Exit mobile version