Site icon Vistara News

40 ವರ್ಷ ವಯಸ್ಸಾದ ಮೇಲೆ ಆಹಾರದಲ್ಲಿ ಇವು ಇರಲೇಬೇಕು!

south meal

ಆರೋಗ್ಯವೇ ಭಾಗ್ಯ ಎನ್ನುವ ಮಾತುಂಟು. ಈ ಭಾಗ್ಯ ತನ್ನಷ್ಟಕ್ಕೇ ಬರುವಂಥದ್ದಲ್ಲ, ಇದಕ್ಕಾಗಿ ನಮ್ಮದೂ ಒಂದಿಷ್ಟು ಜವಾಬ್ದಾರಿಗಳು ಉಂಟು. ಉತ್ತಮ ಆರೋಗ್ಯ ಸಿದ್ಧಿಸಿಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ಆಹಾರ ಕ್ರಮ ಮತ್ತು ಸೂಕ್ತ ವ್ಯಾಯಾಮ. ಅದರಲ್ಲೂ ಪ್ರಾಯ ೪೦ ದಾಟಿದರೆ, ಸಿಕ್ಕಿದ್ದೆಲ್ಲಾ ತಿಂದು ಜೀರ್ಣಿಸಿಕೊಳ್ಳುತ್ತೇನೆ ಎಂಬ ಆಸೆ ಬಿಟ್ಟರೇ ಒಳ್ಳೆಯದು. ನೀರೂರುತ್ತಿರುವ ನಾಲಿಗೆಯ ರುಚಿಗೆ ಸ್ವಲ್ಪ ಕಡಿವಾಣ ಹಾಕಿ, ದೇಹಕ್ಕೇನು ಪೋಷಣೆ ಬೇಕು ಎಂಬುದರತ್ತ ಗಮನ ನೀಡಿದರೆ ಆರೋಗ್ಯವೆನ್ನುವ ಭಾಗ್ಯ ಲಕ್ಷ್ಮಿ ಒಲಿದಾಳು.

ಯಾವ ಆಹಾರಗಳು ಸೂಕ್ತ?

ನಾರಿನಂಶ ಇರಲಿ: ಜಠರವೇ ಜಾಡ್ಯದ ಮೂಲ ಎಂಬುದು ವೈದ್ಯ ಲೋಕದ ಮಾತು. ಅದರ ಪ್ರಕಾರ, ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯ ಉಳಿಯಬೇಕು ಎಂದಾದರೆ ಜಠರ-ಸ್ನೇಹಿ, ನಾರಿನಂಶ ಯಥೇಚ್ಛವಾಗಿರುವ ಆಹಾರಗಳು ಬೇಕು. ನಾರಿನಂಶ ಹೇರಳವಾಗಿರುವ ಆಹಾರಗಳಿಂದ ಹೃದಯದ ಆರೋಗ್ಯಕ್ಕೂ ಲಾಭ, ಟೈಪ್-‌೨ ಮಧುಮೇಹದಿಂದಲೂ ದೂರ ಇರಬಹುದು. ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು (ಬಾದಾಮಿ, ಗೋಡಂಬಿ, ಎಳ್ಳು, ಕುಂಬಳ ಬೀಜ, ಅಗಸೆ ಬೀಜ ಇತ್ಯಾದಿ) ಹಸಿರು ಬಟಾಣಿ, ಓಟ್, ಕೀನುವಾ, ಹಸಿರು ತರಕಾರಿಗಳು, ಕೆಂಪು ಅಕ್ಕಿಯಂಥ ಆಹಾರಗಳಲ್ಲಿ ನಾರಿನಂಶ ಸಾಕಷ್ಟಿರುತ್ತದೆ.

ಸೋಡಿಯಂ ಹೆಚ್ಚಿರದ ಆಹಾರ ಬೇಕು: ಬಾಳೆಹಣ್ಣು, ಪಾಲಕ್‌ನಂತರ ಆಹಾರಗಳಲ್ಲಿ ಪೊಟಾಶಿಯಂ ಪ್ರಮಾಣ ಹೆಚ್ಚು. ಇದರಿಂದ ಉಪ್ಪು ತಿನ್ನುವ ಚಪಲದ ಮೇಲೆ ಕಡಿವಾಣ ಹಾಕಬಹುದು ಎಂಬುದು ತಜ್ಞರ ಅಭಿಮತ. ಸೋಡಿಯಂ ಕಡಿಮೆ ಇರುವ ಆಹಾರಗಳು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.

ಪರಿಷ್ಕರಿಸಿದ ಕೊಬ್ಬು ಬೇಡ: ಪರಿಷ್ಕರಿಸಿದ ಆಹಾರಗಳಲ್ಲಿ ಇರುವ ಕೊಬ್ಬು ಆರೋಗ್ಯಕ್ಕೆ ಮಾರಕ. ಬದಲಿಗೆ, ಕೆಂಪು ಮಾಂಸ, ಸಂಸ್ಕರಿಸದ ಹಾಲು, ಮೊಸರು, ತುಪ್ಪ (ಮಿತ ಪ್ರಮಾಣದಲ್ಲಿ) ಆರೋಗ್ಯಕ್ಕೆ ಲಾಭದಾಯಕ.‌

ಇದನ್ನೂ ಓದಿ: ಬ್ಯಾಚುಲರ್‌ ಕಿಚನ್‌: ಫಿಟ್ನೆಸ್‌ ಪ್ರಿಯ ಬ್ಯಾಚುಲರ್‌ಗಳಿಗೆ ದಿಢೀರ್‌ ಪನೀರ್‌ ಫ್ರೈ!

ರೋಗ ನಿರೋಧಕತೆ ಹೆಚ್ಚಿಸಬೇಕು: ಇದಕ್ಕೆ ಅಗತ್ಯವಾಗಿ ಬೇಕಾಗಿರುವುದು ಕೆಲವು ಸರಳ ಅಡುಗೆಮನೆಯ ವಸ್ತುಗಳು. ಕಾಳು ಮೆಣಸು, ಅರಿಶಿನ, ಚಕ್ಕೆ, ಲವಂಗ, ಒಣಶುಂಠಿಯಂಥವು ರೋಗ ನಿರೋಧಕತೆ ಹೆಚ್ಚಿಸುವಲ್ಲಿ ಪರಿಣಾಮಕಾರಿ ಫಲಿತಾಂಶ ನೀಡಬಲ್ಲವು. ಮಾತ್ರವಲ್ಲ, ಆಯುರ್ವೇದದ ಕಷಾಯಗಳು, ತುಳಸಿ, ಯಷ್ಟಿಮಧು, ಅಶ್ವಗಂಧ, ಜೀರಿಗೆ, ಧನಿಯ, ಕಹಿಜೀರಿಗೆ, ನಿಂಬೆ ಹಣ್ಣಿನಂಥವು ಉತ್ತಮ ಮನೆಮದ್ದಾಗಿ ಆರೋಗ್ಯ ಸುಧಾರಿಸಬಲ್ಲವು.

ಮಧುಮೇಹ ಮತ್ತು ಕೊಲೆಸ್ಟ್ರಾಲ್‌ಗೆ ಕಡಿವಾಣ ಅಗತ್ಯ: ಕೆಲವು ದ್ವಿದಳ ಧಾನ್ಯಗಳು ಮತ್ತು ಏಕದಳ ಧಾನ್ಯಗಳ ಸೇವನೆಯಿಂದ ಮಧುಮೇಹವನ್ನು ಹತೋಟಿಯಲ್ಲಿಡಲು ಅನುಕೂಲವಾಗುತ್ತದೆ. ಹೆಚ್ಚಿನ ನಾರಿನಂಶದ ಬಾರ್ಲಿಯಂಥ ಧಾನ್ಯಗಳ ಸೇವನೆ ಅಭ್ಯಾಸವಾಗಲಿ. ನಾರಿನಂಶ ಹೆಚ್ಚಿರುವ ಆಹಾರ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ತರುವುದಕ್ಕೂ ಸಹಾಯಕ.

ಋತುಮಾನಕ್ಕೆ ತಕ್ಕಂತ, ತಾಜಾ ಆಹಾರಕ್ಕೆ ಆದ್ಯತೆ: ಭಾರತೀಯ ಆಹಾರ ಪದ್ಧತಿ ಮೊದಲಿನಿಂದಲೂ ಇದ್ದಿದ್ದು ಋತುಮಾನಕ್ಕೆ ತಕ್ಕಂತೆ. ಆಯಾ ಕಾಲದಲ್ಲಿ ಬೆಳೆಯುವ ಹಣ್ಣು-ತರಕಾರಿಗಳಿಗೇ ಆದ್ಯತೆಯಾಗಿತ್ತು. ಆದರೀಗ ಎಲ್ಲವನ್ನೂ ಸಂಸ್ಕರಿಸಿ, ಶೇಖರಿಸುವ ಉದ್ದಿಮೆಗಳಿಂದಾಗಿ ಆಹಾರ ಪದ್ಧತಿ ಏರುಪೇರಾಗಿದೆ. ಕಾಲಮಾನಕ್ಕೆ ತಕ್ಕ ಬೆಳೆಗಳನ್ನು ಸೇವಿಸುವುದಕ್ಕೆ ಮತ್ತು ತಾಜಾ ತಯಾರಿಸಿದ ಆಹಾರ ಸೇವನೆಗೆ ಆದ್ಯತೆ ಇರಲಿ.

ಇದನ್ನೂ ಓದಿ: ಕುಳಿತು ಕುಳಿತೇ ಸುಸ್ತಾದ ಮಾಂಸಖಂಡಗಳಿಗೆ ಆರಾಮ ನೀಡಿ!

Exit mobile version