ಧೋ ಎಂದು ಸುರಿವ ಮಳೆ! ಮಕ್ಕಳೂ ಮನೆಯೊಳಗೆ ಕೂತು ಇಡೀ ದಿನ ಟಿವಿ ಆನ್ ಮಾಡಿಯೋ, ಆಗಾಗ ಮನೆಯಲ್ಲಿರುವ ಹೆತ್ತವರ ತಲೆ ತಿನ್ನುತ್ತಲೋ, ಗಲಾಟೆ ಮಾಡಿಕೊಂಡೋ, ಮನೆಯಲ್ಲಿ ಅಜ್ಜ ಅಜ್ಜಿಯಂಥ ಹಿರಿಯರಿದ್ದರೆ ಅವರಿಗೆ ಕಾಟ ಕೊಡುತ್ತಲೋ ಕಳೆಯುವುದು ಸಾಮಾನ್ಯ. ಇಲ್ಲಿ ಮಕ್ಕಳೂ ದೊಡ್ಡವರೂ ತಮಗೆ ದಕ್ಕಿದ ಅತ್ಯಮೂಲ್ಯ ಸಮಯ ಕಳೆದುಕೊಳ್ಳುತ್ತಾರೆ. ಮಕ್ಕಳ ಆಟಾಟೋಪದಲ್ಲಿ ದೊಡ್ಡವರಿಗೂ ಯಾವುದೇ ಕೆಲಸ ಮಾಡಲಾಗದೆ, ಈ ಮಳೆಯೊಂದು ನಿಂತರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ದೇವರಿಗೆ ಮಳೆ ನಿಲ್ಲಿಸಯ್ಯಾ ಎಂದು ಮೊರೆಯಿಡುತ್ತಾರೆ. ಮಳೆಯೇ ಹಾಗೆ! ಬಂದರೆ, ಬರಬೇಡ ಎಂದೂ, ಬರದಿದ್ದರೆ ಬಾ ಎಂದೂ ಕರೆಯುವ ಅತಿಥಿ ಸ್ವರೂಪಿ.
ಇಂಥ ಮಳೆಯ ದಿನಗಳನ್ನೂ ಸರಿಯಾಗಿ ಪ್ಲಾನ್ ಮಾಡಿದರೆ ಮನೆಯೊಳಗೆ ಮಕ್ಕಳೊಂದಿಗೆ ಅದ್ಭುತವಾಗಿ ಕಳೆಯಬಹುದು. ರಜೆಯ ಮಜಾ ನಿಜವಾಗಿಯೂ ಮಜಾ ಆಗಿಯೇ ಬದಲಾಗಬಹುದು. ಆದರೆ, ಇವೆಲ್ಲವಕ್ಕೆ ಕೊಂಚ ಪ್ಲಾನಿಂಗ್ ಬೇಕು.
ಮಳೆಯೆಂದರೆ ನೆನಪುಗಳ ಬುತ್ತಿ. ನಮ್ಮ ಬಾಲ್ಯದ ಮಳೆಯ ನೆನಪುಗಳು ನಮಗೆ ಈಗ ಕುಳಿತು ಮೆಲುಕು ಹಾಕುವುದು ಹೇಗೆ ಅಪ್ಯಾಯಮಾನವೋ ಹಾಗೆಯೇ ನಮ್ಮ ಮಕ್ಕಳ ಬಾಲ್ಯದ ಮಳೆಯ ದಿನವನ್ನೂ ಹಾಗೆಯೇ ಅಪ್ಯಾಯಮಾನವಾಗಿಸುವುದು ನಮ್ಮ ಕರ್ತವ್ಯ.
೧. ಕ್ರ್ಯಾಫ್ಟ್ ಮಾಡಿ: ಮಳೆ ಸುರಿವಾಗ ಮಕ್ಕಳಿಗೆ ಯಾವುದಾದರೂ ಕರಕುಶಲ ಕಲೆ ಕಲಿಸಿ. ಒಂದು ಗಂಟೆಯ ಕ್ರಾಫ್ಟ್ ಟೈಮ್ ಇಡಿ. ಬಣ್ಣಬಣ್ಣದ ಕಾಗದಗಳನ್ನು ಹರವಿ ಒಂದು ಗಂಟೆ ಸಮಯ ಮಾಡಿ. ಮನೆಯ ಮುಂದೆ ಹರಿದು ಹೋಗುವ ಮಳೆಯಲ್ಲಿ ಬಿಡಲು ದೋಣಿ ಮಾಡಿ. ಅಥವಾ, ಮಳೆಯ ಚಿತ್ರ ಬಿಡಿಸಲು ಹೇಳಿ. ಮಳೆ ಮೋಡ, ಹಸಿರು ಮರ, ಕೆಸರು ದಾರಿ ಚಿತ್ರವು ಮಕ್ಕಳಿಗೆ ಮನೆಯ ಒಳಗೂ ಒಂದು ಕಲ್ಪನಾ ಲೋಕವನ್ನು ಸೃಷ್ಟಿಸುತ್ತದೆ.
೨. ಮಳೆ ಬಂದು ನಿಂತಾಗ ಮನೆಯ ಮುಂದಿನ ಹರಿವ ನೀರು: ಮನೆಯಂಗಳದ ನೀರು ಮಕ್ಕಳನ್ನು ಖಂಡಿತ ಆಕರ್ಷಿಸದೆ ಇರದು. ಮಳೆ ಬಂದಾಗ ಮಳೆಯಲ್ಲಿ ಆಡುವುದೂ ಕೂಡಾ ಮಕ್ಕಳ ಬಾಲ್ಯದ ನೆನಪಿನ ಬುತ್ತಿಗಳು. ಪ್ರತಿಯೊಂದಕ್ಕೂ ನಿರ್ಬಂಧ ಹಾಕಿ ಮನೆಯೊಳಗೇ ಕೂರಿಸಬೇಡಿ. ಇದ್ದುದರಲ್ಲಿ ಸೇಫ್ ಜಾಗ ನೋಡಿ, ಮಳೆ ಕಡಿಮೆಯಾಯಿತು ಅನಿಸಿದರೆ, ಒಂದರ್ಧ ಗಂಟೆ ಮನಸೋ ಇಚ್ಛೆ ಕುಣಿಯಲು ಬಿಡಿ. ಮಕ್ಕಳು ಒದ್ದೆಯಾದರೆ, ಪುಟ್ಟ ಪುಟ್ಟ ನೀರಿನ ಗುಂಡಿಗಳಲ್ಲಿ ಕಾಲು ಇಳಿಬಿಟ್ಟು ಕುಣಿದರೆ ಕುಣಿಯಲಿ. ಒಂದು ಸೀಮಿತ ಸಮಯಾವಕಾಶವನ್ನು ಅವರಿಗೆ ಕೊಟ್ಟು ಅವರನ್ನು ಖುಷಿಪಡಿಸಿ.
ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!
೩. ಮಕ್ಕಳೊಂದಿಗೆ ಅಡುಗೆ ಮಾಡಿ: ಮಕ್ಕಳೊಂದಿಗೆ ಮಾಡಬಹುದಾದ ತಿಂಡಿಯನ್ನು ಯೋಚಿಸಿ. ಒಂದಿಷ್ಟು ಸಮಯ ಇದಕ್ಕಾಗಿ ತೆಗೆದಿಟ್ಟು ಅವರಾಗಿಯೇ ಅಡುಗೆ ಮಾಡಲು ಬಿಡಿ. ಜೊತೆಗೆ ನೀವಿರಿ. ಕೇಕ್, ಮಫಿನ್ ಮಾಡಿ. ಅಥವಾ ಪಾಪ್ ಕಾರ್ನ್ ಮಾಡಿ. ಅಥವಾ ಬೆಂಕಿಯ ಅಗತ್ಯವಿಲ್ಲದೆ ಮಾಡುವ ಅಡುಗೆಗಳನ್ನು ಅವರೇ ಮಾಡಲಿ. ಅವರೇ ಮಾಡಿ, ತಿನ್ನುತ್ತಾ ಟಿವಿ ನೋಡುವುದು ಇನ್ನೂ ಫನ್!
೪. ಮಕ್ಕಳ ಸೈನ್ಯ ಸೇರಿಸಿ: ಅವಕಾಶವಿದ್ದರೆ, ಮಕ್ಕಳ ಒಂದಿಬ್ಬರು ಗೆಳೆಯರನ್ನೋ, ಸಂಬಂಧಿಕರ ಮಕ್ಕಳನ್ನೋ ಮನೆಗೆ ಕರೆಯಿರಿ. ಅವರೊಂದಿಗೆ ಆಟ ಊಟದ ಸಮಯ ಕಳೆಯಲಿ.
೫. ಮನೆಯ ಒಳಾಂಗಣ ಆಟಗಳನ್ನು ಆಡಲಿ: ಒಂದಿಷ್ಟು ಸಮಯ ಅವರ ಗೆಳೆಯರೊಂದಿಗೆ ಅಣ್ಣ ತಮ್ಮ ಅಕ್ಕ ತಂಗಿಯರಿದ್ದರೆ ಅವರೊಂದಿಗೆ ಅಥವಾ ಇಲ್ಲದಿದ್ದರೆ ಅವರೊಂದಿಗೆ ನೀವೇ ಒಳಾಂಗಣ ಆಟಗಳನ್ನು ಆಡಿ. ಇದರಿಂದ ಇಡೀ ದಿನ, ಟಿವಿ, ಮೊಬೈಲ್, ಟ್ಯಾಬ್ ಎಂದು ಮಕ್ಕಳು ಸಮಯ ಕಳೆಯುವುದು ತಪ್ಪುತ್ತದೆ. ಮಳೆಯ ದಿನಗಳು ಅವರ ಬಾಲ್ಯದ ನೆನಪುಗಳಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ.
ಇದನ್ನೂ ಓದಿ| Weather Report: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜು.1ರಂದು ಭಾರಿ ಮಳೆ ಸಾಧ್ಯತೆ