Site icon Vistara News

Indian Parenting: ಭಾರತೀಯ ಹೆತ್ತವರ ಮಕ್ಕಳ ಪಾಲನೆಯ ಒಳಿತುಗಳಿವು!

indian parenting

ಮಕ್ಕಳನ್ನು ಸರಿಯಾಗಿ ಬೆಳೆಸುವುದು (parenting guide) ಪ್ರತಿ ಹೆತ್ತವರ ಜೀವನದ ಗುರುತರ ಜವಾಬ್ದಾರಿ. ತಮ್ಮ ಕೆಲಸಗಳ ಜೊತೆಗೆ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಮಾಡಿ, ಚೆನ್ನಾಗಿ ಓದಿಸಿ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿ ಮಕ್ಕಳನ್ನು ಒಂದು ಹಂತಕ್ಕೆ ತಲುಪಿಸಿದ ಮೇಲಷ್ಟೇ ಪೋಷಕರು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ. ಅಲ್ಲಿಯವರೆಗೆ ಅವರಿಗೆ ತಮ್ಮ ಜವಾಬ್ದಾರಿ ಮುಗಿದಂತೆ ಅನಿಸುವುದಿಲ್ಲ. ನೂರಕ್ಕೆ ನೂರರಷ್ಟು ಮಂದಿಯೂ ಸರಿಯಾದ ರೀತಿಯಲ್ಲೇ ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಈ ಹಾದಿಯಲ್ಲಿ ಪ್ರತಿಯೊಬ್ಬ ಪೋಷಕನೂ ತಪ್ಪು ಸರಿಯ ಹಾದಿಯಲ್ಲಿ ಒಮ್ಮೆಯಾದರೂ ಕಾಲಿಟ್ಟೇ ಇಟ್ಟಿರುತ್ತಾರೆ. ಆದರೂ, ಭಾರತೀಯರಾದ ನಾವು ಕೆಲವೊಂದು ವಿಚಾರಗಳನ್ನು ಪಾಶ್ಚಾತ್ಯರಿಗೆ ಹೋಲಿಸಿಕೊಂಡು, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಯಾವ ಹಾದಿಯಲ್ಲಿದ್ದೇವೆ ಎಂಬ ಅವಲೋಕನ ಮಾಡಿದಾಗ ನಮ್ಮ ಪಾಲನೆಯ (indian parenting) ಶೈಲಿಯಲ್ಲಿರುವ ಬೆಸ್ಟ್‌ ಸಂಗತಿಗಳಿವು (indian parenting style) ಎಂದು ಪ್ರತಿಯೊಬ್ಬ ಭಾರತೀಯನಿಗೂ ಅನಿಸದೆ ಇರಲಾರದು.

1. ಭಾರತೀಯರು ಇನ್ನೊಬ್ಬರಿಗೆ ಗೌರವ ಕೊಡುವ ವಿಚಾರದಲ್ಲಿ ಎತ್ತಿದ ಕೈ. ಹಾಗಾಗಿ ತಮ್ಮ ಮಕ್ಕಳಿಂದ ಸಾಮಾನ್ಯವಾಗಿ ಭಾರತೀಯ ಪೋಷಕರು ಒರಟು ನಡತೆಯನ್ನು ಇಷ್ಟಪಡುವುದಿಲ್ಲ. ಮಕ್ಕಳು ಹಿರಿಯರಲ್ಲಿ, ಸುತ್ತಮುತ್ತಲ ಮಂದಿಯ ಜೊತೆ, ಅಥವಾ ಗೆಳೆಯರ ಜೊತೆ ಒರಟಾಗಿ ನಡೆದುಕೊಂಡಲ್ಲಿ ಅದನ್ನು ಒಡನೆಯೇ ತಿದ್ದುತ್ತಾರೆ. ಅಥವಾ, ಮನೆಗೆ ಬಂದವರ ಜೊತೆಗೆ, ಹೋದೆಡೆಯಲ್ಲಿ ಹಾಗೆ ಮಾಡಿದರೆ, ನಂತರ ತಮ್ಮ ಮಕ್ಕಳಿಗೆ ಅವರೆಲ್ಲ ಹೋದ ಮೇಲೆ ನೀನು ಮಾಡಿದ್ದು ತಪ್ಪು ಎಂಬ ತಿಳಿವಳಿಕೆಯ ಮಾತು ಹೇಳುತ್ತಾರೆ. ತಮ್ಮ ಮನೆಯಲ್ಲೇ ಈ ಮಾದರಿನ ನಡತೆ ಕಂಡ ಕೂಡಲೇ ಪರಸ್ಪರರಿಗೆ ಗೌರವ ಕೊಟ್ಟು ಮಾತನಾಡಬೇಕು ಎಂಬ ನಡತೆಯ ಪಾಠ ಮನೆಯಲ್ಲಿಯೇ ದೊರೆಯುತ್ತದೆ.

2. ಭಾರತೀಯ ಪೋಷಕರ ಮತ್ತೊಂದು ವಿಶೇಷ ನಡವಳಿಕೆ ಎಂದರೆ, ಅವರು ಮಕ್ಕಳಿಗೆ ಮಾಹಿತಿಯ ವಿಚಾರದಲ್ಲಿ ಯಾವಾಗಲೂ ಶಿಸ್ತು ಹಾಗೂ ಹಿಡಿತ ಇಟ್ಟುಕೊಂಡಿರುತ್ತಾರೆ. ಇಂದಿನ ಡಿಜಿಟಲ್‌ ಯುಗದಲ್ಲಿ, ಮಕ್ಕಳು ಹುಟ್ಟುತ್ತಲೇ ಎಲ್ಲ ಮಾಹಿತಿಗಳೂ ಸುಲಭವಾಗಿ ಅವರ ಬೆರಳ ತುದಿಗೂ ಸಿಗುವ ಅವಕಾಶವಿದ್ದರೂ, ಪೋಷಕರು, ಯಾವ ವಯಸ್ಸಿನವರೆಗೆ ಮಕ್ಕಳಿಂದ ಯಾವ ವಿಚಾರಗಳನ್ನು ತಿಳಿಯದಂತೆ ಇಡಬೇಕು ಎಂಬುದು ಗೊತ್ತಿರುತ್ತದೆ. ಹೀಗಾಗಿ, ಮಕ್ಕಳು ಎಳವೆಯಲ್ಲಿಯೇ ಟಿವಿ, ಇಂಟರ್ನೆಟ್‌ ಅಥವಾ ಯಾವುದನ್ನೇ ಬಳಸುತ್ತಿದ್ದರೂ ಪೋಷಕರು ತಮ್ಮ ಮಕ್ಕಳು, ಅಸಹ್ಯ, ಅಸಭ್ಯ ಹಾಗೂ ಅಶ್ಲೀಲ ವಿಚಾರಗಳನ್ನು ನೋಡದೇ ಇರಲಿ ಎಂಬ ಜಾಗ್ರತೆಯನ್ನು ಆದಷ್ಟೂ ವಹಿಸುತ್ತಾರೆ.

3. ಶಿಕ್ಷಣದ ವಿಚಾರದಲ್ಲೂ ಭಾರತೀಯ ಪೋಷಕರು ಕಟ್ಟುನಿಟ್ಟು. ಸುಮ್ಮನೆ ಕ್ಲಾಸ್‌ ಬಂಕ್‌ ಮಾಡಿ ಸುತ್ತುವುದು ಇತ್ಯಾದಿಗಳನ್ನು ಅವರು ಸಹಿಸಲಾರರು. ದೊಡ್ಡ ಮೊತ್ತದ ಶುಲ್ಕ ಪಾವತಿಸಿ ಕಷ್ಟ ಪಟ್ಟು ತಮ್ಮ ಮಕ್ಕಳನ್ನು ಓದಿಸುವ ಜವಾಬ್ದಾರಿಯನ್ನು ಹೊತ್ತ ಪೋಷಕರು, ನಮಗೆ ಸಾಧ್ಯವಾಗದಿದ್ದ, ಅಥವಾ ನಮ್ಮ ಕಷ್ಟಗಳು ತಮ್ಮ ಮಕ್ಕಳಿಗೆ ಬಾರದಿರಲಿ, ಅವರು ಸರಿಯಾಗಿ ಓದಲಿ ಎಂದೇ ಬಯಸುತ್ತಾರೆ. ಮಕ್ಕಳಿಗಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುತ್ತಾರೆ.

indian parenting style

4. ಭಾರತೀಯರು ಯಾವುದೇ ಧರ್ಮಕ್ಕೆ, ಜಾತಿಗೆ ಸೇರಿರಲಿ, ತಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಭಾರತದ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುತ್ತಾರೆ. ದೇವಸ್ಥಾನಕ್ಕೆ ಹೋಗುವುದಿರಬಹುದು, ಹಬ್ಬ ಹರಿದಿನಗಳನ್ನು ಆಚರಿಸುವುದಿರಬಹುದು, ಮಕ್ಕಳಿಗೆ ಎಳವೆಯಲ್ಲಿಯೇ ಭಾರತೀಯ ಪುರಾಣಗಳ ಕಥೆಗಳನ್ನು ಹೇಳುವುದಿರಬಹುದು ಅಥವಾ ನೆಲದ ಗಂಧದ ವಿಚಾರಗಳನ್ನು ತಿಳಿಸುವುದಿರಬಹುದು ಎಲ್ಲವೂ ಪೋಷಕರು ತಮ್ಮ ಮಕ್ಕಳಿಗೆ ಮಾಡುತ್ತಾರೆ. ಮುಖ್ಯವಾಗಿ, ಪೋಷಕರಿಗಿಂತಲೂ, ಮನೆಯಲ್ಲಿರುವ ಹಿರಿಯರಾದ ಅಜ್ಜ ಅಜ್ಜಿಯರು ಇಂತಹ ವಿಚಾರಗಳನ್ನು ತಮ್ಮ ಮೊಮ್ಮಕ್ಕಳಿಗೆ ದಾಟಿಸುತ್ತಾರೆ. ಭಾರತದಲ್ಲಿರುವ ಕುಟುಂಬ ವ್ಯವಸ್ಥೆಯೇ ಇದಕ್ಕೆ ಕಾರಣ.

ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

5. ಭಾರತೀಯ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ಕೆಲವೊಮ್ಮೆ ಹೆಚ್ಚು ಮೂಗು ತೂರಿಸುವವರಾಗಿಯೂ ಕಾಣುತ್ತಾರೆ. ತಮ್ಮ ಮಕ್ಕಳು ಯಾರ ಜೊತೆ ಬೆರೆಯುತ್ತಾರೆ, ಅವರ ಗೆಳೆಯರು ಒಳ್ಳೆಯವರೇ, ಅವರ ಜೊತೆ ಸುತ್ತಾಡುವ ಮಂದಿಗೆ ದುರಭ್ಯಾಸಗಳಿವೆಯೇ, ಹೊರಗೆ ಹೋದರೂ ರಾತ್ರಿ ತಡವಾಗಿ ಬರದಿರಲಿ, ಯಾಕೆ ಲೇಟು ಇತ್ಯಾದಿ ಪ್ರಶ್ನೆಗಳಿಂದ ಮಕ್ಕಳ ಖಾಸಗಿ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಮಕ್ಕಳ ಬೆಳವಣಿಕೆ ಆ ಘಟ್ಟದಲ್ಲಿ, ಮಕ್ಕಳು ಸರಿಯಾದ ಹಾದಿಯಲ್ಲಿ ನಡೆಯುತ್ತಿದ್ದಾರೆಯೇ ಎಂಬ ಕಾಳಜಿ ಅದಾಗಿರುತ್ತದೆ. ಮಕ್ಕಳಲ್ಲಿ ಸರಿಯಾಗಿ ಅರಿಯವ ವಯಸ್ಸಿನಲ್ಲಿ ಸ್ವೇಚ್ಛಾಚಾರವನ್ನು ಇದು ನಿಗ್ರಹಿಸುತ್ತದೆ. ಮಕ್ಕಳಿಗೆ ಆ ಸಮಯದಲ್ಲಿ ಅದು ತಮ್ಮ ಪೋಷಕರು ಅತಿಯಾಗಿ ಶಿಸ್ತು ಹೇರುತ್ತಿದ್ದಾರೆ ಅನಿಸಿದರೂ, ಮುಂದೆ ಬೆಳೆದು ದೊಡ್ಡ್ವರಾದ ಮೇಲೆ, ಪೋಷಕರು ಹಾಗಿದ್ದುದರಿಂದಲೇ ತಾನು ಹಾದಿ ತಪ್ಪಲಿಲ್ಲ ಎಂಬುದು ತಿಳಿಯುತ್ತದೆ. ಪೋಷಕರ ಕಾಳಜಿ, ಪ್ರೀತಿ ಅರಿವಾಗುತ್ತದೆ.

ಇದನ್ನೂ ಓದಿ: Parenting Tips: ಟೀನೇಜ್‌ ಮಕ್ಕಳ ಹೆತ್ತವರಾಗಿ ನೀವು ನೆನಪಿಟ್ಟುಕೊಳ್ಳಬೇಕಾದ 12 ಸೂತ್ರಗಳು!

Exit mobile version