ನವದೆಹಲಿ: ಮೃತ್ಯವನ್ನು ಜಯಿಸುವ, ಯೌವನವನ್ನು ಕಾಯ್ದುಕೊಳ್ಳುವ ಪ್ರಯತ್ನಗಳು ಪ್ರಾಚೀನ ಕಾಲದಿಂದಲೂ ಇವೆ. ನಮ್ಮ ವೇದ, ಮಹಾಕಾವ್ಯ, ಪುರಾಣಗಳಲ್ಲಿ ಈ ಬಗ್ಗೆ ಪ್ರಸ್ತಾಪಗಳಿವೆ. ಆದರೆ, ವಾಸ್ತವದಲ್ಲಿ ಈ ರೀತಿಯಾಗಲು ಸಾಧ್ಯವಿದೆಯೇ? ನಿಸರ್ಗದ ನಿಯಮಗಳ ವಿರುದ್ಧ ಹೋಗಲು ಸಾಧ್ಯವೇ? ಈ ಪ್ರಶ್ನೆಗೆ ಸಾಧ್ಯ ಎನ್ನುತ್ತಾರೆ ಬಯೋಟೆಕ್ ಸಿಇಒ ಬ್ರಿಯಾನ್ ಜಾನ್ಸನ್ (Bryan Johnson) ಅವರು. ಹೌದು, ಇದು ನಿಜ. 45 ವರ್ಷದ ಜಾನ್ಸನ್ ಅವರು ತಮ್ಮ ದೇಹದ ವಯಸ್ಸನ್ನು 5.1 ವರ್ಷದಷ್ಟು ಕಡಿಮೆ ಮಾಡಿದ್ದಾರೆ. ಇದಕ್ಕಾಗಿ ಅವರು ವರ್ಷಕ್ಕೆ 2 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ, 16.3 ಕೋಟಿ ರೂಪಾಯಿ ವೆಚ್ಚ ಮಾಡುತ್ತಾರೆ!
ಆಗರ್ಭ ಶ್ರೀಮಂತ ಪ್ರಾಜೆಕ್ಟ್ ಬ್ಲೂಪ್ರಿಂಟ್ (project blueprint) ಮೂಲಕ ಬ್ರಿಯಾನ್ ಜಾನ್ಸನ್ ಅವರು ವಯಸ್ಸನ್ನು ಮೀರುವ ಪ್ರಯತ್ನ ಮಾಡುತ್ತಿದ್ದಾರೆ(reverse ageing). 45 ವರ್ಷದ ಜಾನ್ಸನ್ ಸುಮಾರು 30 ವೈದ್ಯರು ಹಾಗೂ ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದಾರೆ. ಈ ತಂಡವು ಜಾನ್ಸನ್ ಅವರ ದೇಹವನ್ನು ನಿತ್ಯ ಮಾನಿಟರ್ ಮಾಡುತ್ತದೆ. ಅವರು ದೇಹವನ್ನು ವಯಸ್ಸಾಗುವುದನ್ನು ತಪ್ಪಿಸುವ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುತ್ತದೆ ಎಂಬ ಬ್ಲೂಮ್‌ಬರ್ಗ್ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ವರ್ಷಕ್ಕೆ 16.3 ಕೋಟಿ ರೂ. ವೆಚ್ಚ
ಬ್ರಾನ್ಸನ್ ಅವರು 18 ವರ್ಷದ ಯುವಕನ ದೇಹವನ್ನು ಹೊಂದುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ವೈದ್ಯಕೀಯ ವೆಚ್ಚವಾಗಿ ಪ್ರತಿ ವರ್ಷ ಅವರು ಸುಮಾರು 16.3 ಕೋಟಿ ರೂ. ವ್ಯಯಿಸುತ್ತಿದ್ದಾರೆ. ಬ್ಲೂಪ್ರಿಂಟ್ ಪ್ರಾಜೆಕ್ಟ್‌ನಡಿ ಅವರು ಸಸ್ಯಾಹಾರದ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ.
ನಿತ್ಯ ಅವರು 1,977 ಕ್ಯಾಲರಿಯಷ್ಟೇ ಆಹಾರವನ್ನು ಸ್ವೀಕರಿಸುತ್ತಾರೆ. ಒಂದು ಗಂಟೆ ವ್ಯಾಯಾಮ ಮಾಡುತ್ತಾರೆ. ಪ್ರತಿ ನಿತ್ಯ ಒಂದೇ ಸಮಯಕ್ಕೆ ನಿದ್ದೆಗೆ ಜಾರುತ್ತಾರೆ. ಬೆಳಗಿನ ಜಾವ 5 ಗಂಟೆಯಿಂದ ಅವರ ದಿನವು ಶುರುವಾಗುತ್ತದೆ. ಎರಡು ಡಜನ್ ಸಪ್ಲಿಮೆಂಟ್ಸ್ ಮತ್ತು ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ಟೈಡ್ ಹಸಿರು ರಸದೊಂದಿಗೆ ದಿನವು ಶುರುವಾಗತ್ತದೆ.
ಇದನ್ನೂ ಓದಿ: Caffeine effects | ನಿಮ್ಮ ಕಳಾಹೀನ ಚರ್ಮದ ರಹಸ್ಯ ಅತಿಯಾದ ಕಾಫಿ ಸೇವನೆಯೂ ಆಗಿರಬಹುದು!
ಹದಿಹರೆಯದವರ ರೀತಿಯ ನಿಮಿರುವಿಕೆ
ದಿನವಿಡೀ ಜಾನ್ಸನ್‌ನ ಪ್ರಮುಖ ಅಂಶಗಳನ್ನು ಅಳೆಯಲಾಗುತ್ತದೆ, ಮೇಲ್ವಿಚಾರಣೆ ಮಾಡಲಾಗುತ್ತದೆ. ಅಲ್ಟ್ರಾಸೌಂಡ್‌ಗಳು, ಎಂಆರ್‌ಐಗಳು, ಕೊಲೊನೋಸ್ಕೋಪಿಗಳು ಮತ್ತು ರಕ್ತ ಪರೀಕ್ಷೆಗಳು ಸಾಮನ್ಯವಾಗಿದೆ ಇವರಿಗೆ. ಜಾನ್ಸನ್ ಅವರ ತೂಕ, ದೇಹದ ದ್ರವ್ಯರಾಶಿ ಸೂಚಿ(body mass index), ದೇಹದ ಕೊಬ್ಬು, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಮತ್ತು ಹೃದಯ ಬಡಿತದ ವ್ಯತ್ಯಾಸಗಳನ್ನು ಪ್ರತಿದಿನ ಅಳೆಯಲಾಗುತ್ತದೆ. ಹದಿಹರೆಯದವರ ರೀತಿಯ ಹಾಗೆಯೇ ರಾತ್ರಿ ವೇಳೆ ಜಾನ್ಸನ್ ಅವರ ನಿಮಿರುವಿಕೆಗಳ ಸಂಖ್ಯೆಯನ್ನು ಮಷಿನ್‌ವೊಂದು ಟ್ರ್ಯಾಕ್ ಮಾಡುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.