ಮಾನವನ ಮೆದುಳು ಅಥವಾ ಮನಸ್ಸು ಮತ್ತು ದೇಹದ ನಡುವಿನ ನಂಟಿನ ಬಗೆಗಿನ ಕುತೂಹಲಕ್ಕೆ ಕೊನೆಯೇ ಇಲ್ಲ. ಅರಿಸ್ಟಾಟಲ್‌ನಿಂದ ಹಿಡಿದು ಆಧುನಿಕ ಕಾಲದ ತತ್ವಜ್ಞಾನಿಗಳವರೆಗೆ, ವಿಜ್ಞಾನಿಗಳವರೆಗೆ ಎಲ್ಲರಿಗೂ ಚಕ್ರವ್ಯೂಹದಂಥ ಮೆದುಳಿನ ಬಗ್ಗೆ ಅದರ ಕಾರ್ಯವ್ಯಾಪ್ತಿಯ ಬಗ್ಗೆ ಚೋದ್ಯ ಹೆಚ್ಚುತ್ತಲೇ ಇದೆ. ಇತ್ತೀಚೆಗಿನ ಸಂಶೋಧನೆಯೊಂದು ಮೆದುಳಿನ ಅಥವಾ ಮನಸ್ಸಿನ ನಂಟು (Mind- body nexus) ದೇಹದೊಂದಿಗೆ ಹೇಗಿದೆ ಎಂಬ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದೆ.
ಮೆದುಳಿನ ಮೋಟರ್ ಕಾರ್ಟೆಕ್ಸ್ ಎಂಬ ಭಾಗದ ಕ್ಯಾರ್ಯವ್ಯಾಪ್ತಿಯ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿರುವ ವಿಜ್ಞಾನಿಗಳು, ಈವರೆಗೆ ತಿಳಿದಿದ್ದಕ್ಕಿಂತ ಇನ್ನಷ್ಟು ಹೊಸ ವಿಷಯಗಳನ್ನು ಅರಿತುಕೊಂಡಿದ್ದಾರೆ. ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವಾರು ಭಾಗಗಳ ಚಲನೆಯ ಒಡೆತನವು ಮೆದುಳಿನ ಈ ಮೋಟರ್ ಕಾರ್ಟೆಕ್ಸ್ ಭಾಗದ ಮೇಲಿತ್ತು. ಆದರೆ ಅದಷ್ಟೇ ಅಲ್ಲ, ಯೋಚನೆ, ಯೋಜನೆ, ನೋವು ಮತ್ತಿತರ ಭಾವನೆಗಳು, ರಕ್ತದೊತ್ತಡ ಮತ್ತು ಎದೆ ಬಡಿತವನ್ನೂ ಇದೇ ಭಾಗ ನಿರ್ವಹಿಸುತ್ತದೆ (Mind- body nexus) ಎನ್ನುವ ವಿಷಯ ಪತ್ತೆಯಾಗಿದೆ.
ಮೋಟರ್ ಕಾರ್ಟೆಕ್ಸ್ ಒಳಗಿನ ಒಂದು ಮಡಿಕೆಯ ಗೆಣ್ಣಿನಲ್ಲಿ ಸುಪ್ತವಾಗಿರುವ ಈ ಭಾಗವನ್ನು ಶಾರೀರಿಕ ಅರಿವಿನ ಕ್ರಿಯಾ ಜಾಲ (Somato-cognitive action network) ಎಂದು ವಿಜ್ಞಾನಿಗಳು ಕರೆದಿದ್ದಾರೆ. ದೇಹದ ಕ್ರಿಯಾ ಯೋಜನೆಗಳನ್ನು, ಅಂದರೆ ಯೋಜನೆಗಳನ್ನು ರೂಪಿಸುವ ಮತ್ತು ಗುರಿ ಹೊಂದುವಂಥ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾದ ಕೆಲಸಗಳನ್ನು ಮೆದುಳಿನ ಈ ಭಾಗ ನಡೆಸುತ್ತದೆ. ಮೆದುಳಿನ ಹೊರಭಾಗದ ಸೆರೆಬ್ರೆಲ್ ಕಾರ್ಟೆಕ್ಸ್‌ನ ಒಂದು ಭಾಗ ಈ ಮೋಟರ್ ಕಾರ್ಟೆಕ್ಸ್.
ಮಂಗಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ, ಮೆದುಳಿನ ಈ ಭಾಗವು ಹೊಟ್ಟೆ, ಅಡ್ರಿನಲ್ ಗ್ರಂಥಿ ಸೇರಿದಂತೆ ದೇಹದ ಆಂತರಿಕ ಅಂಗಗಳ ಮೇಲೆಯೂ ಕೆಲವು ವಿಷಯಗಳಲ್ಲಿ ಹಿಡಿತ ಹೊಂದಿದ್ದು ಕಂಡುಬಂದಿದೆ. ಬೆವರುವುದು, ಎದೆಬಡಿತ ಹೆಚ್ಚಿಸುವುದು ಮುಂತಾದ ಪ್ರತಿಕ್ರಿಯೆಗಳನ್ನು ಇದು ನಿರ್ವಹಿಸುತ್ತದೆ. “ಮಾನದ ದೇಹದ ಚಲನೆಗಳ ಕೇಂದ್ರ ಕೇವಲ ಒಂದೇ ಅಲ್ಲ. ಇದಕ್ಕೆ ಎರಡು ಪ್ರತ್ಯೇಕ ನಿಯಂತ್ರಣ ಕೇಂದ್ರಗಳಿವೆ. ನಮ್ಮ ಕೈ, ಮುಖ ಮತ್ತು ಕಾಲುಗಳ ಚಲನೆಗೆ ಕಾರಣವಾಗುವಂಥದ್ದು ಒಂದು. ಇದರಿಂದ ಬರೆಯುವುದು, ಮಾತಾಡುವುದು ಮುಂತಾದ ಕೆಲಸಗಳು ನಡೆಯುತ್ತವೆ. ಅಂದರೆ ಇದರಲ್ಲಿ ಕೇವಲ ಒಂದು ಕೆಲಸ ಒಮ್ಮೆಲೆ ಆಗುತ್ತದೆ. ಇನ್ನೊಂದು- ಒಂದಕ್ಕಿಂತ ಹೆಚ್ಚು ಕೆಲಸಗಳು ಒಟ್ಟಿಗೆ ಜರುಗುವಂಥ ಏಕೀಕೃತವಾದ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಉನ್ನತ ಮಟ್ಟದ ಯೋಜನೆ ಮತ್ತು ಯೋಜನೆಗಳೂ ಇಲ್ಲಿ ನಡೆಯುತ್ತವೆ” ಎಂಬುದು ಈ ಅಧ್ಯಯನದಲ್ಲಿ ಪಾಲ್ಗೊಂಡ ತಜ್ಞರ ಅಭಿಮತ.
ಇದನ್ನೂ ಓದಿ: World Liver Day: ಯಕೃತ್ತಿನ ಕ್ಷೇಮದಲ್ಲಿದೆ ಆರೋಗ್ಯದ ಸೂತ್ರ
ಅಧ್ಯಯನದ ಕೆಲವು ವಿವರಗಳನ್ನು ಹೇಳುವುದಾದರೆ, ಮೆದುಳಿನ ಜೈವಿಕ ಲೆಕ್ಕಾಚಾರದ ಕಾರ್ಯಗಳ ಒಟ್ಟು ಮೊತ್ತವನ್ನೇ ʻಮನಸ್ಸುʼ ಎನ್ನಬಹುದು. ಆಧುನಿಕ ನರವಿಜ್ಞಾನದಲ್ಲಿ ಮನಸ್ಸು-ದೇಹದ ಸಂವಹನದ ಬಗ್ಗೆ ಹೆಚ್ಚಿನ ಸಂವಾದಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ, ಮೆದುಳು ಮಾತ್ರವಲ್ಲದೆ, ಮನಸ್ಸು ಮತ್ತು ದೇಹದ ಹೊಂದಾಣಿಕೆಯ ಬಗ್ಗೆ ಈಗಿನ ಅಧ್ಯಯನ ಹೆಚ್ಚಿನ ವಿಷಯ ತಿಳಿಸುತ್ತದೆ. ಅದರಲ್ಲೂ, ಅಸಂಬದ್ಧ ಅಥವಾ ಸುಸಂಬದ್ಧ ಯೋಚನೆ-ಯೋಜನೆಗಳು, ಪ್ರೇರಣೆಯಂಥ ಸಂಪೂರ್ಣ ಮಾನಸಿಕ ಮಟ್ಟದ್ದೇ ಆದ ವಿಷಯಗಳು ಮತ್ತು ಇದಕ್ಕೆ ದೇಹ ಸ್ಪಂದಿಸುವ ರೀತಿಯ ಬಗ್ಗೆ ಬಹಳಷ್ಟು ವಿಷಯಗಳು ಈಗ ಬಹಿರಂಗಗೊಂಡಿವೆ. ದೇಹ ಮತ್ತು ಮನಸ್ಸು ಒಂದಕ್ಕೊಂದು ಭಿನ್ನವಾದದ್ದಲ್ಲ (Mind-body nexus) ಎಂಬ ವಾದಕ್ಕೆ ಈಗ ಪುಷ್ಟಿ ದೊರೆಯುವ ಹಂತದಲ್ಲಿದೆ.
ಇದಕ್ಕಾಗಿ ನವಜಾತ ಶಿಶುಗಳಿಂದ ಹಿಡಿದು, ವಯಸ್ಕರವರೆಗೆ ಹಲವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲೂ ನವಜಾತ ಶಿಶುಗಳಲ್ಲಿ ಶಾರೀರಿಕ ಅರಿವಿನ ಕ್ರಿಯಾ ಜಾಲ ಇನ್ನೂ ಬಲಿತಿಲ್ಲದಿರುವುದು ಕಂಡುಬಂದಿದೆ. ಹತ್ತು ವರ್ಷದೊಳಗಿನ ಮಕ್ಕಳಲ್ಲೂ ಈ ಜಾಲ, ವಯಸ್ಕರಲ್ಲಿದ್ದಂತೆ ಹೆಚ್ಚಿನ ಪ್ರವರ್ಧಮಾನವನ್ನು ತೋರಿಸಿಲ್ಲ.
“ಮೆದುಳಿನ ಉದ್ದೇಶದ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ನಮ್ಮ ಸುತ್ತಲಿನ ಜಗತ್ತನ್ನು ಅರಿತು, ವಿಶ್ಲೇಷಿಸುವುದು ಮೆದುಳಿನ ಉದ್ದೇಶ ಎಂದು ಕೆಲವು ನರಶಾಸ್ತ್ರಜ್ಞರು ವಿವರಿಸುತ್ತಾರೆ. ಆದರೆ ಇನ್ನೂ ಹಲವರ ಪ್ರಕಾರ, ಯಾವುದೇ ಒಂದು ಸನ್ನಿವೇಶದಲ್ಲಿ ಉಳಿಯುವ ಮತ್ತು ವಿಕಾಸ ಹೊಂದುವ ಅತ್ತ್ಯುತ್ತಮ ಮಾರ್ಗವನ್ನು ನಮ್ಮ ಶಾರೀರಿಕ ಕ್ರಿಯೆ ಮತ್ತು ಬೌಧ್ಧಿಕ ನಡವಳಿಕೆಯ ಮೂಲಕ ತೋರ್ಪಡಿಸುವುದು ಮೆದುಳಿನ ಉದ್ದೇಶ. ಈ ಎರಡೂ ಸರಿಯೆಂದೇ ತೋರುತ್ತದೆ” ಎಂಬುದು ಅಧ್ಯಯನಕಾರರ ಮಾತು.