ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಗ್ಗರಣೆ ಡಬ್ಬಿ, ಸವಿರುಚಿ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಹಿರಿಯ ನಿರೂಪಕ ಹಾಗೂ ನಿರ್ದೇಶಕ ಮುರಳಿಯವರು ಕೇವಲ ಅಡುಗೆ ಕಾರ್ಯಕ್ರಮಗಳಲ್ಲಿ ಮಾತ್ರ ಕೈ ರುಚಿ ಟೇಸ್ಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು! ಅವರು ಇತರೆ ಕ್ಷೇತ್ರದಲ್ಲೂ ಬ್ಯುಜಿಯಾಗಿದ್ದಾರೆ. ಜತೆಗೆ ಫ್ಯಾಷನಬಲ್ ಪರ್ಸನಾಲಿಟಿ ಅವರದು. ಈ ಬಗ್ಗೆ ಸೆಲೆಬ್ರಿಟಿ ಫ್ಯಾಷನ್ ಕಾರ್ನರ್‌ನಲ್ಲಿ ವಿಸ್ತಾರದೊಂದಿಗೆ ಅವರು ಮಾತನಾಡಿದ್ದಾರೆ.
ವಿಸ್ತಾರ: ಒಗ್ಗರಣೆ ಡಬ್ಬಿ, ಸವಿರುಚಿ ಸೇರಿದಂತೆ ಅಡುಗೆ ಕಾರ್ಯಕ್ರಮಗಳ ಮೂಲಕ ಜಗತ್ತಿನೆಲ್ಲೆಡೆ ನಿಮ್ಮದೇ ಮಹಿಳಾ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿರುವ ನಿಮ್ಮ ನಿತ್ಯದ ಲೈಫ್‌ಸ್ಟೈಲ್ ಬಗ್ಗೆ ಹೇಳಿ.
ಮುರಳಿ: ನನ್ನದು ಕಂಪ್ಲೀಟ್ ಸಿಂಪಲ್ ಬಿಂದಾಸ್ ಲೈಫ್‌ಸ್ಟೈಲ್. ಅಡಂಬರವಿಲ್ಲ. ಯಾರನ್ನೂ ಫಾಲೋ ಮಾಡುವುದಿಲ್ಲ. ನನ್ನದೇ ಆದ ಸ್ವಾಭಿಮಾನಿ ವ್ಯಕ್ತಿತ್ವ ಬಿಂಬಿಸುವ ಲೈಫ್‌ಸ್ಟೈಲ್.
ವಿಸ್ತಾರ: ಅಪಾರ ಅಭಿಮಾನಿಗಳನ್ನು ಗಳಿಸಿರುವ ನಿಮಗೆ ಫ್ಯಾಷನ್ ಬಗ್ಗೆ ಒಲವಿದೆಯಾ?
ಮುರಳಿ: ಖಂಡಿತ. ಹಾಗೆಂದು ಸ್ಟೇಜ್ ಮೇಲೆ ವಾಕ್ ಮಾಡುವ ಮಾಡೆಲ್‌ಗಳಂತೆ ಇರುವುದಲ್ಲ! ಬದಲಿಗೆ, ಫ್ಯಾಷನ್ ಅಂದ್ರೆ ನಾವು ಎಂಬುದನ್ನು ಬಲವಾಗಿ ನಂಬುವುದು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಫ್ಯಾಷನ್ ಇಷ್ಟಪಡುತ್ತಾರೆ. ಅದು ಅವರವರ ಭಾವಕ್ಕೆ ತಕ್ಕಂತೆ ಇಚ್ಛೆಗೆ ತಕ್ಕಂತೆ ಕಾಣಿಸಿಕೊಳ್ಳುವುದೇ ಫ್ಯಾಷನ್. ಇಷ್ಟಪಟ್ಟು ಧರಿಸುವ ಉಡುಗೆ ತೊಡುಗೆಗಳು ಧರಿಸಿದಾಗ ಆಕರ್ಷಕವಾಗಿ ಕಂಡಾಗ ಅದು ಅವರವರ ಫ್ಯಾಷನ್ ಸ್ಟೇಟ್‌ಮೆಂಟ್ ಆಗಿ ಬದಲಾಗುತ್ತದೆ. ಹಾಗೆಯೇ ನನ್ನದು ಕೂಡ.
ವಿಸ್ತಾರ: ನಿಮ್ಮ ವಾರ್ಡ್‌ರೋಬ್ ಮ್ಯೂಸಿಯಂ ಇದ್ದ ಹಾಗಿದೆ ಎಂದು ಕೇಳಿದ್ದೇವೆ. ಇದು ನಿಜಾನಾ?
ಮುರಳಿ: ಹೌದು. ಸುಮಾರು ೧೯೯೪ರಲ್ಲಿ ಈ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದಾಗಿನಿಂದ ಧರಿಸಿದ ಸಾವಿರಾರು ಉಡುಪುಗಳು ನನ್ನ ಕಲೆಕ್ಷನ್‌ನಲ್ಲಿವೆ. ಅವುಗಳಲ್ಲಿ ಬ್ಲೇಝರ್, ಕೋಟ್, ಸೂಟ್ ಸೇರಿದಂತೆ ಸಾವಿರಾರು ಉಡುಪುಗಳಿವೆ. ಒಂದೂವರೆ ಸಾವಿರಗಳಷ್ಟು ಬರೀ ಟೀ ಶರ್ಟ್‌ಗಳೇ ಇವೆ. ಇಲ್ಲಿಯವರೆಗೂ ಆನ್‌ಸ್ಕ್ರೀನ್‌ನಲ್ಲಿ ರೀಪೀಟ್ ಮಾಡಿಲ್ಲ. ಹಾಗಾಗಿ ವಾರ್ಡ್‌ರೋಬ್ ಮ್ಯೂಸಿಯಂನಂತಾಗಿದೆ.
ವಿಸ್ತಾರ: ನಿಮ್ಮ ಸ್ಟೈಲಿಂಗ್‌ಗೆ ಯಾರು ಅಡ್ವೈಸರ್?
ಮುರಳಿ: ನನ್ನ ಮಕ್ಕಳೇ ನನ್ನ ಸ್ಟೈಲಿಂಗ್ ವಿಮರ್ಶಕರು. ಈ ಜನರೇಷನ್‌ನ ಮಕ್ಕಳ ವಿಮರ್ಶೆಯೇ ನಮಗೆ ನಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಫ್ಯಾಷನ್ ಪ್ರೇಮ ಮೂಡಿಸುತ್ತದೆ.
ವಿಸ್ತಾರ: ನೀವು ಬ್ರಾಂಡ್ ಫ್ರೀಕ್ ಎನ್ನಬಹುದಾ?
ಮುರಳಿ: ಖಂಡಿತ ಇಲ್ಲ. ನನಗೆ ಬ್ರಾಂಡ್ ಬಗ್ಗೆ ಅಷ್ಟಾಗಿ ಕ್ರೇಜ್ ಇಲ್ಲ. ಧರಿಸಿ ನೋಡಿದಾಗ ಚೆನ್ನಾಗಿ ಕಾಣಬೇಕಷ್ಟೇ! ಆಗಷ್ಟೇ ನಾವು ಧರಿಸಿದ ಉಡುಪಿಗೆ ಬೆಲೆ ಸಿಗುವುದು. ಉಡುಪಿನಿಂದ ನಮಗೆ ಯಾವತ್ತೂ ಬೆಲೆ ಸಿಗಬಾರದು. ಇದು ನನ್ನ ಸ್ಟೈಲಿಂಗ್ ಸಿದ್ಧಾಂತ. ವ್ಯಕ್ತಿಯ ಐಡೆಂಟಿಟಿ ಬ್ರಾಂಡ್ ಕ್ರಿಯೇಟ್ ಮಾಡಬೇಕು. ಏನಂತೀರಾ!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion News | ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪಗೆ ಸಂದ ಹಾಲ್ ಆಫ್ ಫೇಮ್ ಅವಾರ್ಡ್