Site icon Vistara News

ನೀವು ದಿನಕ್ಕೆ ಎಷ್ಟು ಪ್ಲಾಸ್ಟಿಕ್‌ ಸೇವಿಸುತ್ತೀರ?

ಇತ್ತೀಚೆಗೆ ಜನರು ಪ್ಲಾಸ್ಟಿಕ್‌ ಕಪ್‌ಗಳ ಬಳಕೆ ಕಡಿಮೆ ಮಾಡಿದ್ದಾರೆ ಆದರೆ ಅದೇ ವೇಳೆ ಡಿಸ್ಪೋಸಬಲ್‌ ಕಪ್ಸ್‌ ಅಂದರೆ ಪೇಪರ್‌ ಕಪ್‌ ಬಳಕೆ ಜಾಸ್ತಿ ಮಾಡಿದ್ದರೆ. ಹಾಗಿದ್ದರೆ ಈ ಪೇಪರ್‌ ಕಪ್‌ಗಳಲ್ಲಿ ಪ್ಲಾಸ್ಟಿಕ್‌ ಇರುವುದಿಲ್ಲವೇ? ಇಲ್ಲಿದೆ ಉತ್ತರ.

ಇತ್ತೀಚೆಗೆ ನಡೆದ ಒಂದು ಅಧ್ಯಯನದಲ್ಲಿ ಈ ಪೇಪರ್‌ ಕಪ್‌ಗಳಲ್ಲಿ ಕೂಡ ಪ್ಲಾಸ್ಟಿಕ್‌ ಅಂಶಗಳಿರುತ್ತದೆ ಎಂದು ತಿಳಿದು ಬಂದಿದೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಲಕ್ಷ ಕೋಟಿಗೂ ಅಧಿಕ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಒಂದು ಪೇಪರ್‌ ಕಪ್‌ನಲ್ಲಿ ಇರುತ್ತವೆ. ಇದನ್ನು ಕೇಳಿದರೆ ಗಾಬರಿ ಆಗಬಹುದಲ್ಲವೇ? ಆ ಪ್ಲಾಸ್ಟಿಕ್‌ ಅಂಶಗಳು ನೀವು ಕುಡಿಯುವ ಕಾಫಿ, ಅಥವಾ ಇತರೆ ಜ್ಯೂಸ್‌ಗಳೊಂದಿಗೆ ಸೇರಿ ನಿಮ್ಮ ದೇಹಕ್ಕೂ ಪ್ರವೇಶಿಸುತ್ತವೆ ಎಂದರೆ ಇನ್ನೆಷ್ಟು ಗಾಬರಿಯಾಗಬಹುದು?

ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಟಾಂಡರ್ಡ್‌ ಹಾಗೂ ಟಕ್ನಾಲಜಿ ಒಂದು ಸಂಶೋಧನೆ ನಡೆಸಿದೆ. ಬಿಸಿ ಕಾಫಿ ಹಾಗೂ ಇತರೆ ಪಾನೀಯಗಳನ್ನು ಹಾಕುವ ಪೇಪರ್ ಕಪ್‌ಗಳಿಗೆ ಒಂದು ಸಣ್ಣ ಪ್ರಮಾಣದ ಪಾಲಿಥೀನ್‌ ಕೋಟ್‌ ಮಾಡಿರಲಾಗುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಈ ಸಂಶೋಧನೆ ಪ್ರಕ್ರಿಯೆಯಲ್ಲಿ ಮೊದಲು ಒಂದು ಪೇಪರ್‌ ಕಪ್‌ನಲ್ಲಿ ಬಿಸಿ ನೀರನ್ನು ಹಾಕಿದಾಗ ಕಪ್‌ಗಳಲ್ಲಿದ್ದ ಟ್ರಿಲಿಯನ್‌ನಷ್ಟು ನ್ಯಾನೋಪಾರ್ಟಿಕಲ್ಸ್‌ ನೀರಿಗೆ ಸೇರಿದ್ದು ಕಂಡುಬಂದಿದೆ.

ಹೀಗೆ ಹಲವು ಸಂಶೋಧನೆಯ ಬಳಿಕ ತಜ್ಞರು ಈ ಪ್ಲಾಸ್ಟಿಕ್‌ನ ಗಾತ್ರ ಸುಮಾರು 30 ರಿಂದ 80 ನ್ಯಾನೋಮೀಟರ್‌ ಇರಬಹುದು ಎಂದು ತಿಳಿಸಿದ್ದಾರೆ. ಕೆಲವು 200 ನ್ಯಾನೋಮೀಟರ್‌ಗೂ ಹೆಚ್ಚಿನ ಗಾತ್ರದ ಪ್ಲಾಸ್ಟಿಕ್‌ ಕೂಡ ಇರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ತಜ್ಞರು ʼಈ ಪ್ಲಾಸ್ಟಿಕ್‌ನ ಗಾತ್ರ ಅತಿ ಕಡಿಮೆ ಅಂತನಿಸಿದರೂ ಇವು ಮನುಷ್ಯನ ದೇಹಕ್ಕೆ ಹಾನಿ ಉಂಟುಮಾಡುವಷ್ಟು ದೊಡ್ಡದೇ ಆಗಿದೆ. ಮನುಷ್ಯನ ದೇಹದ ಸೆಲ್‌ಗಳಿಗೆ ಹೊಕ್ಕಿ ಹಾನಿ ಉಂಟು ಮಾಡುತ್ತದೆʼ ಎಂದು ಹೇಳಿದ್ದಾರೆ.

ಒಮ್ಮೆ ಬಿಸಿ ಕಾಫಿಯನ್ನು ಟೇಕ್‌ ಅವೇ ಎಂಬ ಟ್ರೆಂಡ್‌ಗೆ ಬಲಿಯಾಗುವ ಮುನ್ನ ಒಮ್ಮೆ ಗಂಭೀರವಾಗಿ ಯೋಚಿಸುವುದು ಉತ್ತಮ. ಬಿಸಿ ಬಿಸಿ ಕಾಫಿಯ ಜೊತೆ ಪ್ಲಾಸ್ಟಿಕ್‌ ಕೂಡ ದೇಹಕ್ಕೆ ಸೇರುವ ಸಾಧ್ಯತೆ ಇದೆ. ಇನ್ನು ಈ ಪೇಪರ್‌ ಕಪ್‌ ಬಳಸುವ ಮುನ್ನ ಎಚ್ಚರವಹಿಸಬೇಕಾಗಿರುವ ಜವಾಬ್ಧಾರಿ ನಿಮ್ಮದಾಗಿದೆ.

ಇದನ್ನೂ ಓದಿ: ನಡುರಾತ್ರಿ ಏನಾಗುತ್ತೆ ಹೃದಯಕ್ಕೆ? ಜಯದೇವ ಆಸ್ಪತ್ರೆ ಹೊರಗೆಡಹಿದ ಸತ್ಯ

Exit mobile version