ಶೀಲಾ ಸಿ. ಶೆಟ್ಟಿ, ಬೆಂಗಳೂರು : ನವರಾತ್ರಿಯ ದೇಸಿ ಲುಕ್‌ಗೆ ಎಥ್ನಿಕ್ ಟಚ್ ನೀಡುವ ಕ್ಲಿಪಾನ್ಸ್ ಸಾಥ್ ನೀಡುತ್ತಿವೆ. ಮೂಗು ಚುಚ್ಚದವರು ಕೂಡ ಧರಿಸಬಹುದಾಗಿರುವ ಈ ದೇಸಿ ವಿನ್ಯಾಸದ ನಾನಾ ಬಗೆಯ ಪ್ರೆಸ್ಸಿಂಗ್ ಮೂಗುತಿಗಳು ಫೆಸ್ಟೀವ್ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದೆ.
ದುರ್ಗಾದೇವಿ ಮುಖದ ಕ್ಲಿಪಾನ್ಸ್
ಇಂದು ಅತಿ ಹೆಚ್ಚು ಟ್ರೆಂಡ್‌ನಲ್ಲಿರುವುದು ನವಶಕ್ತಿಯ ಕಾನ್ಸೆಪ್ಟ್ ಹೊಂದಿರುವ ದುರ್ಗಾ ದೇವಿಯ ಕ್ಲಿಪಾನ್ಸ್. ದೇವಿ ಮುಖ, ತಾವರೆ, ತ್ರಿಶೂಲ ಹೀಗೆ ನಾನಾ ಡಿಸೈನ್ ಒಳಗೊಂಡ ನವರಾತ್ರಿಗೆ ಸೂಟ್ ಆಗುವಂತಹ ಕ್ಲಿಪಾನ್ಸ್ ಟ್ರೆಂಡಿಯಾಗಿವೆ. ಅವುಗಳನ್ನು ಹೊರತುಪಡಿಸಿದರೆ, ಬಗೆಬಗೆಯ ಫ್ಲವರ್, ಸ್ಟಾರ್, ನಾಗರಹಾವು, ಸೂರ್ಯ, ಚಂದ್ರ, ಪ್ರಾಣಿ-ಪಕ್ಷಿ,ಓಂ, ಶಿವ ಸೇರಿದಂತೆ ಎಥ್ನಿಕ್ ಲುಕ್ ನೀಡುವ ನಾನಾ ಬಗೆಯ ಸ್ಪಿರಿಚುಯಲ್ ಸಿಂಬಲ್‌ನ ಕ್ಲಿಪಾನ್‌ಗಳು, ಜೆಮೆಟ್ರಿಕ್ ಹಾಗೂ ಅಬ್‌ಸ್ಟ್ರಾಕ್ಟ್ ವಿನ್ಯಾಸದವು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಕೈಗೆಟಕುವ ಬೆಲೆಗೆ ದೊರಕುವ ಕ್ಲಿಪಾನ್ಸ್
ಎಲ್ಲದಕ್ಕಿಂತ ಸಂತಸದ ವಿಚಾರವೆಂದರೆ, ಕೈಗೆಟಕುವ ಬೆಲೆಯಲ್ಲಿ ಇವು ದೊರಕುತ್ತಿರುವುದು. ಬ್ಲಾಕ್ ಮತ್ತು ವೈಟ್ ಮೆಟಲ್ ಕ್ಲಿಪಾನ್ಸ್ ಅತಿ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ. ಧರಿಸುವವರಿಗೆ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತಿವೆ. ಪರಿಣಾಮ ಸದ್ಯಕ್ಕೆ ಮಿನಿ ಮೂಗುತಿಗಳು ಸೈಡಿಗೆ ಸರಿದಿವೆ. ಮೂಗು ಚುಚ್ಚಿಸದೆಯೇ ಸುಲಭವಾಗಿ ಯಾವಾಗ ಬೇಕಾದರೂ ಧರಿಸಬಹುದಾದ ಇವಕ್ಕೆ ಮಹಿಳೆಯರು ಫಿದಾ ಆಗಿದ್ದಾರೆ. ಇನ್ನು ಕೈಗೆಟಕುವ ಬೆಲೆಗೆ ದೊರಕುವ ಇವನ್ನು ಸಾಕಷ್ಟು ಉಡುಪಿಗೆ ಮ್ಯಾಚ್ ಆಗುವಂತೆ ಒಟ್ಟಿಗೆ ಖರೀದಿಸಬಹುದು. ಕಡಿಮೆ ಎಂದರೇ ಇವುಗಳ ಬೆಲೆ ಸರಿ ಸುಮಾರು ೨೫ ರೂ.ಗಳಿಂದ ಆರಂಭವಾಗುತ್ತದೆ. ಎಷ್ಟೇ ಅಪರೂಪದ ವಿನ್ಯಾಸ ಇದ್ದರೂ ಕೂಡ ೧೦೦ ರೂ. ಬೆಲೆ ದಾಟುವುದಿಲ್ಲ. ಹಾಗಾಗಿ ಕೊಳ್ಳುವವರ ಸಂಖ್ಯೆ ಬರಬರುತ್ತಾ ಹೆಚ್ಚಾಗಿದೆ” ಎನ್ನುತ್ತಾರೆ ಡಿಸೈನರ್ಸ್.
ಈ ಜನರೇಷನ್ ಹುಡುಗಿಯರ ಆಯ್ಕೆ
“ಪಿಯರ್ಸಿಂಗ್ ಇಲ್ಲದೇ ಸುಲಭವಾಗಿ ಕ್ಲಿಪಾನ್ ಧರಿಸಬಹುದಾಗಿರುವುದೇ ಈ ಆಕ್ಸೆಸರೀಸ್‌ನ ಪ್ಲಸ್ ಪಾಯಿಂಟ್. ಅದರಲ್ಲೂ ಇಂದಿನ ಜನರೇಷನ್‌ನ ಬಹುತೇಕ ಹುಡುಗಿಯರಿಗೆ ಮೂಗು ಚುಚ್ಚಿಸಿಕೊಂಡು ಶಾಶ್ವತವಾಗಿ ಮೂಗುತಿ ಧರಿಸಲು ಇಷ್ಟವಿಲ್ಲ. ಅಂತಹವರ ಚಿತ್ತ ಇದರತ್ತ ನೆಟ್ಟಿದೆ” ಎನ್ನುತ್ತಾರೆ ಮಾಡೆಲ್ ಶ್ರೇಯಾ ಕೃಷ್ಣನ್.
ಮಿಕ್ಸ್ ಮ್ಯಾಚ್ ಮಾಡಿ
ಸ್ಟೈಲಿಸ್ಟ್ ದಿಯಾ ಹೇಳುವಂತೆ, ದೇಸಿ ಲುಕ್ ನೀಡುವ ಇವನ್ನು ಎಥ್ನಿಕ್ ಔಟ್‌ಫೀಟ್ ಜತೆ ಮಾತ್ರವಲ್ಲ, ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಯಾವುದೇ ಕ್ಯಾಶುವಲ್ ಡ್ರೆಸ್‌ನೊಂದಿಗೂ ಧರಿಸಬಹುದು.
ಖರೀದಿಸುವಾಗ ಗಮನವಿರಲಿ
· ಖರೀದಿಸುವ ಮುನ್ನ ಟ್ರಯಲ್ ನೋಡಿ, ಖರೀದಿಸಿ.
· ಮುಖದ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ.
· ಮೂಗಿನ ಆಕಾರಕ್ಕೆ ಈ ಕ್ಲಿಪಾನ್ಸ್ ಹೊಂದುವುದು ಅಗತ್ಯ.
· ಜೆಮೆಟ್ರಿಕಲ್ ಡಿಸೈನ್‌ನವು ವೆಸ್ಟರ್ನ್ ಔಟ್‌ಫಿಟ್‌ಗೆ ಬೆಸ್ಟ್.
· ಸ್ಪಿರಿಚ್ಯುವಲ್ ಕ್ಲಿಪಾನ್ಸ್ ಸೀರೆಗೆ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)