Site icon Vistara News

Father’s Day: ತಾಯಿಗೊಂದು ದಿನ, ತಂದೆಗಿಂದು ದಿನ; ಕುಟುಂಬ ಸಲಹುವ ಕೈಗಳಿಗೆ ಒಂದು ಮುತ್ತು

father playing with his children

ತಂದೆಯ ಬೆನ್ನು ಸಾಮಾನ್ಯವಾದುದಲ್ಲ. ಅದು ತನ್ನ ಮಕ್ಕಳನ್ನು ಎಷ್ಟು ದೂರವಾದರೂ ಲೀಲಾಜಾಲವಾಗಿ ಹೊರಬಲ್ಲುದು. ತಂದೆಯ ಕೈಗಳು ಸಾಮಾನ್ಯವಾದುದಲ್ಲ. ಅವು ತನ್ನ ಕುಟುಂಬ ಎಷ್ಟೇ ದೊಡ್ಡದಿದ್ದರೂ ದುಡಿದು ಅವರನ್ನೆಲ್ಲ ಸಾಕಿ ಸಲಹಬಲ್ಲುದು. ಸಂಜೆ ಮನೆಗೆ ಮರಳುವ ತಂದೆಯ ಚೀಲದಲ್ಲಿ ಇರುವ ದಿನಸಿ, ತರಕಾರಿ, ಚಾಕಲೇಟುಗಳ ಜತೆ ಅವನು ಹೃದಯದಲ್ಲಿ ತುಂಬಿ ತರುವ ಪ್ರೀತಿಯೂ ಅಗಾಧವಾದುದು. ಅಂಥ ತಂದೆಯ ದಿನ (Father’s Day) ಇಂದು.

ವಾರ್ಷಿಕವಾಗಿ ಜೂನ್ ತಿಂಗಳ ಮೂರನೇ ಭಾನುವಾರದಂದು ಪ್ರಪಂಚದಾದ್ಯಂತ ತಂದೆಯ ದಿನವನ್ನು ಪ್ರೀತಿಯಿಂದ ಆಚರಿಸಲಾಗುತ್ತದೆ. ಈ ದಿನ ನಮ್ಮ ಜೀವನದಲ್ಲಿ ತಂದೆ ಅಥವಾ ತಂದೆಯಂಥ ವ್ಯಕ್ತಿಗಳ ಕೊಡುಗೆ ಗೌರವಿಸಲು ಮೀಸಲು. ಅವರು ನಮ್ಮನ್ನು ಬೆಳೆಸಲು ಮಾಡುವ ತ್ಯಾಗವನ್ನು ಗೌರವಿಸುವ ದಿನ. ತಂದೆ ನಾವು ನಮ್ಮ ಜೀವನದಲ್ಲಿ ನೋಡುವ ಮೊದಲ ಹೀರೋ. ನಮ್ಮ ಯಾವುದೇ ಸಾಧನೆಗೆ ಆತ ಬೆನ್ನೆಲುಬು. ನಮ್ಮನ್ನು ಎತ್ತಿ ಹಿಡಿದು ಸಮುದ್ರವನ್ನೂ ಬೆಟ್ಟಗಳನ್ನೂ ಆತ ತೋರಿಸಬಲ್ಲ. ಮೌನವಾಗಿ ನಮಗೆ ಶಕ್ತಿಯನ್ನು ಕಲಿಸುವ ಭುಜಗಳು ಆತನವು. ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆತ ಪ್ರವೀಣ.

ಭಾರತ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಅರ್ಜೆಂಟೀನಾ, ಕೆನಡಾ, ಫ್ರಾನ್ಸ್, ಗ್ರೀಸ್, ಐರ್ಲೆಂಡ್, ಮೆಕ್ಸಿಕೊ, ಪಾಕಿಸ್ತಾನ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ವೆನೆಜುವೆಲಾದಲ್ಲಿಯೂ ತಂದೆಯರ ದಿನ ಇಂದೇ.

ತಂದೆಯ ದಿನಾಚರಣೆ ಇತಿಹಾಸ

ಅಮೆರಿಕದಲ್ಲಿ ನಡೆದ ಅಂತರ್ಯುದ್ಧದಲ್ಲಿ ಭಾಗವಹಿಸಿದ ಯೋಧ, ಹುತಾತ್ಮ ವಿಲಿಯಂ ಜಾಕ್ಸನ್ ಸ್ಮಾರ್ಟ್ ಅವರ ಮಗಳು ಈ ದಿನಾಚರಣೆಯ ರೂಢಿಗೆ ಮೂಲ ಬೀಜ ಬಿತ್ತಿದವಳು. ಈಕೆ ತನ್ನ ತಂದೆ ಸೇರಿದಂತೆ ಪ್ರಪಂಚದಾದ್ಯಂತದ ಎಲ್ಲಾ ತಂದೆಗಳಿಗೆ ನಮನ ಸಲ್ಲಿಸಲು ಬಯಸಿದಳು. ಈಕೆಯ ಹೆಸರು ಸೊನೊರಾ ಸ್ಮಾರ್ಟ್ ಡಾಡ್. ಈಕೆಯ ತಂದೆ ಆರು ಮಕ್ಕಳಿಗೆ ಸಿಂಗಲ್‌ ಫಾದರ್ ಆಗಿದ್ದ.‌ ತಂದೆಯ ದಿನವನ್ನು ಆಚರಿಸಲು ಅವರ ಜನ್ಮದಿನವನ್ನೇ (ಜೂನ್ 5, 1982) ಆಕೆ ಆಯ್ಕೆ ಮಾಡಿದಳು. ಅವಳಿಗೆ ಸ್ಫೂರ್ತಿಯಾಗಿ ಇದ್ದವಳು ʼತಾಯಿಯ ದಿನʼದ ಸಂಸ್ಥಾಪಕಿ ಅನ್ನಾ ಜಾರ್ವಿಸ್.

ಆದರೆ ಚರ್ಚ್ ಅವಳ ಮನವಿಯನ್ನು ಬೆಂಬಲಿಸಲಿಲ್ಲ. ಕೊನೆಗೆ ಆಕೆ ಬೆಂಬಲಕ್ಕಾಗಿ ಹಲವಾರು ಇತರ ಸ್ಥಳೀಯ ಚರ್ಚುಗಳನ್ನು ಒಟ್ಟುಗೂಡಿಸಿದಳು. ಅಂತಿಮವಾಗಿ, ತಂದೆಯ ದಿನಾಂಕವನ್ನು ಜೂನ್ 5ರಿಂದ ಜೂನ್ ಮೂರನೇ ಭಾನುವಾರಕ್ಕೆ ತಳ್ಳಲಾಯಿತು. 1910ರಲ್ಲಿ, ಮೊದಲ ಬಾರಿಗೆ ತಂದೆಯ ದಿನವನ್ನು ಗುರುತಿಸಲಾಯಿತು.

ತಂದೆಯ ದಿನವು ತಂದೆ ಮತ್ತು ಮಗುವಿಗೂ ಮಹತ್ವದ ಸಂಗತಿ. ಮಕ್ಕಳು ತಮ್ಮ ತಂದೆಯ ಪ್ರೀತಿಗಾಗಿ, ಸದಾ ತಮ್ಮ ಜೀವನದಲ್ಲಿ ಅವರ ಉಪಸ್ಥಿತಿಗಾಗಿ, ಅವರ ಭಾವನಾತ್ಮಕ ಬೆಂಬಲಕ್ಕಾಗಿ, ಜೀವನದಲ್ಲಿ ಅವರ ಪಾತ್ರಕ್ಕಾಗಿ, ಮಾನಸಿಕ ಅಥವಾ ಆರ್ಥಿಕ ಸಹಾಯಕ್ಕಾಗಿ ಕೃತಜ್ಞತೆಯನ್ನು ತೋರಿಸಲು ಇರುವ ಅವಕಾಶವಿದು. ಜಗತ್ತಿನಾದ್ಯಂತ ಮಕ್ಕಳು ತಾವೇ ಕೈಯಿಂದ ಮಾಡಿದ ಉಡುಗೊರೆಗಳು ಅಥವಾ ಕಾರ್ಡ್‌ಗಳು, ಖರೀದಿಸಿದ ಅರ್ಥಪೂರ್ಣ ಉಡುಗೊರೆಗಳು, ತಾವೇ ಮಾಡಿದ ಕೇಕ್‌, ಅವರ ನೆಚ್ಚಿನ ಖಾದ್ಯ, ಹೂವು ಮತ್ತು ಚಾಕೊಲೇಟ್‌ ಇವನ್ನೆಲ್ಲ ತಂದೆಗೆ ಗಿಫ್ಟ್‌ ಮಾಡುತ್ತಾರೆ. ಅವರ ನೆಚ್ಚಿನ ರೆಸ್ಟೋರೆಂಟ್‌ಗಳಿಗೆ ಕರೆದೊಯ್ಯುತ್ತಾರೆ. ಒಳ್ಳೆಯ ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಸರ್‌ಪ್ರೈಸ್‌ ಗಿಫ್ಟ್‌ ನೀಡುತ್ತಾರೆ.

ಹೆಚ್ಚಿನ ಮಕ್ಕಳು ತಮ್ಮ ತಾಯಿಯೊಂದಿಗೆನ ನಿಕಟ ಬಾಂಧವ್ಯ ಹೊಂದಿರುತ್ತಾರೆ,. ಕೆಲವೊಮ್ಮೆ ತಂದೆ ಭಾವನಾತ್ಮಕವಾಗಿ ದೂರವೇ ಇರುತ್ತಾನೆ. ಆದರೆ ಅವನು ದುಡಿಯುವಿಕೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲು, ಪ್ರೀತಿ ತೋರಿಸಲು ಮರೆತೇ ಬಿಡುತ್ತಾನೆ. ಆದರೆ ಕುಟುಂಬಕ್ಕೆ, ಮಕ್ಕಳಿಗೆ ಅವನ ಕೊಡುಗೆ ಸಣ್ಣದಲ್ಲ. ಅವನು ದೂರವೇ ಇದ್ದರೂ ಅವನ ಹೃದಯ ಮಕ್ಕಳಿಗಾಗಿ ಮಿಡಿಯುತ್ತಿರುತ್ತದೆ. ಇಂಥ ತಂದೆಯರಿಗೆ ಈ ದಿನ ಅರ್ಪಣೆ.

ಇದನ್ನೂ ಓದಿ: ಅಮ್ಮ ಎಂದರೆ ಕೇವಲ ಪದವಲ್ಲ… ಶತಾಯುಷಿ ತಾಯಿಯ ಜನ್ಮದಿನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version