Site icon Vistara News

Poisonous Mushroom : ಕಾಡು ಅಣಬೆ ತಿಂದು ಮೂವರ ಸಾವು; ಅಡುಗೆ ಮಾಡಿದ್ದ ಸೊಸೆ ಮಾತ್ರ ಬಚಾವ್‌!

3 Dead After Eating Wild Mushrooms

ಆಸ್ಟ್ರೇಲಿಯಾ: ಸಾಮಾನ್ಯವಾಗಿ ಮಳೆಗಾಲದ ವೇಳೆ ಕಾಡಿನಲ್ಲಿ ಬೆಳೆಯುವ ಅಣಬೆಯನ್ನು (Poisonous Mushroom) ಸಾರು ಮಾಡಿ ತಿನ್ನುವುದು ಸಾಮಾನ್ಯ. ಹಳ್ಳಿ ಕಡೆಗಳಲ್ಲಿ ಕಾಡುಗಳಲ್ಲಿ ಸಿಗುವ ಅಣಬೆಯ ಸಾಂಬಾರು ರುಚಿಯಾಗಿರುತ್ತದೆ. ಆದರೆ ಅದರಲ್ಲಿ ಕೆಲವು ವಿಷಕಾರಿ ಅಣಬೆಯೂ ಇರುವುದರಿಂದ ಜನರು ಅದರ ಬಗ್ಗೆ ಹೆಚ್ಚಿನ ಎಚ್ಚರಿಕೆಯಿಂದಿರುತ್ತಾರೆ. ಇದೀಗ ಆಸ್ಟ್ರೇಲಿಯಾದ ಹಳ್ಳಿಯೊಂದರಲ್ಲಿ ಕಾಡು ಅಣಬೆಯಿಂದ ಮಾಡಲಾದ ಅಡುಗೆಯನ್ನು ತಿಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಾವಿನ ಪ್ರಕರಣದ ಕುರಿತು ಆಸ್ಟ್ರೇಲಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಮೆಲ್ಬೋರ್ನ್‌ನಿಂದ ಸುಮಾರು ಎರಡು ಗಂಟೆ ಪ್ರಯಾಣದಷ್ಟು ದೂರದಲ್ಲಿರುವ ಲಿಯೊಂಗಾಥಾದಲ್ಲಿ ಎರಿನ್‌ ಪ್ಯಾಟರ್ಸನ್‌ ಹೆಸರಿನ ಮಹಿಳೆ ವಾಸವಿದ್ದಾಳೆ. ಜುಲೈ 29ರಂದು ಆಕೆ ಮಾವಂದಿರಾದ ಗೇಲ್‌ ಮತ್ತು ಡ್ಯಾನ್‌ ಪ್ಯಾಟರ್ಸನ್‌ ಅವರನ್ನು ಊಟಕ್ಕೆ ಕರೆದಿದ್ದಳು. ಅವರಿಬ್ಬರೊಂದಿಗೆ ಗೇಲ್‌ನ ಸಹೋದರಿಯರಾದ ವಿಲ್ಕಿನ್ಸನ್‌ ಮತ್ತು ಹೀದರ್‌ ಕೂಡ ಊಟಕ್ಕೆ ಹೋಗಿದ್ದರು. ಕಾಡು ಅಣಬೆಯನ್ನು ಬಳಸಿ ಮಾಡಿದ್ದ ಅಡುಗೆಯನ್ನು ಈ ನಾಲ್ವರೂ ತಿಂದಿದ್ದಾರೆ. ಅವರು ಊಟ ಮಾಡಿ ಸ್ವಲ್ಪ ಸಮಯದಲ್ಲೇ ಅನಾರೋಗ್ಯ ಕಾಡಲಾರಂಭಿಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮೆಲ್ಬೋರ್ನ್‌ಗೆ ಅವರನ್ನು ಕರೆದೊಯ್ಯಲಾಗಿತ್ತು.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ಆದರೆ ಚಿಕಿತ್ಸೆ ಫಲಿಸದೆ ಹೀದರ್‌(66) ಮತ್ತು ಗೇಲ್‌ (70) ಕಳೆದ ಶುಕ್ರವಾರ ನಿಧನರಾಗಿದ್ದಾರೆ. 70 ವರ್ಷದ ಡಾನ್‌ ಶನಿವಾರದಂದು ನಿಧನರಾಗಿದ್ದಾರೆ. ಹಾಗೆಯೇ 68 ವರ್ಷದ ಇಯಾನ್‌ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಕೃತ್ತಿನ ಕಸಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಈ ನಾಲ್ವರು ಅನಾರೋಗ್ಯಕ್ಕೆ ತುತ್ತಾದರೂ ಅಡುಗೆ ಮಾಡಿ ಅವರೆಲ್ಲರಿಗೆ ಬಡಿಸಿದ್ದ ಸೊಸೆ ಎರಿನ್‌ಗೆ ಏನೂ ಆಗಿಲ್ಲ. ಹಾಗಾಗಿ ಆಕೆಯ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆಕೆ ತನಗೆ ತನ್ನ ಕುಟುಂಬಕ್ಕೆ ನೋವುಂಟು ಮಾಡುವ ಯಾವುದೇ ಉದ್ದೇಶವಿಲ್ಲ. ಇದು ಹೇಗಾಯಿತು ಎನ್ನುವುದು ತನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರ ವಶದಿಂದ ಬಿಡಲಾಗಿದೆ. ಆದರೆ ಆಕೆ ಇನ್ನೂ ಆರೋಪಿ ಸ್ಥಾನದಲ್ಲಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜನರು ಈ ಸಾವುಗಳ ಹಿಂದೆ ಸೊಸೆ ಎರಿನ್‌ ಕೈವಾಡವಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಕೆಲವರು ಇದು ಆಕೆಯ ಗಮನಕ್ಕೆ ಬಾರದೆ ಆಗಿರುವ ತಪ್ಪಾಗಿದ್ದಿರಬಹುದು ಎಂದು ಆಕೆಯ ಪರವಾಗಿಯೂ ಮಾತನ್ನಾಡುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಅಪರಾಧಿ ಯಾರು ಎನ್ನುವುದು ಪೊಲೀಸರಿಂದ ಪೂರ್ಣ ಪ್ರಮಾಣದ ತನಿಖೆ ನಡೆದ ನಂತರವೇ ತಿಳಿದು ಬರಬೇಕಿದೆ.

ಕಾಡ ಅಣಬೆ ತಿಂದು ಕರ್ನಾಟಕದಲ್ಲೂ ಇಂಥ ಹಲವು ದುರ್ಘಟನೆಗಳು ನಡೆದು ಕೆಲವು ಮೃತಪಟ್ಟಿದ್ದಾರೆ.

ಇದನ್ನೂ ಓದಿ: Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?

Exit mobile version