ಹಾಲಿನ ಉತ್ಪನ್ನಗಳ ಸೇವನೆಯಿಂದ ನಮ್ಮ ಎಲುಬುಗಳು ಶಕ್ತಿಶಾಲಿಯಾಗುತ್ತವೆ ಎಂಬುದು ನಮಗೆ ಗೊತ್ತಿರುವ ವಿಚಾರ. ಹಾಲಿನಲ್ಲಿರುವ ಪೋಷಕಾಂಶಗಳಲ್ಲಿ ಬಹುಮುಖ್ಯವಾಗಿರುವ ಕ್ಯಾಲ್ಶಿಯಂ ದೇಹಕ್ಕೆ ಶಕ್ತಿ ನೀಡುವುದಷ್ಟೇ ಅಲ್ಲ, ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ಆದರೆ ಕೆಲವರಿಗೆ ಹಾಲು ಅಥವಾ ಹಾಲಿನ ಉತ್ಪನ್ನಗಳಲ್ಲಿರುವ ಲ್ಯಾಕ್ಟೋಸ್ ಎಂದರೆ ಅಲರ್ಜಿ. ಹಾಲಿನ ಉತ್ಪನ್ನಗಳನ್ನು ಇಂಥ ಮಂದಿಗೆ ಸೇವಿಸಿದರೆ ಆಗದು. ಇನ್ನೂ ಕೆಲವರು ವೇಗನ್ ಎಂದು ಹಾಳಿನ ಉತ್ಪನ್ನಗಳನ್ನೇ ಬಿಟ್ಟುಬಿಡುವವರೂ ಇದ್ದಾರೆ. ಇಂತಹ ಮಂದಿಗೆ ದೇಹಕ್ಕೆ ಅತ್ಯಗತ್ಯವಾದ ಕ್ಯಾಲ್ಶಿಯಂ ಸುಲಭವಾಗಿ ಹೇಗೆ ದಕ್ಕೀತು ಎಂಬ ಪ್ರಶ್ನೆ ಕಾಡದೆ ಇರದು. ಹಾಗಾದರೆ ಬನ್ನಿ, ಹಾಲಿನ ಉತ್ಪನ್ನಗಳ ಮೂಲಕ ಸಿಗುವ ಪೋಷಕಾಂಶಗಳನ್ನು, ಯಾವ ಇತರ ಮೂಲಗಳ ಮೂಲಕ (Calcium Foods) ಪಡೆಯಬಹುದು ಎಂಬುದನ್ನು ನೋಡೋಣ.
ಹಸಿ ಕ್ಯಾರೆಟ್ ಹಾಗೂ ಬಸಳೆ ಜ್ಯೂಸ್
ನಿಮ್ಮ ಎಲುಬುಗಳಿಗೆ ಕ್ಯಾಲ್ಶಿಯಂನ ಕೊರತೆ ಯಾವತ್ತಿಗೂ ಆಗಬಾರದು ಹಾಗೂ ಗಟ್ಟಿಯಾಗಿರಬೇಕು ಎಂದು ಅಂದುಕೊಂಡರೆ ನೀವು ಕ್ಯಾರೆಟ್ ಹಾಗೂ ಬಸಳೆ ಜ್ಯೂಸ್ ಕುಡಿಯಲೇಬೇಕು. ಇದರಲ್ಲಿ ವಿಟಮಿನ್‌ಗಳು ಸಮೃದ್ಧವಾಗಿದ್ದು, ಕ್ಯಾಲ್ಶಿಯಂ ಕೂಡಾ ಹೇರಳವಾಗಿದೆ. ಸುಮಾರು ೩೦೦ ಎಂಜಿಯಷ್ಟು ಕ್ಯಾಲ್ಶಿಯಂ ಇದ್ದು ಹಾಲಿನಷ್ಟೇ ಪ್ರಮಾಣದ ಶಕ್ತಿ ಇದು ನೀಡುತ್ತದೆ.
ಬೇಳೆಕಾಳುಗಳು
ರಾಜ್‌ಮಾ, ಕಾಬೂಲಿ ಕಡಲೆ, ಕರಿ ಉದ್ದು ಸೇರಿದಂತೆ ಎಲ್ಲ ಬೇಳೆಕಾಳುಗಳೂ ಕೂಡಾ ಶಕ್ತಿವರ್ಧಕಗಳು. ಇವುಗಳಲ್ಲಿ ಸುಮಾರು ೨೦೦ ಎಂಜಿಯಷ್ಟು ಕ್ಯಾಲ್ಶಿಯಂ ಇದ್ದು, ಎಲುಬನ್ನು ಗಟ್ಟಿಗೊಳಿಸುತ್ತದೆ. ಆಹಾರದಲ್ಲಿ ಇವುಗಳನ್ನು ಬಳಸುವ ಮೂಲಕ ದೇಹಕ್ಕೆ ಕ್ಯಾಲ್ಶಿಯಂ ಪೂರೈಕೆ ಮಾಡುತ್ತಾ ಇರಬಹುದು.
ಎಳ್ಳು
ಕರಿ ಹಾಗೂ ಬಿಳಿ, ಎರಡೂ ಬಗೆಯ ಎಳ್ಳು ಕ್ಯಾಲ್ಶಿಯಂ ಅನ್ನು ಹೇರಳವಾಗಿ ತನ್ನಲ್ಲಿ ಹೊಂದಿದೆ. ಕೇವಲ 10 ಗ್ರಾಂ ಎಳ್ಳಿನಲ್ಲಿ 140 ಎಂಜಿಯಷ್ಟು ಕ್ಯಾಲ್ಶಿಯಂ ಇದ್ದು, ಸುಲಭವಾಗಿ ಕ್ಯಾಲ್ಶಿಯಂ ಪಡೆಯಲು ಇದು ಅತ್ಯುತ್ತಮ ವಿಧಾನ. ಎರಡು ಮೂರು ಚಮಚದಷ್ಟು ಎಳ್ಳನ್ನು ಸಲಾಡ್ ಜೊತೆಗೋ, ಇತರ ಆಹಾರದ ಮೇಲೆ ಅಲಂಕರಿಸುವ ಮೂಲಕ ತಿಂದರೆ ದೇಹಕ್ಕೆ ನಿತ್ಯ ಬೇಕಾಗುವ ಕ್ಯಾಲ್ಶಿಯಂ ಪಡೆಯಬಹುದು.
ಟೋಫು
ಸೋಯಾಬೀನ್‌ನಿಂದ ಮಾಡಿದ ಅತ್ಯಂತ ಹೆಚ್ಚು ಪ್ರೊಟೀನ್ ಇರುವ ಟೋಫು ಅತ್ಯುತ್ತಮ ಪ್ರಮಾಣದಲ್ಲಿ ಕ್ಯಾಲ್ಶಿಯಂ ಕೂಡಾ ನೀಡುತ್ತದೆ. ಡೈರಿ ಉತ್ಪನ್ನಗಳನ್ನು ಸೇವಿಸದ ಮಂದಿಗೆ ಸುಲಭವಾಗಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್ ಅನ್ನು ನೀಡಬಲ್ಲ ಆಹಾರ ಇದು.
ಹಸಿರು ಸೊಪ್ಪು ತರಕಾರಿಗಳು
ಪಾಲಕ್ ಸೇರಿದಂತೆ ಹಸಿರು ಸೊಪ್ಪುಗಳು ಸಮೃದ್ಧ ಪೋಷಕಾಂಶಗಳ ಮೂಲ. ಹಾಲು ಅಥವಾ ಡೈರಿ ಉತ್ಪನ್ನಗಳನ್ನು ಸೇವಿಸದ ಮಂದಿ ಸಿಪ್ಪುಗಳನ್ನು ಮರೆಯದೆ ಸೇವಿಸಬೇಕು. ಸೊಪ್ಪಿನ ಮೂಲಕ ದೇಹಕ್ಕೆ ಕ್ಯಾಲ್ಶಿಯಂ, ಪ್ರೊಟೀನ್ ಸೇರಿದಂತೆ ಇತರ ಖನಿಜಾಂಶಗಳೂ ಸುಲಭವಾಗಿ ಸಿಗುತ್ತದೆ.
ಇದನ್ನೂ ಓದಿ: Protein Overload: ಪ್ರೊಟೀನ್ ನಮ್ಮ ದೇಹಕ್ಕೆ ಎಷ್ಟು ಬೇಕು? ಹೆಚ್ಚಾದರೆ ಏನಾಗುತ್ತದೆ?
ಬ್ರೊಕೊಲಿ ಹಾಗೂ ಬೆಂಡೆಕಾಯಿ
ನೀವು ಹಾಲು ಕುಡಿಯುವುದಿಲ್ಲ ಎಂದಾದರೆ, ಬ್ರೊಕೊಲಿ ಹಾಗೂ ಬೆಂಡೆಕಾಯಿಯನ್ನು ನಿರ್ಲಕ್ಷಿಸಬೇಡಿ. ಈ ಎರಡು ತರಕಾರಿಗಳಲ್ಲಿ ಅತ್ಯಂತ ಹೆಚ್ಚು ಪ್ರಾಣದಲ್ಲಿ ಕ್ಯಾಲ್ಶಿಯಂ ಇದೆ. ಈ ತರಕಾರಿಗಳನ್ನು ಒಂದಲ್ಲ ಒಂದು ಬಗೆಯಲ್ಲಿ ಆಗಾಗ ಹೊಟ್ಟೆ ಸೇರುವಂತೆ ಮಾಡಿ. ಇವು ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಹಾಲು ಇಷ್ಟಪಡದ ಮಕ್ಕಳಿಗೂ ಇಂತಹ ಸೊಪ್ಪು ಹಾಗೂ ತರಕಾರಿಗಳನ್ನು ಬಗೆಬಗೆಯ ರೂಪದಲ್ಲಿ ಸೇವಿಸುವಂತೆ ಮಾಡಿ. ಮಕ್ಕಳಿಗೆ ಮುಖ್ಯವಾಗಿ, ಈ ಎಲ್ಲ ಪೋಷಕಾಂಶಗಳು ಸಣ್ಣ ವಯಸ್ಸಿನಲ್ಲಿಯೇ ಸಿಗುವಂತೆ ಮಾಡಿದರೆ, ಮೂಳೆಗಳು ಬೆಳೆಯುವ ವಯಸ್ಸಿನಲ್ಲೇ ಶಕ್ತಿಯುತವಾಗುತ್ತದೆ. ಮಕ್ಕಳು ಆರೋಗ್ಯವಂತರಾಗಿ, ರೋಗರುಜಿನಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.