Site icon Vistara News

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

Healthy Salad Tips

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Exit mobile version