ಹೀಗೊಂದು ಸನ್ನಿವೇಶ- ಸಮೀಪದ ಸೂಪರ್‌ಮಾರ್ಕೆಟ್‌ನಲ್ಲಿ ಡೇರಿ ಉತ್ಪನ್ನಗಳ ಸೇಲ್ ಇದೆ. ಬೆಣ್ಣೆ, ಪನೀರ್‌ಗಳನ್ನು ಸ್ವಲ್ಪ ಹೆಚ್ಚಾಗಿಯೇ ಖರೀದಿಸುತ್ತೀರಿ. ಆದರೆ ನೀವಂದುಕೊಂಡಷ್ಟು ಬೆಣ್ಣೆ ಖಾಲಿಯಾಗುವುದಿಲ್ಲ ನಿತ್ಯದ ಅಡುಗೆಯಲ್ಲಿ. ತಂದಿದ್ದರಲ್ಲಿ ಅರ್ಧದಷ್ಟು ಉಳಿದಿರುವಾಗಲೇ ಬೆಣ್ಣೆ ತಾಜಾತನ ಕಳೆದುಕೊಂಡಿರುತ್ತದೆ; ಕಮಟು ವಾಸನೆಯೂ ಬರಬಹುದು; ಬಣ್ಣ ಸಹ ಬದಲಾಗಿರಬಹುದು. ಸೇಲ್ ಇದೆಯೆಂಬ ಕಾರಣಕ್ಕೆ ಹೆಚ್ಚು ಖರೀದಿಸಿದ್ದು ಹೌದು, ಅಂತಿಮವಾಗಿ ಹಣ, ವಸ್ತು- ಎರಡೂ ದಂಡ. ವಸ್ತುಗಳನ್ನು ಅಂಗಡಿಯಿಂದ ತರುವುದು ದೊಡ್ಡ ವಿಷಯವಲ್ಲ. ತಂದ ಮೇಲೆ ಅವುಗಳು ಕೆಡದಂತೆ ಇರಿಸಿಕೊಳ್ಳುವುದು ದೊಡ್ಡ ಸವಾಲು. ಮಳೆಗಾಲವಾದರೆ ವಾತಾವರಣದಲ್ಲಿ ತೇವಾಂಶ ಹೆಚ್ಚಿ, ವಸ್ತುಗಳು ಬೇಗ ಕೆಡಬಹುದು. ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿದ್ದರೂ, ಹುಳುಗಳ ಕಾಟ ಹೆಚ್ಚಾಗಿರುತ್ತದೆ. ಬದನೆಕಾಯಿ, ಅವರೆಕಾಯಿ ಮುಂತಾದವುಗಳಲ್ಲಿ ಈ ಸಮಸ್ಯೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಬೇಸಿಗೆಯಲ್ಲಿ ಸೆಕೆಯ ದೆಸೆಯಿಂದ ಆಹಾರ ಕೆಡುವುದು ಬೇಗ. ಅದರಲ್ಲೂ ಬೆಣ್ಣೆಯಂಥ ಉತ್ಪನ್ನಗಳು ಕೆಡದಂತೆ (Storage Tips Of Butter) ಇರಿಸಿಕೊಳ್ಳುವುದು ಹೇಗೆ? ಬೆಣ್ಣೆ ಮನೆಯಲ್ಲೇ ಮಾಡಿದ್ದಾರೆ ಪ್ರತಿದಿನ ಅದರ ನೀರು ಬದಲಿಸುತ್ತಿದ್ದರೆ, ಫ್ರಿಜ್‌ನಲ್ಲಿ ಇಡದೆಯೂ ನಾಲ್ಕಾರು ದಿನ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು. ನೀರು ಬದಲಿಸುತ್ತಾ ಫ್ರಿಜ್‌ನಲ್ಲಿಟ್ಟರೆ ೧೫ ದಿನಗಳೂ ನಡೆದೀತು. ಆದರೆ ಅಂಗಡಿಯಿಂದ ತಂದ ಬೆಣ್ಣೆಯನ್ನು ಹೀಗೆ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆ ಉತ್ಪನ್ನದ ಮೇಲೆ ದಿನಾಂಕ ನಮೂದಿಗಿದ್ದರೂ, ಕೆಲವೊಮ್ಮೆ ಅದಕ್ಕೂ ಮೊದಲೇ ಹಾಳಾಗಿಬಿಡುತ್ತದೆ. ಕಡೆದ ಕೆನೆಯಂಥ ವಸ್ತುವಿನ ಕೊಬ್ಬು ಮತ್ತು ಪ್ರೊಟೀನ್ ಅಂಶಗಳನ್ನು ಬ್ಯಾಕ್ಟೀರಿಯಗಳು ಸುಲಭವಾಗಿ ಪ್ರವೇಶಿಸಲಾರವು. ಆದರೂ ಬೆಣ್ಣೆ, ಪನೀರ್‌ನಂಥವು ಮೂರರಿಂದ ನಾಲ್ಕು ವಾರಗಳವರೆಗೆ ಮಾತ್ರವೇ ತಾಜಾತನ (Storage Tips Of Butter) ಉಳಿಸಿಕೊಳ್ಳಬಲ್ಲವು.
ಫ್ರೀಜಿಂಗ್
ನಿಮ್ಮ ದಿನಬಳಕೆಗಿಂತ ಹೆಚ್ಚಿನ ಬೆಣ್ಣೆ, ಪನೀರ್‌ಗಳನ್ನು ಖರೀದಿಸಿಬಿಟ್ಟಿದ್ದೀರಿ. ಇದಕ್ಕೆ ಕಾರಣ ಏನೂ ಇರಬಹುದು. ಅಂಥ ಸಂದರ್ಭದಲ್ಲಿ, ಆ ವಸ್ತುವಿನ ನಮೂದಿತ ದಿನಾಂಕ ಮುಗಿಯುವುದರೊಳಗೆ ನಿಮಗೆಷ್ಟು ಬೇಕಾದೀತು ಎಂಬುದನ್ನು ಅಂದಾಜಿಸಿಕೊಳ್ಳಿ. ಅದಷ್ಟನ್ನು ಫ್ರಿಜ್‌ನಲ್ಲಿ ತೆಗೆದಿಟ್ಟು, ಉಳಿದಿದ್ದನ್ನು ಫ್ರೀಜ್ ಮಾಡಿ. ತಾಜಾ ಇರುವಾಗಲೇ ಫ್ರೀಜ್ ಮಾಡಿದರೆ ೩ರಿಂದ ೬ ರಿಂಗಳವರೆಗೂ ಉಳಿದೀತು ಅದು. ಹೀಗೆ ಫ್ರೀಜ್ ಮಾಡುವಾಗ ಅಷ್ಟನ್ನೂ ಒಟ್ಟಿಗೇ ಇರಿಸದೆ ನಾಲ್ಕಾರು ಸಣ್ಣ ಡಬ್ಬಿಗಳಲ್ಲಿ ಇರಬಹುದು. ಇದರಿಂದ ಬೇಕಾದಾಗ ಬೇಕಾದಷ್ಟನ್ನೇ ಉಪಯೋಗಿಸಲು ಅನುಕೂಲ. ಒಮ್ಮೆ ಫ್ರೀಜರ್‌ನಿಂದ ತೆಗೆದು ವಾತಾವರಣದ ಉಷ್ಣತೆಗೆ ತಂದ ಬೆಣ್ಣೆಯನ್ನು ಮತ್ತೆ ಫ್ರೀಜರ್‌ನಲ್ಲಿ ಇರಿಸಬೇಡಿ.
ರೆಫ್ರಿಜಿರೇಶನ್
ಫ್ರೀಜರ್‌ನಲ್ಲಲ್ಲದೆ, ಫ್ರಿಜ್‌ನಲ್ಲೇ ತಿಂಗಳುಗಳ ಕಾಲ ಕೆಡದಂತೆ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಆದರೆ ಬೆಣ್ಣೆಯಂಥ ವಸ್ತುಗಳು ಸ್ಪಾಂಜ್‌ನಂತೆ ಕೆಲಸ ಮಾಡುತ್ತವೆ. ಅಂದರೆ ಫ್ರಿಜ್‌ನಲ್ಲಿ ಇರಿಸಿದ ಉಳಿದ ಆಹಾರ ವಸ್ತುಗಳ ಘಮವನ್ನು ತಾನಾಗೇ ಹೀರಿಕೊಳ್ಳುತ್ತವೆ. ಇದಕ್ಕೆ ಅವಕಾಶ ನೀಡಿದಷ್ಟಕ್ಕೂ ಬೆಣ್ಣೆ ಬೇಗನೇ ಹಾಳಾಗುತ್ತದೆ. ಪನೀರ್‌ನ ಕಥೆ ಇದಕ್ಕಿಂತ ಭಿನ್ನವಲ್ಲ. ಆದರೆ ಇವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲೇ ಇರಿಸುತ್ತೇವೆ ಎನ್ನಬಹುದು. ಅದಷ್ಟೇ ಸಾಕಾಗುವುದಿಲ್ಲ. ಅವುಗಳ ಮೂಲ ಪ್ಯಾಕಿಂಗ್ ವಸ್ತುಗಳಲ್ಲಿ ಸಾಧ್ಯವಾದಷ್ಟೂ ಬಿಗಿಯಾಗಿ ಸುತ್ತಿ. ಆನಂತರ ಗಾಳಿಯಾಡದ ಡಬ್ಬಿಗಳಲ್ಲಿ ಇರಿಸಿ. ಮಾತ್ರವಲ್ಲ, ಹಾಲು-ಬೆಣ್ಣೆಗಳನ್ನು ಶೇಖರಿಸಿಡುವುದಕ್ಕೆ ಫ್ರಿಜ್‌ನಲ್ಲಿ ಪ್ರತ್ಯೇಕ ವಿಭಾಗವಿದ್ದರೆ ಇಲ್ಲಿಯೇ ಇಡಿ. ಆಗ ಉಳಿದ ಆಹಾರ ವಸ್ತುಗಳ ಪರಿಮಳವನ್ನು ಇವುಗಳಿಂದ ವ್ಯವಸ್ಥಿತ ಆಗಿ ದೂರ ಮಾಡಬಹುದು.
ಇಷ್ಟಾಗಿಯೂ ಸಮಸ್ಯೆ ಬಗೆಹರಿಯುತ್ತಿಲ್ಲವೇ? ಅಗತ್ಯಕ್ಕಿಂತ ತುಂಬ ಹೆಚ್ಚಿನ ಪ್ರಮಾಣದಲ್ಲಿ ಬೆಣ್ಣೆ ಇದೆ ಎನಿಸಿದರೆ, ಅದನ್ನು ಹೇಗೆ ಕಾಪಾಡಿಕೊಂಡರೂ ತಾಜಾತನ ಉಳಿಯುತ್ತಿಲ್ಲ ಎನಿಸಿದರೆ… ಕಾಯಿಸಿ ತುಪ್ಪ ಮಾಡಿ. ಈ ತುಪ್ಪವನ್ನಾದರೂ ಡಬ್ಬಿಗಳಿಗೆ ಹಾಕುವಾಗ ಎಲ್ಲವನ್ನೂ ಒಂದೇ ಡಬ್ಬಿಗೆ ಸುರಿಯುವ ಬದಲು, ನಾಲ್ಕಾರು ಪುಟ್ಟ ಡಬ್ಬಿಗಳಿಗೆ ಹಾಕಿಟ್ಟುಕೊಳ್ಳಿ. ಒಂದನ್ನಷ್ಟೇ ಬಳಕೆಗೆ ಇರಿಸಿಕೊಂಡು ಉಳಿದಿದ್ದನ್ನು ಫ್ರಿಜ್‌ನಲ್ಲಿರಿಸಿ. ಇದರಿಂದ ಉದ್ದಕ್ಕೂ ತಾಜಾ ತುಪ್ಪವನ್ನೇ ತಿನ್ನಬಹುದು.
ಸೂಚನೆಗಳೇನು?
ಬೆಣ್ಣೆ, ಪನೀರ್‌ಗಳು ಬಳಕೆಗೆ ಯೋಗ್ಯವಲ್ಲ ಎಂಬ ಸೂಚನೆಗಳೇನು? ಹಾಳಾದ ವಸ್ತುಗಳನ್ನು ಉಪಯೋಗಿಸುವುದರಿಂದ ತಿನ್ನುವವರ ಆರೋಗ್ಯವೂ ಹಾಳಾದೀತು. ಮೊದಲಿಗೆ, ವಸ್ತುವಿನ ಪರಿಮಳ ಬದಲಾಗಿದೆಯೇ? ಕಮಟು ವಾಸನೆ ಇದೆಯೇ ಎಂಬುದನ್ನು ಗಮನಿಸಿ. ನೋಡುವುದಕ್ಕೆ ಬಣ್ಣ ಬದಲಾಗಿದೆಯೇ? ಕೆನೆ ಬಣ್ಣದಲ್ಲಿರುವ ಈ ವಸ್ತುಗಳು ಹಳದಿ, ಹಸಿರು ಅಥವಾ ನೀಲಿ ಇಲ್ಲವೇ ಕಪ್ಪು ಬಣ್ಣಗಳನ್ನು ಎಲ್ಲಾದರೂ ಹೊತ್ತಿವೆಯೇ? ಮುಟ್ಟಿದಾಗ ಕೈಗೆ ನೀರಿನಂಥ ಇಲ್ಲವೇ ಲೋಳೆಯಂಥ ಪದರ ತಾಕುತ್ತಿದೆ ಎಂದಾದರೆ, ಅದರ ಆಯಸ್ಸು ಮುಗಿದಿದೆ ಎಂದರ್ಥ.
ಇದನ್ನೂ ಓದಿ: Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು