Site icon Vistara News

Happiness Tips: ಒಬ್ಬರೇ ಇದ್ದಾಗ ಖುಷಿಯಾಗಿರುವುದು ಹೇಗೆ ಗೊತ್ತಾ? ಇಲ್ಲಿವೆ ಟಿಪ್ಸ್!

single and happy

ಒಬ್ಬರೇ ಖುಷಿಯಾಗಿರುವುದೇನೂ (Happiness) ಬ್ರಹ್ಮವಿದ್ಯೆಯಲ್ಲ. ಒಬ್ಬರೇ ಇದ್ದಾಗಲೂ ಖುಷಿಯಾಗಿ ಸಂತೋಷವಾಗಿ ಇರಬಹುದು. ಆದರೆ, ಬಹಳಷ್ಟು ಮಂದಿಗೆ ಒಬ್ಬರೇ ಇರುವುದು ಏಕಾಕಿತನವನ್ನು (Loneliness) ತರುತ್ತದೆ. ಇಲ್ಲದ ಭಯವನ್ನು ಹುಟ್ಟುಹಾಕುತ್ತದೆ. ಬೇಸರೆ, ಹತಾಶೆ, ನೋವನ್ನೂ ತರುತ್ತದೆ. ಆದರೆ, ಕೆಲವರು ಒಬ್ಬರೇ ಇರುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾದರೆ ಬನ್ನಿ, ಒಬ್ಬರೇ ಇದ್ದರೂ, ಖುಷಿಯಾಗಿ, ನೆಮ್ಮದಿಯಾಗಿ ಇರುವುದನ್ನು ಕಲಿಯುವುದು ಹೇಗೆ ಎನ್ನುತ್ತೀರಾ. ಬನ್ನಿ, ಈ ಕೆಲವು ಮಾದರಿಯಲ್ಲಿ (Happiness tips) ನೀವು ಒಬ್ಬರೇ ಖುಷಿಯಾಗಿರುವುದನ್ನು ರೂಢಿಸಿಕೊಳ್ಳಬಹುದು.

1. ಪ್ರಾಣಾಯಾಮ (Pranayama) ಮಾಡಿ. ಹೌದು. ಒಬ್ಬರೇ ಇರುವುದನ್ನು ರೂಢಿಸಿಕೊಳ್ಳಲು ನಿಯಮಿತವಾಗಿ ಪ್ರಾಣಾಯಾಮ ಮಾಡಿ. ಪ್ರಾಣಾಯಾಮದ ಮೂಲಕ ದೀರ್ಘ ಉಸಿರಾಟದಿಂದ ಮಾನಸಿಕವಾಗಿ ನೆಮ್ಮದಿ ಖುಷಿಯಷ್ಟೇ ಅಲ್ಲ, ಒತ್ತಡವನ್ನೂ ದೂರ ಇರಿಸಿಕೊಳ್ಳಬಹುದು. ಅಷ್ಟೇ ಅಲ್ಲ, ನಿಮ್ಮ ಜೊತೆಗೆ ನೀವಿರುವುದನ್ನೂ ಇಲ್ಲಿ ನೀವು ಕಲಿತುಕೊಳ್ಳುತ್ತೀರಿ. ಜೊತೆಗೆ ಅದನ್ನು ಖುಷಿಯಿಂದ ಅನುಭವಿಸಲು ಕ್ರಮೇಣ ಸಿದ್ಧರಾಗುತ್ತೀರಿ.

2. ಮೊದಲು ನಿಮ್ಮನ್ನೇ ನೀವು ಪ್ರೀತಿಸುವುದನ್ನು ಕಲಿಯಿರಿ. ನಿಮಗೆ ನೀವು ಸಮಯ ಕೊಡಿ. ನಿಮ್ಮ ಪಾಸಿಟಿವ್‌ ಅಂಶಗಳನ್ನು ಪಟ್ಟಿ ಮಾಡಿ. ಅವುಗಳ ಮೂಲಕ ಇನ್ನೂ ಮತ್ತಷ್ಟು ವಿಕಾಸ ಹೊಂದಲು ಬೇಕಾದ ಅಂಶಗಳನ್ನು ಸೇರಿಸಲು ಪ್ರಯತ್ನಿಸಿ. ನೀವು ಒಬ್ಬರೇ ಇದ್ದಾಗ ಮಾತ್ರ ಈ ಎಲ್ಲ ಆಲೋಚನೆಗಳಿಗೆ ನೀವು ಸಮಯ ಕೊಡಲು ಸಾಧ್ಯ. ಹಾಗಾಗಿ ಒಬ್ಬರೇ ಇರುವ ಸಮಯವನ್ನು ನಿಮ್ಮದೇ ಬೆಳವಣಿಗೆಗೆ ಬಳಸಿಕೊಳ್ಳುವುದನ್ನು ಕಲಿಯಿರಿ.

3. ಈ ಕ್ಷಣದಲ್ಲಿ ಬದುಕುವುದನ್ನು ಕಲಿಯಿರಿ. ಹಿಂದಿನ ಹಾಗೂ ಮುಂದಿನ ಯೋಚನೆ, ಚಿಂತೆಗಳಿಗೆ ಜಾಗ ಕೊಡಬೇಡಿ. ಈ ಕ್ಷಣದಲ್ಲಿ ತನ್ನ ಮುಖ್ಯ ಅವಶ್ಯಕತೆಗಳೇನು, ಗಮನ ಕೊಡಬೇಕಾಗಿರುವುದು ಯಾವುದಕ್ಕೆ ಎಂಬಿತ್ಯಾದಿ ಅಂಶಗಳ ಬಗೆಗೆ ಹೆಚ್ಚು ಫೋಕಸ್‌ ಮಾಡಿ.

4. ಡೋಪಮೈನ್‌ ಹಾರ್ಮೋನ್‌ ಉತ್ಪಾದನೆ ಮಾಡುವ ಆಹಾರಗಳನ್ನು ತಿನ್ನಿ. ಒಮೆಗಾ ೩ ಫ್ಯಾಟಿ ಆಸಿಡ್‌ ಇರುವ ಆಹಾರಗಳಲ್ಲಿ ಡೊಪಮೈನ್‌ ಅಂಶ ಇರುತ್ತದೆ. ಚಾಕೋಲೇಟು, ಒಣಹಣ್ಣು ಬೀಜಗಳು ಇತ್ಯಾದಿಗಳನ್ನು ತಿನ್ನುವ ಮೂಲಕ ನಿಮ್ಮ ಸಂತೋಷವನ್ನು ನೀವು ಒಬ್ಬರೇ ಇದ್ದಾಗಲೂ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಹುದು.

happiness hormones

ಇದನ್ನೂ ಓದಿ: Happiness Tips: ಸದಾ ಸಂತಸದಿಂದ ಇರಲು ಬೇಕು ಈ 4 ಹಾರ್ಮೋನ್‌, ಹೆಚ್ಚಿಸಿಕೊಳ್ಳೋಕೆ ಇಲ್ಲಿದೆ ಟಿಪ್ಸ್

5. ಬ್ರೇಕ್‌ ತೆಗೆದುಕೊಳ್ಳಿ. ಒಬ್ಬರೇ ಇದ್ದಾಗ, ಕೆಲವೊಮ್ಮೆ ಕೆಲಸಗಳಿಂದ ಬ್ರೇಕ್‌ ತೆಗೆದುಕೊಂಡು ನೀವಿಷ್ಟಪಡುವ ಕೆಲಸ ಮಾಡಿ. ಎಲ್ಲಾದರೂ ಒಬ್ಬರೇ ತಿರುಗಾಡಿ ಬನ್ನಿ. ಹೆಚ್ಚು ದಿನವಿದ್ದರೇ ಎಲ್ಲಿಗಾದರೂ ಸೋಲೋ ಪ್ರವಾಸ ಮಾಡಿ ಬರಬಹುದು. ಬದುಕಿನ ಬೇರೆಬೇರೆ ಆಯಾಮಗಳನ್ನು ನೀವು ಆಗ ಕಾಣಬಹುದು. ಒಬ್ಬರೇ ಇದ್ದಾಗ, ಕಲಿಕೆ, ತಿಳುವಳಿಕೆ, ಜವಾಬ್ದಾರಿ ಎಲ್ಲವೂ ಸುಲಭವಾಗಿ ತಾನೇತಾನಾಗಿ ಬರುತ್ತವೆ.

6. ಪ್ರಕೃತಿಯೊಡನೆ ಸಮಯ ಕಳೆಯಿರಿ. ಒಬ್ಬರೇ ಇದ್ದಾಗ ಪ್ರಕೃತಿಗಿಂತ ದೊಡ್ಡ್‌ ಗೆಳೆಯ ಇನ್ನೊಂದಿಲ್ಲ. ಮನೆಯೊಳಗೆ ಒಬ್ಬರೇ ಇರುವುದು ಕಷ್ಟವಾದರೆ ಎದ್ದು, ನಿಸರ್ಗದಲ್ಲಿ ಕೊಂಷ ಹೊತ್ತು ಇದ್ದು ಬನ್ನಿ. ವಾಕ್‌ ಮಾಡಿ. ಪಾರ್ಕಿಗೆ ಹೋಗಿ ಸುತ್ತಾಡಿ ಬನ್ನಿ. ಹಕ್ಕಿಗಳ ಚಿಲಿಪಿಲಿ, ಸೂರ್ಯನ ಬೆಳಕು, ತಂಪಾದ ಗಾಳಿ ಎಲ್ಲವೂ ಏಕತಾನತೆಯನ್ನು ದೂರ ಮಾಡುವ ಶಕ್ತಿ ಹೊಂದಿವೆ. ಹಾಗಾಗಿ ಇವೆಲ್ಲವುಗಳ ಆಸ್ವಾದನೆಗೆ ಸಮಯ ಕೊಡಿ. ಇವು ಕಲಿಸುವ ಪಾಠಗಳು ಜೀವನದಲ್ಲಿ ಅತ್ಯಂತ ಮುಖ್ಯ. ಮನೆಯಲ್ಲೇ ಇದ್ದರೆ, ನಿಮ್ಮದೇ ಗಿಡಗಳ ಆರೈಕೆ ಮಾಡಿ. ಹಾಗಾಗಿ, ಒಬ್ಬರೇ ಇರುವ ಸಮಯವನ್ನು ಇಂತಹ ಕೆಲಸಕ್ಕೆ ಮೀಸಲಿಡುವುದನ್ನು ಮಾತ್ರ ತಪ್ಪಿಸಬೇಡಿ.

ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version