Site icon Vistara News

Health Info | ಯಾವ ಪ್ರದೇಶದ ಯಾವ ವಸ್ತುಗಳು ಅತ್ಯುತ್ತಮ? ಇಲ್ಲಿದೆ ಮಾಹಿತಿ

health

ಒಂದೊಂದು ಪ್ರದೇಶಗಳಲ್ಲಿ ಒಂದೊಂದು ವೈಶಿಷ್ಟ್ಯಗಳಿರುತ್ತವೆ. ಭೌಗೋಳಿಕವಾಗಿ ಆಯಾ ಪ್ರದೇಶಗಳ ಹವಾಮಾನ, ಮಣ್ಣಿನ ಗುಣ, ಬೀಳುವ ಚಳಿ-ಮಳೆಯಂಥ ಹಲವು ಕಾರಣಗಳಿಂದಾಗಿ ಈ ವೈಶಿಷ್ಟ್ಯಗಳು ಅದಕ್ಕೆ ಸಿದ್ಧಿಸಿರಬಹುದು. ಉದಾ, ಬ್ಯಾಡಗಿಯ ಮೆಣಸಿನಕಾಯಿ, ಊಟಿಯ ಕ್ಯಾರೆಟ್‌, ಕೊಡಗಿನ ಕಿತ್ತಳೆ, ಬಳ್ಳಾರಿಯ ಈರುಳ್ಳಿ ಮುಂತಾದವು. ಅಂಥ ಇನ್ನೂ ಕೆಲವು ವೈಶಿಷ್ಟ್ಯಗಳು ಇಲ್ಲಿವೆ.

ಕಾಶ್ಮೀರದ ಕೇಸರಿ
ಯಾವುದೇ ರಾಜನಿಗೆ ನೀಡಿದ ಬಿರುದಿನ ಬಗ್ಗೆ ಹೇಳುತ್ತಿರುವುದಲ್ಲ! ಬದಲಿಗೆ, ಕಾಶ್ಮೀರದಲ್ಲಿ ದೊರೆಯುವ ಘಮಘಮಿಸುವ ಕೇಸರಿಯ ದಳಗಳ ಮಾತಿದು. ಪಾಂಪೋರ್‌ನಲ್ಲಿ ದೊರೆಯುವ ಕೇಸರಿಗಳು ಅವುಗಳ ಪರಿಮಳ, ಬಣ್ಣ ಮತ್ತು ಔಷಧೀಯ ಗುಣಗಳಿಗಾಗಿ ಪ್ರಸಿದ್ಧ. ಅದರಲ್ಲೂ ಸೌಂದರ್ಯವರ್ಧನೆಯಲ್ಲಿ ಈ ಕೇಸರಿದಳಗಳ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತವೆ. ತ್ವಚೆಯ ಮೇಲಿನ ಕಪ್ಪು ಕಲೆಗಳು, ಬಂಗು ಮತ್ತು ಸೂರ್ಯನ ಬಿಸಿಲಿಗೆ ಕಪ್ಪಾಗುವುದನ್ನು ತಡೆಯಲು ಕೇಸರಿ ಉತ್ತಮ ಔಷಧ. ಇದನ್ನು ಸತತ ಬಳಕೆ ಮಾಡುವುದರಿಂದ ತ್ವಚೆಯ ಕಾಂತಿ ಮತ್ತು ಆರೋಗ್ಯ ಖಂಡಿತಕ್ಕೂ ವೃದ್ಧಿಸುತ್ತದೆ.

ಬಿಕಾನೇರ್‌ನ ಲೋಳೆಸರ
ಕಡಿಮೆ ಮಳೆ ಬೀಳುವ ಒಣ ಪ್ರದೇಶಗಳಲ್ಲಿ ಮತ್ತು ಮರಳುಮಿಶ್ರಿತ ಮಣ್ಣಿನಲ್ಲಿ ಬೆಳೆಯುವ ಲೋಳೆಸರಕ್ಕೆ ಹೆಚ್ಚಿನ ಮಹತ್ವ. ರಾಜಸ್ಥಾನದ ಹವಾಮಾನ ಲೋಳೆಸರ ಅಥವಾ ಅಲೋವೇರಾ ಬೆಳೆಯಲು ಸೂಕ್ತವಾದದ್ದೂ ಹೌದು. ಬ್ಯಾಕ್ಟೀರಿಯಾ, ವೈರಸ್‌ ಮತ್ತು ನಂಜು ನಿರೋಧಕ ಗುಣಗಳಿಗಾಗಿ ಬಳಕೆಯಾಗುವ ಅಲೋವೇರಾ ಸುಟ್ಟಗಾಯಕ್ಕೆ ಪರಿಣಾಮಕಾರಿಯಾದ ಔಷಧ. ಚರ್ಮದ ಕೊಲಾಜಿನ್‌ ಹೆಚ್ಚಿಸಿ, ಸುಕ್ಕು ಬರುವುದನ್ನು ತಡೆಗಟ್ಟುವ ಸಾಮರ್ಥ್ಯವೂ ಲೋಳೆಸರಕ್ಕಿದೆ. ಲೋಳೆಸರದ ಒಳಗಿನ ಲೋಳೆ ಅಥವಾ ಜೆಲ್‌ನಂಥ ವಸ್ತುವಿನಲ್ಲಿ ವಿಟಮಿನ್‌ಗಳು, ಖನಿಜಗಳು, ಅಮೈನೋ ಆಸಿಡ್‌ಗಳ ಭಂಡಾರವೇ ಇದೆ. ಇದನ್ನು ಕೂದಲ ಪೋಷಣೆಗೂ ವ್ಯಾಪಕವಾಗಿ ಬಳಸಲಾಗುತ್ತದೆ.

ಊಟಿಯ ನೀಲಗಿರಿ ಎಣ್ಣೆ
ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುವ ನೀಲಗಿರಿ ಎಣ್ಣೆ ಉದಕಮಂಡಲ ಅಥವಾ ಊಟಿಯದ್ದಾದರೆ ಶ್ರೇಷ್ಠ. ಕೆಮ್ಮು, ನೆಗಡಿ, ಕಫ, ಅಸ್ತಮಾ ಅಥವಾ ಸೈನಸ್‌ ತೊಂದರೆಗಳಲ್ಲಿ ಅತ್ಯುತ್ತಮ ಉಮಶಮನವನ್ನು ನೀಲಗಿರಿ ಎಣ್ಣೆ ನೀಡುತ್ತದೆ. ನೋವು ನಿವಾರಕದಂತೆಯೂ ಕೆಲಸ ಮಾಡುತ್ತದೆ. ಬಿಸಿ ನೀರಿಗೆ ಒಂದೆರಡು ಹನಿ ನೀಲಗಿರಿ ಎಣ್ಣೆ ಹಾಕಿ, ಬಿಸಿ ಆವಿ ತೆಗೆದುಕೊಂಡರೆ ಸಾಕು ಉಸಿರಾಟ ಸರಾಗವಾಗುವುದಕ್ಕೆ. ಬಟ್ಟೆಗೆ ಒಂದೆರಡು ಹನಿ ಎಣ್ಣೆ ಹಾಕಿ, ಅದನ್ನು ಪದೇಪದೇ ಮೂಗಿಗೆ ಹಿಡಿದುಕೊಳ್ಳುವವರೂ ಇದ್ದಾರೆ.

ಲಾಥೂರಿನ ಅಶ್ವಗಂಧ
ಬರಗಾಲವೇ ಹೆಚ್ಚಿರುವ ಮಹಾರಾಷ್ಟ್ರದ ಲಾಥೂರ್‌ನಂಥ ಪ್ರದೇಶದಲ್ಲಿ ಬೆಳೆಯುವ ಅಶ್ವಗಂಧದ ಗುಣಗಳಿಗೆ ಕಿಮ್ಮತ್ತು ಹೆಚ್ಚು. ಮೂಳೆಗಳ ಮತ್ತು ಮಾಂಸಖಂಡಗಳ ಸಾಮರ್ಥ್ಯ ಹೆಚ್ಚಿಸುವ, ದೇಹಕ್ಕೆ ಶಕ್ತಿ ನೀಡುವ, ರೋಗನಿರೋಧಕ ಶಕ್ತಿ ಹೆಚ್ಚಿಸುವ, ಸಂಧಿವಾತ ಕಡಿಮೆ ಮಾಡುವ ಮತ್ತು ದೇಹದಲ್ಲಿ ಉರಿಯೂತ ತಗ್ಗಿಸುವ ಸದ್ಗುಣಗಳಿಗಾಗಿ ಅಶ್ವಗಂಧ ಪ್ರಸಿದ್ಧ. ಅದರ ಬೇರು, ಪುಡಿಗಳನ್ನು ಕಷಾಯ ಅಥವಾ ಚಹಾದ ರೂಪದಲ್ಲಿ ಸೇವಿಸಬಹುದು. ಇದರ ಲೇಹವನ್ನು ಹಾಲಿನೊಂದಿಗೆ ಸೇವಿಸುವುದು ಸೂಕ್ತ.

ಇದನ್ನೂ ಓದಿ| Winter Care | ಚಳಿಗಾಲದಲ್ಲಿ ಆರೋಗ್ಯ ಕಾಪಾಡುವುದು ಕಷ್ಟವೇ? ಹಾಗೇನಿಲ್ಲ!

Exit mobile version